Ayodhya: ಬೆಂಗಳೂರು, ಕೋಲ್ಕತಗಳಿಂದ ಅಯೋಧ್ಯೆಗೆ ನೇರ ವಿಮಾನಯಾನ ಜ 17ರಿಂದ ಶುರು; ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಣೆ
ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ಮೊದಲು ಹಲವು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ನಡೆಯಲಿದೆ. ಇಂದು ವಿಮಾನ ನಿಲ್ದಾಣ ಲೋಕಾರ್ಪಣೆಯಾಗುತ್ತಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅಯೋಧ್ಯೆ- ಬೆಂಗಳೂರು ಮೊದಲ ವಿಮಾನ ಜನವರಿ 17ರಿಂದ ಶುರುವಾಗಲಿದೆ.
ಭಾರತದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆಗೆ ಬೆಂಗಳೂರು ಮತ್ತು ಕೋಲ್ಕತದಿಂದ ನೇರ ವಿಮಾನ ಯಾನ ಜನವರಿ 17ರಿಂದ ಶುರುವಾಗಲಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶುಕ್ರವಾರ (ಡಿ.29) ಈ ಎರಡು ಮೆಟ್ರೋ ನಗರಗಳಿಂದ ಅಯೋಧ್ಯೆಗೆ ನೇರ ವಿಮಾನ ಯಾನದ ವಿಚಾರವನ್ನು ಘೋಷಿಸಿದೆ.
ಅಯೋಧ್ಯೆಗೆ ಮತ್ತು ಅಲ್ಲಿಂದ ಇತರೆ ನಗರಗಳಿಗೆ ಸಂಪರ್ಕವನ್ನು ಹೆಚ್ಚಿಸಲು, ವಿಮಾನಯಾನ ಸಂಸ್ಥೆಯು ದೆಹಲಿಗೆ ಹೆಚ್ಚುವರಿಯಾಗಿ ಈ ಮಾರ್ಗಗಳಲ್ಲಿ ನೇರ ವಿಮಾನಗಳನ್ನು ನಿರ್ವಹಿಸಲಿದೆ. ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮದ ಉದ್ಘಾಟನೆಯ ಜೊತೆಗೆ ಡಿಸೆಂಬರ್ 30 ರಂದು ಅಯೋಧ್ಯೆ ಮತ್ತು ದೆಹಲಿ ನಡುವೆ ತನ್ನ ಉದ್ಘಾಟನಾ ವಿಮಾನಗಳನ್ನು ನಿರ್ವಹಿಸುವುದಾಗಿ ವಿಮಾನಯಾನ ಸಂಸ್ಥೆ ಇದಕ್ಕೂ ಮೊದಲು ಹೇಳಿತ್ತು.
ಬೆಂಗಳೂರು-ಅಯೋಧ್ಯೆ ಮಾರ್ಗದಲ್ಲಿ ಮೊದಲ ವಿಮಾನವು ಜನವರಿ 17 ರ ಬೆಳಿಗ್ಗೆ 8.05 ಕ್ಕೆ ಹೊರಟು 10.35 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಅದೇ ರೀತಿ ಹಿಂತಿರುಗುವ ವಿಮಾನವು ಅಯೋಧ್ಯೆಯಿಂದ ಮಧ್ಯಾಹ್ನ 3.40 ಕ್ಕೆ ಹೊರಡಲಿದ್ದು, ಸಂಜೆ 6.10 ಕ್ಕೆ ಬೆಂಗಳೂರಿಗೆ ತಲುಪಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿದೆ.
ಅಂತೆಯೇ, ಅಯೋಧ್ಯೆ-ಕೋಲ್ಕತ್ತಾ ಮಾರ್ಗದಲ್ಲಿ, ವಿಮಾನವು ಅಯೋಧ್ಯೆಯಿಂದ ಬೆಳಿಗ್ಗೆ 11.05 ಕ್ಕೆ ಟೇಕ್ ಆಫ್ ಆಗಲಿದೆ. ಮಧ್ಯಾಹ್ನ 12.50 ಕ್ಕೆ ಕೋಲ್ಕತ್ತಾದಲ್ಲಿ ಇಳಿಯಲಿದೆ. ಕೋಲ್ಕತ್ತಾ-ಅಯೋಧ್ಯೆ ವಿಮಾನವು ಕೋಲ್ಕತ್ತಾದಿಂದ ಮಧ್ಯಾಹ್ನ 1:25 ಕ್ಕೆ ಹೊರಡಲಿದ್ದು, ಮಧ್ಯಾಹ್ನ 3.10 ಕ್ಕೆ ಅಯೋಧ್ಯೆಯನ್ನು ಮುಟ್ಟಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿವರ ನೀಡಿದೆ.
ದೇಶದಾದ್ಯಂತ ನಗರಗಳನ್ನು ಸಂಪರ್ಕಿಸುವ ವಾಯು ಮಾರ್ಗ ಕಾರ್ಯಾಚರಣೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯು ಅಚಲವಾಗಿದೆ. ಅಯೋಧ್ಯೆಯನ್ನು ದೆಹಲಿ, ಬೆಂಗಳೂರು, ಕೋಲ್ಕತ್ತಾ ಜತೆಗೆ ಜೋಡಿಸುವ ಕೆಲಸವು ಈ ಬದ್ಧತೆಯನ್ನು ಇನ್ನಷ್ಟು ದೃಢಪಡಿಸುತ್ತದೆ. ನಮ್ಮ ವಿಮಾನ ಯಾನ ಜಾಲದ ಪ್ರಮುಖ ಕೇಂದ್ರಗಳು ಬೆಂಗಳೂರು ಮತ್ತು ಕೋಲ್ಕತ್ತಾ. ಈ ಎರಡೂ ನಗರಗಳು ಅಯೋಧ್ಯೆಗೆ ಪ್ರವೇಶದ್ವಾರಗಳಾಗಿ ಕೆಲಸ ಮಾಡಲಿವೆ. ದಕ್ಷಿಣ ಭಾರತ ಮತ್ತು ಪೂರ್ವ ಭಾರತದ ಯಾತ್ರಾರ್ಥಿಗಳಿಗೆ ನೇರ ವಿಮಾನ ಯಾನ ಅನುಕೂಲವಾಗಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗಾರ್ಗ್ ಅಭಿಪ್ರಾಯ ಪಟ್ಟಿದ್ದಾರೆ.
ಅಯೋಧ್ಯೆ, ಬೆಂಗಳೂರು, ಕೋಲ್ಕತ್ತ ನಡುವೆ ವಾರಕ್ಕೆ ಮೂರು ತಡೆರಹಿತ, ನೇರ ವಿಮಾನ ಯಾನ ಇರಲಿದೆ. ಇದರ ವೇಳಾಪಟ್ಟಿ ಮತ್ತು ಬುಕ್ಕಿಂಗ್ ವ್ಯವಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವೆಬ್‌ಸೈಟ್ (airindiaexpress.com), ಆಪ್‌ಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.
ಇದಲ್ಲದೇ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉತ್ತರ ಪ್ರದೇಶವನ್ನು ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಥಳಗಳ ಜತೆಗೆ ಜೋಡಿಸುತ್ತಿದೆ. ವಾರಣಾಸಿ-ಶಾರ್ಜಾ ವಿಮಾನಯಾನವನ್ನು ಪ್ರಾರಂಭಿಸುವ ಮೂಲಕ ಹೊಸ ಇತಿಹಾಸವನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿರ್ಮಿಸಿತು. ಇದು ವಾರಣಾಸಿಗೆ ಮೊದಲ ಅಂತಾರಾಷ್ಟ್ರೀಯ ವಿಮಾನ ಯಾನ ಸಂಪರ್ಕ ಒದಗಿಸಿದೆ.
ವಾರಾಣಸಿ - ಬೆಂಗಳೂರು ಮತ್ತು ಶಾರ್ಜಾ ನಡುವೆ ವಾರಕ್ಕೆ 21 ವಿಮಾನ ಯಾನಗಳಿವೆ. ಇದೇ ರೀತಿ ಲಕ್ನೋದಿಂದ 60 ಸಾಪ್ತಾಹಿಕ ವಿಮಾನ ಯಾನಗಳು ದುಬೈ, ದೆಹಲಿ, ಮುಂಬೈ, ಹೈದರಾಬಾದ್, ಬೆಂಗಳೂರು, ಪುಣೆ ಮುಂತಾದ ನಗರಗಳಿಗೆ ಲಭ್ಯ ಇವೆ.
ವಿಭಾಗ