
Budget 2024 Highlights: ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ, ಸ್ಟಾಂಡರ್ಡ್ ಡಿಡಕ್ಷನ್ ಮಿತಿಯಲ್ಲಿ ಹೆಚ್ಚಳ; ಬಜೆಟ್‌ನ ಅತಿಮುಖ್ಯ ಅಂಶಗಳು
ಕೇಂದ್ರ ಬಜೆಟ್ 2024 ಲೈವ್: ರಾಷ್ಟ್ರ ರಾಜಕಾರಣದ ಚರ್ಚೆಯಲ್ಲಿ ಹಲವು ಬಾರಿ ಮುನ್ನೆಲೆಗೆ ಬಂದಿರುವ ನಿರುದ್ಯೋಗ ಸಮಸ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎನ್ನುವ ಸಂದೇಶ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಯತ್ನಿಸಿದರು. ಉದ್ಯೋಗ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದರು.
Tue, 23 Jul 202407:14 AM IST
ಬಜೆಟ್ ಮಂಡನೆ ನಂತರ ಷೇರುಪೇಟೆ ಕುಸಿತ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮುಗಿದಿದ್ದು, ಬಜೆಟ್ ಮಂಡನೆ ನಂತರ ಷೇರುಪೇಟೆ ಕುಸಿತ ಕಂಡಿದೆ. ಸೆನ್ಸೆಕ್ಸ್ 1200 ಅಂಕ ಕುಸಿದಿದ್ದು ನಿಫ್ಟಿ ಸುಮಾರು 350 ಅಂಕಗಳಷ್ಟು ಕುಸಿತ ಕಂಡಿದೆ.
Tue, 23 Jul 202407:08 AM IST
ಸಂಬಳದಾರರಿಗೆ ಹೊಸ ತೆರಿಗೆ ಪದ್ಧತಿ ಘೋಷಿಸಿದ ಮೋದಿ ಸರ್ಕಾರ
ಈ ಬಾರಿಯ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಬಳದಾರರಿಗೆ ಹೊಸ ತೆರಿಗೆ ಪದ್ಧತಿ ಘೋಷಿಸಿದ್ದಾರೆ. 3 ಲಕ್ಷ (ವಾರ್ಷಿಕವಾಗಿ) ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. 3-7 ಲಕ್ಷ ಆದಾಯಕ್ಕೆ ಶೇ 5ರಷ್ಟು ತೆರಿಗೆ, 7-10 ಲಕ್ಷ ಆದಾಯಕ್ಕೆ ಶೇ 10 ರಷ್ಟು ತೆರಿಗೆ, 10-12 ಲಕ್ಷ ಆದಾಯಕ್ಕೆ ಶೇ 20ರಷ್ಟು ತೆರಿಗೆ ಹಾಗೂ 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ 30ರಷ್ಟು ಘೋಷಣೆ ಮಾಡಲಾಗಿದೆ.
Tue, 23 Jul 202406:54 AM IST
ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಮಿತಿ 1.5 ಲಕ್ಷಕ್ಕೆ ಹೆಚ್ಚಳ
ಕೆಲ ಆಸ್ತಿಗಳಲ್ಲಿ (ಅಸೆಟ್ಸ್) ಬಂಡವಾಳ ವೃದ್ಧಿ (ಕ್ಯಾಪಿಟಲ್ ಗೇನ್) ತೆರಿಗೆಯನ್ನು 1.5 ಲಕ್ಷಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಈ ನಿರ್ಧಾರ ಪ್ರಕಟಿಸಿದರು. ರಿಯಲ್ ಎಸ್ಟೇಟ್, ಮ್ಯೂಚವಲ್ ಫಂಡ್ ಸೇರಿದಂತೆ ಹಲವು ಅಸೆಟ್‌ಗಳಲ್ಲಿ ಕ್ಯಾಪಿಟನ್ ಗೇನ್ ಟ್ಯಾಕ್ಸ್‌ಗೆ ವಿನಾಯ್ತಿ ಕೊಡಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇತ್ತು.
Tue, 23 Jul 202406:47 AM IST
ಮೊಬೈಲ್ ಫೋನ್, ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ
ಮೊಬೈಲ್ ಫೋನ್, ಚಾರ್ಜರ್, ಬಿಡಿಭಾಗಗಳ ಮೇಲಿನ ತೆರಿಗೆ ಇಳಿಕೆ, ಚಿನ್ನ ಬೆಳ್ಳಿ ಮೇಲೆ ಶೇ 6, ಪ್ಲಾಟಿನಂ ಮೇಲೆ ಶೇ 6.4 ಕಸ್ಟಮ್ಸ್ ಇಳಿಕೆ, ಸೋಲಾರ್ ಪ್ಯಾನಲ್, ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ ಮಾಡಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Tue, 23 Jul 202406:32 AM IST
ಬಿಜೆಪಿ ಚುನಾವಣಾ ಪ್ರಣಾಳಿಕೆಯ ಹಲವು ಅಂಶಗಳಿಗೆ ಬಜೆಟ್‌ನಲ್ಲಿ ಒತ್ತು
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉಲ್ಲೇಖಿಸಿದ್ದ ಹಲವು ಅಂಶಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಒತ್ತು ಸಿಕ್ಕಿದೆ. ಕೃಷಿ ಕ್ಷೇತ್ರದಲ್ಲಿ 'ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್' (Digital Public Infrastructure - DPI) ಅಂದರೆ, ಡಿಜಿಟಲ್ ಮೂಲಸೌಕರ್ಯ ರೂಪಿಸುವುದಾಗಿ ವಿತ್ತ ಸಚಿವರು ಘೋಷಿಸಿದ್ದಾರೆ. ಇಂಥ ಯೋಜನೆ ರೂಪಿಸುವುದಾಗಿ ಬಿಜೆಪಿ ನಾಯಕರು ಅಧಿಕಾರ ಗ್ರಹಣದ ನಂತರ ಘೋಷಿಸಿದ್ದನ್ನು ನೆನಪಿಸಿಕೊಳ್ಳಬಹುದು. ಹವಾಮಾನ ವೈಪರಿತ್ಯ ಸಹಿಸಿಕೊಳ್ಳುವ ತಳಿಗಳನ್ನು ರೂಪಿಸುವ ದೃಷ್ಟಿಯಿಂದ ಕೃಷಿ ಸಂಶೋಧನೆಯನ್ನು ಪುನರ್ ಪರಿಶೀಲಿಸಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಇದು ಸಹ ಬಿಜೆಪಿ ಪ್ರಣಾಳಿಕೆಯ ಭಾಗವಾಗಿತ್ತು. ಯುವಜನರಿಗೆ ಇಂಟರ್ನ್‌ಶಿಪ್ ಯೋಜನೆ ರೂಪಿಸುವ ಘೋಷಣೆಯು ಸಹ ಬಿಜೆಪಿ ಪ್ರಣಾಳಿಕೆಯಲ್ಲಿತ್ತು.
Tue, 23 Jul 202406:14 AM IST
Budget Live: ವಸತಿ ಕ್ಷೇತ್ರದಲ್ಲಿ ಮಹತ್ವದ ಉಪಕ್ರಮ: ಕಾರ್ಮಿಕರಿಗಾಗಿ ವಿಶೇಷ ಯೋಜನೆ
ಕೈಗಾರಿಕಾ ಸಮುಚ್ಚಯಗಳಲ್ಲಿ ವಸತಿ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದನ್ನು ಪ್ರಕಟಿಸಿದೆ. ಅದರಂತೆ ಡಾರ್ಮಿಟರಿ (ಒಂದೇ ಕೊಠಡಿಯಲ್ಲಿ ಹಲವು ಜನರ ವಾಸ್ತವ್ಯ) ಮಾದರಿಯಲ್ಲಿ ಕೈಗಾರಿಕಾ ಕಾರ್ಮಿಕರ ವಸತಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರವೇ ವಸತಿ ಕಲ್ಪಿಸಲು ಯೋಜನೆಗಳನ್ನು ಆರಂಭಿಸಲಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಯುವಜನರಿಗಾಗಿ ವಿಶೇಷ ಇಂಟರ್ನ್‌ಶಿಪ್ ಯೋಜನೆಯನ್ನೂ ಸರ್ಕಾರ ಪ್ರಕಟಿಸಿದೆ. ಅದರಂತೆ ಪ್ರಮುಖ ಕಂಪನಿಗಳಲ್ಲಿ ಸಮಗ್ರ ತರಬೇತಿಗಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
Tue, 23 Jul 202406:00 AM IST
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಾಲ
ಈ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂವರೆಗೆ ಸಾಲ, 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ರೈಲು ಯೋಜನೆ ಆರಂಭ, ಪ ಜಾತಿ, ಪ ಪಂಗಡ ಕುಶಲಕರ್ಮಿಗಳಿಗೆ ವಿಶೇಷ ಯೋಜನೆ , ಬಿಹಾರದಲ್ಲಿ ಹೊಸ ಏರ್‌ಪೋರ್ಟ್-ಮೆಡಿಕಲ್ ಕಾಲೇಜು, ಆಂಧ್ರ ಪ್ರದೇಶಕ್ಕೆ ವಿಶೇಷ ಅನುದಾನದ ಭರವಸೆ ನೀಡಲಾಗಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
Tue, 23 Jul 202405:58 AM IST
Budget Live: ರಾಜಕೀಯ ಅರ್ಥ ಮಾಡಿಕೊಂಡ ವಿತ್ತ ಸಚಿವೆ
ಕಳೆದ ಲೋಕಸಭಾ ಚುನಾವಣೆ ಪ್ರಚಾರ ಮತ್ತು ನಂತರದ ಲೋಕಸಭಾ ಅಧಿವೇಶನದಲ್ಲಿ ನಿರುದ್ಯೋಗವನ್ನು ಪ್ರತಿಪಕ್ಷಗಳು ದೊಡ್ಡಮಟ್ಟದಲ್ಲಿ ಪ್ರಸ್ತಾಪಿಸಿದ್ದವು. ಈ ರಾಜಕೀಯ ನಾಡಿಮಿಡಿತ ಮತ್ತು ರಾಷ್ಟ್ರದ ಸದ್ಯದ ವಾಸ್ತವವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅರ್ಥ ಮಾಡಿಕೊಂಡಂತೆ ಇದೆ. ಹೀಗಾಗಿ ಬಜೆಟ್‌ನ ಆರಂಭದಲ್ಲಿಯೇ ಉದ್ಯೋಗ ಸಂಬಂಧಿತ ಘೋಷಣೆಗಳಿಗೆ ಒತ್ತು ನೀಡಿದರು. ಹೊಸದಾಗಿ ಕೆಲಸ ಆರಂಭಿಸುವವರಿಗೆ ಒಂದು ತಿಂಗಳ ವೇತನ, ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗದಾತರಿಗೆ ಹೆಚ್ಚಿನ ಬೆಂಬಲ ಒದಗಿಸುವ ಮೂರು ಘೋಷಣೆಗಳು ಈ ನಿಟ್ಟಿನಲ್ಲಿ ಗಮನ ಸೆಳೆದವು.
Tue, 23 Jul 202405:48 AM IST
ಹವಾಮಾನ ವೈಪರಿತ್ಯಕ್ಕೆ ಜಗ್ಗದ ತಳಿಗಳ ಸಂಶೋಧನೆಗೆ ಕೇಂದ್ರ ಸರ್ಕಾರ ಒತ್ತು
ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಸದೃಢಗೊಳಿಸಲು ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಬೆಳೆಗಳ ಇಳುವರಿ ಹೆಚ್ಚಿಸುವುದು ಮತ್ತು ಹವಾಮಾನ ವೈಪರಿತ್ಯಕ್ಕೆ ಸಹಿಷ್ಣುತೆ ಇರುವ ತಳಿಗಳ ಅಭಿವೃದ್ಧಿಪಡಿಸಲು ಉತ್ತೇಜನ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
Tue, 23 Jul 202405:46 AM IST
ಬಜೆಟ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಒತ್ತು
ಉದ್ಯೋಗ ಸೃಷ್ಟಿ, ಎಮ್‌ಎಸ್‌ಎಮ್‌ಇ ಹೆಚ್ಚಳ, ವಿಕಸಿತ ಭಾರತ, ಕೃಷಿ ಕ್ಷೇತ್ರ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆ, ನಗರ ಅಭಿವೃದ್ಧಿ, ಸಂಶೋಧನೆ, ಇಂಧನ, ಮೂಲ ಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
Tue, 23 Jul 202405:45 AM IST
ಉದ್ಯೋಗ ಸೃಷ್ಟಿಗೆ ಆದ್ಯತೆ, 2 ಲಕ್ಷ ಕೋಟಿ ವಿನಿಯೋಗ
ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಜನರಿಗೆ ಉದ್ಯೋಗ ಕಲ್ಪಿಸುವ ಐದು ಯೋಜನೆಗಳನ್ನು ರೂಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಈ ಯೋಜನೆಗಳಿಗೆ ಕೇಂದ್ರ ಸರ್ಕಾರವು 2 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲಿದೆ.
Tue, 23 Jul 202405:41 AM IST
ಪ್ರಧಾನಿ ಮೋದಿಯನ್ನು ಹೊಗಳಿದ ವಿತ್ತ ಸಚಿವೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಬಜೆಟ್ ಭಾಷಣದ ಆರಂಭದಲ್ಲಿ ವಿತ್ತ ಸಚಿವರು ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ. ನರೇಂದ್ರ ಮೋದಿ, 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ಆರ್ಥಿಕತೆ ವೃದ್ಧಿಯಾಗಿದೆ. ರೈತರು, ಕಾರ್ಮಿಕರಿಗೆ ಶಕ್ತಿ ನೀಡಲಾಗಿದೆ ಎಂದರು.
Tue, 23 Jul 202405:34 AM IST
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಆರಂಭ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದರು. ಇದಕ್ಕೂ ಮೊದಲು ಲೋಕಸಭೆ ಕಲಾಪ ವೀಕ್ಷಿಸಲು ಆಗಮಿಸಿರುವ ವಿವಿಧ ದೇಶಗಳ ವಿಶೇಷ ಅತಿಥಿಗಳನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು.
Tue, 23 Jul 202405:04 AM IST
ಮುಂಗಡಪತ್ರಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 2024-25ನೇ ಸಾಲಿನ ಪೂರ್ಣ ಬಜೆಟ್‌ಗೆ ಅನುಮೋದನೆ ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಶೀಘ್ರದಲ್ಲಿಯೇ ಬಜೆಟ್ ಮಂಡಿಸಲಿದ್ದಾರೆ.
Tue, 23 Jul 202404:50 AM IST
ಸಂಸತ್ ಭವನಕ್ಕೆ ಬಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ದಾಖಲೆಯೊಂದಿಗೆ ಸಂಸತ್ ಭವನ ಪ್ರವೇಶಿಸಿದರು. ಈ ವೇಳೆ ಅವರೊಂದಿಗೆ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಇದ್ದರು. 11 ಗಂಟೆಗೆ ಲೋಕಸಭೆಯಲ್ಲಿ ವಿತ್ತ ಸಚಿವರ ಬಜೆಟ್ ಭಾಷಣ ಆರಂಭವಾಗಲಿದೆ.
Tue, 23 Jul 202404:34 AM IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡನೆಗೆ ಮೊದಲು ಹಣಕಾಸು ಸಚಿವಾಲಯಕ್ಕೆ ಬಂದಿದ್ದ ಸಚಿವೆ, ಅಲ್ಲಿಂದ ಡಿಜಿಟಲ್ ಸ್ವರೂಪದಲ್ಲಿರುವ ಬಜೆಟ್ ಪ್ರತಿಯೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ರಾಷ್ಟ್ರಪತಿ ಭವನಕ್ಕೆ ತೆರಳುವ ಮುನ್ನ ಹಣಕಾಸು ತಮ್ಮ ತಂಡದೊಂದಿಗೆ ಕೆಂಪು ಬಣ್ಣದ 'ಬಹಿ ಖಾತಾ' ಡಿಜಿಟಲ್ ಟ್ಯಾಬ್ಲೆಟ್‌ನೊಂದಿಗೆ (ಬಜೆಟ್ ಪ್ರತಿ) ಫೋಟೋಗೆ ಪೋಸ್ ನೀಡಿದರು.
Tue, 23 Jul 202404:19 AM IST
7ನೇ ಬಜೆಟ್ ಮಂಡನೆಗೆ ವಿತ್ತ ಸಚಿವೆ ರೆಡಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಪ್ರತಿ ಬಾರಿ ಬಜೆಟ್ ಮಂಡಿಸುವಾಗಲೂ ಅವರು ಉಟ್ಟ ಸೀರೆಗಳು ಗಮನಸೆಳೆಯುತ್ತಿವೆ. ಈ ಬಾರಿ ಅವರು ಗುಲಾಬಿ ಅಂಚಿನ ಬಿಳಿ ಬಣ್ಣದ ಸೀರೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ.

Tue, 23 Jul 202403:53 AM IST
ಮೊರಾರ್ಜಿ ದೇಸಾಯಿ ದಾಖಲೆ ಮುರಿಯುತ್ತಿರುವ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿಯಲಿದ್ದಾರೆ. 2019 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ 2ನೇ ಅವಧಿಗೆ ಅಧಿಕಾರಕ್ಕೆ ಬಂದಾಗ ನಿರ್ಮಲಾ ಸೀತಾರಾಮನ್ ಮೊದಲ ಮಹಿಳಾ ಹಣಕಾಸು ಸಚಿವರಾಗಿ ನೇಮಕಗೊಂಡರು. ಅಂದಿನಿಂದ ಇದುವರೆಗೂ ಫೆಬ್ರವರಿಯ ಮಧ್ಯಂತರ ಬಜೆಟ್ ಸೇರಿದಂತೆ 6 ಬಾರಿ ಬಜೆಟ್ ಮಂಡಿಸಿದ್ದು, ಇಂದು 7ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಮೂಲಕ 1959 ರಿಂದ 1964 ರ ನಡುವೆ 5 ಬಜೆಟ್, 1 ಮಧ್ಯಂತರ ಬಜೆಟ್ ಮಂಡಿಸಿದ್ದ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿಯಲಿದ್ದಾರೆ.
Tue, 23 Jul 202402:44 AM IST
ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ, ಕರ್ನಾಟಕದ ಜನರ ನಿರೀಕ್ಷೆಗಳಿವು
ರೈಲು ಟಿಕೆಟ್ ದರ ಪರಿಷ್ಕರಣೆ, ಹಿರಿಯ ನಾಗರಿಕರಿಗೆ ಟಿಕೆಟ್ ದರ ರಿಯಾಯಿತಿ, ಹೊಸ ರೈಲು ಸೇವೆ ಮೂಲಸೌಕರ್ಯ, ರೈಲ್ವೆ ಪ್ರಯಾಣಿಕರ ಸುರಕ್ಷತೆ, ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಕರಾವಳಿ ಭಾಗದಲ್ಲಿ ಹಳಿಗಳ ವಿದ್ಯುದ್ದೀಕರಣಕ್ಕೆ ವೇಗ, . ಸಕಲೇಶಪುರ ಮಾರ್ಗದ ಕುಕ್ಕೆ ಸುಬ್ರಮಣ್ಯ ಸಂಪರ್ಕ ರೈಲು ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲು ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆಯ ವರದಿ ಪ್ರಕಾರ ಘೋಷಣೆ ನಿರೀಕ್ಷೆ , ಬೆಂಗಳೂರು - ಮುಂಬೈ ಮಾರ್ಗದಲ್ಲಿ ಹೊಸ ಅಮೃತ್ ಭಾರತ್ ರೈಲು ಸಂಚಾರ ಸೇರಿದಂತೆ ಸಾಕಷ್ಟು ನಿರೀಕ್ಷೆಗಳಿವೆ.
Tue, 23 Jul 202402:02 AM IST
ಬಜೆಟ್ ಭಾಷಣ, ಲೈವ್ ಅಪ್ಡೇಟ್ಸ್ , ನೇರ ಪ್ರಸಾರ ವೀಕ್ಷಣೆ ವಿವರ
ಕೇಂದ್ರ ಬಜೆಟ್ 2024ರ ನೇರ ಪ್ರಸ್ತುತಿಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ, ಹಣಕಾಸು ಸಚಿವಾಲಯದ ಅಂತರ್ಜಾಲ ತಾಣ www.finmin.nic.in, ಸಂಸದ್ ಟಿವಿ, ದೂರದರ್ಶನ ಮತ್ತು ಯೂಟೂಬ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದು ಎಲ್ಲರಿಗೂ ಉಚಿತವಾಗಿ ನೋಡಲು ಲಭ್ಯವಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಪ್ರಸ್ತುತಿಯಾದ ಬಳಿಕ, ಕೇಂದ್ರ ಬಜೆಟ್ 2024 PDF ಮತ್ತು ವಿವರ ದಾಖಲೆಗಳು, ಹೈಲೈಟ್ಸ್ ಸೇರಿ ಕೇಂದ್ರ ಬಜೆಟ್ 2024-25ರ ಡಾಕ್ಯುಮೆಂಟ್‌ಗಳು ಸರ್ಕಾರದ ಅಧಿಕೃತ ವೆಬ್‌ಸೈಟ್ www.indiabudget.gov.in ರಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿದೆ.
Tue, 23 Jul 202401:39 AM IST
ಸಿಗುತ್ತಾ ಇನ್ನಷ್ಟು ವಿನಾಯ್ತಿ: ಆದಾಯ ತೆರಿಗೆ ಕಟ್ಟುವವರ ನಿರೀಕ್ಷೆಗಳಿವು
ಭಾರತದ ಮಧ್ಯವರ್ಗವು ಹಲವು ವರ್ಷಗಳಿಂದ ತೆರಿಗೆ ವಿನಾಯ್ತಿಗಾಗಿ ಆಸೆಗಣ್ಣಿನಿಂದ ಕಾಯುತ್ತಿದೆ. ಆದಾಯ ತೆರಿಗೆ ಸ್ಲ್ಯಾಬ್ ದರಗಳನ್ನು ಸುವ್ಯವಸ್ಥಿತಗೊಳಿಸುವುದು. ಸೆಕ್ಷನ್ 80C ಕಡಿತದ ಮಿತಿಯನ್ನು ಹೆಚ್ಚಿಸುವುದು, ಪ್ರಮಾಣಿತ ಕಡಿತದ ಮಿತಿಯನ್ನು ಹೆಚ್ಚಿಸುವುದು, ಮನೆ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಹೆಚ್ಚುವರಿ ತೆರಿಗೆ ಪ್ರೋತ್ಸಾಹವನ್ನು ನೀಡುವುದು ಮತ್ತು ಹೆಚ್ಚು ಜನರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವುದನ್ನು ಪ್ರೋತ್ಸಾಹಿಸಲು ಏನಾದರೂ ಉಪಕ್ರಮಗಳು ಇರಬಹುದು ಎಂಬ ನಿರೀಕ್ಷೆ ದೇಶದ ಜನರಲ್ಲಿದೆ.
Tue, 23 Jul 202401:13 AM IST
ನಿರ್ಮಲಾ ಸೀತಾರಾಮನ್ ಕಡೆಗೆ ಬೆಂಗಳೂರಿನ ಆಸೆಗಣ್ಣು
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಆಗಾಗ ಬೆಂಗಳೂರಿಗೆ ಬರುತ್ತಿರುತ್ತಾರೆ. ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಹಲವು ಘೋಷಣೆಗಳು ಇರಬಹುದು ಎಂಬ ನಿರೀಕ್ಷೆ ಕರ್ನಾಟಕ ರಾಜಧಾನಿಯ ನಾಗರಿಕರಲ್ಲಿದೆ. ಮನೆ ಬಾಡಿಗೆ ಭತ್ಯೆ (HRA) ವಿನಾಯಿತಿ, ಟೆಕ್ ಮತ್ತು ಸ್ಟಾರ್ಟ್-ಅಪ್ ರಾಜಧಾನಿ ಬೆಂಗಳೂರುವನ್ನು ಮೆಟ್ರೋ ನಗರಗಳ (Metro City) ಪಟ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆ ಕೇಳಿ ಬರುತ್ತಿದೆ.