Muhurat Trading: ಏನಿದು ಮುಹೂರ್ತ ಟ್ರೇಡಿಂಗ್; ದೀಪಾವಳಿ ಟ್ರೇಡಿಂಗ್‌ನ ಸಮಯ, ಪ್ರಯೋಜನಗಳ ಕುರಿತ ವಿವರ ಇಲ್ಲಿದೆ
ದೀಪಾವಳಿ ಹಬ್ಬ ಬಂತೆಂದರೆ ಷೇರು ಹೂಡಿಕೆದಾರರು ಮುಹೂರ್ತ ಟ್ರೇಡಿಂಗ್ ಮೇಲೆ ಕಣ್ಣಿಟ್ಟಿರುತ್ತಾರೆ. ಇದು ದೀಪಾವಳಿ ಧಮಾಕವು ಹೌದು. ಹಾಗಾದರೆ ಏನಿದು ಮುಹೂರ್ತ ಟ್ರೇಡಿಂಗ್, ಇದಕ್ಕೂ ದೀಪಾವಳಿಗೂ ಏನು ಸಂಬಂಧ, ಏನು ಯಾವ ಸಮಯದಲ್ಲಿ ನಡೆಯುತ್ತದೆ, ಇದರಿಂದ ಏನು ಲಾಭ ಸಂಪೂರ್ಣ ವಿವರ ಇಲ್ಲಿದೆ.
ಮುಹೂರ್ತ ಟ್ರೇಡಿಂಗ್ ಬಹುಶಃ ಷೇರು ಹೂಡಿಕೆದಾರರಿಗೆ ಇದು ಹೊಸ ಸಂಗತಿಯಲ್ಲ. ಆದರೆ ಈ ಬಗ್ಗೆ ತಿಳಿಯದವರು ಹಲವರಿರಬಹುದು. ಈ ಮುಹೂರ್ತ ಟ್ರೇಡಿಂಗ್ ಅನ್ನು ದೀಪಾವಳಿ ಟ್ರೇಡಿಂಗ್ ಅಂತಲೂ ಕರೆಯುತ್ತಾರೆ. ಇದು ಜಾಗತಿಕ ಷೇರು ಮಾರುಕಟ್ಟೆಯ ಬಹಳ ವಿಶೇಷ ಹಾಗೂ ಮಹತ್ವದ ದಿನ. ಹಿಂದೂಗಳು ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬ ಎಂದು ಕರೆಯುತ್ತಾರೆ. ಅಲ್ಲದೆ ಅನ್ಯಾಯದ ಎದುರು ನ್ಯಾಯವು ಗೆದ್ದ ಸಮಯ ಎಂದು ದೀಪಾವಳಿಯನ್ನು ಸಂಭ್ರಮಿಸುತ್ತಾರೆ. ಷೇರು ಹೂಡಿಕೆದಾರರು ಕೂಡ ದೀಪಾವಳಿ ಹಬ್ಬವನ್ನು ಬಹಳ ವಿಶೇಷ ಎಂದು ಪರಿಗಣಿಸುತ್ತಾರೆ. ಹಾಗಾದರೆ ಈ ವರ್ಷ ಯಾವ ದಿನ ಮುಹೂರ್ತ ಟ್ರೇಡಿಂಗ್ ನಡೆಯಲಿದೆ, ಇದರ ಸಮಯ, ಉಪಯೋಗಗಳ ಮಾಹಿತಿಗಾಗಿ ಮುಂದೆ ಓದಿ.
ಏನಿದು ಮುಹೂರ್ತ ಟ್ರೇಡಿಂಗ್
ಮುಹೂರ್ತ ಟ್ರೇಡಿಂಗ್ ಎನ್ನುವುದು ಸಂಸ್ಕೃತ ಪದದ ವಿಸ್ಕೃತ ರೂಪವಾಗಿದೆ. ಇದನ್ನು ಭಾರತದ ಹಣಕಾಸು ಮಾರುಕಟ್ಟೆ ಹಾಗೂ ಷೇರು ಮಾರುಕಟ್ಟೆಗೆ ಶುಭವನ್ನು ಸೂಚಿಸುವ ಸಮಯ ಎಂದು ಪರಿಗಣಿಸಲಾಗುತ್ತದೆ. ಕೆಲವು ದಶಕಗಳಿಂದಲೂ ಈ ಇದನ್ನು ಬೆಳಕಿನ ಹಬ್ಬದ ದೀಪಾವಳಿಯಂದು ಪಾಲಿಸಿಕೊಂಡು ಬರಲಾಗುತ್ತಿದೆ. ಮುಹೂರ್ತ ಟ್ರೇಡಿಂಗ್ ಅದೃಷ್ಟ ಹಾಗೂ ಮುಂದಿನ ದಿನಗಳಲ್ಲಿ ಸುಖ ಸಂಪತ್ತು ಹುಡುಕಿ ಬರಲಿದೆ ಎಂಬುದನ್ನು ಸೂಚಿಸುತ್ತದೆ. ದೀಪಾವಳಿಯಂದು ಲಕ್ಷ್ಮೀ ದೇವಿ ಪೂಜೆ ವಿಶೇಷ. ಈ ದಿನದಂದು ಮಾತೆ ಲಕ್ಷ್ಮೀ ಧರೆಗಿಳಿದು ಭಕ್ತರನ್ನು ಆಶೀರ್ವದಿಸುತ್ತಾಳೆ ಎಂಬುದು ನಂಬಿಕೆ. ಆ ಕಾರಣಕ್ಕಾಗಿಯೇ ಮುಹೂರ್ತ ಟ್ರೇಡಿಂಗ್ ದೀಪಾವಳಿ ಸಮಯದಲ್ಲಿ ಬಹಳ ವಿಶೇಷ ಅನ್ನಿಸಿಕೊಳ್ಳುತ್ತದೆ. ಆ ಕಾರಣಕ್ಕೆ ದೀಪಾವಳಿ ದಿನ ಷೇರು ಮಾರುಕಟ್ಟೆಗೆ ರಜೆ ಇದ್ದರೂ ಕೂಡ ಒಂದು ಗಂಟೆಗಳ ಕಾಲ ವಹಿವಾಟು ನಡೆಸಲಾಗುತ್ತದೆ. ಮುಹೂರ್ತ ಟ್ರೇಡಿಂಗ್‌ನಲ್ಲಿ ಭಾಗವಹಿಸಿ, ಖರೀದಿ ಮಾಡುವುದರಿಂದ ವರ್ಷಪೂರ್ತಿ ಮಾರುಕಟ್ಟೆಗೆ ಶುಭವಾಗುತ್ತದೆ ಎಂಬುದು ನಂಬಿಕೆ.
2023ರ ಮುಹೂರ್ತ ಟ್ರೇಡಿಂಗ್ ಸಮಯ
- ಬ್ಲಾಕ್ ಡೀಲ್ ಅವಧಿ: ಸಂಜೆ 5.45 ರಿಂದ 6 ಗಂಟೆ
- ಪ್ರಿ ಓಷನ್ ಅವಧಿ: ಸಂಜೆ 6 ರಿಂದ 6.15
- ಮುಹೂರ್ತ ಟ್ರೇಡಿಂಗ್ ಅವಧಿ: ಸಂಜೆ 6.20 ರಿಂದ 7.05
- ಮುಕ್ತಾಯದ ಅವಧಿ: ಸಂಜೆ 7.15 ರಿಂದ 7.25
ಮುಹೂರ್ತ ಟ್ರೇಡಿಂಗ್ ಇತಿಹಾಸ
ಪ್ರಾಚೀನ ಭಾರತದ ಕಾಲದಿಂದಲೂ ವ್ಯಾಪಾರ ವಹಿವಾಟು ಮಾಡುವವರು ಈ ಮುಹೂರ್ತ ಟ್ರೇಡಿಂಗ್ ಅನುಸರಿಸಿಕೊಂಡು ಬಂದಿದ್ದಾರೆ ಎನ್ನಲಾಗುತ್ತದೆ. ಆ ಹೂಡಿಕೆಯ ಸ್ವರೂಪ ಬೇರೆ ಬೇರೆ ರೂಪದಲ್ಲಿತ್ತು ಎನ್ನಬಹುದು. ಆಗ ವ್ಯಾಪಾರಿಗಳು ತಮ್ಮ ಲೆಕ್ಕಪುಸ್ತಕ, ಖಾತೆಗಳ ಪುಸ್ತಕಗಳಿಗೆ ಪೂಜೆ ಮಾಡುತ್ತಿದ್ದರು. ಇದು ಮುಂದುವರಿದು ಷೇರು ಮಾರುಕಟ್ಟೆಯಲ್ಲಿ ಮುಹೂರ್ತ ಟ್ರೇಡಿಂಗ್ ಆಗಿ ಉಳಿಯಿತು ಎನ್ನಲಾಗುತ್ತದೆ.
ಮುಹೂರ್ತ ಟ್ರೇಡಿಂಗ್ ಪ್ರಯೋಜನಗಳು
ಶುಭ ಆರಂಭ: ಮುಹೂರ್ತ ಟ್ರೇಡಿಂಗ್ ವ್ಯಾಪಾರಿಗಳು ಹಾಗೂ ಹೂಡಿಕೆದಾರರಿಗೆ ಅದೃಷ್ಟ ಹಾಗೂ ಸಂಪತ್ತು, ಸಮೃದ್ಧಿ ತರುತ್ತದೆ ಎಂಬುದು ನಂಬಿಕೆ. ಹೊಸದಾಗಿ ಹೂಡಿಕೆ ಆರಂಭಿಸುವವರಿಗೆ ಇದು ಶುಭ ಸಮಯ ಎಂದು ಹೇಳಲಾಗುತ್ತದೆ.
ಮಾರುಕಟ್ಟೆ ಸೆಂಟಿಮೆಂಟ್: ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ಶುಭವಾಗಲಿದೆ ಎಂಬ ಭಾವನೆಯು ವ್ಯಾಪಾರಿಗಳು ಹಾಗೂ ಹೂಡಿಕೆದಾರರು ಇಬ್ಬರಿಗೂ ಒಳಿತನ್ನು ಮಾಡಲಿದೆ. ಅಲ್ಲದೆ ಮಾರುಕಟ್ಟೆಯ ಸಕಾರಾತ್ಮಕ ಆರಂಭವು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಮಾರುಕಟ್ಟೆ ಚಂಚಲವಾಗಿರುವುದಿಲ್ಲ: ಸೀಮಿತ ವ್ಯಾಪಾರ ಅವಧಿ, ಕಡಿಮೆ ವ್ಯಾಪಾರದ ಪ್ರಮಾಣದಿಂದಾಗಿ ಮಾರುಕಟ್ಟೆ ಚಂಚಲವಾಗಿರುವುದಿಲ್ಲ. ಇದು ಹೂಡಿಕೆದಾರರಲ್ಲಿ ಸುರಕ್ಷತೆಯ ಭಾವ ಮೂಡುವಂತೆ ಮಾಡುತ್ತದೆ.
ಮುಹೂರ್ತ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವವರಿಗೆ ಒಂದಿಷ್ಟು ಟಿಪ್ಸ್
ನೀವು ಹೂಡಿಕೆ ಮಾಡಲು ಬಯಸುವ ಮುನ್ನ ಸಾಕಷ್ಟು ಸಂಶೋಧನೆ ಹಾಗೂ ಯೋಜನೆಗಳನ್ನು ಮಾಡಿ. ಇದರ ಬಗ್ಗೆ ಸರಿಯಾದ ಜ್ಞಾನ ಬೆಳೆಸಿಕೊಂಡು ನಂತರ ಹೂಡಿಕೆ ಮಾಡಿ. ನಿಮ್ಮ ಹೂಡಿಕೆಯ ಗುರಿ ಸ್ಪಷ್ಟವಾಗಿರಲಿ.
- ಷೇರು ಮಾರುಕಟ್ಟೆ ಹಾಗೂ ಮುಹೂರ್ತ ಟ್ರೇಡಿಂಗ್ ಸುದ್ದಿಗಳ ಮೇಲೆ ಕಣ್ಣಿಟ್ಟಿರಿ. ಇದರಿಂದ ನೀವೊಂದು ಸಮರ್ಪಕ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತದೆ.
- ನಷ್ಟದ ಅಪಾಯ ಕಡಿಮೆ ಮಾಡಲು ವಿವಿಧ ವಲಯಗಳು ಹಾಗೂ ಷೇರುಗಳಲ್ಲಿ ಹೂಡಿಕೆ ಮಾಡಿ.
- ಸಂಭಾವ್ಯ ನಷ್ಟಗಳನ್ನು ಮಿತಿಗೊಳಿಸಲು ಸ್ಟಾಪ್-ಲಾಸ್ ಮಟ್ಟವನ್ನು ನಿರ್ಧರಿಸಿ. ಇದು ನಿರ್ಣಾಯಕ ಅಪಾಯ ನಿರ್ವಹಣೆ ತಂತ್ರವಾಗಿದೆ.
- ತಂತ್ರಜ್ಞಾನವನ್ನು ಬಳಸಿಕೊಂಡು ಟ್ರೇಡ್ ಟೂಲ್, ಪ್ಲ್ಯಾಟ್‌ಫಾರ್ಮ್‌ಗಳ ಬಗ್ಗೆ ತಿಳಿದುಕೊಳ್ಳಿ.
- ಈ ಎಲ್ಲದರ ನಂತರವೂ ನಿಮಗೆ ಹೂಡಿಕೆ ತಂತ್ರದ ಬಗ್ಗೆ ಸರಿಯಾದ ಮಾಹಿತಿ ಹಾಗೂ ಜ್ಞಾನ ನಿಮ್ಮಲ್ಲಿ ಮೂಡಿಲ್ಲ ಎಂದರೆ ಫೈನಾನ್ಷಿಲ್ ಅಡ್ವೈಸರ್‌ಗಳನ್ನು ಭೇಟಿ ಮಾಡಿ, ವಿವರ ಪಡೆಯಿರಿ.