Repo Rate: ಗೃಹ, ವಾಹನ ಸಾಲ ಪಾವತಿದಾರರಿಗೆ ಸಿಹಿ ಸುದ್ದಿ; ಶೇ 6.5ರಲ್ಲೇ ರೆಪೋ ದರ ಯಥಾಸ್ಥಿತಿ
RBI Repo Rate: ಸಾಲಗಾರರಿಗೆ ಸಿಹಿ ಸುದ್ದಿ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐ ಸತತ 5ನೇ ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ (ShaktiKanta Das) ಅವರ ನೇತೃತ್ವದ ಹಣಕಾಸು ಸಮಿತಿ-ಎಂಪಿಸಿ (MPC) ಇಂದು (ಡಿಸೆಂಬರ್ 8, ಶುಕ್ರವಾರ) ಹಣಕಾಸು ನೀತಿಯ ನಿರ್ಧಾರವನ್ನು ಪ್ರಕಟಿಸಿದ್ದು, ರೆಪೋ ದರವನ್ನು (Repo Rate) ಯಥಾಸ್ಥಿತಿಯಲ್ಲಿ ಇರಿಸಿದೆ.
ಪ್ರಸ್ತುತ ಇರುವ ಶೇಕಡಾ 6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಇದು ಗೃಹ ಮತ್ತು ವಾಹನಗಳ ಮೇಲೆ ಸಾಲ ಪಡೆದು ಪ್ರತಿ ತಿಂಗಳು ಇಎಂಐ ಪಾವತಿ ಮಾಡುತ್ತಿರುವ ಗ್ರಾಹಕರಿಗೆ ಸಂತಸ ತರಿಸಿದೆ. ರೆಪೋ ದರ ಹೆಚ್ಚಾದರೆ ಸಾಲದ ಮೇಲಿನ ಬಡ್ಡಿ ದರಗಳ ಪರಿಷ್ಕರಣೆ ಮಾಡುವುದರಿಂದ ಸಾಲಗಾರರಿಗೆ ಹೊರೆಯಾಗುತ್ತದೆ.
2023ರ ಫೆಬ್ರವರಿಯಲ್ಲಿ ನಡೆದಿದ್ದ ಎಂಪಿಸಿ ಸಭೆಯಲ್ಲಿ 25 ಮೂಲಾಂಕಗಳನ್ನು ಹೆಚ್ಚಿಸಲಾಗಿತ್ತು. ಆಗ ರೆಪೋ ದರ ಶೇ 6.25 ರಿಂದ 6.50ಕ್ಕೆ ಏರಿಕೆಯಾಗಿತ್ತು. ಅಂದಿನಿಂದ ಇಂದಿನವರೆಗೆ (ಡಿಸೆಂಬರ್ 8, ಶುಕ್ರವಾರ) ರೆಪೋ ದರಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ.
ವಿತ್ತೀಯ ನೀತಿ ಪ್ರಕಟಿಸಿ ಮಾತನಾಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ನೀತಿಯ ಸಮಿತಿಯು ರೆಪೋ ದರವನ್ನು 6.5ರಲ್ಲೇ ಇರಿಸಲು ಸರ್ವಾನುಮತದಿಂದ ನಿರ್ಧರಿಸಿದೆ. ಪರಿಣಾಮ ಸ್ಥಿರ ಠೇವಣಿ ಸೌಲಭ್ಯ ದರವು ಶೇ 6.25, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರ, ಬ್ಯಾಂಕ್ ದರಗಳು ಶೇ 6.75ರಲ್ಲಿ ಉಳಿಯುತ್ತವೆ ಎಂದು ವಿವರಿಸಿದ್ದಾರೆ.
ಜಿಡಿಪಿ ದರ ಸಕಾರಾತ್ಮಕ ದೃಷ್ಟಿಕೋನವೇ ರೆಪೋ ಯಥಾಸ್ಥಿತಿಗೆ ಕಾರಣ
ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳು ಬಲವಾಗಿ ಉಳಿದಿವೆ. ಇತ್ತೀಚೆಗೆ ಘೋಷಿಸಲಾದ ಜಿಡಿಪಿ ದರಗಳು ಸಕಾರಾತ್ಮಕ ದೃಷ್ಟಿಕೋನವನ್ನು ಸೂಚಿಸಿರುವುದೇ ಆರ್‌ಬಿಐ ಮತ್ತೊಮ್ಮೆ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಕಾರಣವಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
2023ರ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ 7.6 ರಷ್ಟು ಬೆಳವಣಿಗೆಯಾಗಿದೆ. ಇದು ನಿರೀಕ್ಷಿತ ದರಕ್ಕಿಂತ ವೇಗವಾಗಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ನಿರಂತರ ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆಗೆ ಆದರ್ಶ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕಿದೆ.
ರೆಪೋ ದರ ಸ್ಥಿರವಾಗಿಸಿದ ಆರ್‌ಬಿಐನ ಈ ನಿರ್ಧಾರವನ್ನು ರಿಯಲ್ ಎಸ್ಟೇಟ್ ವಲಯ ಸ್ವಾಗತಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನಿ ನಿರ್ಧಾರ ಮನೆ ಖರೀದಿದಾರರಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ನೀಡಿದಂತಾಗಿದೆ. ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ ಪಡೆಯಲು ನೆರವಾಗಲಿದೆ. ಈ ತ್ರೈಮಾಸಿಕದ ಅಂತ್ಯದ ವೇಳೆಗೆ ಮತ್ತು 2024ರ ವೇಳೆಗೆ ಹೆಚ್ಚಿನ ಮನೆ ಖರೀದಿದಾರರಿಗೆ ಸಹಕಾರಿಯಾಗಿದೆ ಎಂದು ಭಾರತ ಮತ್ತು ಆಗ್ನೇಯ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಅನ್ಶುಲ್ ಜೈನ್ ಹೇಳಿದ್ದಾರೆ.
ವಿಭಾಗ