HDFC twins Merger: ಎಚ್‌ಡಿಎಫ್‌ಸಿ ಮಹಾ ವಿಲೀನದಿಂದ ಬ್ಯಾಂಕ್‌ನ ಠೇವಣಿದಾರರು ಮತ್ತು ಸಾಲಗಾರರ ಮೇಲೆ ಪರಿಣಾಮಗಳೇನು? ಇಲ್ಲಿದೆ ವಿವರ
HDFC and HDFC Bank Merger: ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ವಿಲೀನದಿಂದ ಸ್ಥಿರ ಠೇವಣಿ ಹೂಡಿಕೆದಾರರಿಗೆ, ಗೃಹಸಾಲ ಖರೀದಿದಾರರಿಗೆ, ಷೇರುದಾರರಿಗೆ ಸೇರಿದಂತೆ ಗ್ರಾಹಕರ ಮೇಲೆ ಯಾವೆಲ್ಲ ಪರಿಣಾಮವಾಗಲಿದೆ ಎಂಬ ವಿವರ ಇಲ್ಲಿದೆ.
ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪ್ ಮತ್ತು ಎಚ್‌ಡಿಎಫ್‌ಸಿಯ 40 ಶತಕೋಟಿ ಡಾಲರ್ ಮೌಲ್ಯದ ಮಹಾವಿಲೀನವು ಮುಂದಿನ ತಿಂಗಳು ಪೂರ್ಣಗೊಳ್ಳಲು ಸಜ್ಜಾಗಿದೆ. ಜುಲೈ 1ರಿಂದ ಅನ್ವಯವಾಗುವಂತೆ ಈ ವಿಲೀನ ಆರಂಭವಾಗಲಿದೆ ಎಂದು ಈಗಾಗಲೇ ಎಚ್‌ಡಿಎಫ್‌ಸಿಯ ಚೇರ್ಮನ್ ದೀಪಕ್ ಪಾರೇಖ್ ಹೇಳಿದ್ದಾರೆ. ಆದರೆ, ಮರುದಿನ ಎಕ್ಸ್‌ಚೇಂಜ್ ಫೈಲಿಂಗ್ ಮಾಡುವ ಸಮಯದಲ್ಲಿ ಈ ಹೇಳಿಕೆಯ ಕುರಿತು ಕಂಪನಿ ಸ್ಪಷ್ಟನೆ ನೀಡಿತ್ತು. ಚೇರ್ಮನ್ ದೀಪಕ್ ಪಾರೇಖ್ ಹೇಳಿರುವ ದಿನಾಂಕವು ತಾತ್ಕಾಲಿಕವಾಗಿದ್ದು, ಇನ್ನೂ ಕೆಲವೊಂದು ಅಂಗೀಕಾರ ಪಡೆಯುವುದು ಬಾಕಿ ಉಳಿದಿದೆ ಎಂದು ಹೇಳಿತ್ತು. "ಸಂಬಂಧಪಟ್ಟ ಎಲ್ಲಾ ಫಾರ್ಮಾಲಿಟಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಯತ್ನಿಸುತ್ತಿದೆ" ಎಂದು ಸ್ಪಷ್ಟನೆ ನೀಡಲಾಗಿತ್ತು.
"ವಿಲೀನಕ್ಕೆ ಸಂಬಂಧಪಟ್ಟಂತೆ ತಿಳಿಸಲಾದ ದಿನಾಂಕವು ಅಂದಾಜು ದಿನಾಂಕವಾಗಿದ್ದು, ಕೆಲವೊಂದು ಫಾರ್ಮಾಲಿಟಿ, ಅನುಮತಿ, ಅಂಗೀಕಾರ ಪಡೆಯುವುದು ಎಚ್‌ಡಿಎಫ್‌ಸಿ ಅಥವಾ ಎಚ್‌ಡಿಎಫ್‌ಸಿ ಬ್ಯಾಂಕ್‌ನ ನಿಯಂತ್ರಣದಲ್ಲಿ ಇರುವುದಿಲ್ಲ" ಎಂದು ಹೇಳಲಾಗಿತ್ತು. ಒಟ್ಟಾರೆ ಇನ್ನು ಕೆಲವೇ ದಿನಗಳಲ್ಲಿ ಎಚ್‌ಡಿಎಫ್‌ಸಿ ವಿಲೀನ ಪೂರ್ಣಗೊಳ್ಳುವುದು ನಿಶ್ಚಿತ. ಈ ಮಹಾವಿಲೀನದಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಠೇವಣಿದಾರರು ಮತ್ತು ಎಚ್‌ಡಿಎಫ್‌ಸಿಯ ಸಾಲಗಾರರ ಮೇಲೆ ಏನು ಪರಿಣಾಮ ಬೀರಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಲೀನದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಿಕದ ಎರಡನೇ ಬೃಹತ್ ಹಣಕಾಸು ಸಂಸ್ಥೆಯಾಗಿ ಎಚ್‌ಡಿಎಫ್‌ಸಿ ಹೊರಹೊಮ್ಮಲಿದೆ.
ಎಚ್‌ಡಿಎಫ್‌ಸಿ-ಎಚ್‌ಡಿಫ್‌ಸಿ ಬ್ಯಾಂಕ್ ವಿಲೀನ: ಠೇವಣಿದಾರರ ಮೇಲೆ ಪರಿಣಾಮ
ಎಚ್‌ಡಿಎಫ್‌ಸಿ ಲಿಮಿಟೆಡ್‌ನಲ್ಲಿ ಸ್ಥಿರ ಠೇವಣಿ ಹೊಂದಿರುವವರು ಮೊದಲು ತಮ್ಮ ಎಫ್‌ಡಿ ಹೂಡಿಕೆಯು ಆಟೋ ರಿನಿವಲ್ ಆಗಿರುವುದೇ ಅಥವಾ ಆಗಿಲ್ಲವೇ ಎಂದು ಪರಿಶೀಲಿಸಿ. ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ಬಳಿಕ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಗ್ರಾಹಕರಿಗೆ ತಮ್ಮ ಹಣ ವಿತ್‌ಡ್ರಾ ಮಾಡಿಕೊಳ್ಳುವಂತೆ ಅಥವಾ ಠೇವಣಿ ನವೀಕರಣ ಮಾಡುವಂತೆ ಸೂಚಿಸಬಹುದು.
12 ತಿಂಗಳಿನಿಂದ 120 ತಿಂಗಳವರೆಗೆ ಎಚ್‌ಡಿಎಫ್‌ಸಿಯು ಶೇಕಡ 6.56ರಿಂದ ಶೇಕಡ 7.21ರವವರೆಗೆ ಬಡ್ಡಿದರ ನೀಡುತ್ತದೆ. ಇದು ಜೂನ್ 21ರಿಂದ ಜಾರಿಯಲ್ಲಿದೆ. ಆದರೆ, ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನದಿಂದ 10 ವರ್ಷದವರೆಗೆ ಶೇಕಡ 3ರಿಂದ ಶೇಕಡ 7.25ರವರೆಗೆ ಎಫ್‌ಡಿ ನೀಡುತ್ತದೆ. ಇದು ಮೇ 29ರಿಂದ ಜಾರಿಯಲ್ಲಿದೆ.
"ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಠೇವಣಿದಾರರು ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ವಿಲೀನದಿಂದ ಪರಿಣಾಮ ಹೊಂದುತ್ತಾರೆ. ಅಡಮಾನ ಕಂಪನಿಯ ಠೇವಣಿದಾರರು ತಮ್ಮ ಹಣವನ್ನು ಹಿಂಪಡೆಯಲು ಅಥವಾ ಆ ಸಮಯದಲ್ಲಿ ಚಾಲ್ತಿಯಲ್ಲಿರುವ ಬಡ್ಡಿ ದರದಲ್ಲಿ ತಮ್ಮ ಠೇವಣಿಗಳನ್ನು ನವೀಕರಿಸುವ ಅವಕಾಶವನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಪಡೆಯಬಹುದು” ಎಂದು ಮೈಫಂಡ್‌ಬಜಾರ್‌ನ ಸಿಇಒ ಮತ್ತು ಸಂಸ್ಥಾಪಕ ವಿನಿತ್ ಖಂಡಾರೆ ಹೇಳಿದ್ದಾರೆ.
"ಗ್ರಾಹಕರ ದೃಷ್ಟಿಕೋನದಿಂದ ನೋಡಿದಾಗ, ವಿಲೀನದ ಬಳಿಕ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್, ಸಿಎಂಎಸ್ ಸೊಲ್ಯುಷನ್ಸ್, ಪರ್ಸನಲ್ ಲೋನ್, ಕಾರ್ ಲೋನ್, ಬಿಸ್ನೆಸ್ ಲೋನ್ ಇತ್ಯಾದಿ ಹಲವು ಸೌಕರ್ಯಗಳೂ ದೊರಕಲಿವೆ" ಎಂದು 35 ನಾರ್ತ್ ವೆಂಚರ್ಸ್‌ನ ಸ್ಥಾಪಕ ಮಿಲನ್ ಶರ್ಮಾ ಹೇಳಿದ್ದಾರೆ.
ವಿಲೀನದ ಬಳಿಕ ಠೇವಣಿದಾರರಿಗೆ ಎಫ್‌ಡಿಗೆ ವಿಮೆ
ವಿಲೀನದ ಬಳಿಕ ಗ್ರಾಹಕರು ತಮ್ಮ ಠೇವಣಿಯನ್ನು ವಿಲೀನ ಮಾಡಿದ ಬಳಿಕ ಠೇವಣಿದಾರರಿಗೆ ತಮ್ಮ ಹೂಡಿಕೆಗೆ 5 ಲಕ್ಷ ರೂಪಾಯಿವರೆಗೆ ಡೆಪೊಸಿಟ್ ಇನ್ಸೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಪ್ರಯೋಜನಗಳು ದೊರಕಬಹುದು. ಇಷ್ಟು ಮಾತ್ರವಲ್ಲದೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗ್ರಾಹಕರಿಗೆ ಇದೇ ಬ್ಯಾಂಕ್‌ನೊಳಗೆ ಗೃಹಸಾಲ ಸೌಕರ್ಯವೂ ದೊರಕಬಹುದು. ಈಗಾಗಲೇ ಎಚ್‌ಡಿಎಫ್‌ಸಿ ಲಿಮಿಟೆಡ್‌ನಿಂದ ಗೃಹ ಸಾಲ ಪಡೆದವರಿಗೆ ಏನು ತೊಂದರೆಯಾಗದು. ಆದರೆ, ವಿಲೀನದ ಬಳಿಕ ಗೃಹಸಾಲದ ಬಡ್ಡಿದರ ಪರಿಷ್ಕರಣೆಗೊಳ್ಳಬಹುದೇ ಎನ್ನುವ ಪ್ರಶ್ನೆಯಿದೆ. ಅಕ್ಟೋಬರ್ 2019ರ ಬಳಿಕ ಎಲ್ಲಾ ಬ್ಯಾಂಕ್‌ಗಳು ಫ್ಲೋಟಿಂಗ್ ರೇಟ್ ರಿಟೇಲ್ ಲೋನ್ ಅನ್ನು ಎಕ್ಸ್‌ಟರ್ನಲ್ ಬೆಂಚ್ ಮಾರ್ಕ್‌ಗೆ ಲಿಂಕ್ ಮಾಡುವ ಅಗತ್ಯವಿದೆ. ಎಚ್‌ಡಿಎಫ್‌ಸಿ ಈಗ ವರ್ಷಕ್ಕೆ ಶೇಕಡ 8.50 ಬಡ್ಡಿದರ (ಆರಂಭಿಕ)ದಲ್ಲಿ ಗೃಹಸಾಲ ನೀಡುತ್ತಿದೆ.
ಷೇರುದಾರರ ಮೇಲೆ ಪರಿಣಾಮವೇನು?
ನಿಗದಿತ ದರದಲ್ಲಿ ಎಚ್‌ಡಿಎಫ್‌ಸಿ ಷೇರುದಾರರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳನ್ನು ಪಡೆಯುವ ಅವಕಾಶವಿದೆ.