ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಷೇರುಪೇಟೆ ಗಮನಸೆಳೆಯುತ್ತಿದೆ. ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ ಎಂಬ ವಿಚಾರದಲ್ಲಿ ಪರಿಣತರ ಅಭಿಪ್ರಾಯದ ನೋಟ ಇಲ್ಲಿದೆ.

ಲೋಕಸಭಾ ಚುನಾವಣೆ; ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ ಎಂಬುದರ ಪರಿಣತರ ಅಭಿಪ್ರಾಯದ ನೋಟ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ; ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ ಎಂಬುದರ ಪರಿಣತರ ಅಭಿಪ್ರಾಯದ ನೋಟ. (ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಶುರುವಾಗಿದೆ. ಇನ್ನೆರಡು ಹಂತಗಳ ಮತದಾನ ಮುಗಿದರೆ ಬಳಿಕ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಬಿಜೆಪಿ ನೇತೃತ್ವದ ಎನ್‌ಡಿಎ ಕೈನಲ್ಲೇ ಭದ್ರವಾಗಿ ಮುಂದುವರಿಯುವುದೋ ಅಥವಾ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಕೈ ಸೇರುವುದೋ ಎಂಬುದು ಸದ್ಯ ಕುತೂಹಲದ ವಿಚಾರ. ಷೇರುಪೇಟೆಯಲ್ಲೂ ಇದರ ಪರಿಣಾಮ ಉಂಟಾಗುತ್ತಿದ್ದು, ಒಂದೊಮ್ಮೆ ಪ್ರಧಾನಿ ಮೋದಿಯವರೇ ಮತ್ತೊಮ್ಮೆ ಅಧಿಕಾರಕ್ಕೆ ಏರಿದರೆ ಯಾವೆಲ್ಲ ಸೆಕ್ಟರ್‌ಗಳು ಲಾಭದಾಯಕವಾಗಬಹುದು ಎಂಬ ಚರ್ಚೆಯೂ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗೂ ದೇಶೀಯ ಷೇರುಪೇಟೆ ವಹಿವಾಟು ಈಗಿರುವಂತೆಯೇ ಮುಂದುವರಿಯಲಿದೆ. ಒಮ್ಮೆ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾದ ಬೆನ್ನಿಗೆ ಷೇರುಪೇಟೆಯ ಸೂಚ್ಯಂಕಗಳಲ್ಲೂ ಅದರ ಪರಿಣಾಮ ಕಾಣಿಸಲಿದೆ. ಈ ಟ್ರೆಂಡ್ ಬಹಳ ವರ್ಷಗಳಿಂದ ಚುನಾವಣಾ ವರ್ಷಗಳಲ್ಲಿ ನಡೆದುಕೊಂಡು ಬಂದಿರುವಂಥದ್ದು.

ಷೇರುಪೇಟೆ ತಜ್ಞರು ಈ ಸಂದರ್ಭದಲ್ಲಿ ಯಾರು ಗೆದ್ದರೆ ಏನಾಗಬಹುದು ಎಂಬುದರ ಲೆಕ್ಕಾಚಾರವನ್ನು ಮುಂದಿಡುವುದು ವಾಡಿಕೆ. ಅಂತಹ ಒಂದು ಲೆಕ್ಕಾಚಾರವನ್ನು ಯೀಲ್ಡ್ ಮ್ಯಾಕ್ಸಿಮೈಸರ್‌ ಸಂಸ್ಥಾಪಕ ಯೋಗೇಶ್‌ ಮೆಹ್ತಾ ಎರಡು ದಿನಗಳ ಹಿಂದೆ ಬಿಜಿನೆಸ್ ಟುಡೇ ಜೊತೆ ಮಾತನಾಡುತ್ತ ವಿವರಿಸಿದ್ದಾರೆ.

ಪ್ರಧಾನಿ ಮೋದಿಯೇ ಈ ಸಲ ಗೆದ್ದರೆ, ಷೇರುಪೇಟೆಯ ಯಾವ ಸೆಕ್ಟರ್‌ ಲಾಭಗಳಿಸಲಿದೆ

ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ50 ಸದ್ಯ 21,700 ಮತ್ತು 22,800 ನಡುವೆ ವಹಿವಾಟು ನಡೆಸುತ್ತಿದೆ. ಇದೇ ರೀತಿ ಜೂನ್ 4 ರಂದು ಲೋಕಸಭೆ ಚುನಾವಣೆ ತನಕವೂ ಮುಂದುವರಿಯಲಿದೆ. ಈ ರೀತಿ ಸ್ಥಿರತೆ ಚುನಾವಣಾ ವರ್ಷದ ಫಲಿತಾಂಶಕ್ಕೆ ಸ್ವಲ್ಪ ಸಮಯ ಮೊದಲು ಸಾಧಾರಣ ಮತ್ತು ಸಹಜ. ಮೇ 17ಕ್ಕೆ ಕೊನೆಗೊಂಡ ವಾರದಲ್ಲಿ ನಿಫ್ಟಿ50 ಸೂಚ್ಯಂಕವು ಹಿಂದಿನ ವಾರದ ಕುಸಿತ ಪ್ರಮಾಣ ಶೇಕಡ 1.87 ರಿಂದ ಚೇತರಿಸಿಕೊಂಡಿದೆ. ಅಂದರೆ ಶೇಕಡ 1.86 ಏರಿಕೆ ಕಂಡಿದೆ. ಪ್ರಸ್ತುತ ನಿಫ್ಟಿ50 ಸೂಚ್ಯಂಕವು 22,466 ರ ಆಸುಪಾಸಿನಲ್ಲಿದೆ ಎಂಬುದರ ಕಡೆಗೆ ಯೋಗೇಶ್ ಮೆಹ್ತಾ ಗಮನಸೆಳೆದಿದ್ದರು.

ಷೇರುಪೇಟೆ ವಹಿವಾಟಿನ ಮೇಲೆ ಆಸಕ್ತರು, ತಜ್ಞರು ಗಮನಿಸುತ್ತಿರುವ ಸೆಕ್ಟರ್‌ಗಳ ಕಡೆಗೆ ನೋಡಿದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಆಗ ರೈಲ್ವೆ, ಮೂಲಸೌಕರ್ಯ, ರಕ್ಷಣಾ ಕ್ಷೇತ್ರ, ಇಂಧನ ಮತ್ತು ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಉತ್ತಮ ಲಾಭ ನೀಡಬಹುದು ಎಂಬುದು ಅವರ ನಿರೀಕ್ಷೆ.

ಷೇರುಪೇಟೆಯ ನಿರೀಕ್ಷೆಗೆ ಇಲ್ಲಿವೆ ಕಾರಣ

ಯಾವೆಲ್ಲ ಷೇರುಗಳು ಲಾಭದಾಯಕವಾಗಬಹುದು ಎಂಬ ಬಗ್ಗೆ ಷೇರುಪೇಟೆ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಉದಾಹರಣೆಗೆ ಹೇಳಬೇಕು ಎಂದರೆ, 2023ರ ಮೇ 17 ರಿಂದೀಚೆಗೆ ರಕ್ಷಣಾ ಕ್ಷೇತ್ರದಲ್ಲಿರುವ ಅಸ್ತ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್‌ ಶೇಕಡ 124, ಹಿಂದೂಸ್ತಾನ್ ಏರೋನಾಟಿಕ್ಸ್‌ ಶೇಕಡ 194 ಲಾಭಗಳಿಸಿವೆ. ಇನ್ನು, ಇದೇ ಅವಧಿಯಲ್ಲಿ ಎನ್‌ಐಬಿಇ ಲಿಮಿಟೆಡ್ ಶೇ 298, ಭಾರತ್ ಡೈನಾಮಿಕ್ಸ್‌ ಶೇ 92, ಡೇಟಾ ಪ್ಯಾಟರ್ನ್ಸ್‌ ಶೇ 81, ಪಾರಸ್‌ ಡಿಫೆನ್ಸ್ ಆಂಡ್ ಸ್ಪೇಸ್ ಟೆಕ್ನಾಲಜಿ ಶೇಕಡ 35 ಲಾಭ ಗಳಿಸಿವೆ.

ಇನ್ನೊಂದೆಡೆ, 50ರಷ್ಟು ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಷೇರು ಮೌಲ್ಯ ಕಳೆದ 1 ವರ್ಷದ ಅವಧಿಯಲ್ಲಿ ಶೇಕಡ 100 ಕ್ಕೂ ಹೆಚ್ಚು ಪ್ರಗತಿ ಕಂಡಿವೆ.

ಕೊಚ್ಚಿನ ಶಿಪ್‌ಯಾರ್ಡ್‌ ಕಳೆದ 12 ತಿಂಗಳ ಅವಧಿಯಲ್ಲಿ ಅಂದರೆ ಮೇ 16ಕ್ಕೆ ಕೊನೆಯಾದಂತೆ ಶೇಕಡ 387 ಮೌಲ್ಯ ವೃದ್ಧಿಸಿಕೊಂಡಿದೆ. ಇದೇ ಅವಧಿಯಲ್ಲಿ ಐಎಫ್‌ಸಿಐ, ಇಂಡಿಯನ್ ರೈಲ್ವೆ ಫೈನಾನ್ಸ್‌ ಕಾರ್ಪೊರೇಶನ್‌ (ಐಆರ್‌ಎಫ್‌ಸಿ), ಹೌಸಿಂಗ್ ಆಂಡ್‌ ಅರ್ಬನ್ ಡೆವಲಪ್‌ಮೆಂಟ್‌ ಕಾರ್ಪೊರೇಶನ್ (ಹುಡ್ಕೊ) ಮತ್ತು ಆರ್‌ಇಸಿ ಕೂಡ ಶೇಕಡ 300 ಮೌಲ್ಯ ವೃದ್ಧಿ ಕಂಡಿವೆ. ಇದನ್ನು ಅನುಸರಿಸಿ ಹೂಡಿಕೆದಾರರು ರಕ್ಷಣಾ ಕ್ಷೇತ್ರ, ಇಂಧನ ಕ್ಷೇತ್ರ ಮತ್ತು ಬ್ಯಾಂಕಿಂಗ್‌ನಿಂದ ಷೇರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದರ ಕಡಗೆ ಮೆಹ್ತಾ ಅವರು ಗಮನಸೆಳೆದಿದ್ದಾರೆ.

ಇಲ್ಲಿ ನೀಡಿರುವ ಷೇರುಗಳ ವಿವರ ಕೇವಲ ಮಾಹಿತಿಗೋಸ್ಕರ ನೀಡಿದ್ದು, ಅಧ್ಯಯನವಿಲ್ಲದೇ ಷೇರುಪೇಟೆ ವಹಿವಾಟು ಮಾಡುವುದು ಸರಿಯಲ್ಲ. ಪರಿಣತರ ಸಲಹೆ, ಮಾರ್ಗದರ್ಶನ ಮತ್ತು ಸ್ವತಃ ಅಧ್ಯಯನ ಮಾಡಿಕೊಂಡು ಷೇರುಪೇಟೆ ವಹಿವಾಟು ನಡೆಸುವುದು ಸೂಕ್ತ. ಕಾರಣ ಹೂಡಿಕೆ ಮಾಡುವ ನಿಮ್ಮದೇ ಬೆವರಗಳಿಕೆ ಎಂಬುದನ್ನು ಮರೆಯಬೇಡಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024