ಬೆಂಗಳೂರು, ಮೈಸೂರು, ಬಳ್ಳಾರಿ, ವಿಜಯಪುರ ಸೇರಿ 5 ರೈಲು ನಿಲ್ದಾಣಗಳಲ್ಲಿ 20 ರೂಪಾಯಿಗೆ ಜನತಾ ಊಟ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಂಗಳೂರು, ಮೈಸೂರು, ಬಳ್ಳಾರಿ, ವಿಜಯಪುರ ಸೇರಿ 5 ರೈಲು ನಿಲ್ದಾಣಗಳಲ್ಲಿ 20 ರೂಪಾಯಿಗೆ ಜನತಾ ಊಟ

ಬೆಂಗಳೂರು, ಮೈಸೂರು, ಬಳ್ಳಾರಿ, ವಿಜಯಪುರ ಸೇರಿ 5 ರೈಲು ನಿಲ್ದಾಣಗಳಲ್ಲಿ 20 ರೂಪಾಯಿಗೆ ಜನತಾ ಊಟ

ಜನರಲ್ ಕೋಚ್‌ಗಳಲ್ಲಿ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ಒಂದು ಶುಭ ಸುದ್ದಿ. ಭಾರತೀಯ ರೈಲ್ವೆಯು ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿರುವ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಎಕಾನಮಿ, ಸ್ನ್ಯಾಕ್ ಮೀಲ್ ಕೌಂಟರ್ ಶುರುಮಾಡಿದೆ. ಕೈಗೆಟಕುವ ದರದಲ್ಲಿ ಆಹಾರ, ತಿಂಡಿ ಒದಗಿಸುವ ಈ ಉಪಕ್ರಮದ ಕುರಿತು ಇನ್ನಷ್ಟು ವಿವರ ಇಲ್ಲಿದೆ.

ವಿಜಯಪುರ, ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿರುವ ಎಕಾನಮಿ ಮತ್ತು ಸ್ನ್ಯಾಕ್‌ ಮೀಲ್ ಫುಡ್ ಕೌಂಟರ್‌ಗಳು
ವಿಜಯಪುರ, ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿರುವ ಎಕಾನಮಿ ಮತ್ತು ಸ್ನ್ಯಾಕ್‌ ಮೀಲ್ ಫುಡ್ ಕೌಂಟರ್‌ಗಳು

ಬೆಂಗಳೂರು: ಉಳಿತಾಯದ ಕಡೆಗೆ ಹೆಚ್ಚು ಗಮನಕೊಡುವ ರೈಲ್ವೆ ಪ್ರಯಾಣಿಕರ ಗಮನಕ್ಕೆ. ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ (IRCTC) ಜೊತೆಗೆ ಭಾರತೀಯ ರೈಲ್ವೇ (Indian Railways) ಯು ಪ್ರಯಾಣಿಕರಿಗೆ, ವಿಶೇಷವಾಗಿ ಜನರಲ್ ಬೋಗಿಗಳ ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿಗಳನ್ನು ನೀಡುವ ಹೊಸ ಉಪಕ್ರಮವನ್ನು ಆರಂಭಿಸಿದೆ.

ಕರ್ನಾಟಕದಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯ 5 ರೈಲು ನಿಲ್ದಾಣಗಳಲ್ಲಿ ಎಕಾನಮಿ ಮತ್ತು ಸ್ನ್ಯಾಕ್ ಮೀಲ್‌ಗಳನ್ನು ಭಾರತೀಯ ರೈಲ್ವೆ ತನ್ನ ಕೌಂಟರ್‌ಗಳ ಮೂಲಕ ಒದಗಿಸಲಾರಂಭಿಸಿದೆ. ಭಾರತದ 100ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ 150 ಕೌಂಟರ್‌ಗಳ ಮೂಲಕ ಬೇಸಿಗೆ ಸಂದರ್ಭದಲ್ಲಿ ಈ ಸೌಲಭ್ಯ ಒದಗಿಸುತ್ತಿರುವುದಾಗಿ ಬಾರತೀಯ ರೈಲ್ವೆ ಹೇಳಿಕೊಂಡಿದೆ.

ಸಾಮಾನ್ಯ ದರ್ಜೆ (ಜನರಲ್ ಕಂಪಾರ್ಟ್‌ಮೆಂಟ್‌)ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಅನ್ನಾಹಾರ ಒದಗಿಸುವುದನ್ನು ಖಾತರಿಪಡಿಸುವ ಉದ್ದೇಶ ಈ ಉಪಕ್ರಮದ್ದು. ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ನಿಲ್ಲುವ ಫ್ಲಾಟ್‌ಫಾರಂ ಬಳಿಯೇ ಇಂತಹ ಆಹಾರ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಈ ಎಕಾನಮಿ ಮತ್ತು ಸ್ನ್ಯಾಕ್ ಮೀಲ್‌ಗಳು ಲಭ್ಯ ಇವೆ ಎಂದು ರೈಲ್ವೆ ತಿಳಿಸಿದೆ.

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ 5 ನಿಲ್ದಾಣಗಳಲ್ಲಿದೆ ಈ ಫುಡ್‌ ಕೌಂಟರ್‌

ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಈ ಫುಡ್ ಕೌಂಟರ್ ಅನ್ನು ಭಾರತೀಯ ರೈಲ್ವೆ ಸ್ಥಾಪಿಸಿದೆ. ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ, ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ನಿಲ್ಲುವ ಫ್ಲಾಟ್‌ಫಾರಂ ಬಳಿ ಇಂತಹ ಫುಡ್‌ ಕೌಂಟರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

ಕಾಯ್ದಿರಿಸದ ಕಂಪಾರ್ಟ್‌ಮೆಂಟ್‌ಗಳಲ್ಲಿ (ಜನರಲ್ ಕ್ಲಾಸ್ ಕೋಚ್‌ಗಳು) ಪ್ರಯಾಣಿಸುವವರು ಎದುರಿಸುವ ಸವಾಲುಗಳನ್ನು ಭಾರತೀಯ ರೈಲ್ವೇ ಗುರುತಿಸಿದೆ. ಅವರಿಗೆ ಯಾವಾಗಲೂ ಅನುಕೂಲಕರ ಮತ್ತು ಬಜೆಟ್ ಸ್ನೇಹಿ ಊಟದ ಆಯ್ಕೆಗಳಿರುವುದಿಲ್ಲ. ಹೀಗಾಗಿ, ಬೇಸಿಗೆ ತಿಂಗಳ ಪ್ರಯಾಣಿಕ ದಟ್ಟಣೆಯನ್ನು ನಿರೀಕ್ಷಿಸುತ್ತಿರುವ ಭಾರತೀಯ ರೈಲ್ವೆಯು ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಈ ಉಪಕ್ರಮ ಜಾರಿಗೊಳಿಸಿದೆ.

ಎಕಾನಮಿ, ಸ್ನ್ಯಾಕ್ ಮೀಲ್- ಏನಿರುತ್ತೆ, ದರ ಎಷ್ಟು

ಬಜೆಟ್ ಸ್ನೇಹಿ ಊಟ, ತಿಂಡಿ ಹುಡುಕುವ ಸಾಮಾನ್ಯ ಪ್ರಯಾಣಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಕಾನಮಿ ಮತ್ತು ಸ್ನ್ಯಾಕ್ ಮೀಲ್ ಅನ್ನು ಈ ಕೌಂಟರ್‌ಗಳ ಮೂಲಕ ವಿತರಿಸಲಾಗುತ್ತಿದೆ.

ಎಕಾನಮಿ ಮೀಲ್ಸ್ - ಈ ಕ್ಷಣಕ್ಕೆ ಸ್ವಲ್ಪ ಹೊಟ್ಟೆ ಹಸಿವು ತಗ್ಗಿಸಿಕೊಳ್ಳಬೇಕು ಎನ್ನುವವರಿಗೆ ಹೇಳಿ ಮಾಡಿಸಿದ ಆಹಾರ ಪೊಟ್ಟಣ ಇದು. ಇದು ಪಾಕೆಟ್ ಫ್ರೆಂಡ್ಲಿ ಆಗಿದ್ದು, 20 ರೂಪಾಯಿಗೆ ಲಭ್ಯವಿದೆ.

ಸ್ನ್ಯಾಕ್ ಮೀಲ್ - ಇದು ಎಕಾನಮಿ ಮೀಲ್ಸ್‌ಗಿಂತ ಸ್ವಲ್ಪ ಹೆಚ್ಚಿನದ್ದು. ಇದರಲ್ಲಿ ಹೊಟ್ಟೆ ಹಸಿವು ನೀಗಿಸಬಹುದಾದಷ್ಟು ಆಹಾರ ಇರಲಿದ್ದು, 50 ರೂಪಾಯಿಗೆ ಲಭ್ಯವಿದೆ.

ಕಳೆದ ವರ್ಷ ದೇಶದ ಸುಮಾರು 51 ನಿಲ್ದಾಣಗಳಲ್ಲಿ ಈ ಸೇವೆಯನ್ನು ಪ್ರಾಯೋಗಿಕವಾಗಿ ಯಶಸ್ವಿಯಾಗಿ ನಡೆಸಲಾಗಿತ್ತು. ಆ ಯಶಸ್ಸಿನ ಆಧಾರದ ಮೇಲೆ, ರೈಲ್ವೇಯು ಈ ಉಪಕ್ರಮವನ್ನು ಈ ವರ್ಷ ಇನ್ನಷ್ಟು ನಿಲ್ದಾಣಗಳಿಗೆ ವಿಸ್ತರಿಸಿದೆ. ಈಗ 100 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆಯಾಗಿ ಸುಮಾರು 150 ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಉಪಕ್ರಮವನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಿಲ್ದಾಣಗಳಿಗೆ ವಿಸ್ತರಿಸುವ ಚಿಂತನೆ ಭಾರತೀಯ ರೈಲ್ವೆಯದ್ದು.

ವಿಶೇಷವಾಗಿ ಸಾಮಾನ್ಯ ವರ್ಗದ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಈ ಉಪಕ್ರಮದಿಂದ ಗಮನಾರ್ಹ ಪ್ರಯೋಜನವಾಗಲಿದೆ. ಸುಲಭವಾಗಿ ಲಭ್ಯವಿರುವ, ಕೈಗೆಟುಕುವ ದರದ ಊಟ ಮತ್ತು ತಿಂಡಿಗಳನ್ನು ಪ್ರಯಾಣಿಕರು ತಮ್ಮ ಪ್ರಯಾಣದ ಉದ್ದಕ್ಕೂ ಆರಾಮವಾಗಿರುವುದನ್ನು ಖಚಿತಪಡಿಸುತ್ತದೆ ಎಂದು ಭಾರತೀಯ ರೈಲ್ವೆ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.