Opening Bell: ಷೇರುಪೇಟೆಗೆ ಶುಭ ಶುಕ್ರವಾರ; ಹೊಸ ಎತ್ತರಕ್ಕೆ ನಿಫ್ಟಿ ನೆಗೆಯುವ ನಿರೀಕ್ಷೆ, ಈ ಷೇರುಗಳನ್ನು ಗಮನಿಸಿ
Opening Bell: ಇತ್ತೀಚಿನ ದಿನಗಳಲ್ಲಿ ನೀರಸ ಚಟುವಟಿಕೆಯಿಂದ ಇದ್ದ ಭಾರತದ ಷೇರು ಮಾರುಕಟ್ಟೆ ಮತ್ತೆ ಪುಟಿದೆದ್ದಿದೆ. ಕಳೆದ 2-3 ದಿನಗಳಿಂದ ಭಾರತದ ಷೇರು ಮಾರುಕಟ್ಟೆ ಉತ್ತಮ ಗಳಿಕೆ ಕಂಡಿದೆ. ಶುಕ್ರವಾರ ಕೂಡಾ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಉತ್ತಮ ಆರಂಭವನ್ನು ಸೂಚಿಸುತ್ತಿದೆ.
ಬೆಂಗಳೂರು: ಭಾರತದ ಗಿಫ್ಟ್ ನಿಫ್ಟಿ ಬೆಳಗ್ಗೆ 8:13 ನಂತೆ 22,312.50 ನಲ್ಲಿ ವಹಿವಾಟು ನಡೆಸುತ್ತಿದೆ, ಎನ್‌ಎಸ್‌ಸಿ ನಿಫ್ಟಿ 50 ಗುರುವಾರದ ದಾಖಲೆಯ ಮುಕ್ತಾಯದ 22,217.45 ಕ್ಕಿಂತ ಹೆಚ್ಚು ವಹಿವಾಟು ನಡೆಸುವ ಮುನ್ಸೂಚನೆ ತೋರುತ್ತಿದೆ.
ಗುರುವಾರ ಮುಕ್ತಾಯದ ವೇಳೆ ನಿಫ್ಟಿಯು 22,200 ಕ್ಕೆ ತಲುಪುವ ಮೂಲಕ ಹೂಡಿಕೆದಾರರ ಜೇಬು ತುಂಬುವಂತೆ ಮಾಡಿದೆ. ನಿನ್ನೆ ಸಂಜೆ ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 535.15 ಅಂಕ ಅಥವಾ ಶೇ 0.74ರಷ್ಟು ಏರಿಕೆಯಾಗಿದೆ 73,158.24 ಕ್ಕೆ ತಲುಪಿದೆ. ನಿಫ್ಟಿ 162.50 ಅಂಕ ಅಥವಾ 0.74 ರಷ್ಟು ಏರಿಕೆಯಾಗಿ 22,217.50 ಕ್ಕೆ ತಲುಪಿದೆ. ಇಂದು ಸುಮಾರು 1591 ಷೇರುಗಳು ಲಾಭಗಳಿಸಿವೆ. 1685 ಷೇರುಗಳು ನಷ್ಟ ಕಂಡರೆ, 77 ಷೇರುಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ. ಬೆಂಚ್‌ಮಾರ್ಕ್ ಸೂಚ್ಯಂಕಗಳು ಹಿಂದಿನ ಎಲ್ಲಾ ಸೆಷನ್ ನಷ್ಟಗಳನ್ನು ಅಳಿಸಿಹಾಕಿದವು, ನಿಫ್ಟಿಯು ಕ್ಷೇತ್ರಗಳಾದ್ಯಂತ ಖರೀದಿಯ ಮೂಲಕ 22,252.50 ರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ.
ನಿಫ್ಟಿಯಲ್ಲಿ ಬಜಾಜ್ ಆಟೋ, ಹೆಚ್‌ಸಿಎಲ್ ಟೆಕ್ನಾಲಜೀಸ್, ಐಷರ್ ಮೋಟಾರ್ಸ್, ಐಟಿಸಿ ಮತ್ತು ಕೋಲ್ ಇಂಡಿಯಾ ಹೆಚ್ಚು ಲಾಭ ಗಳಿಸಿದರೆ, ಇಂಡಸ್ ಇಂಡ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಬಿಪಿಸಿಎಲ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಹೀರೋ ಮೋಟೋಕಾರ್ಪ್ ನಷ್ಟ ಅನುಭವಿಸಿದವು. ವಲಯವಾರು ಷೇರುಗಳಲ್ಲಿ ಆಟೋ, ಕ್ಯಾಪಿಟಲ್ ಗೂಡ್ಸ್, ಮೆಟಲ್, ಪವರ್, ಮಾಹಿತಿ ತಂತ್ರಜ್ಞಾನಗಳು ಮತ್ತು ಟೆಲಿಕಾಂ ಶೇ 1ರಷ್ಟು ಗಳಿಕೆ ಕಂಡಿವೆ. ಆದರೆ ನಿನ್ನೆ ಬ್ಯಾಂಕಿಂಗ್ ವಲಯಗಳಲ್ಲಿ ಕೊಂಚ ಇಳಿಕೆಯಾಗಿದೆ.
ಇಂದು ಗಮನಿಸಬಹುದಾದ ಷೇರುಗಳು
* ವೊಡಾಫೋನ್ ಐಡಿಯಾ
* ಪ್ರತಾಪ್ ಸ್ನಾಕ್ಸ್
* ಕಾಂಕರ್ಡ್ ಬಯೋಟೆಕ್
* ಯುರೇಕಾ ಫೋರ್ಬ್ಸ್