Opening Bell: ಭಾರತದ ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ, ಧನಾತ್ಮಕ ಆರಂಭ ಸಾಧ್ಯತೆ; ಐಟಿ ಷೇರುಗಳ ಮೇಲೆ ಹೂಡಿಕೆದಾರರ ಗಮನ
ಕಳೆದ ನಾಲ್ಕೈದು ದಿನಗಳಿಂದ ಭಾರತದ ಷೇರು ಮಾರುಕಟ್ಟೆ ಕೊಂಚ ಚೇತರಿಸಿಕೊಳ್ಳುತ್ತಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರದ ಫಲಿತಾಂಶ ಉತ್ತಮವಾಗಿತ್ತು ಎನ್ನಬಹುದು. ಫೆಡ್ ನೀತಿ ನಿರ್ಣಯ ಸೇರಿದಂತೆ ಹಲವು ಜಾಗತಿಕ ಅಂಶಗಳು ಈ ವಾರ ಷೇರು ಮಾರುಕಟ್ಟೆ ಚೇತರಿಕೆಗೆ ಕಾರಣವಾಗಿವೆ.
ಬೆಂಗಳೂರು: ಅಮೆರಿಕ ಕೇಂದ್ರಿಯ ಬ್ಯಾಂಕ್ ತನ್ನ ಬಡ್ಡಿದರವನ್ನು ಸ್ಥಿರವಾಗಿ ಇರಿಸುವ ಮೂಲಕ ಜಾಗತಿಕ ಷೇರು ಮಾರುಕಟ್ಟೆ ಚೇತರಿಸಿಕೊಳ್ಳುವಂತೆ ಮಾಡಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಮೂರನೇ ಬಾರಿಗೆ ಕೇಂದ್ರಿಯ ಬ್ಯಾಂಕ್ ತನ್ನ ಬಡ್ಡಿದರವನ್ನು ಸ್ಥಿರವಾಗಿ ಇರಿಸಿದೆ. ಇದು ಭಾರತದ ಷೇರು ಮಾರುಕಟ್ಟೆ ಲಾಭ ಗಳಿಸಲು ಕಾರಣವಾಗಿದೆ. ನಿನ್ನೆ (ಮಾರ್ಚ್ 21) ಆರಂಭದಿಂದ ಮುಕ್ತಾಯದವರೆಗೂ ಉತ್ತಮ ವಹಿವಾಟು ನಡೆಸಿತ್ತು ಭಾರತದ ಷೇರುಪೇಟೆ. ಇಂದು (ಮಾರ್ಚ್ 22) ಧನಾತ್ಮಕ ಆರಂಭಕ್ಕೆ ಸಜ್ಜಾಗಿದೆ. ಈ ನಡುವೆ ಏಷ್ಯಾದ ಷೇರು ಮಾರುಕಟ್ಟೆ ಮತ್ತೆ ಕುಸಿದಿದೆ.
ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ಗಿಫ್ಟ್ ನಿಫ್ಟಿಯು 22,060 ರಲ್ಲಿ ಇಂದಿನ ವಹಿವಾಟು ಆರಂಭಿಸಿದೆ. ನಿನ್ನೆ ಮುಕ್ತಾಯದ ವೇಳೆಗೆ 22,011.95 ಕ್ಕೆ ತಲುಪಿತ್ತು.
ಕಳೆದ ಸೆಷನ್‌ನಲ್ಲಿ ಎಂಎಸ್‌ಸಿಐ ಎಕ್ಸ್ ಜಪಾನ್ ಶೇ 1.82 ರಷ್ಟು ಲಾಭ ಗಳಿಸಿತ್ತು. ಇಂದು ಶೇ 0.9 ರಷ್ಟು ನಷ್ಟ ಕಾಣುವ ಮೂಲಕ ದಿನ ಆರಂಭಿಸಿದೆ. ಫೆಡ್ ದರ ಸ್ಥಿರತೆ ಕಾರಣ ವಾಲ್‌ಸ್ಟ್ರೀಟ್ ಇಕ್ವಿಟಿಗಳು ರಾತ್ರೋರಾತ್ರಿ ಲಾಭ ಕಾಣುವ ಮೂಲಕ ವಹಿವಾಟು ಮುಗಿಸಿದವು.
ಅಮೆರಿಕ ಕೇಂದ್ರಿಯ ಬ್ಯಾಂಕ್ ಬಡ್ಡಿದರದ ಸ್ಥಿರತೆಯು ಇದೀಗ ಅಮೆರಿಕ ಸಾಫ್ಟ್‌ವೇರ್ ದೈತ್ಯ ಎನ್ನಿಸಿಕೊಂಡ ಆಕ್ಸೆಂಚರ್ ಕಂಪನಿಯ ಷೇರುಗಳ ಮೇಲೆ ಹೂಡಿಕೆದಾರರು ಗಮನ ಹರಿಸುವಂತೆ ಮಾಡಿದೆ.
ವಿದೇಶಿ ಬಂಡವಾಳ ಹೂಡಿಕೆದಾರರು ಗುರುವಾರ ನಿವ್ವಳ ಆಧಾರದ ಮೇಲೆ 18.27 ಶತಕೋಟಿ ರೂಪಾಯಿ (220 ಮಿಲಿಯನ್ ಡಾಲರ್) ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದರು, ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿವ್ವಳ 32.09 ಶತಕೋಟಿ ರೂಪಾಯಿ ಷೇರುಗಳನ್ನು ಖರೀದಿಸಿದರು.
ಇಂದು ಈ ಷೇರುಗಳನ್ನು ಗಮನಿಸಿ
* ಎಲ್‌ಟಿಐಮೈಂಡ್‌ಟ್ರಿ
* ಟಾಟಾ ಕೆಮಿಕಲ್ಸ್
* ಮಜಗಾನ್ ಡಾಕ್‌ಶಿಪ್ ಬಿಲ್ಡರ್ಸ್
