Closing Bell; ಕರಡಿ ಕುಣಿತಕ್ಕೆ ನಲುಗಿದ ಷೇರುಪೇಟೆ, ಒಂದೇ ದಿನ 2222 ಅಂಶ ಕುಸಿದ ಸೆನ್ಸೆಕ್ಸ್, 24 ಸಾವಿರದಂಚಿಗೆ ಬಿದ್ದ ನಿಫ್ಟಿ, 4 ಕಾರಣಗಳು
Indian Stock Market Closing Bell Aug 5; ಜಾಗತಿಕ ವಿದ್ಯಮಾನಗಳು ಪ್ರತಿಕೂಲವಾಗಿದ್ದು ಷೇರುಪೇಟೆಗಳು ತಲ್ಲಣಕ್ಕೆ ಒಳಗಾಗಿವೆ. ಪೂರಕವೆಂಬಂತೆ ಭಾರತದಲ್ಲಿ ಕರಡಿ ಕುಣಿತಕ್ಕೆ ನಲುಗಿದ ಷೇರುಪೇಟೆಯಲ್ಲಿ ರಕ್ತಪಾತವೇ ಆಗಿಹೋಯಿತು. ಒಂದೇ ದಿನ 2222 ಅಂಶ ಕುಸಿದ ಸೆನ್ಸೆಕ್ಸ್, 24 ಸಾವಿರದಂಚಿಗೆ ಬಿದ್ದ ನಿಫ್ಟಿ ಹೂಡಿಕೆದಾರು ಕಂಗೆಡುವಂತೆ ಮಾಡಿತು. ಇದಕ್ಕೆ 4 ಕಾರಣಗಳು.
ಮುಂಬಯಿ: ಭಾರತದ ಷೇರುಪೇಟೆ ಜಾಗತಿಕ ವಿದ್ಯಮಾನಗಳಿಗೆ ಸ್ಪಂದಿಸುತ್ತ ಕವುಚಿ ಬಿದ್ದಿದ್ದು, ಸೋಮವಾರ (ಆಗಸ್ಟ್ 5) ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 2222 ಅಂಶ ಕುಸಿತ ಕಂಡಿದೆ. ನಿಫ್ಟಿ 50 ಸೂಚ್ಯಂಕ 662 ಅಂಶ ಕುಸಿದಿದೆ. ಷೇರುಪೇಟೆಯಲ್ಲಿ ಇಂದು ರಕ್ತಪಾತ (ಬ್ಲಡ್ ಬಾತ್) ಆಗಿದ್ದು, ಷೇರುವಹಿವಾಟು ಪರದೆ ಕೆಂಪು ಕೆಂಪಾಗಿದ್ದವು.
ಜಗತ್ತಿನ ಇತರೆ ಷೇರುಪೇಟೆಗಳಂತೆಯೇ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ತೀವ್ರ ಕುಸಿತಕ್ಕೆ ಒಳಗಾಗಿದೆ. ಇಂದು (ಆಗಸ್ಟ್ 5) ವಹಿವಾಟಿನ ಕೊನೆಗೆ, ಸೆನ್ಸೆಕ್ಸ್ 2222 ಅಂಶ (2.74 %) ಕುಸಿದು 78,768.42ಕ್ಕೆ ತಲುಪಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡ 3 ಕುಸಿತ ಕಂಡು 78,588ಕ್ಕೆ ತಲುಪಿ ದಿನದ ಕನಿಷ್ಠ ಮಟ್ಟ ಕಂಡಿತ್ತು.
ಷೇರುಪೇಟೆಗೆ ಸಂಬಂಧಿಸಿದ ಭಯದ ಸೂಚ್ಯಂಕ, ಇಂಡಿಯಾ ವಿಐಎಕ್ಸ್ (India VIX) ಶೇಕಡ 42.23 ಏರಿಕೆಯಾಗಿ 20.37 ಪಾಯಿಂಟ್‌ಗಳ ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿತು. ಈ ಸೂಚ್ಯಂಕವು ಷೇರು ಮಾರುಕಟ್ಟೆಗಳಲ್ಲಿರುವ ಭಾರಿ ಚಂಚಲತೆಯನ್ನು ಸೂಚಿಸುತ್ತದೆ.
ಕವುಚಿ ಬಿದ್ದ ಸೆನ್ಸೆಕ್ಸ್, ನಿಫ್ಟಿ; ಇಂದು 5+2 ಕಂಪನಿಗಳ ವಹಿವಾಟು ಲಾಭದಲ್ಲಿ ಮುಕ್ತಾಯ
ಸೆನ್ಸೆಕ್ಸ್‌ನಂತೆಯೇ ನಿಫ್ಟಿ 50 ಕೂಡ 662 ಪಾಯಿಂಟ್ (2.68%) ಕುಸಿದು 24,055ರಲ್ಲಿ ಸ್ಥಿರವಾಯಿತು. ದಿನದ ಆರಂಭದಲ್ಲಿ ಗ್ಯಾಪ್-ಡೌನ್ ಓಪನಿಂಗ್ ವೇಳೆ ನಿಫ್ಟಿ 50 ಸೂಚ್ಯಂಕವು ಶೇಕಡಾ 3.33 ರಷ್ಟು ಕುಸಿದು ಸೋಮವಾರದ ಕನಿಷ್ಠ 23,893 ಕ್ಕೆ ತಲುಪಿತ್ತು.
ಕರಡಿ ಕುಣಿತದ ಕಾರಣ ನಿಫ್ಟಿ 50 ಸೂಚ್ಯಂಕದಲ್ಲಿ ಪಟ್ಟಿ ಮಾಡಲಾದ 50 ಸ್ಟಾಕ್‌ಗಳ ಪೈಕಿ 45 ಕೆಂಬಣ್ಣದಲ್ಲಿ ದಿನದ ವಹಿವಾಟು ಮುಗಿಸಿವೆ. ಟಾಟಾ ಮೋಟಾರ್ಸ್, ಒಎನ್‌ಜಿಸಿ, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್ ಮತ್ತು ಹಿಂಡಾಲ್ಕೊ ಹೆಚ್ಚು ನಷ್ಟ ಅನುಭವಿಸಿದ್ದು, ಪ್ರತಿಯೊಂದೂ ಕಂಪನಿಯ ಷೇರು ಮೌಲ್ಯ ಶೇಕಡಾ 7 ಕ್ಕಿಂತ ಹೆಚ್ಚು ಕುಸಿದಿದೆ.
ಬಿಎಸ್‌ಇ ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ 28 ಕೆಂಬಣ್ಣದಲ್ಲಿ ವಹಿವಾಟು ಮುಗಿಸಿವೆ. ಈ ಪೈಕಿ ಹೆಚ್ಚು ನಷ್ಟಕ್ಕೆ ಒಳಗಾಗಿರುವುದು ಟಾಟಾ ಮೋಟಾರ್ಸ್ ಮತ್ತು ಅದಾನಿ ಪೋರ್ಟ್ಸ್. ಎರಡೇ ಎರಡು ಕಂಪನಿ ಷೇರುಗಳು ಇಂದು ಲಾಭದ ವಹಿವಾಟು ನಡೆಸಿದ್ದು, ಹಸಿರುಬಣ್ಣದಲ್ಲಿ ವಹಿವಾಟು ಮುಗಿಸಿವೆ.
ಷೇರುಪೇಟೆಯಲ್ಲಿ ಕರಡಿ ಕುಣಿತಕ್ಕೆ 4 ಮುಖ್ಯ ಕಾರಣ
1) ಅಮೆರಿಕದ ಆರ್ಥಿಕ ಚಿಂತೆ: ಜಗತ್ತಿನ ಪ್ರಮುಖ ಅರ್ಥ ವ್ಯವಸ್ಥೆಯಾಗಿರುವ ಅಮೆರಿಕದಲ್ಲಿ ಶುಕ್ರವಾರ ಪ್ರಕಟವಾದ ಜುಲೈನಲ್ಲಿ ನಿರೀಕ್ಷಿತ ಉದ್ಯೋಗಗಳ ವರದಿಗಿಂತ ದುರ್ಬಲವಾದ ಉದ್ಯೋಗಗಳ ವರದಿ ಅಲ್ಲಿನ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಸಿದವು. ಈ ವಿದ್ಯಮಾನ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ನಾಸ್ಡಾಕ್ ಶೇಕಡ 2.43 ರಷ್ಟು ಕುಸಿದು 16,776.16 ಕ್ಕೆ ತಲುಪಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಸುಮಾರು 10 ಪ್ರತಿಶತದಷ್ಟು ಕುಸಿತವಾಗಿದೆ.S&P 500 ಶೇಕಡಾ 1.84 ರಷ್ಟು ಕುಸಿದು 5,346.56 ಕ್ಕೆ ಕೊನೆಗೊಂಡಿತು. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 1.51 ಪ್ರತಿಶತ ಹಿಂತೆಗೆದುಕೊಂಡು 39,737.26 ಕ್ಕೆ ಮುಕ್ತಾಯವಾಯಿತು.
2) ಅಮೆರಿಕದ10-ವರ್ಷದ ಖಜಾನೆ ಆದಾಯ ಭಾರಿ ಕುಸಿತ; ಅಮೆರಿಕದಲ್ಲಿ ಖಜಾನೆ ಆದಾಯ ಡಿಸೆಂಬರ್‌ನಿಂದ ಕಡಿಮೆ ಮಟ್ಟಕ್ಕೆ ಕುಸಿಯಿತು. ಇದು ಸುರಕ್ಷಿತ ಖರೀದಿಯನ್ನು ಪ್ರಚೋದಿಸಿದೆ. ಹೂಡಿಕೆದಾರರು ಹೆಚ್ಚಾಗಿ ಸುರಕ್ಷತೆ ಇರುವ ಬಾಂಡ್‌ಗಳನ್ನು ಖರೀದಿಸಿದರು. ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಪ್ರಸ್ತುತ ಮಟ್ಟದಲ್ಲಿ ಇರಿಸುವ ಮೂಲಕ ಈ ವಾರ ತಪ್ಪು ಮಾಡಿದೆ ಎಂಬ ಕಳವಳ ಪೇಟೆಯಲ್ಲಿ ವ್ಯಕ್ತವಾಗಿದೆ.
3) ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ: ಇದು ಷೇರುಪೇಟೆಯಲ್ಲಿ ಮಾರಾಟದ ಒತ್ತಡಕ್ಕೆ ಮತ್ತೊಂದು ಕಾರಣ. ಪ್ಯಾಲೇಸ್ತೀನಿಯನ್ ಹಮಾಸ್ ಗುಂಪಿನ ರಾಜಕೀಯ ಬ್ಯೂರೋದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಯ ನಂತರ ಆತಂಕಗಳು ಉಲ್ಬಣಗೊಂಡಿವೆ. ಇದರ ಪರಿಣಾಮ ಕಚ್ಚಾ ತೈಲ ಬೆಲೆಯೂ ಏರಿಕೆಯ ಹಾದಿಯಲ್ಲಿದೆ.
4) ಜಪಾನೀ ಯೆನ್ ಹಿಂಪಡೆಯುವಿಕೆ: ಜಪಾನ್‌ನಲ್ಲಿ ಯೆನ್ ಅನ್ನು ಏಕಕಾಲದಲ್ಲಿ ಮರಳಿ ಖರೀದಿಸುವ ಪ್ರಯತ್ನ ಶುರುವಾಗಿದೆ. ಇದರ ಪರಿಣಾಮ ಹೆಚ್ಚಿನ ಲಾಭ ನೀಡುವ ಕರೆನ್ಸಿಗಳ ಮಾರಾಟವಾಗುತ್ತಿದೆ. ಹೀಗಾಗಿ, ಜಪಾನಿನ ಮಾರುಕಟ್ಟೆಯು ರಕ್ತಸ್ರಾವವಾಗಿದೆ. ಜಪಾನ್ ಸೂಚ್ಯಂಕ ನಿಕ್ಕಿ ಇತಿಹಾಸದಲ್ಲಿ ಅದರ ಅತಿದೊಡ್ಡ ಎರಡು ದಿನಗಳ ಕುಸಿತ ದಾಖಲಾಯಿತು. ಸೋಮವಾರ ಬೆಳಗ್ಗೆ ನಿಕ್ಕಿಯಲ್ಲಿ ಶೇಕಡ 4 ರಷ್ಟು ಕುಸಿತವು ಜಪಾನ್ ಮಾರುಕಟ್ಟೆಯಲ್ಲಿನ ಬಿಕ್ಕಟ್ಟಿನ ಸೂಚಕವಾಗಿದೆ.