Closing Bell; ಕೆಂಬಣ್ಣಕ್ಕೆ ತಿರುಗಿದ ಭಾರತದ ಷೇರುಪೇಟೆಯಲ್ಲಿ ರಿಯಾಲ್ಟಿ, ಆಟೋ ಷೇರುಗಳ ಹೊಡೆತಕ್ಕೆ ಕುಸಿದ ನಿಫ್ಟಿ, ಸೆನ್ಸೆಕ್ಸ್
Share Market News Today; ಜಗತ್ತಿನ ಇತರೆ ಷೇರುಪೇಟೆಗಳಂತೆಯೇ ಈ ದಿನ ಭಾರತದ ಷೇರುಪೇಟೆಯಲ್ಲಿ ಋಣಾತ್ಮಕ ವಹಿವಾಟು ನಡೆಯಿತು. ಕೆಂಬಣ್ಣಕ್ಕೆ ತಿರುಗಿದ ಭಾರತದ ಷೇರುಪೇಟೆಯಲ್ಲಿ ರಿಯಾಲ್ಟಿ, ಆಟೋ ಷೇರುಗಳ ಹೊಡೆತಕ್ಕೆ ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಂಡಿತು.
ಮುಂಬಯಿ: ಭಾರತದ ಷೇರುಪೇಟೆಯ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಗುರುವಾರ (ಆಗಸ್ಟ್ 1)ದ ದಾಖಲೆಯ ವಹಿವಾಟಿನ ಮಾರನೇ ದಿನವೇ ಜಾಗತಿಕ ವಿದ್ಯಮಾನಗಳಿಗೆ ಅನುಗುಣವಾಗಿ ಕುಸಿತ ಅನುಭವಿಸಿದೆ. ಶುಕ್ರವಾರ (ಆಗಸ್ಟ್ 2) ದಿನದ ವಹಿವಾಟು ಶುರುವಾಗುತ್ತಲೇ ದಾಖಲೆ ಮಟ್ಟದಿಂದ ಕುಸಿದ ಎರಡೂ ಸೂಚ್ಯಂಕಗಳು ಕರಡಿ ಕುಣಿತಕ್ಕೆ ಸುಸ್ತಾದವು. ಷೇರುಪೇಟೆಯ ಬ್ಲಡ್ ಬಾತ್ ಕಾರಣ ದಿನದ ಅಂತ್ಯಕ್ಕೆ ನಿಫ್ಟಿ 50 293.20 ಅಂಶ (1.17%) ಕುಸಿದು 23,700ರಲ್ಲಿ ಮತ್ತು ಸೆನ್ಸೆಕ್ಸ್ 855.59 ಅಂಶ (1.08%) ಕುಸಿದು 80,981.96 ಅಂಶದಲ್ಲಿ ವಹಿವಾಟು ಮುಗಿಸಿವೆ.
ಜಾಗತಿಕವಾಗಿ ಕೂಡ ಷೇರುಪೇಟೆಗಳಲ್ಲಿ ಕರಡಿ ಕುಣಿತ ಅರ್ಥಾತ್ ಮಾರಾಟ ಹಚ್ಚಾಗಿದ್ದರಿಂದ ಬಹುತೇಕ ಎಲ್ಲ ಸೂಚ್ಯಂಕಗಳು ಕೆಂಪು ಬಣ್ಣದಲ್ಲೇ ವಹಿವಾಟು ಕೊನೆಗೊಳಿಸಿವೆ. ಇಂತಹ ಸನ್ನಿವೇಶವನ್ನು ಷೇರುಪೇಟೆಯಲ್ಲಿ ಬ್ಲಡ್‌ಬಾತ್ ಎನ್ನುತ್ತಾರೆ.
ಭಾರತದ ಷೇರುಪೇಟೆಯಲ್ಲಿ ಲಾರ್ಜ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ ಸ್ಟಾಕ್‌ಗಳು ಕುಸಿತಕ್ಕೆ ನೇರ ಕಾಣವಾದವು. ಬ್ಯಾಂಕ್ ನಿಫ್ಟಿ ಸೂಚ್ಯಂಕವು 213.85 ಪಾಯಿಂಟ್ ಅಥವಾ 0.41 ಶೇಕಡಾ ಕಡಿಮೆಯಾಗಿ 51,350.15 ಕ್ಕೆ ಸ್ಥಿರವಾಯಿತು. ಇತರ ವಲಯದ ಸೂಚ್ಯಂಕಗಳಲ್ಲಿ ಫಾರ್ಮಾ ಷೇರುಗಳು ಲಾಭ ಗಳಿಸಿದರೆ ರಿಯಾಲ್ಟಿ ಮತ್ತು ಆಟೋ ಷೇರುಗಳು ಭಾರಿ ನಷ್ಟ ಅನುಭವಿಸಿವೆ.
ಲಾಭ ಗಳಿಸಿದ ಮತ್ತು ನಷ್ಟ ಅನುಭವಿಸಿದ ಷೇರುಗಳಿವು
ಡೇವಿಸ್ ಲ್ಯಾಬ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಸನ್ ಫಾರ್ಮಾ, ಡಾ ರೆಡ್ಡೀಸ್ ಲ್ಯಾಬ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕದಲ್ಲಿ ಟಾಪ್ ಗೇನರ್ ಆಗಿದ್ದರೆ, ಐಷರ್ ಮೋಟಾರ್ಸ್, ಟಾಟಾ ಮೋಟಾರ್ಸ್, ಹಿಂಡಾಲ್ಕೊ, ವಿಪ್ರೋ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ನಷ್ಟ ಅನುಭವಿಸಿದ ಷೇರುಗಳಾಗಿವೆ.
ಬೆಳಗ್ಗೆ ವಹಿವಾಟು ಶುರುವಾಗುತ್ತಲೇ,ಬಿಎಸ್‌ಇ ಸೆನ್ಸೆಕ್ಸ್ 81,000 ಮಾರ್ಕ್‌ಗಿಂತ ಕೆಳಗೆ ಕುಸಿದು 80,912.33 ನಲ್ಲಿ ವಹಿವಾಟು ನಡೆಸಿತು. ಅಪರಾಹ್ನ 3:00 ರ ಹೊತ್ತಿಗೆ 955.22 ಪಾಯಿಂಟ್‌ಗಳು ಅಥವಾ 1.17 ಶೇಕಡಾ ಕಡಿಮೆಯಾಗಿದೆ. ಆದರೆ, ಎನ್‌ಎಸ್‌ಇ ನಿಫ್ಟಿ 50 300 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 22,700 ಕ್ಕಿಂತ ಕಡಿಮೆ ವಹಿವಾಟು ನಡೆಸಿತ್ತು.
ನಿಫ್ಟಿ ಮತ್ತು ಸೆನ್ಸೆಕ್ಸ್ ನಿನ್ನೆ (ಆಗಸ್ಟ್ 1) ಏರಿಕೆ ಕಂಡು ದಾಖಲೆ ಮಟ್ಟಕ್ಕೆ ಏರಿದ್ದವು. ನಿಫ್ಟಿ 59.75 ಅಂಶ (ಶೇ 0.24) ಏರಿಕೆ ಕಂಡು 25,010 ಅಂಶಗಳಲ್ಲಿ ವಹಿವಾಟು ಮುಗಿಸಿತ್ತು. ಸೆನ್ಸೆಕ್ಸ್ ಒಂದೇ ದಿನ 126.21 (ಶೇ 0.15) ಅಂಶಗಳ ಏರಿಕೆ ಕಂಡು, 81,867.55 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತ್ತು.
ಸೆನ್ಸೆಕ್ಸ್ ಪಟ್ಟಿಯಲ್ಲಿ ಹಚ್ಚ ಹಸಿರಾಗಿದ್ದ 5 ಷೇರುಗಳಿವು
ಸೆನ್ಸೆಕ್ಸ್ ಪಟ್ಟಿಯಲ್ಲಿರುವ 30 ಷೇರುಗಳ ಪೈಕಿ 25 ಷೇರುಗಳು ಕೆಂಬಣ್ಣದಲ್ಲಿ ವಹಿವಾಟು ನಡೆಸಿದರೆ, ಜಾಗತಿಕ ವಿದ್ಯಮಾನಗಳ ಹೊಡೆತದ ನಡುವೆಯೂ ಹಚ್ಚ ಹಸಿರಿನಲ್ಲಿ ಕಂಗೊಳಿಸಿದ್ದು ಈ 5 ಕಂಪನಿಗಳ ಷೇರುಗಳು ಮಾತ್ರ. ಎಚ್‌ಡಿಎಫ್‌ಸಿ ಬ್ಯಾಂಕ್, ಸನ್‌ಫಾರ್ಮಾ, ನೆಸ್ಟ್‌ಲೆಂಡ್, ಏಷ್ಯನ್‌ಪೇಂಟ್, ಕೊಟಾಕ್ ಬ್ಯಾಂಕ್ ಷೇರುಗಳು ಇಂದಿನ ವಹಿವಾಟಿನಲ್ಲಿ ಲಾಭಗಳಿಸಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಶೇಕಡ 1.10 ಏರಿಕೆ ದಾಖಲಿಸಿದರೆ, ಸನ್‌ಫಾರ್ಮಾ ಶೇಕಡ 0.60, ನೆಸ್ಟ್‌ಲೆಂಡ್ ಶೇಕಡ 0.48, ಏಷ್ಯನ್‌ಪೇಂಟ್ ಶೇಕಡ 0.30, ಕೊಟಾಕ್ ಬ್ಯಾಂಕ್ ಶೇಕಡ 0.17 ಏರಿಕೆ ದಾಖಲಿಸಿವೆ.