Closing Bell: ಭಾರತದ ಷೇರುಪೇಟೆಯಲ್ಲಿಂದು ಲಾಭ ಗಳಿಕೆಯ ಖುಷಿ; ಏರಿಕೆ ಕಾಣುವ ಮೂಲಕ ವಹಿವಾಟು ಮುಗಿಸಿದ ಸೆನ್ಸೆಕ್ಸ್‌, ನಿಫ್ಟಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Closing Bell: ಭಾರತದ ಷೇರುಪೇಟೆಯಲ್ಲಿಂದು ಲಾಭ ಗಳಿಕೆಯ ಖುಷಿ; ಏರಿಕೆ ಕಾಣುವ ಮೂಲಕ ವಹಿವಾಟು ಮುಗಿಸಿದ ಸೆನ್ಸೆಕ್ಸ್‌, ನಿಫ್ಟಿ

Closing Bell: ಭಾರತದ ಷೇರುಪೇಟೆಯಲ್ಲಿಂದು ಲಾಭ ಗಳಿಕೆಯ ಖುಷಿ; ಏರಿಕೆ ಕಾಣುವ ಮೂಲಕ ವಹಿವಾಟು ಮುಗಿಸಿದ ಸೆನ್ಸೆಕ್ಸ್‌, ನಿಫ್ಟಿ

ಭಾರತದ ಷೇರು ಹೂಡಿಕೆದಾರರಿಗೆ ಇಂದು (ಆಗಸ್ಟ್‌ 16) ಶುಭಸುದ್ದಿ. ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಲಾಭ ಗಳಿಕೆಯ ಮೂಲಕ ದಿನ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್‌ 1,331 ಅಂಕ ಗಳಿಕೆ ಕಂಡಿದ್ದರೆ, ನಿಫ್ಟಿ 397 ಅಂಕ ಏರಿಕೆಯಾಗಿದೆ.

ಭಾರತದ ಷೇರುಪೇಟೆಯಲ್ಲಿಂದು ಲಾಭ ಗಳಿಕೆಯ ಖುಷಿ
ಭಾರತದ ಷೇರುಪೇಟೆಯಲ್ಲಿಂದು ಲಾಭ ಗಳಿಕೆಯ ಖುಷಿ (Agencies)

ಬೆಂಗಳೂರು: ಶುಕ್ರವಾರ (ಆಗಸ್ಟ್ 16) ಭಾರತದ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಚೇತರಿಸಿಕೊಂಡಿವೆ. ತಲಾ 2 ಪ್ರತಿಶತದಷ್ಟು ಏರಿಕೆ ಕಂಡಿದೆ. ನಿಫ್ಟಿ 24,500 ಗಡಿಯತ್ತ ಮರಳಿದ್ದು, ಸೆನ್ಸೆಕ್ಸ್ 80,500ರ ಗಡಿ ದಾಟಿದೆ. ದಿನದ ವಹಿವಾಟಿನ ಅಂತ್ಯಕ್ಕೆ, ಸೆನ್ಸೆಕ್ಸ್ 1,310.69 ಅಂಕ ಗಳಿಸಿ 80,416.57ಕ್ಕೆ ತಲುಪಿದರೆ, ನಿಫ್ಟಿ ಸೂಚ್ಯಂಕವು 396.80 ಅಂಕಕ್ಕೆ ಏರಿಕೆ ಕಂಡು 24,540.55ರಲ್ಲಿ ದಿನದ ವಹಿವಾಟು ಮುಗಿಸಿದೆ.

ಕಳೆದ ಸೆಷನ್‌ನಲ್ಲಿ ಸೆನ್ಸೆಕ್ಸ್ 79,105.8ಕ್ಕೆ ವಹಿವಾಟು ಮುಗಿಸಿತ್ತು. ಇಂಟ್ರಾಡೇ ಗರಿಷ್ಠ 80,518.21ಕ್ಕೆ ತಲುಪಿತು. ಮತ್ತೊಂದೆಡೆ, ನಿಫ್ಟಿ 50 ತನ್ನ ಹಿಂದಿನ ಮುಕ್ತಾಯದ 24,143.75ಕ್ಕೆ ಹೋಲಿಸಿದರೆ 24,334.85ರಲ್ಲಿ ಆರಂಭವಾಗಿ, 24,563.90 ಮಟ್ಟಕ್ಕೆ ಏರಿಕೆಯಾಯ್ತು.

ಬಿಎಸ್ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಕೂಡಾ ಶೇ 2ರಷ್ಟು ಏರಿಕೆಯಾಗಿದ್ದರಿಂದ, ಮಾರುಕಟ್ಟೆಯಲ್ಲಿನ ಲಾಭವು ವಿಶಾಲವಾಗಿದೆ. ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು 444.3 ಲಕ್ಷ ಕೋಟಿ ರೂಪಾಯಿಗಳಿಂದ ಸುಮಾರು 451.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು ಒಂದೇ ಸೆಷನ್‌ನಲ್ಲಿ 7 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಸುವಂತೆ ಮಾಡಿದೆ.

ಟೆಕ್ ಮಹೀಂದ್ರಾ, ಕೋಲ್‌ಗೆಟ್ ಪಾಮೋಲಿವ್ (ಇಂಡಿಯಾ), ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ, ಇನ್ಫೋ ಎಡ್ಜ್ (ಇಂಡಿಯಾ) ಮತ್ತು ಟ್ರೆಂಟ್ ಸೇರಿದಂತೆ 200ಕ್ಕೂ ಹೆಚ್ಚು ಕಂಪನಿಗಳ ಷೇರುಗಳು ಬಿಎಸ್ಇಯಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ.‌ ಈ ಕಂಪನಿಗಳು ಅತ್ಯಧಿಕ ಲಾಭ ಗಳಿಸಿದ ಷೇರುಗಳಾಗಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.