Multibagger; ರೆಡಿಫ್ ವೆಬ್‌ಸೈಟ್ ಸೇಲ್ ಆಯಿತು, ಖರೀದಿ ಮಾಡಿದ ಕಂಪನಿ ಷೇರು ಮೌಲ್ಯ ಶೇ 8ಕ್ಕೂ ಹೆಚ್ಚು ಏರಿತು
Infibeam Avenues Share Price; ಸಣ್ಣ ಕಂಪನಿಗಳ ಲೋಕದ ಮಹತ್ವದ ಡೀಲ್ ಒಂದರಲ್ಲಿ ರೆಡಿಫ್ ವೆಬ್‌ಸೈಟ್ ಸೇಲ್ ಆಯಿತು. ಈ ವಹಿವಾಟಿನಲ್ಲಿ ರೆಡಿಫ್ ಕಂಪನಿಯ ಬಹುಪಾಲು ಷೇರು ಖರೀದಿ ಮಾಡಿದ ಕಂಪನಿಯ ಷೇರು ಮೌಲ್ಯ ಶೇಕಡ 8ಕ್ಕೂ ಹೆಚ್ಚು ಏರಿಕೆಯಾಯಿತು. ಹೂಡಿಕೆದಾರರು ಈ ಷೇರು ಖರೀದಿಗೆ ಮುಗಿಬಿದ್ದರು. ಇದರ ವಿವರ ಈ ವರದಿಯಲ್ಲಿದೆ.
ನವದೆಹಲಿ: ಕಾರ್ಪೊರೇಟ್ ಜಗತ್ತಿನ ವಹಿವಾಟುಗಳ ಪೈಕಿ, ರೆಡಿಫ್ ಡಾಟ್ ಕಾಮ್ (rediff.com) ನ ಬಹುಪಾಲು ಷೇರುಗಳನ್ನು ಪಾವತಿ ಪರಿಹಾರ ಪೂರೈಕೆದಾರ ಇನ್ಫಿಬೀಮ್ ಅವೆನ್ಯೂಸ್ ಖರೀದಿ ಮಾಡಿದ ಸುದ್ದಿ ಪೆನ್ನಿ ಸ್ಟಾಕ್ ಅಥವಾ ಮಲ್ಟಿ ಬ್ಯಾಗರ್ ಹೂಡಿಕೆದಾರರ ಗಮನ ಸೆಳೆದಿದೆ. ಹೀಗಾಗಿ ಷೇರುಪೇಟೆಯಲ್ಲಿ ಇನ್ಫಿಬೀಮ್ ಅವೆನ್ಯೂಸ್ ಷೇರು ಮೌಲ್ಯ ಶೇಕಡ 8.4 ರಷ್ಟು ಏರಿಕೆಯಾಗಿದೆ.
ಸುದ್ದಿ ವೆಬ್‌ಸೈಟ್ ಆಗಿರುವ Rediff.com ಇಂಡಿಯಾದ ಶೇಕಡ 54 ರಷ್ಟು ಪಾಲನ್ನು ಖರೀದಿಸುವುದಾಗಿ ಪಾವತಿ ಪರಿಹಾರ ಪೂರೈಕೆದಾರ ಇನ್ಫಿಬೀಮ್ ಅವೆನ್ಯೂಸ್ ಘೋಷಿಸಿದೆ. ಇದು ಒಟ್ಟು 50 ಕೋಟಿ ರೂಪಾಯಿ ಡೀಲ್ ಆಗಿದ್ದು, ಇದರಲ್ಲಿ ಸಾಲ ಕೂಡ ಸೇರಿಕೊಂಡಿದೆ. ಆರಂಭಿಕ ಹಂತದಲ್ಲಿ 25 ಕೋಟಿ ರೂಪಾಯಿಯೊಂದಿಗೆ ರೆಡಿಫ್ ಡಾಟ್ ಕಾಮ್ ಇಂಡಿಯಾ ಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ.
ಬಿಎಸ್‌ಇಯಲ್ಲಿ ಇನ್ಫಿಬೀಮ್ ಷೇರು ಮೌಲ್ಯ ಹೆಚ್ಚಳ
ಈ ಸುದ್ದಿಯೊಂದಿಗೆ ಫಿನ್ಟೆಕ್ ಸಂಸ್ಥೆ ಇನ್ಫಿಬೀಮ್ ಅವೆನ್ಯೂಸ್ ಷೇರುಗಳು ಬಿಎಸ್ಇ ಸೂಚ್ಯಂಕದಲ್ಲಿ ಶೇಕಡಾ 8.4 ರಷ್ಟು ಏರಿಕೆಯಾಗಿ 33.6 ರೂ.ಗೆ ತಲುಪಿದೆ. ಷೇರು ದರ ಇಂದು ವಹಿವಾಟು ಕೊನೆಗೊಳ್ಳುವಾಗ 32.30 ರೂಪಾಯಿ ಆಗಿತ್ತು.ಇದು ಹಿಂದಿನ ದಿನದ ಮುಕ್ತಾಯಕ್ಕಿಂತ ಶೇಕಡ 4.26 ಲಾಭದೊಂದಿಗೆ ಕೊನೆಗೊಂಡಿತು. 2024ರ ಮಾರ್ಚ್ 11 ರಂದು, ಈ ಷೇರು ಮೌಲ್ಯ 52 ವಾರಗಳ ಗರಿಷ್ಠ ಮಟ್ಟ 42.50 ರೂಪಾಯಿ ತಲುಪಿ ದಾಖಲೆ ಬರೆದಿತ್ತು.
ಈ ಸ್ವಾಧೀನದೊಂದಿಗೆ, ಕಂಪನಿಯು ಸುದ್ದಿ ವೆಬ್‌ಸೈಟ್‌ನ ಕ್ಲೌಡ್ ಆಧಾರಿತ ಎಂಟರ್‌ಪ್ರೈಸ್ ಇಮೇಲ್ ಸಂಗ್ರಹಣೆ ಮತ್ತು ಸಹಯೋಗ ವೇದಿಕೆಯ ಬೆಂಬಲದೊಂದಿಗೆ ತನ್ನ ಪಾವತಿ ಅಗ್ರಿಗೇಟರ್ ವ್ಯವಹಾರವನ್ನು ವಿಸ್ತರಿಸಲು ಯೋಜಿಸಿದೆ. ರೆಡಿಫ್ ತನ್ನ ವೆಬ್ಸೈಟ್‌ನಲ್ಲಿ ಸುಮಾರು 55 ಮಿಲಿಯನ್ ಮಾಸಿಕ ಸಂದರ್ಶಕರನ್ನು ಹೊಂದಿದೆ.
ರೆಡಿಫ್ ಡೀಲ್ ಮತ್ತು ಇನ್ಫಿಬೀಮ್ ಅವೆನ್ಯೂಸ್ ಬೆಳವಣಿಗೆ
ರೆಡಿಫ್ ಡಾಟ್ ಕಾಮ್ ಅಧ್ಯಕ್ಷ ಮತ್ತು ಸಿಇಒ ಅಜಿತ್ ಬಾಲಕೃಷ್ಣನ್ ಅವರು ಈ ಡೀಲ್ ಕುರಿತು ಪ್ರತಿಕ್ರಿಯಿಸಿದ್ದು, "ಈ ಅಪ್ರತಿಮ ಬ್ರಾಂಡ್ ಮತ್ತು ಅದರ ಪರಂಪರೆಯನ್ನು ಇನ್ಫಿಬೀಮ್ ಅವೆನ್ಯೂಸ್‌ನ ವಿಶಾಲ್ ಮೆಹ್ತಾ ಅವರ ಸಮರ್ಥ ಕೈಗಳಿಗೆ ಹಸ್ತಾಂತರಿಸಲು ನನಗೆ ಸಂತೋಷವಿದೆ. ಅವರ ನಾಯಕತ್ವದಲ್ಲಿ, ರೆಡಿಫ್‌ನ ಹೊಸ ಅವತಾರವು ಕಂಪನಿಯನ್ನು ಬಲಪಡಿಸುತ್ತದೆ ಮತ್ತು ವ್ಯವಹಾರದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ನನ್ನದು ಎಂದಿದ್ದಾರೆ.
ಇನ್ಫಿಬೀಮ್ ಅವೆನ್ಯೂಸ್ 2025 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ನಿವ್ವಳ ಲಾಭವು ತ್ರೈಮಾಸಿಕದಲ್ಲಿ 59.49% ರಷ್ಟು ಏರಿಕೆಯಾಗಿ 50.4 ಕೋಟಿ ರೂಪಾಯಿಗೆ ತಲುಪಿದೆ. 2024ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು 31.6 ಕೋಟಿ ರೂಪಾಯಿ ಆಗಿದೆ. ಜೂನ್ 30, 2024 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಕಂಪನಿಯು ಒಟ್ಟು ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ 1.40% ಬೆಳವಣಿಗೆಯನ್ನು 752.8 ಕೋಟಿ ರೂಪಾಯಿ ಆದಾಯ ತೋರಿಸಿ ವರದಿ ಮಾಡಿದೆ. ಹೆಚ್ಚುವರಿಯಾಗಿ, ನಿವ್ವಳ ಆದಾಯವು ಜೂನ್ ತ್ರೈಮಾಸಿಕದಲ್ಲಿ 19.93% ರಷ್ಟು ಏರಿಕೆಯಾಗಿದ್ದು 118.5 ಕೋಟಿ ರೂಪಾಯಿಗೆ ತಲುಪಿದೆ. ತೆರಿಗೆಗೆ ಮುಂಚಿನ ಲಾಭವು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 35.16 ಕೋಟಿ ರೂಪಾಯಿಯಿಂದ 83.36 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಕಂಪನಿ ವರದಿಯಲ್ಲಿ ವಿವರಿಸಿದೆ.