ಐಆರ್‌ಸಿಟಿಸಿ ವೆಬ್‌ಸೈಟ್‌, ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ಸಮಸ್ಯೆ, ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಳಕೆದಾರರು-business news irctc site app down users unable to download railway tickets after making payment indian railways uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಐಆರ್‌ಸಿಟಿಸಿ ವೆಬ್‌ಸೈಟ್‌, ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ಸಮಸ್ಯೆ, ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಳಕೆದಾರರು

ಐಆರ್‌ಸಿಟಿಸಿ ವೆಬ್‌ಸೈಟ್‌, ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ಸಮಸ್ಯೆ, ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಳಕೆದಾರರು

IRCTC Site Issues; ಆನ್‌ಲೈನ್ ಟಿಕೆಟ್‌ಗಳನ್ನು ಒದಗಿಸುವ ಮತ್ತು ರೈಲುಗಳಲ್ಲಿ ಆಹಾರ ಸೇವೆಗಳನ್ನು ನಿರ್ವಹಿಸುವ ಐಆರ್‌ಸಿಟಿಸಿ ವೆಬ್‌ಸೈಟ್‌, ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಡುತ್ತಿದ್ದು, ಬಳಕೆದಾರರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಐಆರ್‌ಸಿಟಿಸಿ ವೆಬ್‌ಸೈಟ್‌, ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು, ಬಳಕೆದಾರರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. (ಸಾಂಕೇತಿಕ ಚಿತ್ರ)
ಐಆರ್‌ಸಿಟಿಸಿ ವೆಬ್‌ಸೈಟ್‌, ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು, ಬಳಕೆದಾರರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. (ಸಾಂಕೇತಿಕ ಚಿತ್ರ) (MINT)

ನವದೆಹಲಿ: ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮಂಗಳವಾರ ಬೆಳಗ್ಗೆ ಅನಿರೀಕ್ಷಿತವಾಗಿ ಸ್ಥಗಿತಗೊಂಡಿತು. ಸ್ಕ್ರೀನ್ ಮೇಲೆ ಟಿಕೆಟ್‌ ವೀಕ್ಷಿಸುವುದಕ್ಕಾಗಲೀ ಅದನ್ನು ಡೌನ್‌ಲೋಡ್ ಮಾಡುವುದಕ್ಕಾಗಲೀ ಆಗುತ್ತಿಲ್ಲ ಎಂದು ಹಲವು ಬಳಕೆದಾರರು ದೂರಿದ್ದಾರೆ. ಇದಲ್ಲದೇ ಇನ್ನು ಕೆಲವರು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು, ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಹವಾಲು ತೋಡಿಕೊಂಡಿದ್ದಾರೆ ಎಂದು ಮನಿ ಕಂಟ್ರೋಲ್ ವೆಬ್‌ತಾಣ ಡೌನ್‌ಡಿಟೆಕ್ಟರ್ ತಾಣವನ್ನು ಉಲ್ಲೇಖಿಸಿ ವರದಿ ಮಾಡಿದೆ.

ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಐಆರ್‌ಸಿಟಿಸಿ ಮೊಬೈಲ್ ಅಪ್ಲಿಕೇಶನ್ ಬಳಕೆದಾರರು ಲಾಗಿನ್ ಆದ ಬಳಿಕ ಟಿಕೆಟ್ ಬುಕ್‌ ಮಾಡುವ ಸಂದರ್ಭದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಸಮಸ್ಯೆ ಹೆಚ್ಚು

ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡಿಟೆಕ್ಟರ್‌ (Downdetector.com) ಪ್ರಕಾರ, ಅನೇಕ ಬಳಕೆದಾರರು ಐಆರ್‌ಸಿಟಿಸಿ ವೆಬ್‌ಸೈಟ್ ಬಳಕೆದಾರ ಸ್ನೇಹಿ ಆಗಿಲ್ಲ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, 350ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆ ಎದುರಿಸಿರುವ ಅಂಶ ಬಹಿರಂಗವಾಗಿದೆ. ಈ ಪೈಕಿ ಶೇಕಡ 54 ಜನರಿಗೆ ವೆಬ್‌ಸೈಟ್‌ನಲ್ಲಿ ಸಮಸ್ಯೆ ಆಗಿದೆ. ಶೇಕಡ 22 ಜನರಿಗೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಮಸ್ಯೆ ಕಾಣಿಸಿದೆ. ಶೇಕಡ 24 ಜನರಿಗೆ ಟಿಕೆಟ್ ಬುಕ್ ಮಾಡುವ ತಾಂತ್ರಿಕ ಸಮಸ್ಯೆ ಕಂಡುಬಂದಿದೆ.

ಡೌನ್‌ಡಿಟೆಕ್ಟರ್‌ ವೆಬ್‌ಸೈಟ್ ಗಮನಿಸಿದರೆ, ಅದರಲ್ಲಿ ಮಂಗಳವಾರ ಬೆಳಗ್ಗೆ 10:01 ರ ಸುಮಾರಿಗೆ ಬುಕಿಂಗ್ ಸೇವೆಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಲಾರಂಭಿಸಿದ್ದು ಗೋಚರಿಸಿದೆ. ಬೆಳಗ್ಗೆ 11:09 ಕ್ಕೆ ಸ್ಥಗಿತವು ಉತ್ತುಂಗಕ್ಕೇರಿತು, ಡೌನ್‌ಡೆಕ್ಟರ್ ಗ್ರಾಫ್ ತೋರಿಸಿದೆ. ಸುಮಾರು 300 ಬಳಕೆದಾರರು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರವೇಶಿಸುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವರದಿ ಹೇಳಿದೆ. ಬುಧವಾರ (ಆಗಸ್ಟ್ 14) ಕೂಡ ಈ ಸಮಸ್ಯೆ ಮುಂದುವರಿದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಇದು ಹೆಚ್ಚಿರುವುದು ಕಂಡುಬಂದಿದೆ.

ಐಆರ್‌ಸಿಟಿಸಿ ಜೂನ್ ತ್ರೈಮಾಸಿಕ ವರದಿ

ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) 2024-25 ರ ಜೂನ್ ತ್ರೈಮಾಸಿಕದಲ್ಲಿ 308 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಪ್ರಕಟಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಟಿಕೆಟ್ ಮಾರಾಟ ಶೇಕಡ 33.3 ಏರಿಕೆಯಾಗಿದೆ. ಇದರಲ್ಲಿ ಆದಾಯವಾಗಿ 1,120.15 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಆದಾಯ ಶೇಕಡ 11.8 ವೃದ್ಧಿಯಾಗಿದೆ.

ಆನ್‌ಲೈನ್ ಟಿಕೆಟ್‌ಗಳನ್ನು ಒದಗಿಸುವ ಮತ್ತು ರೈಲುಗಳಲ್ಲಿ ಆಹಾರ ಸೇವೆಗಳನ್ನು ನಿರ್ವಹಿಸುವ ಈ ಕಂಪನಿಯು ಆಗಸ್ಟ್ 13 ರಂದು ನಿಯಂತ್ರಕ ಫೈಲಿಂಗ್‌ನಲ್ಲಿ ಈ ವಿಷಯವನ್ನು ತಿಳಿಸಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಪ್ರಕಾರ ಐಆರ್‌ಸಿಟಿಸಿಯ ಮಾರುಕಟ್ಟೆ ಬಂಡವಾಳ ಪ್ರಸ್ತುತ 73,340 ಕೋಟಿ ರೂಪಾಯಿ ಇದ್ದು, ಆಗಸ್ಟ್ 13 ರಂದು IRCTC ಯ ಷೇರುಗಳು ಬಿಎಸ್‌ಇನಲ್ಲಿ ಶೇಕಡ 3 ಕುಸಿದು ಮೌಲ್ಯ 922.05 ರೂಪಾಯಿ ಆಗಿದೆ. ಕಳೆದ ಮೂರು ತಿಂಗಳಲ್ಲಿ ಐಆರ್‌ಸಿಟಿಸಿ ಷೇರು ಮೌಲ್ಯ ಶೇಕಡ 8ರಷ್ಟು ಕುಸಿದಿದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.