ITR filing: ನಗದು ವಹಿವಾಟು ಮಾಡುವವರಿಗೆ ಆದಾಯ ತೆರಿಗೆ ಇಲಾಖೆಯಿಂದ ಎಚ್ಚರಿಕೆ, ಈ 5 ಕ್ಯಾಶ್ ವಹಿವಾಟಿಗೆ ಶೇ 100 ದಂಡ
ದೇಶದಲ್ಲಿ ನಗದು ವಹಿವಾಟು ಕಡಿಮೆ ಮಾಡಲು ಆದಾಯ ತೆರಿಗೆ ಪ್ರಯತ್ನಿಸುತ್ತಿದೆ. ಇದೇ ಸಮಯದಲ್ಲಿ ಕೆಲವೊಂದು ನಿರ್ದಿಷ್ಟ ನಗದು ವಹಿವಾಟು ಮಾಡಿದರೆ ಶೇಕಡ 100 ದಂಡ ಪಾವತಿಸಬೇಕಾಗಬಹುದು. ಅಂದರೆ, ನೀವು ಎಷ್ಟು ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸಿರುವಿರೋ ಅಷ್ಟೇ ಮೊತ್ತವನ್ನು ತೆರಿಗೆ ಇಲಾಖೆಗೆ ದಂಡ ಕಟ್ಟಬೇಕಾಗುತ್ತದೆ.
ತೆರಿಗೆ ಇಲಾಖೆಯು ನಗದು ವಹಿವಾಟಿನ ಮೇಲಿನ ಕುಣಿಕೆ ಬಿಗಿಗೊಳಿಸುವ ಪ್ರಯತ್ನ ನಡೆಸುತ್ತಿದೆ. ಇದೇ ಕಾರಣಕ್ಕೆ ಆದಾಯ ತೆರಿಗೆ (ಐಟಿ) ಇಲಾಖೆಯು ಕೆಲವು ನಗದು ವಹಿವಾಟಿಗೆ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರ ಪತ್ರಿಕೆ ದಿ ಮಿಂಟ್ ವರದಿ ಮಾಡಿದೆ. ಬ್ಯಾಂಕ್‌ಗಳು, ಮ್ಯೂಚುಯಲ್ ಫಂಡ್‌ಗಳಂತಹ ಜನಪ್ರಿಯ ಹೂಡಿಕೆ ತಾಣಗಳು ನಗದು ವಹಿವಾಟಿಗೆ ನಿರುತ್ಸಾಹ ತೋರುತ್ತಿವೆ. ಈ ಮೂಲಕ ಸಾಮಾನ್ಯ ಜನರಿಗೆ ನಗದು ವಹಿವಾಟು ನಡೆಸಲು ನಿಯಮಗಳನ್ನು ಬಿಗಿಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಟ್ಯಾಕ್ಸ್ ಪೆನಾಲ್ಟಿ ಅಥವಾ ತೆರಿಗೆ ದಂಡದ ಅಪಾಯವನ್ನು ಕಡಿಮೆ ಮಾಡುವ ಸಲುವಾಗಿ ನಗದು ವಹಿವಾಟುಗಳನ್ನು ಕಡಿಮೆ ಮಾಡುವಂತೆ ಸೂಚಿಸುವ ಪ್ರಕಟಣೆಯನ್ನು ಜನವರಿ 2, 2025 ರಂದು ಐಟಿ ಇಲಾಖೆ ಬಿಡುಗಡೆ ಮಾಡಿತ್ತು. "ನಗದು ವಹಿವಾಟಿಗೆ ಇಲ್ಲ ಎನ್ನಿ. ವಹಿವಾಟಿನ ಮೌಲ್ಯ ಸಣ್ಣದಾಗಿದ್ದಾಗ ಜನರು ನಗದು ವಹಿವಾಟು ನಡೆಸಲು ಬಯಸುತ್ತಾರೆ" ಎಂದು ಐಟಿ ಇಲಾಖೆಯ ಕರಪತ್ರದಲ್ಲಿ ತಿಳಿಸಲಾಗಿತ್ತು.
ಅಘೋಷಿತ ಆದಾಯವನ್ನು ಕಡಿಮೆ ಮಾಡುವ ಸಲವಾಗಿ ಮತ್ತು ಡಿಜಿಟಲ್ ಹಣಕಾಸು ಪಾವತಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ಎಸ್‌ಟಿ ಇದೆ. ಕಪ್ಪು ಹಣದ ವಿರುದ್ಧ ಈ ಕಾಯ್ದೆ ಬಳಸಲಾಗುತ್ತಿದೆ.
"ಈ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದರೆ ನಗದು ವಹಿವಾಟಿನ ಶೇಕಡ 100ರಷ್ಟು ದಂಡ ವಿಧಿಸಬಹುದು" ಎಂದು ಟ್ಯಾಕ್ಸ್2ವಿನ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಅಭಿಷೇಕ್ ಸೋನಿ ಹೇಳಿದ್ದಾರೆ. "2025-26ರ ಮೌಲ್ಯಮಾಪನದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ. ಕೆಲವು ನಗದು ವಹಿವಾಟುಗಳಿಗೆ ಶೇಕಡ 100 ದಂಡ ವಿಧಿಸಬಹುದು ಎಂದು ತೆರಿಗೆದಾರರು ತಿಳಿದಿರಬೇಕು" ಎಂದು ಅವರು ಹೇಳಿದ್ದಾರೆ.
ಯಾವ ನಗದು ವಹಿವಾಟಿಗೆ ಶೇಕಡ 100 ದಂಡ ವಿಧಿಸಬಹುದು?
ಯಾವೆಲ್ಲ ನಗದು ವಹಿವಾಟಿಗೆ ಆದಾಯ ತೆರಿಗೆ ಇಲಾಖೆಯು ಶೇಕಡ 100 ದಂಡ ವಿಧಿಸಬಹುದು ಎನ್ನುವ ಮಾಹಿತಿಯನ್ನು ಅಭಿಷೇಕ್ ಸೋನಿ ನೀಡಿದ್ದಾರೆ.
1) ಸಾಲಗಳು, ಠೇವಣಿಗಳು ಮತ್ತು ಮುಂಗಡಗಳು (ಸೆಕ್ಷನ್ 269ಎಸ್‌ಎಸ್)
ಸಾಲ, ಠೇವಣಿ, ಮುಂಗಡ ಪಾವತಿಯ ನಗದು ವಹಿವಾಟು 20,000 ರೂಪಾಯಿಗಿಂತ ಹೆಚ್ಚು ಇರಬಾರದು.
ದಂಡ: ಎಷ್ಟು ನಗದು ನೀಡಲಾಗಿದೆಯೋ ಅಷ್ಟು ದಂಡ
2) 2 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಸ್ವೀಕರಿಸಬಾರದು (ಸೆಕ್ಷನ್ 269ST)
ಯಾವುದೇ ವ್ಯಕ್ತಿಯು ಒಂದೇ ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಹಣ ಸ್ವೀಕರಿಸಬಾರದು.
ದಂಡ: ಎಷ್ಟು ಹಣ ಸ್ವೀಕರಿಸುವಿರೋ ಅಷ್ಟೇ ಮೊತ್ತದ ದಂಡ.
ಗಮನಿಸಿ, ಇಲ್ಲಿ ದಂಡ ಪಾವತಿಸಬೇಕಾಗಿರುವುವರು ಹಣ ನೀಡುವವರು ಅಲ್ಲ. ಹಣ ಸ್ವೀಕರಿಸುವವರು ದಂಡ ಪಾವತಿಸಬೇಕು. "ಈ ನಿಯಮದಡಿಯಲ್ಲಿ ಹಣ ಪಾವತಿ ಮಾಡುವವರು ಯಾವುದೇ ದಂಡ ಪಾವತಿಯ ಜವಾಬ್ದಾರಿ ಹೊಂದಿರುವುದಿಲ್ಲ ಎನ್ನುವುದು ಕುತೂಹಲಕಾರಿ ಸಂಗತಿ"ಎಂದು ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞ ಬಲವಂತ್ ಜೈನ್ ಹೇಳಿದ್ದಾರೆ.
ಸೆಕ್ಷನ್ 269ST ಏನು ಹೇಳುತ್ತದೆ?
ಒಬ್ಬ ವ್ಯಕ್ತಿಯಿಂದ ಒಂದು ದಿನ ಒಂದೇ ಬಾರಿ ಅಥವಾ ಒಂದೇ ದಿನದಲ್ಲಿ ಹಲವು ಬಾರಿ ಪಡೆಯುವ ನಗದು ಮೊತ್ತವು 2 ಲಕ್ಷ ರೂಪಾಯಿಗಿಂತ ಹೆಚ್ಚು ಇದ್ದರೆ ಅದಕ್ಕೆ ಶೇಕಡ 100 ದಂಡ ವಿಧಿಸಲಾಗುತ್ತದೆ.
3. ಸಾಲ ಮರುಪಾವತಿ ಅಥವಾ ಠೇವಣಿ ಪಾವತಿ (ಸೆಕ್ಷನ್ 269ಟಿ)
ಸಾಲ ತೀರಿಸಲು ನಗದು ರೂಪದಲ್ಲಿ 20 ಸಾವಿರ ರೂಪಾಯಿಗಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ಪಾವತಿಸಲು ಅವಕಾಶವಿಲ್ಲ. ಡೆಪೊಸಿಟ್‌ಗಳಿಗೂ ಇದೇ ನಿಯಮ ಅನ್ವಯ.
4. ಬಿಸ್ನೆಸ್ ಎಕ್ಸ್‌ಪೆಂಡಿಚರ್ಸ್ (ಸೆಕ್ಷನ್ 40ಎ (3) )
10 ಸಾವಿರ ರೂಪಾಯಿಗಿಂತ ಹೆಚ್ಚು (ಟ್ರಾನ್ಸ್‌ಪೋರ್ಟರ್‌ಗಳಿಗೆ 35 ಸಾವಿರ ರೂ) ಮೊತ್ತದ ನಗದು ಪಾವತಿ ಕಡಿತವಾಗುವುದಿಲ್ಲ (non-deductible)
5. ಡೊನೆಷನ್‌ಗಳು (ಸೆಕ್ಷನ್ 80ಜಿ)
2 ಸಾವಿರ ರೂಪಾಯಿಗಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ಪಾವತಿ ಮಾಡಿದರೆ ಆ ಮೊತ್ತ ತೆರಿಗೆ ವಿನಾಯಿತಿಗೆ ಅರ್ಹವಾಗಿರುವುದಿಲ್ಲ.