Kabra Jewels Share: ಒಂದೇ ದಿನದಲ್ಲಿ ಹೂಡಿಕೆದಾರರ ಹಣ ಡಬಲ್, ಕಬ್ರಾ ಜ್ಯುವೆಲ್ಸ್ ಐಪಿಒ ಸಿಕ್ಕವರಿಗೆ ಲಕ್ಷಾಂತರ ರೂ ಲಾಭ
kabra jewels share price: ಕಬ್ರಾ ಜ್ಯುವೆಲ್ಸ್ ಐಪಿಒ ಜನವರಿ 22ರಂದು ಷೇರುಪೇಟೆಗೆ ಶೇಕಡ 90 ಪ್ರೀಮಿಯಂ ದರದಲ್ಲಿ ಲಿಸ್ಟ್ ಆಗಿದೆ. ಷೇರು ಪೇಟೆಯಲ್ಲಿ ಲಿಸ್ಟ್ ಆದ ಬಳಿಕವೂ ಈ ಷೇರಿನ ಖರೀದಿದಾರರು ಹೆಚ್ಚಾದ ಕಾರಣ ಈ ಷೇರಿನ ದರ ಐಪಿಒ ಮೂಲದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

Kabra Jewels shares: ಜನವರಿ 22ರಂದು ಭಾರತೀಯ ಷೇರುಪೇಟೆಯಲ್ಲಿ ಕಬ್ರಾ ಜ್ಯುವೆಲ್ಸ್ ಷೇರು ಲಿಸ್ಟ್ ಆಗಿದೆ. ಇದು ಶೇಕಡ 90 ಅಂದರೆ 243 ರೂಪಾಯಿಗೆ ಲಿಸ್ಟ್ ಆಗಿದೆ. ಐಪಿಒ ದರ 128 ರೂಪಾಯಿ ಇತ್ತು. ಲಿಸ್ಟ್ ಆದ ಬಳಿಕ ಈ ಸುದ್ದಿ ಬರೆಯುವ ವೇಳೆ ಷೇರಿನ ದರ 255.35 ರೂಪಾಯಿಗೆ ತಲುಪಿದೆ. ಅಂದರೆ, ಸರಿಸುಮಾರು ಇದರ ದರ ಡಬಲ್ ಆಗಿದೆ. ಐಪಿಒ ಹೂಡಿಕೆದಾರರಿಗೆ ಎರಡು ಪಟ್ಟು ಲಾಭ ತಂದುಕೊಟ್ಟಿದೆ. ಷೇರು ಲಿಸ್ಟ್ ಆದ ಒಂದೇ ದಿನದಲ್ಲಿ ಹೂಡಿಕೆದಾರರ ಹಣ ಡಬಲ್ ಆಗಿದೆ. ಐಪಿಒಗೆ ಬಿಡ್ ಸಲ್ಲಿಸಿದ ಒಂದೇ ವಾರದಲ್ಲಿ ಐಪಿಒ ಹೂಡಿಕೆದಾರರ ಮುಖದಲ್ಲಿ ಕಬ್ರಾ ಜ್ಯುವೆಲ್ಸ್ ಮಂದಹಾಸ ಮೂಡಿಸಿದೆ.
ಈ ಎಸ್‌ಎಂಇ ಐಪಿಒದ ವ್ಯಾಲ್ಯೂ 40 ಕೋಟಿ ರೂಪಾಯಿ ಆಗಿದೆ. ಜನವರಿ 15ರಿಂದ ಜನವರಿ 17ರವರೆಗೆ ಐಪಿಒಗೆ ಬಿಡ್ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪ್ರತಿಷೇರಿಗೆ 121 ರೂನಿಂದ 128 ರೂಪಾಯಿ ದರ ನಿಗದಿಪಡಿಸಲಾಗಿತ್ತು.
ಇದು ಸಂಪೂರ್ಣವಾಗಿ 31.25 ಲಕ್ಷ ಷೇರುಗಳ ಫ್ರೆಶ್ ಆಫರ್ ಆಗಿತ್ತು. ಈ ಐಪಿಒಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 356 ಪಟ್ಟು ಜನರು ಈ ಐಪಿಒಗೆ ಬಿಡ್ ಸಲ್ಲಿಸಿದ್ದರು. ಎನ್‌ಐಐ ಹೂಡಿಕೆದಾರರು 556 ಪಟ್ಟು ಚಂದಾದಾರಿಕೆಗೆ ಬಿಡ್ ಮಾಡಿದ್ದರು. ಒಟ್ಟಾರೆ, ಲಾಟರಿ ಆಯ್ಕೆ ಮೂಲಕ ಅದೃಷ್ಟಶಾಲಿಗಳಿಗೆ ಈ ಷೇರು ದೊರಕಿದೆ.
ಕಂಪನಿಯು ತನ್ನ ಬಾಕಿ ಸಾಲ ಮತ್ತು ಇತರೆ ಬಂಡವಾಳ ಅಗತ್ಯಗಳಿಗೆ ಈ ಐಪಿಒ ಹಣವನ್ನು ಬಳಸಿಕೊಳ್ಳಲಿದೆ.
ಮಾರ್ವಾಡಿ ಚಂದರಾನ ಇಂಟರ್‌ಮೀಡಿಯೇಟರಿ ಬ್ರೋಕರ್ಸ್ ಈ ಐಪಿಒದ ಲೀಡ್ ಮ್ಯಾನೇಜರ್ ಆಗಿದ್ದರು. ಕ್ಯಾಮಿಯೊ ಕಾರ್ಪೊರೇಟ್ ಸರ್ವೀಸಸ್ ಈ ಇಶ್ಯೂವಿನ ರಿಜಿಸ್ಟ್ರಾರ್ ಆಗಿದೆ. ಗಿರಿರಾಜ್ ಸ್ಟಾಕ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್ ಈ ಐಪಿಒದ ಮಾರ್ಕೆಟ್ ಮೇಕರ್ ಆಗಿತ್ತು.
ಚಿಲ್ಲರೆ ಹೂಡಿಕೆದಾರರಿಗೆ ಕಂಪನಿಯು 1,000 ಷೇರುಗಳ ಪ್ರತಿ ಲಾಟ್‌ಗೆ ಕನಿಷ್ಠ 1,28,000 ರೂ.ಗಳ ಚಂದಾದಾರಿಕೆ ಮೌಲ್ಯವನ್ನು ನಿಗದಿಪಡಿಸಿತ್ತು. ಇದೀಗ ಒಂದೊಂದು ಲಾಟ್ ದೊರಕಿದವರ ಹಣ ಸರಿಸುಮಾರು ಡಬಲ್ ಆಗಿದೆ. ಒಂದೇ ವಾರದಲ್ಲಿ 1,28,000 ರೂಪಾಯಿ ಹಣವು 2.40 ಲಕ್ಷ ರೂ. ಆಸುಪಾಸಿನಲ್ಲಿದೆ. ಇದು ಎಸ್‌ಎಂಇ ಐಪಿಒ ಆಗಿರುವ ಕಾರಣ ಒಂದು ಲಾಟ್ ದರ ಲಕ್ಷ ರೂಪಾಯಿಗಿಂತ ಹೆಚ್ಚು ಇರುತ್ತದೆ. ಐಪಿಒ ಸಿಕ್ಕವರ ಸಂಪತ್ತು ಒಂದೇ ದಿನದಲ್ಲಿ ಲಕ್ಷ ಲೆಕ್ಕದಲ್ಲಿ ಡಬಲ್ ಆಗಿದೆ.
ಕಬ್ರಾ ಜ್ಯುವೆಲ್ಸ್ ಬಗ್ಗೆ
ಕಂಪನಿಯು ಚಿಲ್ಲರೆ ಆಭರಣ ವಲಯದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಚಿನ್ನ, ವಜ್ರ ಮತ್ತು ಬೆಳ್ಳಿ ವಿಭಾಗಗಳಲ್ಲಿ ಆಭರಣ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಉಂಗುರಗಳು, ಕಿವಿಯೋಲೆಗಳು, ಪೆಂಡೆಂಟ್‌ಗಳು, ಮೂಗುತಿಗಳು, ಬಳೆಗಳು, ಸರಗಳು, ನೆಕ್ಲೇಸ್‌ಗಳು, ಬಳೆಗಳು ಮತ್ತು ಮದುವೆಗಳಿಗೆ ಕಸ್ಟಮೈಸ್ ಮಾಡಿದ ಆಭರಣಗಳನ್ನು ಮಾರಾಟ ಮಾಡುತ್ತದೆ.
ಡಿಸ್‌ಕ್ಲೈಮರ್/ ಹಕ್ಕುತ್ಯಾಗ: ಷೇರುಪೇಟೆ ಮತ್ತು ಐಪಿಒ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗಿದೆ. ಯಾವುದೇ ಷೇರು ಅಥವಾ ಐಪಿಒ ಖರೀದಿಸಬೇಕೆಂದು ಹಿಂದೂಸ್ತಾನ್ ಟೈಮ್ಸ್ ಕನ್ನಡವು ಶಿಫಾರಸು ಮಾಡುವುದಿಲ್ಲ. ಎಚ್‌ಟಿ ಕನ್ನಡದ ಓದುಗ ಹೂಡಿಕೆದಾರರು ಷೇರುಪೇಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
