ಅಂದು 5 ಕೋಟಿ ಗೆದ್ದಿದ್ದ ವ್ಯಕ್ತಿ ಆರ್ಥಿಕ ದಿವಾಳಿಯಾಗಿದ್ದು ಯಾಕೆ? ಉಳಿತಾಯ, ಹಣಕಾಸು ನಿರ್ವಹಣೆಯಲ್ಲಿ ಎಡವದಿರಿ ಜೋಕೆ-business news kbc winner sushil kumar lost all money without proper savings investment personal finance management jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಂದು 5 ಕೋಟಿ ಗೆದ್ದಿದ್ದ ವ್ಯಕ್ತಿ ಆರ್ಥಿಕ ದಿವಾಳಿಯಾಗಿದ್ದು ಯಾಕೆ? ಉಳಿತಾಯ, ಹಣಕಾಸು ನಿರ್ವಹಣೆಯಲ್ಲಿ ಎಡವದಿರಿ ಜೋಕೆ

ಅಂದು 5 ಕೋಟಿ ಗೆದ್ದಿದ್ದ ವ್ಯಕ್ತಿ ಆರ್ಥಿಕ ದಿವಾಳಿಯಾಗಿದ್ದು ಯಾಕೆ? ಉಳಿತಾಯ, ಹಣಕಾಸು ನಿರ್ವಹಣೆಯಲ್ಲಿ ಎಡವದಿರಿ ಜೋಕೆ

ಕೈಗೆ ಕೋಟಿ ದುಡ್ಡು ಬಂದ ಮಾತ್ರಕ್ಕೆ ಜೀವನವಿಡೀ ಕೋಟ್ಯಧಿಪತಿಗಳಾಗಿ ಮೆರೆಯಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಹಣಕಾಸು ಯೋಜನೆ ಮಾಡಬೇಕು. ಉಳಿತಾಯ, ಹೂಡಿಕೆಗಳನ್ನು ಯೋಚಿಸಿ ಸಮರ್ಥವಾಗಿ ನಿರ್ವಹಿಸಬೇಕು. ಇಲ್ಲವಾದಲ್ಲಿ ಸುಶೀಲ್‌ ಕುಮಾರ್‌ ಅವರು ಕಲಿತ ಪಾಠವನ್ನು ನೀವೂ ಕಲಿಯಬೇಕಾಗಬಹುದು.

ಕೋಟ್ಯಧಿಪತಿ ದಿವಾಳಿಯಾಗಿದ್ದು ಯಾಕೆ? ಉಳಿತಾಯ, ಹಣಕಾಸು ನಿರ್ವಹಣೆಯಲ್ಲಿ ಎಡವದಿರಿ ಜೋಕೆ
ಕೋಟ್ಯಧಿಪತಿ ದಿವಾಳಿಯಾಗಿದ್ದು ಯಾಕೆ? ಉಳಿತಾಯ, ಹಣಕಾಸು ನಿರ್ವಹಣೆಯಲ್ಲಿ ಎಡವದಿರಿ ಜೋಕೆ

ಹಣ ಸಂಪಾದಿಸುವುದು ಮುಖ್ಯವಲ್ಲ. ಆ ಹಣವನ್ನು ಹೇಗೆ ಉಳಿತಾಯ ಮಾಡುತ್ತೇವೆ ಅಥವಾ ಎಲ್ಲಿ ಹೂಡಿಕೆ ಮಾಡುತ್ತೇವೆ ಎಂಬುದು ಮುಖ್ಯ. ವೈಯಕ್ತಿಕ ಹಣಕಾಸು ಮುಖ್ಯವಾಗುವುದು ಇದೇ ಕಾರಣಕ್ಕೆ. ನಿಮಗೆಲ್ಲಾ ಸುಶೀಲ್ ಕುಮಾರ್ ಎಂಬ ವ್ಯಕ್ತಿಯ ಪರಿಚಯ ಇರಬಹುದು. ಅಗಾಧ ಜ್ಞಾನವುಳ್ಳ ಈ ವ್ಯಕ್ತಿ, ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡ್‌ಪತಿ (KBC)ಯಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಗೆದ್ದಿದ್ದರು. ದಿನದೊಳಗೆ ಕೋಟ್ಯಾಧಿಪತಿಯಾದ ಈ ವ್ಯಕ್ತಿ ಹಲವರಿಗೆ ಸ್ಫೂರ್ತಿಯಾಗಿದ್ದರು. ಆ 5 ಕೋಟಿಯಿಂದ ಏನೆಲ್ಲಾ ಸಾಧಿಸುವ ಅವಕಾಶವಿತ್ತು. ಆದರೆ ಆಗಿದ್ಧೇ ಬೇರೆ.

ಕೋಟಿ ಗೆದ್ದು ಏಕಕಾಲಕೆ ಲಕ್ಷ್ಮೀಯನ್ನು ಒಲಿಸಿಕೊಂಡ ಸುಶೀಲ್; ಸೂಕ್ತ ಹೂಡಿಕೆ, ಉಳಿತಾಯ ಯೋಜನೆ ರೂಪಿಸದೆ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಒಂದು ಬಾರಿ ಇವರಿಗಾಗಿ ತೆರೆದಿದ್ದ ಅದೃಷ್ಟದ ಬಾಗಿಲು ನಿಧಾನವಾಗಿ ಮುಚ್ಚಿಹೋಗಿದೆ. ಕೋಟ್ಯಧಿಪತಿಯಾಗಿದ್ದ ವ್ಯಕ್ತಿ ಈಗ ಜನಸಾಮಾನ್ಯನಂತೆ ಬದುಕುತ್ತಿದ್ದಾರೆ. ಯಾಕೆ ಹೀಗಾಯ್ತು? ಮುಂದೆ ಓದಿ

ಬಿಹಾರ ಮೂಲದ ಸುಶೀಲ್ ಕುಮಾರ್, 2011ರಲ್ಲಿ ಕರೋಡ್‌ಪತಿ ಶೋ ಮೂಲಕ 5 ಕೋಟಿ ರೂಪಾಯಿ ಗೆದ್ದಿದ್ದರು. ಅವರ ಸಾಧನೆ ದೇಶದೆಲ್ಲೆಡೆ ಮನೆಮಾತಾಯ್ತು. ಅವರ ವಿನಮ್ರ ಹಿನ್ನೆಲೆ ಯುವಜನತೆಗೆ ಸ್ಫೂರ್ತಿಯಾಗಿತ್ತು. ಆದರೆ, ಅತಿಯಾದ ವಿನಯ, ಸಹಾಯಮಾಡುವ ಮನೋಭಾವವೇ ಅವರಿಗೆ ಮಾರಕವಾಯ್ತು. ಈ ಕುರಿತು ಫೇಸ್‌ಬುಕ್ ಪೋಸ್ಟ್‌ ಮೂಲಕ ಬಹಿರಂಗಪಡಿಸಿದ್ದ ಸುಶೀಲ್, ತಾವು ಹಣ ಗೆದ್ದ ನಂತರ ಹಲವಾರು ಜನರಿಂದ ವಂಚನೆಗೊಳಗಾಗಿದ್ದಾಗಿ ತಿಳಿಸಿದ್ದರು.

ಉದಾರತೆಯೇ ಮುಳುವಾದಾಗ

ವೈಯಕ್ತಿಕ ಹಣಕಾಸು ಯೋಜನೆ ಕುರಿತ ಮಾಹಿತಿಯ ಕೊರತೆ ಹಾಗೂ ಉದಾರ ಮನೋಭಾವದಿಂದಾಗಿ ತಮ್ಮ ಹಣವನ್ನು ಸ್ವಲ್ಪಸ್ವಲ್ಪವೇ ಕಳೆದುಕೊಂಡು ಬಂದರು. ಲಾಭ ಬರದ ಕಡೆ ಹಣದ ಹೂಡಿಕೆ ಮಾಡಿದರು. ದೇಣಿಗೆ ಎಂದು ಹಣವನ್ನು ಹಿಂದೆ ಮುಂದೆ ನೋಡದೆ ಖರ್ಚು ಮಾಡಿದರು. ಇದು ಅವರ ಬೊಕ್ಕಸವನ್ನು ಬರಿದುಮಾಡಿತು. ಪರೋಪಕಾರವೇ ಸುಶೀಲ್‌ಗೆ ಮುಳುವಾಯ್ತು. ತಮ್ಮ ದೇಣಿಗೆಗಳಲ್ಲಿ ಹೆಚ್ಚಿನ ಹಣ ದುರ್ಬಳಕೆಯಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ತುಂಬಾ ಸಮಯ ಬೇಕಾಯ್ತು. ನಿಧಾನವಾಗಿ ಹಣಕಾಸಿನ ಅಸ್ಥಿರತೆ ಎದುರಿಸಿದರು. ಕುಟುಂಬದಲ್ಲಿ ಸಮಸ್ಯೆಗಳು ಕಾಣಿಸಕೊಂಡವು. ಪತ್ನಿಯೊಂದಿಗಿನ ಸಂಬಂಧ ಕ್ಷೀಣಿಸತೊಡಗಿತು…

ಆರ್ಥಿಕ ದಿವಾಳಿತನ

ಪತ್ನಿಯು ಸುಶೀಲ್‌ ಅವರನ್ನು ತಿದ್ದುವ ಪ್ರಯತ್ನ ಮಾಡಿದರು. ಆದರೂ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸುಶೀಲ್‌ಗೆ ಸಾಧ್ಯವಾಗಲಿಲ್ಲ. ತಮ್ಮ ಸ್ವಂತ ಭವಿಷ್ಯಕ್ಕಾಗಿ ಯಾವುದೇ ಭದ್ರತೆ ಇಲ್ಲದೆ ಇತರರಿಗೆ ಸಹಾಯ ಮಾಡುವುದೇ ತನ್ನ ಪತಿಯ ಕಾಳಜಿಯಾಗುತ್ತಿದೆ ಎಂದು ಆಗಾಗ್ಗೆ ಟೀಕಿಸಿದರು. ಇದರಿಂದ ಸುಶೀಲ್‌ ಮಾನಸಿಕ ಒತ್ತಡಕ್ಕೆ ಒಳಗಾದರು. ನಿಧಾನವಾಗಿ ಮದ್ಯ ಹಾಗೂ ಧೂಮಪಾನ ವ್ಯಸನಿಯಾದರು. ಸುಶೀಲ್ ಕುಮಾರ್ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು. ಅಂತಿಮವಾಗಿ ಅವರು ದಿವಾಳಿಯಾದರು.

ಹಾಲು ಮಾರಾಟ ಮಾಡುವ ಮೂಲಕ ಮತ್ತೆ ಬದುಕು ಕಟ್ಟಿಕೊಳ್ಳುವ ಪ್ರಯತ್ನಕ್ಕೆ ಮುಂದಾದರು. ಪತ್ರಕರ್ತರೊಬ್ಬರು ಆರ್ಥಿಕ ಸ್ಥಿತಿಯ ಬಗ್ಗೆ ಕೇಳಿದಾಗ ಮುಜುಗರಕ್ಕೊಳಗಾದ ಸುಶೀಲ್ ಕುಮಾರ್, ತಾವು ಹಣವನ್ನು ಕಳೆದುಕೊಂಡಿದ್ದಾಗಿ ಒಪ್ಪಿಕೊಂಡರು. ಈಗ ಸಾಮಾನ್ಯನಂತೆ ಬದುಕುತ್ತಿರುವುದಾಗಿ ಹೇಳಿದ ಅವರು, ಜೀವನೋಪಾಯಕ್ಕಾಗಿ ಹಾಲು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದರು.

ಶಿಕ್ಷಕ ವೃತ್ತಿ, ಸಂತೃಪ್ತಿ

ಕೊನೆಗೆ, ಎಲ್ಲಾ ಬಿಟ್ಟು ಸರಳ ಹಾಗೂ ತಮ್ಮಿಷ್ಟದಂತೆ ಬದುಕು ನಡೆಸುವ ನಿರ್ಧಾರಕ್ಕೆ ಸುಶೀಲ್‌ ಬಂದರು. ತಮ್ಮ ಜ್ನಾನವನ್ನು ಮಕ್ಕಳಿಕೆ ಧಾರೆ ಎರೆಯುವ ನಿರ್ಧಾರಕ್ಕೆ ಬಂದರು. ಶಿಕ್ಷಣ ಕ್ಷೇತ್ರದತ್ತ ಗಮನ ಹರಿಸಲು ನಿರ್ಧರಿಸಿದ ಅವರು ಶಿಕ್ಷಕರಾಗಿ ಕೆಲಸಕ್ಕೆ ಸೇರಿಕೊಂಡರು. ಹಣಕ್ಕಿಂತ ಜ್ಞಾನದ ಮೂಲಕ ಇತರರಿಗೆ ಸಹಾಯ ಮಾಡುವುದೇ ಒಳ್ಳೆಯದು ಎಂಬುದನ್ನು ಅರಿತುಕೊಂಡರು.

ಸುಶೀಲ್‌ ಜೀವನದಿಂದ ನಾವು ಕಲಿಯುವ ಪಾಠಗಳಿವೆ. ಸಂಪಾದೊಸುವ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವುದು ತುಂಬಾ ಮುಖ್ಯ. ಕುಟುಂಬದ ಭವಿಷ್ಯದ ದೃಷ್ಟಿಯಿಂದ ಹಣಕಾಸಿನ ಭದ್ರತೆ ಬೇಕೇ ಬೇಕು. ಹೂಡಿಕೆ ಮಾಡುವ ಮುನ್ನ ಪರಾಮರ್ಷಿಸಬೇಕು. ಕುರುಡಾಗಿ ಯಾರನ್ನೂ ನಂಬಬಾರದು. ವೈಯಕ್ತಿಕ ಹಣಕಾಸು ಯೋಜನೆ ಸಮರ್ಪಕವಾಗಿ ಮಾಡಬೇಕು. ಮಾಹಿತಿ ಕೊರತೆ ಇದ್ದರೆ ತಜ್ಞರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಬೇಕು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.