ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದರ 19 ರೂ ಇಳಿಕೆ; ಬೆಂಗಳೂರು, ದೆಹಲಿ, ಮುಂಬಯಿ, ಚೆನ್ನೈನಲ್ಲಿ ಎಲ್‌ಪಿಜಿ ದರ ಹೀಗಿದೆ
ವಾಡಿಕೆಯಂತೆ ತಿಂಗಳ ಮೊದಲ ದಿನವಾದ ಮೇ 1 ರಂದು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದರ 19 ರೂ ಇಳಿಕೆಯಾಗಿದೆ. ಬೆಂಗಳೂರು, ದೆಹಲಿ, ಮುಂಬಯಿ, ಚೆನ್ನೈನಲ್ಲಿ ಎಲ್‌ಪಿಜಿ ದರ ಪರಿಷ್ಕರಣೆಯಾಗಿದ್ದು, ವಿವರ ವರದಿ ಇಲ್ಲಿದೆ.
ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಡಿಕೆಯಂತೆ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ ಮಾಡಿವೆ. ದೇಶಾದ್ಯಂತ ಇಂದಿನಿಂದ (ಮೇ 1) ಜಾರಿಗೆ ಬರುವಂತೆ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ದರವನ್ನು 19 ರೂಪಾಯಿ ಇಳಿಕೆ ಮಾಡಿದೆ. ಪರಿಷ್ಕೃತ ದರದ ಪ್ರಕಾರ, 19 ಕಿಲೋ ತೂಕದ ವಾಣಿಜ್ಯ ಸಿಲಿಂಡರ್ ದರ ಭಾರತದ ರಾಜಧಾನಿ ನವದೆಹಲಿಯಲ್ಲಿ 1,745.50 ರೂಪಾಯಿ ಆಗಿದೆ. ಕಳೆದ ತಿಂಗಳು ಎಲ್‌ಪಿಜಿ 19 ಕಿಲೋ ವಾಣಿಜ್ಯ ಸಿಲಿಂಡರ್ ದರ 1764.5 ರೂಪಾಯಿ ಇತ್ತು.
ದೇಶದ ವಾಣಿಜ್ಯ ನಗರಿ ಮುಂಬಯಿಯಲ್ಲೂ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿದೆ. ಅಲ್ಲಿ, ಕಳೆದ ತಿಂಗಳು 19 ಕಿಲೋ ತೂಕದ ವಾಣಿಜ್ಯ ಸಿಲಿಂಡರ್ ದರ 1,717.50 ರೂಪಾಯಿ ಇತ್ತು. ಈಗ 19 ರೂಪಾಯಿ ಇಳಿಕೆಯಾಗಿ 1,698.50 ರೂಪಾಯಿಗೆ ತಲುಪಿದೆ.
ಚೆನ್ನೈ, ಕೋಲ್ಕತ, ಬೆಂಗಳೂರಿನಲ್ಲಿ ಎಲ್‌ಪಿಜಿ ದರ
ಚೆನ್ನೈನಲ್ಲಿ 19 ಕಿಲೋ ವಾಣಿಜ್ಯ ಸಿಲಿಂಡರ್ ದರ 1930 ರೂಪಾಯಿ ಇದ್ದದ್ದು 19 ರೂಪಾಯಿ ಇಳಿಕೆಯಾಗಿ1,911 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 20 ರೂಪಾಯಿ ಇಳಿದು 1,859 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ದರ 1825.50 ರೂಪಾಯಿ ಆಗಿದೆ.
ಪ್ರಾದೇಶಿಕವಾಗಿ ಇಂಧನ ಬೆಲೆ ಪರಿಷ್ಕರಣೆಯಲ್ಲಿ ಜಾಗತಿಕ ತೈಲ ಬೆಲೆ ನೇರ ಪರಿಣಾಮ ಬೀರುತ್ತದೆ. ಜಾಗತಿಕವಾಗಿ ತೈಲ ಬೆಲೆ ಕುಸಿತವಾಗಿರುವ ಕಾರಣ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ತೈಲ ಬೆಲೆ ಕುಸಿತಕ್ಕೆ ಅಮೆರಿಕದಲ್ಲಿ ಹೆಚ್ಚುತ್ತಿರುವ ಕಚ್ಚಾ ತೈಲ ದಾಸ್ತಾನು ಮತ್ತು ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಒಪ್ಪಂದದ ಹೆಚ್ಚುತ್ತಿರುವ ಭರವಸೆಗಳು ಕಾರಣವಿರಬಹುದು.
ಇಂಧನ ಬೆಲೆ, ಎಲ್‌ಪಿಜಿ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಪಕ್ಷ ಪದೇಪದೆ ವಾಗ್ದಾಳಿ ನಡೆಸುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಬೆಲೆ ಏರಿಕೆ ವಿಚಾರ ಚುನಾವಣಾ ಪ್ರಚಾರದ ವಿಷಯವಾಗಿ ಪದೇಪದೆ ಪ್ರಸ್ತಾಪವಾಗುತ್ತಿದೆ. ಇಂಧನ ದರ ಹೆಚ್ಚಾದ ಕೂಡಲೇ ಅದರ ನೇರ ಪರಿಣಾಮ ನಿತ್ಯೋಪಯೋಗಿ ವಸ್ತುಗಳ ಬೆಲೆಗಳ ಮೇಲೆ ಬೀರುತ್ತದೆ.
ಎಲ್‌ಪಿಜಿ ದರ ಇಳಿಕೆಗೇನು ಕಾರಣ
ಬೆಲೆ ಇಳಿಕೆಯ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಬದಲಾವಣೆಗಳು, ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಪೂರೈಕೆ-ಬೇಡಿಕೆ ಚಲನಶಾಸ್ತ್ರದಂತಹ ವಿವಿಧ ಅಂಶಗಳು ದರದ ಮೇಲೆ ಪರಿಣಾಮ ಬೀರುತ್ತದೆ.
ಏತನ್ಮಧ್ಯೆ, ವಾಣಿಜ್ಯ ಮತ್ತು ದೇಶೀಯ ಎಲ್ಪಿಜಿ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆ ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನದಂದು ನಡೆಯುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಸರ್ಕಾರದ ಅಧಿಸೂಚನೆಯ ಪ್ರಕಾರ, ಕೇಂದ್ರ ಸರ್ಕಾರವು ಕಚ್ಚಾ ಪೆಟ್ರೋಲಿಯಂ ಮೇಲಿನ ಅನಿರೀಕ್ಷಿತ ತೆರಿಗೆಯನ್ನು ಕಡಿಮೆ ಮಾಡಿದೆ. ಕಚ್ಚಾ ಪೆಟ್ರೋಲಿಯಂ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಸ್ಎಇಡಿ) ಪ್ರತಿ ಟನ್ ಮೇಲೆ 9,600 ರೂ.ಗಳಿಂದ 8,400 ರೂ.ಗೆ ಇಳಿಸಲಾಗಿದೆ.
ಹೊಸ ತೆರಿಗೆ ದರಗಳು ತಕ್ಷಣದಿಂದ ಜಾರಿಗೆ ಬರಲಿವೆ. ಡೀಸೆಲ್, ಪೆಟ್ರೋಲ್ ಮತ್ತು ವಾಯುಯಾನ ಟರ್ಬೈನ್ ಇಂಧನದ ಮೇಲಿನ ತೆರಿಗೆಗಳು ಶೂನ್ಯವಾಗಿ ಉಳಿಯುತ್ತವೆ. ಏಪ್ರಿಲ್ 16 ರಂದು ಸರ್ಕಾರವು ಪೆಟ್ರೋಲಿಯಂ ಕಚ್ಚಾ ತೈಲದ ಮೇಲಿನ ಅನಿರೀಕ್ಷಿತ ತೆರಿಗೆಯನ್ನು ಪ್ರತಿ ಟನ್ಗೆ 6,800 ರೂ.ಗಳಿಂದ 9,600 ರೂ.ಗೆ ಹೆಚ್ಚಿಸಿತ್ತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.