Closing Bell: ಮುಂಬೈ ಷೇರುಪೇಟೆಯ ವಾರಾಂತ್ಯದಲ್ಲಿ ಸೆನ್ಸೆಕ್ಸ್ 732 ಅಂಕಗಳ ಕುಸಿತ; ಈ ಪರಿ ಮಾರುಕಟ್ಟೆ ತಲ್ಲಣಕ್ಕೆ ಕಾರಣವೇನು
ಮೇ 3ರ ಶುಕ್ರವಾರ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆನ್ಸ್ 732 ಅಂಕಗಳ ಕುಸಿತದೊಂದಿಗೆ ಭಾರಿ ನಷ್ಟವನ್ನು ಅನುಭವಿಸಿದೆ. ನಿಫ್ಟಿ 22,475 ಅಂಕಗಳೊಂದಿಗೆ ವಾರಾಂತ್ಯದ ವ್ಯಾಪಾರವನ್ನು ಮುಗಿಸಿದೆ. ಮಾರುಕಟ್ಟೆಯಲ್ಲಿನ ತಲ್ಲಣಕ್ಕೆ ಕಾರಣ ತಿಳಿಯಿರಿ.
ಮುಂಬೈ: ವಾರಾಂತ್ಯದ ದಿನವಾದ ಇಂದು (ಮೇ 3, ಶುಕ್ರವಾರ) ಮುಂಬೈ ಷೇರುಪೇಟೆಯಲ್ಲಿ (Mumbai Share Market) ಸೆನ್ಸೆಕ್ಸ್ (Sensex) ಮಹಾಪತನ ಕಂಡಿದ್ದು, ಹೂಡಿಕೆದಾರರ ಕೋಟಿ ಕೋಟಿ ಸಂಪತ್ತು ಕರಗಿ ಹೋಗಿದೆ. ದಿನದ ಅಂತ್ಯದ ವೇಳೆಗೆ ಸೆನ್ಸೆಕ್ಸ್ 732.96 ಅಂಕಗಳ ಕುಸಿತದ ಬಳಿಕ 73,878ಕ್ಕೆ ತಲುಪಿತು. ನಿಫ್ಟಿ (Nifty) 172.35 ಅಂಶಗಳನ್ನು ಕಳೆದುಕೊಂಡು 22,475.85 ರಲ್ಲಿ ವಹಿವಾಟು ಮುಗಿಸಿತು.
ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೈಟಾನ್, ಏಷಿಯನ್ ಪೇಂಟ್ಸ್ ಸೇರಿದಂತೆ ಪ್ರಮುಖ ಕಂಪನಿಗಳು ಮಾರಾಟದ ಒತ್ತಡವನ್ನು ಅನುಭವಿಸಿದವು. ಮಾರುಕಟ್ಟೆಯ ತಲ್ಲಣದ ನಡುವೆಯೂ ಡಿಮಾರ್ಟ್, ಜೆಕೆ ಸಿಮೆಂಟ್, ಆಯಿಲ್, ಅದಾನಿ ಗ್ರೀನ್, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಹಲವು ಕಂಪನಿಗಳ ಷೇರುಗಳು ಏರಿಕೆ ಕಂಡಿದ್ದು, ಲಾಭವನ್ನು ಗಳಿಸಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಬಜಾಜ್ ಫೈನಾನ್ಸ್ ಷೇರುಗಳು ಶೇಕಡಾ 6 ಕ್ಕಿಂತ ಹೆಚ್ಚಿನ ಲಾಭವನ್ನು ಪಡೆದವು. ಇದು ಸೆನ್ಸೆಕ್ಸ್ ನಲ್ಲಿ ಅತಿ ಹೆಚ್ಚು ಲಾಭ ಗಳಿಸಿತು.
ಮಾರಾಟದ ಒತ್ತಡ, ಖರೀದಿ ಕೊರತೆ ಸೂಚ್ಯಂಕ ಪತನಕ್ಕೆ ಕಾರಣವೇ?
ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಎರಡು ವಾರಗಳಲ್ಲಿ ದಾಖಲೆಯ ಮಟ್ಟಕ್ಕೆ ಏರಿದ ಬಳಿಕ ಇದೀಗ ಇಳಿಕೆಯ ಹಾದಿಯಲ್ಲಿದೆ. ಇದಕ್ಕೆ ಪ್ರಮುಖವಾಗಿ ಮಾರಾಟದ ಒತ್ತಡವೂ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ. ವಿಶ್ಲೇಕರು ಹೇಳುವ ಪ್ರಕಾರ, ನಿಫ್ಟಿ 22,700 ಅಂಶಗಳ ದಾಖಲೆಯ ಮಟ್ಟವನ್ನು ತಲುಪಿದ ನಂತರ ಇಳಿಕೆಯ ಹಾದಿಯಲ್ಲಿದೆ. ಇದರಲ್ಲಿ ಫಾಲೋ ಆನ್ ಖರೀದಿಯ ಕೊರತೆಯು ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಗಳ ಪರಿಸ್ಥಿತಿ ಹೇಗಿದೆ?
ಯುಎಸ್ ಉದ್ಯೋಗ ಡೇಟಾ ಬಾಕಿಯ ನಡುವೆ ಏಷ್ಯಾದ ಮಾರುಕಟ್ಟೆಗಳು ಉತ್ತಮ ಆರಂಭ ಕಂಡಿವೆ. ಎಂಎಸ್‌ಸಿಐ ಏಷ್ಯಾ ಎಕ್ಸ್-ಜಪಾನ್ ಸೂಚ್ಯಂಕವು ಶೇ 1.1 ರಷ್ಟು ಏರಿಕೆಯಾಗಿದೆ. ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಹೆಚ್ಚಿನ ಬಡ್ಡಿದರ ಹೆಚ್ಚಳ ಸಾಧ್ಯವಿಲ್ಲ ಎಂಬ ಹೇಳಿಕೆ ನಂತರ ಹಾಂಗ್ ಕಾಂಗ್ ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇಕಡಾ 2 ರಷ್ಟು ಹೆಚ್ಚಾಗಿದೆ. ವಾಲ್ ಸ್ಟ್ರೀಟ್ ಷೇರುಗಳು ರಾತ್ರೋರಾತ್ರಿ ಏರಿಕೆ ಕಂಡವು.
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆಗಳು ಹೆಚ್ಚಾಗಿದ್ದವು. ಆದರೆ ಯುಎಸ್ ಆರ್ಥಿಕ ಅನಿಶ್ಚಿತತೆ ಹಾಗೂ ಇಸ್ರೇಲ್-ಹಮಾಸ್ ಯುದ್ಧದಿಂದ ಉಂಟಾದ ಕಚ್ಚಾ ಪೂರೈಕೆ ಅಡೆತಡೆಗಳಿಂದಾಗಿ ಸಾಪ್ತಾಹಿಕ ನಷ್ಟದತ್ತ ಸಾಗುತ್ತಿವೆ.