ಕನ್ನಡ ಸುದ್ದಿ  /  Nation And-world  /  Business News Nifty Above 22,200 Sensex Gains 535 Pts It Auto Metals Shine Share Market Closing Bell Rst

Closing Bell: ಮತ್ತೆ ಚೇತರಿಸಿಕೊಂಡ ಭಾರತದ ಷೇರುಪೇಟೆ; ಐಟಿ, ಲೋಹದ ಷೇರುಗಳ ಬಲದೊಂದಿಗೆ ಪುಟಿದೆದ್ದ ಸೆನ್ಸೆಕ್ಸ್‌, ನಿಫ್ಟಿ

ಈ ವಾರ ಪೂರ್ತಿ ಭಾರತದ ಷೇರುಪೇಟೆಯಲ್ಲಿ ಏರಿಳಿತ ಸಾಮಾನ್ಯವಾಗಿದೆ. ಮೊನ್ನೆ (ಫೆ. 20) ನಿಫ್ಟಿ ಮೊದಲ ಬಾರಿಗೆ 22,200ಕ್ಕೆ ತಲುಪುವ ಮೂಲಕ ಹೊಸ ದಾಖಲೆ ಬರೆದಿತ್ತು. ಆದರೆ ನಿನ್ನೆ (ಫೆ.21) ಪುನಃ ಇಳಿಕೆ ಕಂಡಿತ್ತು. ಇಂದು (ಫೆ. 22) ಸೆನ್ಸೆಕ್ಸ್‌ ಹಾಗೂ ನಿಫ್ಟಿ ಎರಡೂ ಪುಟಿದೆದ್ದಿವೆ.

ಮತ್ತೆ ಚೇತರಿಸಿಕೊಂಡ ಭಾರತದ ಷೇರುಪೇಟೆ; ಐಟಿ, ಲೋಹದ ಬಲದೊಂದಿಗೆ ಪುಟಿದೆದ್ದ ಸೆನ್ಸೆಕ್ಸ್‌, ನಿಫ್ಟಿ
ಮತ್ತೆ ಚೇತರಿಸಿಕೊಂಡ ಭಾರತದ ಷೇರುಪೇಟೆ; ಐಟಿ, ಲೋಹದ ಬಲದೊಂದಿಗೆ ಪುಟಿದೆದ್ದ ಸೆನ್ಸೆಕ್ಸ್‌, ನಿಫ್ಟಿ

ಬೆಂಗಳೂರು: ಭಾರತದ ಷೇರು ಹೂಡಿಕೆದಾರರಿಗೆ ಗುರುವಾರ (ಫೆ. 22) ಶುಭಸುದ್ದಿ ಇದೆ. ಇಂದು ಸೆನ್ಸೆಕ್ಸ್‌ ಹಾಗೂ ನಿಫ್ಟಿ ಎರಡೂ ಗಳಿಕೆ ಕಾಣುವ ಮೂಲಕ ಇಂದಿನ ವಹಿವಾಟು ಮುಗಿಸಿವೆ. ನಿನ್ನೆ ಮುಕ್ತಾಯ ವೇಳೆಗೆ ಮಾರುಕಟ್ಟೆ ಅತಂತ್ರವಾಗಿತ್ತು. ಬಹುತೇಕ ವಲಯಗಳು ಕೆಂಪು ಬಣ್ಣದಲ್ಲಿ ವಹಿವಾಟು ಮುಗಿಸಿದ್ದವು. ಅಮೆರಿಕ ಕೇಂದ್ರಿಯ ಬ್ಯಾಂಕ್‌ ಬಡ್ಡಿದರ ಹಾಗೂ ಚೀನಾ ನೀತಿ ನಿಯಮಗಳ ಮೇಲೆ ಗಮನ ಹರಿಸಿರುವ ಏಷ್ಯಾ ಹಾಗೂ ಜಾಗತಿಕ ಮಾರುಕಟ್ಟೆಯು ತಲ್ಲಣದ ವಹಿವಾಟು ನಡೆಸಿತ್ತು.

ಇಂದು ಮುಕ್ತಾಯದ ವೇಳೆ ನಿಫ್ಟಿಯು ಪುನಃ 22,200 ಕ್ಕೆ ತಲುಪುವ ಮೂಲಕ ಹೂಡಿಕೆದಾರರ ಜೇಬು ತುಂಬುವಂತೆ ಮಾಡಿದೆ.

ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 535.15 ಅಂಕ ಅಥವಾ ಶೇ 0.74ರಷ್ಟು ಏರಿಕೆಯಾಗಿದೆ 73,158.24 ಕ್ಕೆ ತಲುಪಿದೆ. ನಿಫ್ಟಿ 162.50 ಅಂಕ ಅಥವಾ 0.74 ರಷ್ಟು ಏರಿಕೆಯಾಗಿ 22,217.50 ಕ್ಕೆ ತಲುಪಿದೆ. ಇಂದು ಸುಮಾರು 1591 ಷೇರುಗಳು ಲಾಭಗಳಿಸಿವೆ. 1685 ಷೇರುಗಳು ನಷ್ಟ ಕಂಡರೆ, 77 ಷೇರುಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ.

ಲಾಭ-ನಷ್ಟ ಕಂಡ ಷೇರುಗಳು

ನಿಫ್ಟಿಯಲ್ಲಿ ಬಜಾಜ್ ಆಟೊ, ಎಚ್‌ಸಿಎಲ್ ಟೆಕ್ನಾಲಜೀಸ್, ಐಷರ್ ಮೋಟಾರ್ಸ್, ಐಟಿಸಿ ಮತ್ತು ಕೋಲ್ ಇಂಡಿಯಾ ಟಾಪ್ ಗೇನರ್ ಆಗಿದ್ದರೆ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಿಪಿಸಿಎಲ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಹೀರೋ ಮೋಟೋಕಾರ್ಪ್ ನಷ್ಟ ಅನುಭವಿಸಿದವು.

ವಲಯವಾರು ಷೇರುಗಳಲ್ಲಿ ಆಟೋ, ಕ್ಯಾಪಿಟಲ್ ಗೂಡ್ಸ್, ಮೆಟಲ್, ಪವರ್, ಮಾಹಿತಿ ತಂತ್ರಜ್ಞಾನಗಳು ಮತ್ತು ಟೆಲಿಕಾಂ ಶೇ 1ರಷ್ಟು ಗಳಿಕೆ ಕಂಡಿವೆ. ಆದರೆ ಇಂದು ಬ್ಯಾಂಕಿಂಗ್‌ ವಲಯಗಳಲ್ಲಿ ಕೊಂಚ ಇಳಿಕೆಯಾಗಿರುವುದನ್ನು ಗಮನಿಸಬಹುದು.

ಬಿಎಸ್‌ಇ ಮಿಡ್‌ಕ್ಯಾಪ್ ಶೇ 1 ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ 0.5 ರಷ್ಟು ಏರಿಕೆಯಾಗಿದೆ.

ಇಂದು ಡಾಲರ್‌ ಎದುರು ರೂಪಾಯಿ ಮೌಲ್ಯವು 82.85 ಕ್ಕೆ ತಲುಪಿದೆ.