ಕನ್ನಡ ಸುದ್ದಿ  /  Nation And-world  /  Business News Nifty Above 22300 Sensex Up 655 Pts All Sectors In The Green March 28th Share Market Closing Bell Rst

Closing Bell: ಆರ್ಥಿಕ ವರ್ಷದ ಕೊನೆಯ ದಿನ ಭಾರತದ ಷೇರುಪೇಟೆಯಲ್ಲಿ ನವೋಲ್ಲಾಸ; ಎಲ್ಲಾ ವಲಯಗಳು ಹಸಿರಾಗಿ ವಹಿವಾಟು ಮುಕ್ತಾಯ

2023-2024ರ ಆರ್ಥಿಕ ವರ್ಷದ ಕೊನೆಯ ದಿನದ ವಹಿವಾಟಿನಲ್ಲಿ ಭಾರತದ ಷೇರುಪೇಟೆ ಲಾಭ ಗಳಿಸಿದೆ. ಕಳೆದ ಸೆಷನ್‌ (ಮಾರ್ಚ್‌ 27) ನಲ್ಲೂ ಲಾಭದ ವಹಿವಾಟಿಗೆ ಸಾಕ್ಷಿಯಾಗಿತ್ತು ಭಾರತದ ಮಾರುಕಟ್ಟೆ. ಇಂದು (ಮಾರ್ಚ್‌ 28) ಅಲ್ಪ ಬದಲಾವಣೆಯೊಂದಿಗೆ ದಿನದ ವಹಿವಾಟು ಆರಂಭಿಸಿದ್ದರೂ, ಮುಕ್ತಾಯದ ವೇಳೆಗೆ ಎಲ್ಲಾ ವಲಯಗಳು ಹಸಿರಾಗಿದ್ದವು.

ಮಾರ್ಚ್‌ 28ರ ಷೇರು ಮಾರುಕಟ್ಟೆ ಕ್ಲೋಸಿಂಗ್‌ ಬೆಲ್‌
ಮಾರ್ಚ್‌ 28ರ ಷೇರು ಮಾರುಕಟ್ಟೆ ಕ್ಲೋಸಿಂಗ್‌ ಬೆಲ್‌ (REUTERS)

ಬೆಂಗಳೂರು: ಭಾರತದ ಷೇರು ಮಾರುಕಟ್ಟೆಯಲ್ಲಿ ಹಣಕಾಸು ವರ್ಷದ ಕೊನೆಯ ದಿನ ಹೊಸ ಉತ್ಸಾಹ ಮೂಡಿದೆ. ದಿನದ ಆರಂಭದ ವೇಳೆಗೆ ಅಲ್ಪ ಬದಲಾವಣೆ ಇದ್ದರೂ ಮುಕ್ತಾಯದ ವೇಳೆಗೆ ಲಾಭಗ ಗಳಿಸಿದೆ ಭಾರತದ ಷೇರು ಮಾರುಕಟ್ಟೆ. 2023-24ರ ಆರ್ಥಿಕ ವರ್ಷದಲ್ಲಿ ಏರಿಳಿತ ಸಾಮಾನ್ಯವಾಗಿತ್ತು. ಹಾವು ಏಣಿ ಆಟದ ನಡುವೆಯೂ ಐದಾರು ಬಾರಿ ಸಾರ್ವಕಾಲಿಕ ದಾಖಲೆ ಗಳಿಸಿದ್ದು ವಿಶೇಷವಾಗಿತ್ತು. ಕೆಲವೊಮ್ಮೆ ಪಾತಾಳಕ್ಕೆ ಇಳಿಯುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು ಇತ್ತು. ಇದೀಗ ಹೊಸ ನಿರೀಕ್ಷೆಯೊಂದಿಗೆ ಈ ವರ್ಷದ ಕೊನೆಯ ದಿನ ವಹಿವಾಟು ಮುಗಿದಿದ್ದು, ಧನಾತ್ಮಕ ಮುಕ್ತಾಯವು ಷೇರು ಹೂಡಿಕೆದಾರರಿಗೆ ಖುಷಿ ಮೂಡಿಸಿದೆ.

ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಎರಡೂ ಲಾಭ ಗಳಿಸುವ ಮೂಲಕ ಹೂಡಿಕೆದಾರರನ್ನು ತೃಪ್ತಿ ಪಡಿಸಿವೆ. ಹೊಸ ದಾಖಲೆ ನಿರ್ಮಿಸುವ ಮೂಲಕ ತಿಂಗಳ, ವರ್ಷದ ಹಾಗೂ ದಿನದ ವಹಿವಾಟು ಮುಗಿಸಿವೆ.

ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 655.04 ಅಂಕ ಅಥವಾ ಶೇ 0.90 ರಷ್ಟು ಏರಿಕೆಯಾಗಿ 73,651.35 ಕ್ಕೆ ತಲುಪಿದರೆ, ನಿಫ್ಟಿ 203.20 ಅಂಕ ಅಥವಾ ಶೇ 0.92ರಷ್ಟು ಏರಿಕೆಯಾಗಿ 22,326.90 ಕ್ಕೆ ತಲುಪಿದೆ. ಸುಮಾರು 1912 ಷೇರುಗಳು ಲಾಭ ಗಳಿಸಿದವು. 1784 ಷೇರುಗಳು ನಷ್ಟದಲ್ಲಿ ದಿನದ ವಹಿವಾಟು ಮುಗಿಸಿದವು. 103 ಷೇರುಗಳು ಯಾವುದೇ ಬದಲಾವಣೆ ಕಾಣದೇ ತಟಸ್ಥವಾಗಿದ್ದವು.

ನಿಫ್ಟಿಯಲ್ಲಿ ಬಜಾಜ್ ಫಿನ್‌ಸರ್ವ್, ಗ್ರಾಸಿಮ್ ಇಂಡಸ್ಟ್ರೀಸ್, ಹೀರೋ ಮೋಟೋಕಾರ್ಪ್, ಬಜಾಜ್ ಫೈನಾನ್ಸ್ ಮತ್ತು ಐಷರ್ ಮೋಟಾರ್ಸ್ ಸೇರಿದಂತೆ ಅತಿ ಹೆಚ್ಚು ಲಾಭ ಗಳಿಸಿದರೆ, ಶ್ರೀರಾಮ್ ಫೈನಾನ್ಸ್, ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ನಷ್ಟ ಅನುಭವಿಸಿದವು.

ಆಟೊ, ಹೆಲ್ತ್‌ಕೇರ್, ಮೆಟಲ್, ಪವರ್, ಕ್ಯಾಪಿಟಲ್ ಗೂಡ್ಸ್ ತಲಾ ಶೇ 1 ರಷ್ಟು ಏರಿಕೆಯೊಂದಿಗೆ ಎಲ್ಲಾ ವಲಯದ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡರೆ, ತೈಲ ಮತ್ತು ಅನಿಲ, ಮಾಹಿತಿ ತಂತ್ರಜ್ಞಾನ, ಬ್ಯಾಂಕ್, ರಿಯಾಲ್ಟಿ, ಎಫ್‌ಎಂಸಿಜಿ ತಲಾ ಶೇ 0.5 ರಷ್ಟು ಲಾಭ ಗಳಿಸಿದವು.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ 0.6 ರಷ್ಟು ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ 0.3 ರಷ್ಟು ಏರಿಕೆಯಾಗಿದೆ.

ಇಂದು ಡಾಲರ್‌ ಎದುರು ರೂಪಾಯಿ ಮೌಲ್ಯವು 83.40 ಕ್ಕೆ ತಲುಪಿದೆ.

IPL_Entry_Point