ಕನ್ನಡ ಸುದ್ದಿ  /  Nation And-world  /  Business News Nifty At 22350 Sensex Down 195 Pts It Fmcg Drag Autos Gain March 5th Share Market Closing Bell Rst

Closing Bell: ಐಟಿ, ಎಫ್‌ಎಂಸಿಜಿ ಷೇರುಗಳ ಕುಸಿತ, ಹಿನ್ನಡೆ ಕಂಡ ಸೆನ್ಸೆಕ್ಸ್‌ ನಿಫ್ಟಿ; ಇಂದು ಲಾಭ-ನಷ್ಟ ಗಳಿಸಿದ ಷೇರುಗಳ ವಿವರ

ಮಾರ್ಚ್‌ ತಿಂಗಳ ಆರಂಭದಲ್ಲಿ ಲಾಭ ಗಳಿಕೆಯ ಸೂಚನೆ ನೀಡಿದ್ದ ಭಾರತದ ಷೇರು ಮಾರುಕಟ್ಟೆ ಈ ವಾರ ನೀರಸವಾಗಿದೆ. ಇಂದು (ಮಾ. 5) ದಿನದ ಆರಂಭದಲ್ಲೇ ಮಂದ ವಹಿವಾಟಿಗೆ ಸಜ್ಜಾಗಿತ್ತು ಷೇರುಪೇಟೆ. ಮುಕ್ತಾಯದ ವೇಳೆಗೆ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಎರಡೂ ಇಳಿಕೆಯಾಗಿವೆ.

ಐಟಿ, ಎಫ್‌ಎಂಸಿಜಿ ಷೇರುಗಳ ಕುಸಿತ, ಹಿನ್ನಡೆ ಕಂಡ ಸೆನ್ಸೆಕ್ಸ್‌ ನಿಫ್ಟಿ
ಐಟಿ, ಎಫ್‌ಎಂಸಿಜಿ ಷೇರುಗಳ ಕುಸಿತ, ಹಿನ್ನಡೆ ಕಂಡ ಸೆನ್ಸೆಕ್ಸ್‌ ನಿಫ್ಟಿ (MINT_PRINT)

ಬೆಂಗಳೂರು: ಭಾರತದ ಷೇರು ಹೂಡಿಕೆದಾರರಿಗೆ ಇಂದು ನಿರಾಸೆ ಕಾಡುವುದು ಖಚಿತ. ಮಾರುಕಟ್ಟೆ ಆರಂಭದಲ್ಲೇ ಮಂದ ವಹಿವಾಟಿನ ಸೂಚನೆ ಸಿಕ್ಕಿದ್ದರೂ ನಂತರದಲ್ಲಿ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ದಿನವಿಡೀ ಚಂಚಲ ವಹಿವಾಟಿಗೆ ಸಾಕ್ಷಿಯಾದ ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಇಳಿಕೆ ಕಂಡಿವೆ.

ಇಂದು (ಮಾ.5) ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ನಿಫ್ಟಿಯು 22,350ಕ್ಕೆ ತಲುಪುವ ಮೂಲಕ ದಿನದ ವಹಿವಾಟು ಮುಗಿಸಿದೆ. ಕಳೆದ ವಾರ ನಿಫ್ಟಿ ದಾಖಲೆಯ ಏರಿಕೆ ಕಂಡಿದ್ದನ್ನು ಈ ವೇಳೆ ಗಮನಿಸಬಹುದು.

ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 195.16 ಅಂಕ ಅಥವಾ ಶೇ 0.26 ರಷ್ಟು ಕುಸಿದು 73,677.13 ಕ್ಕೆ ತಲುಪಿದೆ ಮತ್ತು ನಿಫ್ಟಿ 49.30 ಅಂಕ0 ಅಥವಾ ಶೇ 0.22 ರಷ್ಟು ಕುಸಿದು 22,356.30 ಕ್ಕೆ ತಲುಪಿದೆ. ಇಂದು ಸುಮಾರು 1,080 ಷೇರುಗಳು ಲಾಭ ಗಳಿಸಿದರೆ, 2,232 ಷೇರುಗಳು ನಷ್ಟ ಕಂಡಿವೆ. 59 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ನಿಫ್ಟಿಯಲ್ಲಿ ಟಾಟಾ ಮೋಟಾರ್ಸ್, ಭಾರ್ತಿ ಏರ್‌ಟೆಲ್, ಬಜಾಜ್ ಆಟೊ, ಎಸ್‌ಬಿಐ ಮತ್ತು ಒಎನ್‌ಜಿಸಿ ಅತ್ಯಧಿಕ ಲಾಭ ಗಳಿಸಿದ ಷೇರುಗಳಾಗಿವೆ. ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ನೆಸ್ಲೆ ಇಂಡಿಯಾ, ಇನ್ಫೋಸಿಸ್ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ನಷ್ಟವನ್ನು ಅನುಭವಿಸಿದವು.

ವಲಯವಾರು ಷೇರುಗಳಲ್ಲಿ ಮಿಶ್ರ ಪ್ರವೃತ್ತಿ ಕಾಣಬಹುದಾಗಿದೆ. ಆಟೊ ಶೇ 1.3, ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಶೇ 2.5 ಮತ್ತು ತೈಲ ಮತ್ತು ಅನಿಲ, ವಿದ್ಯುತ್ ಮತ್ತು ರಿಯಾಲ್ಟಿ ತಲಾ ಶೇ 0.5 ಏರಿಕೆಯಾಗಿದೆ. ಆದರೆ ಐಟಿ ಮತ್ತು ಎಫ್‌ಎಂಸಿಜಿ ಸೂಚ್ಯಂಕಗಳು ತಲಾ ಶೇ 1 ರಷ್ಟು ಕಡಿಮೆಯಾಗಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಫ್ಲಾಟ್ ಆಗಿ ಕೊನೆಗೊಂಡರೆ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ 0.6 ರಷ್ಟು ಕುಸಿದಿದೆ.

ಇಂದು ಡಾಲರ್‌ ಎದುರು ರೂಪಾಯಿ ಮೌಲ್ಯವು 82.89 ಕ್ಕೆ ತಲುಪಿದೆ.

ಇಂದು ಆಟೊ ಷೇರುಗಳು ಉತ್ತಮ ಪ್ರದರ್ಶನ ತೋರಿದ್ದರೆ, ಐಟಿ ಹಾಗೂ ಮಾಧ್ಯಮ ಷೇರುಗಳು ಹಿನ್ನಡೆ ಅನುಭವಿಸಿವೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ಬ್ಯಾಂಕಿಂಗ್‌ ಷೇರುಗಳು ಮಾರುಕಟ್ಟೆ ಚೇತರಿಕೆ ಸಹಾಯ ಮಾಡಿದ್ದವು. ಆದರೂ ಇಂದು ಮಾರುಕಟ್ಟೆ ನೀರಸ ಅಂತ್ಯ ಕಂಡಿದೆ.