NPS investment: ನಿವೃತ್ತ ಜೀವನದ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲವಾಗಿ ನಿಲ್ಲುವ ಎನ್‌ಪಿಎಸ್, ರಾಷ್ಟ್ರೀಯ ಪಿಂಚಣಿ ಯೋಜನೆಯ ಕಿರುನೋಟ
NPS investment: ನಿವೃತ್ತ ಜೀವನದ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲವಾಗಿ ನಿಲ್ಲುವ ಎನ್‌ಪಿಎಸ್ ಸುರಕ್ಷಿತ ಹೂಡಿಕೆಯ ಯೋಜನೆಯಾಗಿದೆ. ನಿವೃತ್ತ ಬದುಕನ್ನು ಹಗುರಾಗಿಸುವಂತೆ ಆರ್ಥಿಕವಾಗಿ ಸಬಲರಾಗಲು ಇದರಲ್ಲಿ ಹೂಡಿಕೆ ಮಾಡಿದರೆ ಅನುಕೂಲ ಹೆಚ್ಚು. ಹಾಗಾಗಿ, ಈ ರಾಷ್ಟ್ರೀಯ ಪಿಂಚಣಿ ಯೋಜನೆಯ ಕಿರುನೋಟ ಇಲ್ಲಿ ನೀಡಲಾಗಿದೆ.
ನವದೆಹಲಿ/ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಅಥವಾ ಎನ್‌ಪಿಎಸ್ (NPS) ಶುರುವಾಗಿ ಹದಿನೈದು ವರ್ಷ ಆಯಿತು. 2004ರಲ್ಲಿ ಶುರುವಾದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System) ಈ ಯೋಜನೆಯನ್ನು ಪರಿಚಯಿಸಿದ್ದು, ವ್ಯಕ್ತಿಗಳಿಗೆ ದೊಡ್ಡ ಮೊತ್ತದ ನಿವೃತ್ತಿ ನಿಧಿಯನ್ನು ನಿರ್ಮಿಸಿ ಕೊಡುವ ಗುರಿಯನ್ನು ಹೊಂದಿದೆ. ಇದು ನಿವೃತ್ತಿ ನಿಧಿಗೆ ಖಚಿತ ಹೂಡಿಕೆ ಮಾರ್ಗವಾಗಿ ಗುರುತಿಸಿಕೊಂಡಿದೆ.
ಈ ಪಿಂಚಣಿ ನಿಧಿಯಿಂದ ನಿವೃತ್ತ ಜೀವನ ನಡೆಸುವಾಗ ಪಿಂಚಣಿಯಾಗಿ ಪಡೆಯುವುದಕ್ಕೆ ಈ ಯೋಜನೆ ಸಹಕಾರಿ. ಅಷ್ಟೇ ಅಲ್ಲ, ನಿವೃತ್ತ ಬದುಕಿನಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಹಾಗೆಯೇ ಉಳಿಸಿಕೊಡುತ್ತದೆ. ಅದೇ ರೀತಿ, ಆದಾಯ ತೆರಿಗೆ ಉಳಿತಾಯದ ಸಾಧನವಾಗಿ ಕೂಡ ಇದು ಕಾರ್ಯನಿರ್ವಹಿಸುತ್ತದೆ. ಆರಂಭಿಕ ಹಂತದಲ್ಲಿ ಇದನ್ನು ಸರ್ಕಾರಿ ಉದ್ಯೋಗಿಗಳಿಗೆ ಸೀಮಿತವಾಗಿ ಪರಿಚಯಿಸಲಾಯಿತು. ಅದಾಗಿ ಕಾಲಾನುಕ್ರಮದಲ್ಲಿ ಸ್ವಯಂ ಉದ್ಯೋಗಿ ವೃತ್ತಿಪರರು ಮತ್ತು ಅಸಂಘಟಿತ ವಲಯದಲ್ಲಿರುವವರು ಸೇರಿ ಎಲ್ಲಾ ಭಾರತೀಯ ನಾಗರಿಕರಿಗೆ 2009ರ ಮೇ 1 ರಿಂದ ಸ್ವಯಂಪ್ರೇರಿತ ಆಧಾರದ ಮೇಲೆ ವಿಸ್ತರಿಸಲಾಯಿತು.
ವೆಚ್ಚ-ಪರಿಣಾಮಕಾರಿ ನಿವೃತ್ತಿ ಉಳಿತಾಯ ಯೋಜನೆ ಎನ್‌ಪಿಎಸ್, ತೆರಿಗೆ ವಿನಾಯಿತಿಯೂ ಲಭ್ಯ
ಎನ್‌ಪಿಎಸ್ ಒಂದು ವೆಚ್ಚ-ಪರಿಣಾಮಕಾರಿ ನಿವೃತ್ತಿ ಉಳಿತಾಯ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ನಿಯತ ಆದಾಯದ ಹರಿವು ಸ್ಥಗಿತಗೊಂಡಾಗ ನಿವೃತ್ತ ಬದುಕಿನ ಸುವರ್ಣ ವರ್ಷಗಳಲ್ಲಿ ಹಣಕಾಸಿನ ಬೆಂಬಲವನ್ನು ಈ ಯೋಜನೆ ಒದಗಿಸುತ್ತದೆ. ಎನ್‌ಪಿಎಸ್‌ನಲ್ಲಿ ನಿಯತವಾಗಿ ಹೂಡಿಕೆ ಮಾಡುವುದರಿಂದ ಅದು ನಿವೃತ್ತಿಗಾಗಿ ಗಣನೀಯ ಮೊತ್ತವಾಗಿ ಸಂಗ್ರಹವಾಗುತ್ತದೆ.
ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಮಾಡಿದ ಹೂಡಿಕೆ ಆದಾಯ ತೆರಿಗೆ ಸೆಕ್ಷನ್ 80 ಸಿ ಪ್ರಕಾರ ತೆರಿಗೆ ವಿನಾಯಿತಿ ಹೊಂದಿದೆ. ಈ ಸೆಕ್ಷನ್ ಪ್ರಕಾರ, ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಹೆಚ್ಚುವರಿಯಾಗಿ, ಸೆಕ್ಷನ್ 80 CCD (1B)ಯಲ್ಲೂ 50,000 ರೂಪಾಯಿಯಷ್ಟು ಹೆಚ್ಚುವರಿ ತೆರಿಗೆ ವಿನಾಯಿತಿ ಲಭ್ಯವಿದೆ. ಕಾರ್ಪೊರೇಟ್ ಎನ್‌ಪಿಎಸ್ ಹೊಂದಿದ್ದರೆ, ನಿಮ್ಮ ಉದ್ಯೋಗದಾತರು ಎನ್‌ಪಿಎಸ್‌ಗೆ ಹೂಡಿಕೆ ಮಾಡಿದ ಮೂಲ ವೇತನದ 10 ಪ್ರತಿಶತವು ಸೆಕ್ಷನ್ 80CCD (2) ಪ್ರಕಾರ ವಿನಾಯಿತಿಗೆ ಅರ್ಹವಾಗಿರುತ್ತದೆ. ಎನ್‌ಪಿಎಸ್ ಹೂಡಿಕೆಗಳಿಗೆ ವಿಶೇಷ ತೆರಿಗೆ ವಿನಾಯಿತಿಗಳು ಮತ್ತು ಮೆಚ್ಯೂರಿಟಿ ಕಾರ್ಪಸ್‌ನ ಶೇಕಡಾ 60 ರಷ್ಟು ತೆರಿಗೆ-ಮುಕ್ತವಾಗಿದೆ.
ಆನ್‌ಲೈನ್ ಮೂಲಕವೇ ತೆರೆಯಬಹುದು ಎನ್‌ಪಿಎಸ್ ಖಾತೆ
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಎನ್‌ಪಿಎಸ್ ಖಾತೆಯನ್ನು ತೆರೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ವ್ಯಕ್ತಿಗಳು ಅಗತ್ಯ ದಾಖಲೆಗಳನ್ನು ಹೊಂದಿದ್ದರೆ ನಿಮಿಷಗಳಲ್ಲಿ ಆನ್‌ಲೈನ್ ಮೂಲಕವೇ ಖಾತೆ ತೆರೆಯಬಹುದು.
ದೀರ್ಘಾವಧಿ ಹೂಡಿಕೆಗಳ ಪೈಕಿ ಅತ್ಯಂತ ಸುರಕ್ಷಿತ ಮತ್ತು ಸಾಮಾನ್ಯ ಹೂಡಿಕೆಗಿಂತ ಹೆಚ್ಚು ಪ್ರಯೋಜನ ಒದಗಿಸುವ ಯೋಜನೆ ಇದು. ಇದರಲ್ಲಿ ನಿರ್ವಹಣಾ ವೆಚ್ಚ ಕಡಿಮೆ. ಸಾಮಾನ್ಯ ಡೆಟ್ ಮ್ಯೂಚುವಲ್ ಫಂಡ್ ಮತ್ತು ಇತರೆ ಖಚಿತ ಬಡ್ಡಿದರದ ಹೂಡಿಕೆಗೆ ನಿರ್ವಹಣಾ ವೆಚ್ಚವಾಗಿ ಶೇಕಡ 2 ರಿಂದ 3 ಹೋಗಿಬಿಡುತ್ತದೆ. ಇಲ್ಲಿ ಹಾಗಿಲ್ಲ ಎಂಬುದೇ ಎನ್‌ಪಿಎಸ್‌ನ ವಿಶೇಷ ಅಂಶ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್‌ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಲೈಫ್‌ಸ್ಟೈಲ್ ವಿಭಾಗ ನೋಡಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)