Personal Finance: ಮಕ್ಕಳು ದುಂದುವೆಚ್ಚ ಮಾಡ್ತಾರ? ಮಕ್ಕಳಿಗೆ ಹಣದ ಮೌಲ್ಯ ಕಲಿಸಲು ಇಲ್ಲಿದೆ ಉಪಾಯ, ಹೆತ್ತವರು ಓದಲೇಬೇಕಾದ ಮಾಹಿತಿ
Kids money save: ಮಕ್ಕಳಿಗೆ ಬಾಲ್ಯದಲ್ಲಿಯೇ ಹಣದ ಮೌಲ್ಯ ಕಲಿಸಬೇಕು. ಜತೆಗೆ ಹಣದ ಬಳಕೆ ಹೇಗೆ, ಬ್ಯಾಂಕ್ ವ್ಯವಹಾರ ಹೇಗೆ, ಉಳಿತಾಯ ಹೇಗೆ ಇತ್ಯಾದಿಗಳನ್ನು ಕಲಿಸಬೇಕು. ಮಕ್ಕಳಲ್ಲಿ ಹಣಕಾಸು ಸಾಕ್ಷರತೆ ಉಂಟು ಮಾಡಲು ನೆರವಾಗುವ ಸಲಹೆಗಳು ಇಲ್ಲಿವೆ.
ಈಗ ಮಕ್ಕಳು ಹಣ ಹೆಚ್ಚು ಖರ್ಚು ಮಾಡುತ್ತಾರೆ, ಹಣದ ಮೌಲ್ಯವೇ ಗೊತ್ತಿಲ್ಲ ಎನ್ನುವುದು ಹೆತ್ತವರ ದೂರು. ಇದೇ ಸಮಯದಲ್ಲಿ ಹೆತ್ತವರೂ ಮಕ್ಕಳ ತಾಳಕ್ಕೆ ತಕ್ಕಂತೆ ಕುಣಿಯುವುದುಂಟು. ಕೇಳಿದ ಆಟಿಕೆಗಳನ್ನೆಲ್ಲ ತೆಗೆದುಕೊಡುವುದು, ಸೈಕಲ್, ಬೈಕ್, ಮೊಬೈಲ್ ಫೋನ್ ಇತ್ಯಾದಿ ಮಕ್ಕಳ ಬೇಡಿಕೆಗಳನ್ನು ಹೆಚ್ಚು ಯೋಚಿಸದೆ ಪೂರೈಸುತ್ತಾರೆ. ಐಫೋನ್ ಬೇಕೆಂದು ಹಠ ಹಿಡಿದರೆ ಕೊಟ್ಟುಬಿಡುತ್ತಾರೆ. ಮಕ್ಕಳಿಗೆ ಕೇಳಿದ್ದೆಲ್ಲವೂ ತಕ್ಷಣ ಸಿಕ್ಕಿಬಿಟ್ಟರೆ ಹಣದ ಮೌಲ್ಯ ತಿಳಿಯುವುದು ಹೇಗೆ? ಮೊದಲನೆಯದಾಗಿ ಮಕ್ಕಳು ಕೇಳಿದ್ದೆಲ್ಲವನ್ನು ಕೊಡಬೇಡಿ. ಅವಶ್ಯಕತೆ ಇರುವುದನ್ನು ಮಾತ್ರ ತೆಗೆದುಕೊಡಿ. ಮಕ್ಕಳು ಅತ್ತರೆ ಅಳಲಿ. ಎಷ್ಟು ಹೊತ್ತು ಅಳಬಹುದು, ಅರ್ಧಗಂಟೆ, ಒಂದು ಗಂಟೆ, ಅಳಲಿ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಇಂದಿನ ಪರ್ಸನಲ್ ಫೈನಾನ್ಸ್ ಮಾರ್ಗದರ್ಶಿಯಲ್ಲಿ ಮಕ್ಕಳಿಗೆ ಹಣದ ಮೌಲ್ಯ ತಿಳಿಸಿಕೊಡುವುದು ಹೇಗೆಂದು ತಿಳಿದುಕೊಳ್ಳೋಣ.
ಮಕ್ಕಳಿಗೆ ಹಣದ ಲೆಕ್ಕಾಚಾರ ಕಲಿಸಿಕೊಡಿ
ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ ಬಳಿಕ, ಗಣಿತದ ಮೂಲಭೂತ ಅಂಶಗಳನ್ನು ಕಲಿಯಲು ಆರಂಭಿಸಿದಾಗ ಅವರಿಗೆ ಹಣದ ಕುರಿತು ತಿಳಿಸಿಕೊಡಿ. ಮನೆಯಲ್ಲಿ ಹಣದ ಆಟ ಆಡಿ. ಕಂಪ್ಯೂಟರ್‌ನಲ್ಲಿ ಇರುವ ಹಣದ ಗೇಮ್ಸ್‌ಗಳಲ್ಲಿ ಆಡಲಿ. ವಿವಿಧ ಕಾಯಿನ್‌ಗಳನ್ನು ಗುರುತಿಸಲು ತಿಳಿಸಿ. ವಿವಿಧ ನೋಟುಗಳನ್ನು ತೋರಿಸಿ ಗುರುತಿಸಲು ಕಲಿಸಿ.
ಮಕ್ಕಳಿಗೆ ಪಿಗ್ಗಿ ಬ್ಯಾಂಕ್ ಕೊಡಿ
ಪಿಗ್ಗಿ ಬ್ಯಾಂಕ್ ನೀಡಿ ಹಣ ಉಳಿತಾಯದ ಮಹತ್ವ ಕಲಿಸಲು ಈಗ ಬಹುತೇಕರು ಪ್ರಯತ್ನಿಸುತ್ತಾರೆ. ಮಕ್ಕಳಿಗೆ ಯಾರಾದರೂ ಹಣ ಕೊಟ್ಟರೆ ಅದರಲ್ಲಿ ಹಾಕಿಡುವಂತೆ ಹೇಳಲಾಗುತ್ತದೆ. ಅಪ್ಪ ಅಮ್ಮ ಅಜ್ಜಿ ಹೀಗೆ ಯಾರಾದರೂ ಹಣ ನೀಡಿದರೆ ಅದರಲ್ಲಿ ಹಾಕಲು ಪ್ರೋತ್ಸಾಹಿಸಿ. ಖರ್ಚು ಮಾಡಬೇಡ, ಅದರಲ್ಲಿ ದೊಡ್ಡ ಮೊತ್ತವಾಗಲಿ ಎಂದು ತಿಳಿಸಿ. ವರ್ಷದಲ್ಲಿ ಒಮ್ಮೆ ನಿರ್ದಿಷ್ಟ ದಿನದಲ್ಲಿ ಅದನ್ನು ಓಪನ್ ಮಾಡಲು ತಿಳಿಸಿದರೆ ಆಯ್ತು. ಆ ಹಣವನ್ನು ಮಕ್ಕಳ ಅವಶ್ಯಕತೆಗೆ ಖರ್ಚು ಮಾಡಬಹುದು. ಅಥವಾ ಬ್ಯಾಂಕ್‌ನಲ್ಲಿ ಮಕ್ಕಳ ಹೆಸರಲ್ಲಿ ಇಡಬಹುದು.
ಮಕ್ಕಳಿಗೆ ಬ್ಯಾಂಕ್ ಪರಿಚಯ ಮಾಡಿ
ನಿಮ್ಮ ಮಕ್ಕಳನ್ನು ಬ್ಯಾಂಕ್‌ಗೆ ಕರೆದುಕೊಂಡು ಹೋಗಿ. ಮಕ್ಕಳ ಹೆಸರಲ್ಲಿ ಬ್ಯಾಂಕ್ ಖಾತೆ, ಪೋಸ್ಟ್ ಆಫೀಸ್ ಖಾತೆ ಇತ್ಯಾದಿಗಳು ಇರಲಿ. ಮಕ್ಕಲೇ ಬ್ಯಾಂಕ್ ಟೆಲ್ಲರ್ ಜತೆಗೆ ಮಾತನಾಡಲಿ. ಮಕ್ಕಳಿಗೆ ಬ್ಯಾಂಕ್‌ನಲ್ಲಿ ಹೇಗಿರಬೇಕು? ಏನು ಮಾಡಬೇಕು ಇತ್ಯಾದಿಗಳನ್ನು ತಿಳಿಸಿಕೊಡಿ. ಇದೇ ರೀತಿ ಮೊಬೈಲ್‌ನಲ್ಲಿರುವ ವ್ಯಾಲೆಟ್‌ಗಳು, ಆನ್‌ಲೈನ್ ಬ್ಯಾಂಕ್ ಕುರಿತು ಎಚ್ಚರಿಕೆಯಿಂದ ಇರುವಂತೆ ತಿಳಿಸಿ. ಮಕ್ಕಳು ಆನ್‌ಲೈನ್ ಗೇಮ್ಸ್, ಇತರೆ ವಿಷಯಗಳಿಗೆ ಬಳಸದಂತೆ ತಿಳಿಸಿ. ಈ ರೀತಿ ಖರೀದಿಸಲು ಹೋದರೆ ಎಲ್ಲಾದರೂ ಸ್ಪ್ಮಾಮ್ ಲಿಂಕ್‌ಗಳಿಂದ ಬ್ಯಾಂಕ್ ಖಾತೆಯಲ್ಲಿರುವ ಹಣವೆಲ್ಲ ಹೋಗಬಹುದು ಎಂದು ತಿಳಿಸಿ.
ಉಳಿತಾಯದ ಹಣದ ವಿನಿಯೋಗ ಹೇಗಿರಬೇಕು ಎಂದು ಕಲಿಸಿ
ಮಕ್ಕಳಿಗೆ ಭವಿಷ್ಯದ ಉದ್ದೇಶಕ್ಕೆ ಹಣ ಉಳಿತಾಯ ಮಾಡಬೇಕೆಂದು ಹೇಳಿಕೊಡುವುದು ಮುಖ್ಯ. ಆ ಹಣವನ್ನು ಹೇಗೆ ವಿನಿಯೋಗ ಮಾಡಬೇಕು ಎಂದು ಹೇಳಿಕೊಡುವುದು ಕೂಡ ಮಹತ್ವವಾದದ್ದು. ಮಕ್ಕಳು ಭವಿಷ್ಯದಲ್ಲಿ ಏನಾದರೂ ದೊಡ್ಡ ವಸ್ತು ಖರೀದಿಗೆ ಈ ಹಣ ಬಳಕೆಯಾಗುವಂತೆ ತಿಳಿಸಿ. ಮಕ್ಕಳ ಅಭಿರುಚಿಗೆ ತಕ್ಕಂತೆ ಒಳ್ಳೆಯ ಡಿಎಸ್‌ಎಲ್‌ಆರ್ ಕ್ಯಾಮೆರಾ, ಸ್ಟುಡೆಂಟ್ ಲ್ಯಾಪ್‌ಟಾಪ್ ಇತ್ಯಾದಿಗಳಿಗೆ ಈ ಹಣ ಬಳಕೆಯಾಗಲಿ.
ಮಕ್ಕಳೇ ಅವರ ಹಣದಲ್ಲಿ ಶಾಪಿಂಗ್ ಮಾಡಿ
ಮಕ್ಕಳು ಹೆತ್ತವರ ಹಣವೆಂದಾದರೆ ಬೇಕಾಬಿಟ್ಟಿ ಖರ್ಚು ಮಾಡಬಹುದು. ಆದರೆ, ಅವರ ಸೇವಿಂಗ್ಸ್ ಹಣವನ್ನು ಹಾಗೆ ಖರ್ಚು ಮಾಡಲಾರರು. ಅವರಿಗೆ ಅವರ ಹಣ ಖಾಲಿಯಾದಗ ಟೆನ್ಷನ್ ಆಗುತ್ತದೆ. ಹೀಗಾಗಿ, ಮಕ್ಕಳಿಗೆ ಯಾವಾಗಾದರೂ ಐನೂರು ಕೊಟ್ಟು ಶಾಪಿಂಗ್ ಮಾಡಲು ತಿಳಿಸಿ. ಶಾಪಿಂಗ್ ಮಾಡುವ ಮೊದಲು ಯಾವುದೆಲ್ಲ ಬೇಕು, ಬೇಡ, ಯಾವುದಕ್ಕೆ ಎಷ್ಟು ಹಣ ಇರುತ್ತದೆ ಇತ್ಯಾದಿಗಳನ್ನು ತಿಳಿಸಿ.
ಮಕ್ಕಳಿಗೆ ನಗದು ನೀಡಿ, ಕಾರ್ಡ್ ನೀಡಬೇಡಿ
ಮಕ್ಕಳಿಗೆ ಏನಾದರೂ ಹಣ ನೀಡಬೇಕು, ಖರ್ಚು ಮಾಡಬೇಕು ಎಂದಾದಗ ಅವರಿಗೆ ನಗದು ನೀಡಿ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ನೀಡಿದರೆ ಅವರಿಗೆ ಹಣದ ಮೌಲ್ಯ ಅರ್ಥವಾಗದು.
ಕೊನೆಯಾದಾಗಿ ಮಕ್ಕಳ ವಯಸ್ಸಿಗೆ ತಕ್ಕಂತೆ ಹಣ ಖರ್ಚು ಮಾಡಿ. ಎಲ್‌ಕೆಜಿ ಮಗುವಿಗೆ ಹತ್ತಿಪ್ಪತ್ತು ಸಾವಿರ ರೂಪಾಯಿಯ ಆಟಿಕೆ ಅನಗತ್ಯ. ಮಕ್ಕಳು ಬೆಳೆದಂತೆ ಅವರ ಅವಶ್ಯಕತೆಗೆ ತಕ್ಕಂತೆ ಹಣ ನೀಡಿ. ಹೆಚ್ಚು ಹಣ ನೀಡಬೇಡಿ. ನೀವು ಹೆಚ್ಚು ಹಣ ನೀಡಿದರೆ ದುಂದುವೆಚ್ಚ ಮಾಡಲು ಕಲಿಯುತ್ತಾರೆ. ಇದೇ ಸಮಯದಲ್ಲಿ ಮಕ್ಕಳಲ್ಲಿ ಏನಾದರೂ ಸಣ್ಣಪುಟ್ಟ ಕೆಲಸ ಮಾಡಿಸಿ ಅವರಿಗೆ ಗಳಿಕೆಯ ರುಚಿ ತೋರಿಸಿ. ಅಂದರೆ, ಮನೆಯಲ್ಲಿ ಪ್ರತಿನಿತ್ಯ ಗಾರ್ಡನ್‌ಗೆ ನೀರು ಹಾಕಿದರೆ ತಿಂಗಳ ಅಂತ್ಯದಲ್ಲಿ ಇಷ್ಟು ಹಣ (ಹೆಚ್ಚು ಬೇಡ) ನೀಡುವುದಾಗಿ ತಿಳಿಸಿ. ಆ ಹಣವನ್ನೂ ಅವರು ಉಳಿತಾಯ ಮಾಡಲಿ.