ರೆಪೊ ದರವನ್ನು ಸ್ಥಿರವಾಗಿಟ್ಟ ಭಾರತೀಯ ರಿಸರ್ವ್ ಬ್ಯಾಂಕ್, ಗೃಹ ಸಾಲ, ಇಎಂಐ ಮೇಲೆ ಪರಿಣಾಮಗಳೇನು
Repo Rate; ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ 50ನೇ ಪರಾಮರ್ಶೆ ಸಭೆಯಲ್ಲಿ ಸತತ ಒಂಬತ್ತನೇ ಬಾರಿಗೆ ರೆಪೊ ದರವನ್ನು ಶೇಕಡಾ 6.5 ರಲ್ಲಿಯೇ ಸ್ಥಿರವಾಗಿ ಇರಿಸಿದೆ. ಇದರಿಂದಾಗಿ ಗೃಹ ಸಾಲ, ಇಎಂಐ ಮೇಲೆ ಪರಿಣಾಮಗಳೇನು ಎಂಬುದರ ವಿವರ ಇಲ್ಲಿದೆ.
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಪರಾಮರ್ಶೆ ಸಭೆಯಲ್ಲಿ ಸತತ ಒಂಬತ್ತನೇ ಬಾರಿಗೆ ರೆಪೊ ದರವನ್ನು ಶೇಕಡಾ 6.5 ರಲ್ಲಿಯೇ ಸ್ಥಿರವಾಗಿ ಇರಿಸಿದೆ. ಬಡ್ಡಿದರ ವಿಚಾರದಲ್ಲಿ ಆರ್‌ಬಿಐ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿರುವ ಕಾರಣದಿಂದಾಗಿ, ಗೃಹ ಸಾಲದ ಬಡ್ಡಿ ದರ ಮತ್ತು ಸಮಾನ ಮಾಸಿಕ ಕಂತುಗಳು (ಇಎಂಐ) ಬದಲಾಗದೆ ಹಾಗೆಯೇ ಉಳಿಯಲಿವೆ.
ಬಹುತೇಕ ಬ್ಯಾಂಕುಗಳು 2019ರ ಅಕ್ಟೋಬರ್ 1 ರಿಂದ ಫ್ಲೋಟಿಂಗ್ ಬಡ್ಡಿದರ ಚಿಲ್ಲರೆ ಸಾಲಗಳನ್ನು ರೆಪೊ ದರಕ್ಕೆ ಜೋಡಿಸಿವೆ. ಪರಿಣಾಮ, ರೆಪೊ ದರ ಬದಲಾವಣೆ ಆದಾಗೆಲ್ಲ ಈ ಸಾಲಗಳ ಮೇಲಿನ ಬಡ್ಡಿದರವೂ ಪರಿಷ್ಕರಣೆಯಾಗುತ್ತವೆ. ಸರಳವಾಗಿ ಹೇಳಬೇಕು ಎಂದರೆ ರೆಪೋ ದರವು ಆ ಸಾಲಗಳ ಮೇಲಿನ ಬಡ್ಡಿ ದರಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ.
ಹಣಕಾಸು ನೀತಿ ಸಮಿತಿ ಶುರುವಾದ ಅಂದಿನಿಂದ ಅಂದರೆ 2016ರ ಸೆಪ್ಟೆಂಬರ್ ತಿಂಗಳಿಂದ ಈ ವರೆಗೆ 49 ಸಭೆಗಳಾಗಿತ್ತು. ಈಗ ನಡೆದಿರುವುದು 50ನೇ ಸಭೆ. ಇನ್ನು ಹೊಂದಾಣಿಕೆಯ ಹಣದುಬ್ಬರ ಗುರಿಯ (ಎಫ್‌ಐಟಿ) ಫ್ರೇಮ್‌ವರ್ಕ್ ತನ್ನ ಕಾರ್ಯಚಟುವಟಿಕೆಯ ಎಂಟು ವರ್ಷಗಳ ಅವಧಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಿದೆ.
ಗೃಹ ಸಾಲದ ಬಡ್ಡಿದರ ಪರಿಷ್ಕರಣೆ
ಬ್ಯಾಂಕುಗಳು ಈ ವರ್ಷ ಗೃಹ ಸಾಲದ ದರಗಳನ್ನು ಬದಲಾಯಿಸಿವೆಯೇ? ಎಂಬುದನ್ನು ಗಮನಿಸುವುದಾದರೆ, ಈ ವರ್ಷ, ರೆಪೋ ದರಗಳು ಸ್ಥಿರವಾಗಿದ್ದರೂ ಎಚ್‌ಡಿಎಫ್‌ಸಿ ಬ್ಯಾಂಕ್ ಹೊಸ ಸಾಲಗಾರರಿಗೆ ಗೃಹ ಸಾಲದ ದರಗಳನ್ನು 40 ಮೂಲಾಂಶಗಳಷ್ಟು ಹೆಚ್ಚಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ, 50 ಲಕ್ಷ ರೂಪಾಯಿ ಗೃಹ ಸಾಲದ ಮೇಲಿನ ಕಡಿಮೆ ಬಡ್ಡಿ ದರವು ಜನವರಿಯಲ್ಲಿ ಶೇಕಡಾ 8.35 ರಷ್ಟಿತ್ತು. ಪ್ರಸ್ತುತ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗೃಹ ಸಾಲದ ಕಡಿಮೆ ಬಡ್ಡಿ ದರವು ಶೇಕಡಾ 8.75 ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ಎರಡೂ ತಮ್ಮ ಹೊಸ ಗೃಹ ಸಾಲದ ಬಡ್ಡಿ ದರಗಳನ್ನು 10 ಮೂಲಾಂಶ ಹೆಚ್ಚಿಸಿವೆ. ಏಪ್ರಿಲ್‌ನಲ್ಲಿ, ಎಸ್‌ಬಿಐ ಮತ್ತು ಬ್ಯಾಂಕ್ ಆಫ್ ಇಂಡಿಯಾದಲ್ಲಿ 50 ಲಕ್ಷ ರೂಪಾಯಿ ಸಾಲಕ್ಕೆ ಕಡಿಮೆ ಬಡ್ಡಿ ದರಗಳು ಕ್ರಮವಾಗಿ 8.40 ಶೇಕಡಾ ಮತ್ತು 8.30 ಶೇಕಡಾ ಇದೆ. ಈ ವರ್ಷದ ಮೇ ತಿಂಗಳಲ್ಲಿ, ಈ ದರಗಳು ಎಸ್‌ಬಿಐನಲ್ಲಿ ಶೇಕಡಾ 8.50 ಮತ್ತು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇಕಡಾ 8.40 ಕ್ಕೆ ಏರಿಕೆ ಮಾಡಿದ್ದವು.
ದೇಶದ ಬೆಳವಣಿಗೆ ಪ್ರಬಲ; ಆರ್‌ಬಿಐ ವಿಶ್ವಾಸ
ಆಹಾರ ಹಣದುಬ್ಬರ ಪ್ರಮಾಣ: ಬೆಳವಣಿಗೆಯು ಪ್ರಬಲವಾಗಿ ಉಳಿದಿರುವಾಗ, ಹಣದುಬ್ಬರದ ಒತ್ತಡಗಳು - ಇಳಿಮುಖವಾಗಿದ್ದರೂ, ರೆಪೊ ದರಗಳನ್ನು ಬದಲಾಗದೆ ಇರಿಸುವ ನಿರ್ಧಾರವು ಸ್ವಲ್ಪ ಹೆಚ್ಚು ರಿಸ್ಕ್‌ನಿಂದ ಕೂಡಿದ್ದಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು 2024ರ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಶೇಕಡ 4.8 ರಲ್ಲಿ ಸ್ಥಿರವಾಗಿ ಉಳಿದ ನಂತರ, 2024ರ ಜೂನ್ ತಿಂಗಳಲ್ಲಿ ಶೇಕಡ 5.1ಕ್ಕೆ ಏರಿತು. ಮೂಲ ಹಣದುಬ್ಬರವು ಮೇ ಮತ್ತು ಜೂನ್‌ನಲ್ಲಿ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕಡಿಮೆಯಾಗಿದೆ. ಆದರೆ, ಸಿಪಿಐಗೆ ಸಂಬಂಧಿಸಿದ ಆಹಾರ ಹಣದುಬ್ಬರವು ಜೂನ್‌ನಲ್ಲಿ 8.4 ಶೇಕಡ, ಮೇ ತಿಂಗಳಲ್ಲಿ 7.9 ಶೇಕಡಾ ದಾಖಲಾಗಿತ್ತು.
ಬೆಳವಣಿಗೆ ದರ ಪ್ರಬಲ: ಸಂಕಷ್ಟಗಳ ಹೊರತಾಗಿಯೂ ದೇಶದ ಬೆಳವಣಿಗೆಯು ಪ್ರಬಲವಾಗಿದೆ. ಸ್ಥಿರವಾದ ನಗರ ಬಳಕೆ ಮತ್ತು ಗ್ರಾಮೀಣ ಬಳಕೆಯನ್ನು ಸುಧಾರಿಸುವ ಹಿನ್ನೆಲೆಯಲ್ಲಿ, ಹೆಚ್ಚಿನ ಹೂಡಿಕೆಯ ಬೇಡಿಕೆ ಮತ್ತು ಪೂರೈಕೆಗಳೊಂದಿಗೆ ದೇಶೀಯ ಬೆಳವಣಿಗೆಯು ಪ್ರಬಲವಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ವಿವರಿಸಿದರು.
ನೈಋತ್ಯ ಮಾನ್ಸೂನ್‌ನಲ್ಲಿ ಸ್ಥಿರವಾದ ಪ್ರಗತಿ, ಹೆಚ್ಚಿನ ಸಂಚಿತ ಖಾರಿಫ್ ಬಿತ್ತನೆ ಮತ್ತು ಜಲಾಶಯದ ಸುಧಾರಣೆ ಖಾರಿಫ್ ಉತ್ಪಾದನೆಗೆ ಮಟ್ಟಗಳು ಉತ್ತಮವಾದವು ಆದರೆ ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಅಭಿವೃದ್ಧಿಗೊಳ್ಳುವ ಲಾ ನಿನಾ ಪರಿಸ್ಥಿತಿಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಉತ್ಪಾದನೆಯ ಮೇಲೆ ಪ್ರಭಾವ ಬೀರಬಹುದು ಎಂದು ಶಕ್ತಿಕಾಂತ ದಾಸ್ ಹೇಳಿದರು.