ಜಿಯೋ ದರ ಏರಿಕೆಯ ಶಾಕ್; ಜುಲೈ 3 ರಿಂದ ಜಿಯೋ ಅನ್‌ಲಿಮಿಟೆಡ್ 5ಜಿ ಪ್ಲಾನ್‌ಗಳ ದರ ಹೆಚ್ಚಳ, ವಿವರ ಹೀಗಿದೆ..
ಅಗ್ಗದ ದರದಲ್ಲಿ ಟೆಲಿಕಾಂ ಸೇವೆ ಒದಗಿಸುತ್ತ ಜನಪ್ರಿಯವಾಗಿದ್ದ ರಿಲಯನ್ಸ್ ಜಿಯೋ ದರ ಏರಿಕೆಯ ಶಾಕ್ ನೀಡಿದೆ. ಹೌದು, ಜುಲೈ 3 ರಿಂದ ಜಿಯೋ ಅನ್‌ಲಿಮಿಟೆಡ್ 5ಜಿ ಪ್ಲಾನ್‌ಗಳ ದರ ಹೆಚ್ಚಳವಾಗಲಿದೆ. ಅದರ ವಿವರ ಹೀಗಿದೆ…

ನವದೆಹಲಿ: ದರ ಏರಿಕೆಯ ಪರ್ವ ಶುರುವಾಗಿದೆ. ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಿಗೆ, ಹಾಲಿನ ದರ ಏರಿಕೆ ಆಯಿತು. ಈಗ ಟೆಲಿಕಾಂ ಕಂಪನಿಗಳು ಕೂಡ ದರ ಏರಿಕೆಗೆ ಮುಂದಾಗಿವೆ. ಜಿಯೋ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಜುಲೈ 3 ರಿಂದ ಜಾರಿಗೆ ಬರುವಂತೆ ಜಿಯೋ ಅನ್‌ಲಿಮಿಟೆಡ್ 5ಜಿ ಪ್ಲಾನ್‌ಗಳ ಹೊಸ ದರ ವಿವರಗಳನ್ನು ಪ್ರಕಟಿಸಿದೆ.
ಸ್ಪೆಕ್ಟ್ರಂ ಹರಾಜು ನಡೆದ ಮರುದಿನವೇ ಜಿಯೋ ತನ್ನ ಇತ್ತೀಚಿನ ಶ್ರೇಣಿಯ ಅನಿಯಮಿತ ಯೋಜನೆಗಳ ವಿವರಗಳನ್ನು ಬಹಿರಂಗಗೊಳಿಸಿದೆ. ಇದು ದೇಶಾದ್ಯಂತ ಜುಲೈ 3 ರಿಂದಲೇ ಚಾಲ್ತಿಗೆ ಬರಲಿದೆ. ಭಾರತದಲ್ಲಿ ಜಿಯೋ 5ಜಿ ಜಾಲ ಬಹುತೇಕ ಪ್ರದೇಶಗಳನ್ನು ವ್ಯಾಪಿಸಿದೆ. 5ಜಿ ಮಾರುಕಟ್ಟೆಯಲ್ಲಿ ಜಿಯೋ ಗ್ರಾಹಕರ ಪಾಲು ಶೇಕಡ 85 ಇದೆ.
ಜುಲೈ 3 ರಿಂದ ಜಿಯೋ ಅನ್‌ಲಿಮಿಟೆಡ್ 5ಜಿ ಪ್ಲಾನ್‌ಗಳ ದರ
ಜಿಯೋ ಅನ್‌ಲಿಮಿಟೆಡ್ 5ಜಿ ಪಾಪ್ಯುಲರ್ ಪ್ಲಾನ್‌ಗಳ ದರ ವಿವರ ಹೀಗಿದೆ -
- 189 ರೂಪಾಯಿಗೆ 2GB ಡೇಟಾ ಮತ್ತು 28 ದಿನ ಅವಧಿ
- 249 ರೂಪಾಯಿಗೆ ದಿನಕ್ಕೆ 1GB ಡೇಟಾ 28 ದಿನ ಅವಧಿ
- 299 ರೂಪಾಯಿಗೆ ದಿನಕ್ಕೆ 1.5GB ಡೇಟಾ 28 ದಿನ ಅವಧಿ
- 349 ರೂಪಾಯಿಗೆ ದಿನಕ್ಕೆ 2GB ಡೇಟಾ 28 ದಿನ ಅವಧಿ
- 399 ರೂಪಾಯಿಗೆ ದಿನಕ್ಕೆ 2.5GB ಡೇಟಾ 28 ದಿನ ಅವಧಿ
- 449 ರೂಪಾಯಿಗೆ ದಿನಕ್ಕೆ 3GB ಡೇಟಾ 28 ದಿನ ಅವಧಿ
ಹೆಚ್ಚಿನ ಅವಧಿಯ ವಿವಿಧ ಪ್ಲಾನ್‌ಗಳ ವಿವರ ಹೀಗಿದೆ
- 579 ರೂಪಾಯಿಗೆ ದಿನಕ್ಕೆ 1.5GB ಡೇಟಾ 56 ದಿನ ಅವಧಿ
- 629 ರೂಪಾಯಿಗೆ ದಿನಕ್ಕೆ 2GB ಡೇಟಾ 56 ದಿನ ಅವಧಿ
- 479 ರೂಪಾಯಿಗೆ 6GB ಡೇಟಾ 84 ದಿನ ಅವಧಿ
- 799 ರೂಪಾಯಿಗೆ ದಿನಕ್ಕೆ 1.5GB ಡೇಟಾ 84 ದಿನ ಅವಧಿ
- 859 ರೂಪಾಯಿಗೆ ದಿನಕ್ಕೆ 2GB ಡೇಟಾ 84 ದಿನ ಅವಧಿ
- 1199 ರೂಪಾಯಿಗೆ ದಿನಕ್ಕೆ 3GB ಡೇಟಾ 84 ದಿನ ಅವಧಿ
- 1899 ರೂಪಾಯಿಗೆ 24GB ಡೇಟಾ 336 ದಿನ ಅವಧಿ
- 3599 ರೂಪಾಯಿಗೆ ದಿನಕ್ಕೆ 2.5GB ಡೇಟಾ 365 ದಿನ ಅವಧಿ
ಎರಡು ಹೊಸ ಆಪ್ ಪರಿಚಯಿಸುತ್ತಿದೆ ಜಿಯೋ
ಹೊಸ ಯೋಜನೆಗಳ ಜೊತೆಗೆ, ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಬಳಕೆದಾರರ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಎರಡು ಅಪ್ಲಿಕೇಶನ್‌ಗಳನ್ನು ಪರಿಚಯಿಸುತ್ತಿದೆ:
1) ಜಿಯೋ ಸೇಫ್ (JioSafe) - ಕರೆ, ಸಂದೇಶ ಕಳುಹಿಸುವಿಕೆ ಮತ್ತು ಫೈಲ್ ವರ್ಗಾವಣೆಗಾಗಿ ಕ್ವಾಂಟಮ್-ಸುರಕ್ಷಿತ ಸಂವಹನ ಅಪ್ಲಿಕೇಶನ್. ತಿಂಗಳಿಗೆ 199 ರೂಪಾಯಿ ಪಾವತಿಸಿ ಈ ಸೇವೆ ಪಡೆಯಬಹುದು.
2) ಜಿಯೋ ಟ್ರಾನ್ಸ್‌ಲೇಟ್ - ಧ್ವನಿ ಕರೆಗಳು, ಧ್ವನಿ ಸಂದೇಶಗಳು, ಪಠ್ಯ ಮತ್ತು ಚಿತ್ರಗಳನ್ನು ಭಾಷಾಂತರಿಸಲು ಎಐ-ಚಾಲಿತ ಬಹು-ಭಾಷಾ ಸಂವಹನ ಅಪ್ಲಿಕೇಶನ್ ಅನ್ನು ಜಿಯೋ ಪರಿಚಯಿಸುತ್ತಿದೆ. ಇದರ ಸೇವೆಯನ್ನು ತಿಂಗಳಿಗೆ 99 ರೂಪಾಯಿ ಪಾವತಿಸಿ ಪಡೆಯಬಹುದಾಗಿದೆ.
ಆದಾಗ್ಯೂ, ಜಿಯೋ ಬಳಕೆದಾರರು ತಿಂಗಳಿಗೆ 298 ರೂಪಾಯಿ ಮೌಲ್ಯದ ಎರಡೂ ಅಪ್ಲಿಕೇಶನ್‌ಗಳನ್ನು ಇಡೀ ವರ್ಷ ಉಚಿತವಾಗಿ ಬಳಸಬಹುದಾಗಿದೆ.
“ಈ ಹೊಸ ಯೋಜನೆಗಳ ಪರಿಚಯವು ಉದ್ಯಮದ ಆವಿಷ್ಕಾರವನ್ನು ಹೆಚ್ಚಿಸಲು ಮತ್ತು 5G ಮತ್ತು AI ತಂತ್ರಜ್ಞಾನದಲ್ಲಿ ಹೂಡಿಕೆಯ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿದೆ. ಉತ್ತಮ ಗುಣಮಟ್ಟದ, ಕೈಗೆಟುಕುವ ಇಂಟರ್ನೆಟ್ ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ. ಈ ರೂಪಾಂತರದಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಜಿಯೋ ಹೆಮ್ಮೆಪಡುತ್ತದೆ. ನಮ್ಮ ಬದ್ಧತೆ ಯಾವಾಗಲೂ ನಮ್ಮ ದೇಶ ಮತ್ತು ಗ್ರಾಹಕರಿಗೆ ಇರುತ್ತದೆ ಮತ್ತು ನಾವು ಭಾರತದ ಡಿಜಿಟಲ್ ಭವಿಷ್ಯದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ" ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
