ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ವಿರುದ್ಧ ಅಕ್ರಮದ ಆರೋಪ ಮಾಡಿದ ಹಿಂಡೆನ್‌ಬರ್ಗ್‌, ಸೋಮವಾರ ಷೇರುಪೇಟೆ ಕುಸಿತ ನಿರೀಕ್ಷಿತ-business news sebi chief madhabi puri buch in hindenburg firing line how will markets react on monday uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ವಿರುದ್ಧ ಅಕ್ರಮದ ಆರೋಪ ಮಾಡಿದ ಹಿಂಡೆನ್‌ಬರ್ಗ್‌, ಸೋಮವಾರ ಷೇರುಪೇಟೆ ಕುಸಿತ ನಿರೀಕ್ಷಿತ

ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ವಿರುದ್ಧ ಅಕ್ರಮದ ಆರೋಪ ಮಾಡಿದ ಹಿಂಡೆನ್‌ಬರ್ಗ್‌, ಸೋಮವಾರ ಷೇರುಪೇಟೆ ಕುಸಿತ ನಿರೀಕ್ಷಿತ

Hindenburg Research New Report; ಷೇರುಪೇಟೆ ತಲ್ಲಣಗೊಳಿಸುವಂತಹ ವರದಿಯನ್ನು ಹಿಂಡೆನ್‌ಬರ್ಗ್ ಶನಿವಾರ ಪ್ರಕಟಿಸಿದೆ. ಇದರಲ್ಲಿ, ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ವಿರುದ್ಧ ಅಕ್ರಮದ ಆರೋಪ ಮಾಡಿದ ಹಿಂಡೆನ್‌ಬರ್ಗ್‌, ಇನ್ನಷ್ಟು ವಿವರಗಳನ್ನು ವರದಿಯಲ್ಲಿ ಸೇರಿಸಿದೆ. ಈ ವಿದ್ಯಮಾನದ ಕಾರಣ ಸೋಮವಾರ ಷೇರುಪೇಟೆ ಕುಸಿತ ನಿರೀಕ್ಷಿತವಾಗಿದೆ.

ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್‌ (ಒಳಚಿತ್ರ) ವಿರುದ್ಧ ಹಿಂಡೆನ್‌ಬರ್ಗ್‌ ಅಕ್ರಮದ ಆರೋಪ, ಸೋಮವಾರ ಷೇರುಪೇಟೆ ಕುಸಿತ ನಿರೀಕ್ಷಿತವಾಗಿದೆ. (ಸಾಂಕೇತಿಕ ಚಿತ್ರ)
ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್‌ (ಒಳಚಿತ್ರ) ವಿರುದ್ಧ ಹಿಂಡೆನ್‌ಬರ್ಗ್‌ ಅಕ್ರಮದ ಆರೋಪ, ಸೋಮವಾರ ಷೇರುಪೇಟೆ ಕುಸಿತ ನಿರೀಕ್ಷಿತವಾಗಿದೆ. (ಸಾಂಕೇತಿಕ ಚಿತ್ರ)

ಮುಂಬಯಿ: ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಶನಿವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ತನ್ನ 2023 ರ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಿದ ಆರೋಪವನ್ನು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗಂಭೀರವಾಗಿ ಪರಿಗಣಿಸಿಲ್ಲ. ಇದಕ್ಕೆ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ಕಾರಣ. ಅವರು ಅದಾನಿ ಗುಂಪಿಗೆ ಸೇರಿದ ಸಾಗರೋತ್ತರ ಕಂಪನಿಗಳಲ್ಲಿ ಷೇರು ಹೊಂದಿದ್ದಾರೆ ಎಂದು ಆರೋಪಿಸಿತ್ತು.

ಇತ್ತೀಚಿನ ಹಿಂಡೆನ್‌ಬರ್ಗ್ ವರದಿಯ ಮುಖ್ಯಾಂಶದ ಪ್ರಕಾರ, “ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ಮತ್ತು ಅವರ ಪತಿ ಧವಲ್ ಬುಚ್ ಅವರು ಬರ್ಮುಡಾ ಮತ್ತು ಮಾರಿಷಸ್ ಫಂಡ್‌ಗಳಲ್ಲಿ ಪಾಲನ್ನು ಹೊಂದಿರುವುದನ್ನು ಮರೆಮಾಚಿದ್ದಾರೆ. ಅದೇ ಸಂಕೀರ್ಣ ಜಾಲದಿಂದ ವಿನೋದ್ ಅದಾನಿ 32 ಶತಕೋಟಿ ಡಾಲರ್‌ ಹಣವನ್ನು ಬಳಸಿದ್ದಾರೆ. ವಿನೋದ್ ಅದಾನಿ ಅವರು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಹಿರಿಯ ಸಹೋದರ.” ಎಂಬ ಆರೋಪ ವ್ಯಕ್ತವಾಗಿದೆ. ಈ ವಿದ್ಯಮಾನ ಸೋಮವಾರ (ಆಗಸ್ಟ್ 12) ಷೇರುಪೇಟೆ ವಹಿವಾಟಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅದರ ಮೇಲೆ ಬೆಳಕು ಚೆಲ್ಲುವ ಸಂಕ್ಷಿಪ್ತ ವಿವರ ಇಲ್ಲಿದೆ.

ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ವಿರುದ್ಧ 3 ಆರೋಪಗಳು ಮತ್ತು ಸ್ಪಷ್ಟೀಕರಣ

1) ಮಾಧವಿ ಪುರಿ ಬುಚ್‌ 2017ರ ಮಾರ್ಚ್ 22 ರಂದು ಸೆಬಿ ಸದಸ್ಯರಾಗಿ ನೇಮಕವಾಗುವ ಕೆಲವೇ ವಾರ ಮೊದಲು, ಅವರ ಪತಿ ಧವಲ್ ಬುಚ್ ಅವರು ಮಾರಿಷಸ್ ಫಂಡ್‌ನ ನಿರ್ವಾಹಕ ಟ್ರೈಡೆಂಟ್ ಟ್ರಸ್ಟ್‌ಗೆ ಪತ್ರ ಬರೆದು, "ಖಾತೆಗಳನ್ನು ನಿರ್ವಹಿಸಲು ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿಯನ್ನಾಗಿ ಮಾಡುವಂತೆ" ಎಂದು ಕೇಳಿಕೊಂಡರು. ರಾಜಕೀಯವಾಗಿ ಸೂಕ್ಷ್ಮ ನೇಮಕಾತಿ ಇದಾಗಿದ್ದು, ಇದಕ್ಕೂ ಮುನ್ನ ಗ್ಲೋಬಲ್ ಡೈನಾಮಿಕ್ ಆಪರ್ಚುನಿಟೀಸ್ ಫಂಡ್‌ನಿಂದ ತನ್ನ ಪತ್ನಿ ಹೆಸರು ತೆಗೆದು ಹಾಕುವಂತೆ ಕೇಳಿಕೊಂಡದ್ದರು ಎಂದು ಹಿಂಡೆನ್‌ಬರ್ಗ್‌ ಆರೋಪಿಸಿದೆ. 2017ರ ಏಪ್ರಿಲ್‌ನಲ್ಲಿ ಮಾಧವಿ ಪುರಿ ಬುಚ್‌ ಸೆಬಿಗೆ ಪೂರ್ಣಕಾಲಿಕ ಸದಸ್ಯರಾಗಿ ನೇಮಕವಾದರು. 2018ರ ಫೆ.28ರಲ್ಲಿ ಎಲ್ಲ ಯುನಿಟ್‌ಗಳ ರಿಡೆಮ್ಶನ್‌ಗೆ ಅರ್ಜಿ ಸಲ್ಲಿಸಿದ್ದರು ಎಂಬುದನ್ನು ಹಿಂಡನ್‌ಬರ್ಗ್ ವರದಿ ಉಲ್ಲೇಖಿಸಿದೆ.

2) ಮಾಧವಿ ಪುರಿ ಬುಚ್‌ ಅವರು ಸೆಬಿಯಲ್ಲಿ ಅಧ್ಯಕ್ಷರಾಗಿದ್ದಾಗ 2017ರ ಏಪ್ರಿಲ್‌ನಿಂದ 2022ರ ಮಾರ್ಚ್ ನಡುವೆ ಅಗೋರಾ ಪಾರ್ಟ್‌ನರ್ಸ್ ಎಂಬ ಕಡಲಾಚೆಯ ಸಿಂಗಾಪುರ ಮೂಲದ ಸಲಹಾ ಸಂಸ್ಥೆಯಲ್ಲಿ 100 ಪ್ರತಿಶತ ಪಾಲನ್ನು ಹೊಂದಿದ್ದರು. ಆದರೆ, 2022ರ ಮಾರ್ಚ್ 16 ರಂದು ಸೆಬಿ ಅಧ್ಯಕ್ಷರಾಗಿ ನೇಮಕಗೊಂಡ ಎರಡು ವಾರಗಳ ನಂತರ ಅವರು ಅದರ ಎಲ್ಲ ಷೇರುಗಳನ್ನು ತಮ್ಮ ಪತಿಗೆ ವರ್ಗಾಯಿಸಿದ್ದಾರೆ ಎಂದು ಹಿಂಡೆನ್‌ಬರ್ಗ್‌ ವರದಿ ತಿಳಿಸಿದೆ.

ಹಣಕಾಸು ಹೇಳಿಕೆಗಳನ್ನು ಬಹಿರಂಗಪಡಿಸುವುದರಿಂದ ಸಿಂಗಾಪುರದ ಸಂಸ್ಥೆಗಳು ವಿನಾಯಿತಿ ಪಡೆದಿವೆ. ಆದ್ದರಿಂದ, ಅದು ತನ್ನ ಸಲಹಾ ವ್ಯವಹಾರದಿಂದ ಪಡೆದ ಆದಾಯದ ಮೊತ್ತ ಮತ್ತು ಯಾರಿಂದ ಪಡೆಯುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಇದಲ್ಲದೆ, ಅಗೋರಾ ಅಡ್ವಸರಿ ಎಂಬ ಭಾರತದ ಸಲಹಾ ಸಂಸ್ಥೆಯಲ್ಲಿ ಬುಚ್‌ ಪೂರ್ಣ ಪಾಲು ಹೊಂದಿದ್ದು, ಪತಿ ನಿರ್ದೇಶಕರಾಗಿದ್ದಾರೆ ಎಂದು ಹಿಂಡೆನ್‌ಬರ್ಗ್ ವರದಿಯು ಆರೋಪಿಸಿದೆ.

3) ಮಾಧವಿ ಪುರಿ ಬುಚ್‌ ಸೆಬಿ ಸದಸ್ಯರಾಗಿದ್ದ ಅವಧಿಯಲ್ಲಿ ಅವರ ಪತಿ ಧವಲ್ ಬುಚ್‌ ಅವರು 2019ರಲ್ಲಿ ಬ್ಲ್ಯಾಕ್‌ಸ್ಟೋನ್‌ ಕಂಪನಿಗೆ ಹಿರಿಯ ಸಲಹಾಗಾರರಾಗಿ ನೇಮಕವಾಗಿದ್ದರು. ರಿಯಲ್ ಎಸ್ಟೇಟ್‌, ಫಂಡ್ ಅಥವಾ ಇನ್ಯಾವುದೇ ಕ್ಯಾಪಿಟಲ್ ಮಾರ್ಕೆಟ್‌ ಕೆಲಸಗಳಲ್ಲಿ ಯಾವುದೇ ಅನುಭವ ಇಲ್ಲದೇ ಇದ್ದಾಗ ಮಾಡಲಾದ ನೇಮಕಾತಿಯಾಗಿತ್ತು. ಅವರಿಗೆ ಅಂದು ಪ್ರೊಕ್ಯೂರ್‌ಮೆಂಟ್‌ ಮತ್ತು ಪೂರೈಕೆ ಜಾಲದ ಕೆಲಸಗಳಲ್ಲಿ ಮಾತ್ರ ಅನುಭವವಿತ್ತು. ಅವರು ಬಹುತೇಕ ಯುನಿಲಿವರ್ ಕಂಪನಿಗೆ ಕೆಲಸ ಮಾಡಿದ್ದರು. ಅಲ್ಲಿ ಅವರು ಚೀಫ್‌ ಪ್ರೊಕ್ಯೂರ್‌ಮೆಂಟ್ ಆಫೀಸರ್ ಆಗಿದ್ದರು ಎಂದು ಹಿಂಡೆನ್‌ಬರ್ಗ್‌ ವರದಿ ಆರೋಪಿಸಿದೆ.

ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ದಂಪತಿ ಸ್ಪಷ್ಟೀಕರಣ: "ಈಗಾಗಲೇ ಕಾಲಕಾಲಕ್ಕೆ ಸೆಬಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನೂ ಒದಗಿಸಲಾಗಿದೆ. ಅವುಗಳನ್ನು ಹುಡುಕುವ ಯಾವುದೇ ಮತ್ತು ಪ್ರತಿಯೊಂದು ಪ್ರಾಧಿಕಾರಕ್ಕೂ ನಾವು ಕಟ್ಟುನಿಟ್ಟಾಗಿ ಖಾಸಗಿ ಪ್ರಜೆಗಳಾಗಿದ್ದ ಅವಧಿಗೆ ಸಂಬಂಧಿಸಿದವುಗಳನ್ನು ಒಳಗೊಂಡಂತೆ ಯಾವುದೇ ಮತ್ತು ಎಲ್ಲಾ ಹಣಕಾಸಿನ ದಾಖಲೆಗಳನ್ನು ಬಹಿರಂಗಪಡಿಸಲು ಯಾವುದೇ ಹಿಂಜರಿಕೆಯಿಲ್ಲ. ಇದಲ್ಲದೆ, ಸಂಪೂರ್ಣ ಪಾರದರ್ಶಕ ಹಿತದೃಷ್ಟಿಯಿಂದ, ನಾವು ಸರಿಯಾದ ಸಮಯದಲ್ಲಿ ವಿವರವಾದ ಹೇಳಿಕೆಯನ್ನು ನೀಡುತ್ತೇವೆ. ಹಿಂಡೆನ್‌ಬರ್ಗ್‌ ವಿರುದ್ಧ ಜಾರಿ ಕ್ರಮ ಕೈಗೊಂಡು ಸೆಬಿ ಶೋಕಾಸ್ ನೋಟಿಸ್ ನೀಡಿದ ಸಂದರ್ಭದಲ್ಲಿ, ಅದಕ್ಕೆ ಪ್ರತಿಕ್ರಿಯೆಯಾಗಿ ಈ ರೀತಿ, ವೈಯಕ್ತಿಕ ಗುಣನಡತೆ ಮೇಲೆ ದಾಳಿಗೆ ಯತ್ನಿಸಿರುವುದು ದುರದೃಷ್ಟಕರ ಎಂದು ಮಾಧವಿ ಪುರಿ ಬುಚ್‌ ಮತ್ತು ಧವಲ್ ಬುಚ್ ಭಾನುವಾರ ಪತ್ರಿಕಾ ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದರು.

ಅದಾನಿ ಗ್ರೂಪ್ ಸ್ಪಷ್ಟೀಕರಣ: "ಹಿಂಡೆನ್‌ಬರ್ಗ್‌ನ ಇತ್ತೀಚಿನ ಆರೋಪಗಳು ದುರುದ್ದೇಶಪೂರಿತ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಯ್ದ ಭಾಗಗಳಷ್ಟೆ. ಆ ವರದಿ ವೈಯಕ್ತಿಕ ಲಾಭಕ್ಕಾಗಿ ಪೂರ್ವನಿರ್ಧರಿತ ತೀರ್ಮಾನಗಳಿಗೆ ಬರಲು ಮತ್ತು ಸತ್ಯ ಮತ್ತು ಕಾನೂನನ್ನು ನಿರ್ಲಕ್ಷಿಸುವಂತೆ ಇದೆ. ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸಂಪೂರ್ಣವಾಗಿ ತನಿಖೆ ಮಾಡಲ್ಪಟ್ಟಿರುವ ವಿಚಾರ ಇದಾಗಿದ್ದು, ಆಧಾರರಹಿತವೆಂದು ಸಾಬೀತಾಗಿದೆ. 2024 ರ ಜನವರಿಯಲ್ಲಿ ಈ ಕುರಿತು ತೀರ್ಪು ಕೂಡ ಬಂದಿದೆ" ಎಂದು ಅದಾನಿ ಗ್ರೂಪ್‌ ಸ್ಪಷ್ಟಪಡಿಸಿದೆ.

ಹಿಂಡೆನ್‌ಬರ್ಗ್‌ ವರದಿ ಕಾರಣ ಸೋಮವಾರ ಷೇರುಪೇಟೆ ಕುಸಿತ ನಿರೀಕ್ಷಿತ

ಹಿಂಡೆನ್‌ಬರ್ಗ್‌ ವರದಿಯಲ್ಲಿರುವ ಹೇಳಿಕೆಗಳು ಕೇವಲ ಆರೋಪಗಳಾಗಿದ್ದು, ಅದನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ವರದಿ ಒದಗಿಸಿಲ್ಲ ಎಂಬುದನ್ನು ಅನೇಕ ಮಾರುಕಟ್ಟೆ ತಜ್ಞರು ತಮ್ಮ ಅಭಿಪ್ರಾಯದಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಈ ವಿದ್ಯಮಾನದ ಕಾರಣ ಸೋಮವಾರ ಷೇರುಪೇಟೆಯ ವಹಿವಾಟು ಶುರುವಾಗುವಾಗ ಕುಸಿತದೊಂದಿಗೆ ಕಲಾಪ ಶುರುಮಾಡುವ ಸಾಧ್ಯತೆ ಇದೆ.

ಹಿಂಡೆನ್‌ಬರ್ಗ್ ರಿಸರ್ಚ್‌ನ ಹೊಸ ವರದಿ ಬಹಿರಂಗವಾದ ಬಳಿಕ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಅದಾನಿ ಪವರ್ ಲಿಮಿಟೆಡ್ ಸೇರಿ ಹತ್ತು ಪಟ್ಟಿ ಮಾಡಲಾದ ಅದಾನಿ ಗ್ರೂಪ್ ಸ್ಟಾಕ್‌ಗಳ (ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝೆಡ್‌, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪವರ್, ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ವಿಲ್ಮಾರ್, ಅಂಬುಜಾ ಸಿಮೆಂಟ್ಸ್, ಎಸಿಸಿ ಮತ್ತು ಎನ್‌ಡಿಟಿವಿ) ಮೇಲೆ ಸೋಮವಾರ ಬೆಳಗ್ಗೆಯ ವಹಿವಾಟಿನಲ್ಲಿ ಹೂಡಿಕೆದಾರರು ಗಮನಹರಿಸಲಿದ್ದಾರೆ. ಈ ಷೇರುಗಳ ಮೌಲ್ಯ ಕುಸಿಯುವ ಸಾಧ್ಯತೆ ಇದೆ. ಇದರಿಂದಾಗಿ ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳೂ ಕುಸಿತ ಕಾಣುವುದು ನಿರೀಕ್ಷಿತ ಎನ್ನುತ್ತಿದ್ದಾರೆ ಪರಿಣತರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.