ಮೊದಲ ಬಾರಿ 80000 ಗಡಿ ದಾಟಿದ ಸೆನ್ಸೆಕ್ಸ್, ಜೂನ್ 4 ರ ನಂತರದ ಒಂದು ತಿಂಗಳಲ್ಲಿ 8000 ಅಂಶದಷ್ಟು ಏರಿಕೆ, ನಿಫ್ಟಿ ಕೂಡ ಸಾರ್ವಕಾಲಿಕ ದಾಖಲೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೊದಲ ಬಾರಿ 80000 ಗಡಿ ದಾಟಿದ ಸೆನ್ಸೆಕ್ಸ್, ಜೂನ್ 4 ರ ನಂತರದ ಒಂದು ತಿಂಗಳಲ್ಲಿ 8000 ಅಂಶದಷ್ಟು ಏರಿಕೆ, ನಿಫ್ಟಿ ಕೂಡ ಸಾರ್ವಕಾಲಿಕ ದಾಖಲೆ

ಮೊದಲ ಬಾರಿ 80000 ಗಡಿ ದಾಟಿದ ಸೆನ್ಸೆಕ್ಸ್, ಜೂನ್ 4 ರ ನಂತರದ ಒಂದು ತಿಂಗಳಲ್ಲಿ 8000 ಅಂಶದಷ್ಟು ಏರಿಕೆ, ನಿಫ್ಟಿ ಕೂಡ ಸಾರ್ವಕಾಲಿಕ ದಾಖಲೆ

ಭಾರತೀಯ ಷೇರುಪೇಟೆ ಹೊಸ ದಾಖಲೆಬರೆದಿದ್ದು, ಮೊದಲ ಬಾರಿ 80000 ಗಡಿ ದಾಟಿದ ಸೆನ್ಸೆಕ್ಸ್, ಜೂನ್ 4 ರ ನಂತರದ ಒಂದು ತಿಂಗಳಲ್ಲಿ 8000 ಅಂಶದಷ್ಟು ಏರಿಕೆಯನ್ನು ದಾಖಲಿಸಿದೆ. ಇದೇ ವೇಳೆ, ನಿಫ್ಟಿ ಕೂಡ ಸಾರ್ವಕಾಲಿಕ ದಾಖಲೆ ಬರೆದಿದೆ.

ಮೊದಲ ಬಾರಿ 80000 ಗಡಿ ದಾಟಿದ ಸೆನ್ಸೆಕ್ಸ್, ಜೂನ್ 4 ರ ನಂತರದ ಒಂದು ತಿಂಗಳಲ್ಲಿ 8000 ಅಂಶದಷ್ಟು ಏರಿಕೆ, ನಿಫ್ಟಿ ಕೂಡ ಸಾರ್ವಕಾಲಿಕ ದಾಖಲೆ (ಸಾಂಕೇತಿಕ ಚಿತ್ರ)
ಮೊದಲ ಬಾರಿ 80000 ಗಡಿ ದಾಟಿದ ಸೆನ್ಸೆಕ್ಸ್, ಜೂನ್ 4 ರ ನಂತರದ ಒಂದು ತಿಂಗಳಲ್ಲಿ 8000 ಅಂಶದಷ್ಟು ಏರಿಕೆ, ನಿಫ್ಟಿ ಕೂಡ ಸಾರ್ವಕಾಲಿಕ ದಾಖಲೆ (ಸಾಂಕೇತಿಕ ಚಿತ್ರ)

ನವದೆಹಲಿ: ಭಾರತದ ಷೇರುಪೇಟೆ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಬುಧವಾರ (ಜುಲೈ 3) ದಿನದ ವಹಿವಾಟಿನ ವೇಳೆ ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿ ಹೊಸ ದಾಖಲೆ ಬರೆದಿವೆ. ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ಷೇರುಗಳು ಷೇರು ಸೂಚ್ಯಂಕಗಳ ಓಟಕ್ಕೆ ಕೊಡುಗೆ ನೀಡಿದವು. ಹೀಗಾಗಿ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 80,000 ಅಂಶಗಳ ಗಡಿ ದಾಟಿತು. ನಿಫ್ಟಿ 24,300 ಅಂಶಗಳ ಗಡಿ ದಾಟಿತು.

ದಿನದ ವಹಿವಾಟಿನ ಮೊದಲ ಮೂವತ್ತು ನಿಮಿಷಗಳ ಅವಧಿಯಲ್ಲಿ 30-ಷೇರು ಬೆಂಚ್‌ಮಾರ್ಕ್ ಗರಿಷ್ಠ 80,057.90 ಅನ್ನು ಮುಟ್ಟಿತು. ನಿಫ್ಟಿ 50 ಸೂಚ್ಯಂಕವು 24,294.60 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಷೇರುಪೇಟೆಯ ವಹಿವಾಟು ಇಂದು ಬೆಳಗ್ಗೆ 9:20 ಕ್ಕೆ ಶುರುವಾದ ಕೂಡಲೇ ಸೆನ್ಸೆಕ್ಸ್ ಶೇಕಡಾ 0.61 ರಷ್ಟು ಏರಿಕೆಯಾಗಿ 79,923 ಕ್ಕೆ ಮತ್ತು ನಿಫ್ಟಿ 0.55 ಶೇಕಡಾ 24,257 ಕ್ಕೆ ಏರಿತು. ಸುಮಾರು 2,086 ಷೇರುಗಳು ಏರಿಕೆ ದಾಖಲಿಸಿದರೆ, 699 ಷೇರುಗಳು ಇಳಿಕೆ ಕಂಡಿವೆ. ಇನ್ನು 100 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

80,000 ದಾಟಿದ ಸೆನ್ಸೆಕ್ಸ್‌; 30 ಷೇರುಗಳ ಪೈಕಿ 23 ಷೇರು ಮೌಲ್ಯ ಏರಿಕೆ

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ನ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಬೆಳಗ್ಗಿನ ವಹಿವಾಟಿನ ವೇಳೆ ಏರಿಕೆ ದಾಖಲಿಸಿದ್ದು, ಸಾರ್ವಕಾಲಿಕ ಎತ್ತರವೆನಿಸಿದ 80,000ದ ಗಡಿ ದಾಟಿ ಹೊಸ ದಾಖಲೆ ಬರೆಯಿತು. ಈ ಸಂದರ್ಭದಲ್ಲಿ ಸೆನ್ಸೆಕ್ಸ್‌ನ 30 ಲಿಸ್ಟೆಡ್ ಕಂಪನಿಗಳ ಪೈಕಿ 23 ಷೇರುಗಳ ಮೌಲ್ಯ ಏರಿಕೆ ಕಂಡಿದೆ. ಏಳು ಷೇರುಗಳ ಮೌಲ್ಯ ಇಳಿಕೆಯಾಗಿದೆ.

ಸೆನ್ಸೆಕ್ಸ್‌ನಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಟಾಪ್ ಪರ್ಫಾರ್ಮರ್ ಆಗಿದೆ. ಕಳೆದ ವರ್ಷ ಡಿಸೆಂಬರ್ 11 ರಿಂದ ಶೇ 74 ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಪವರ್ ಗ್ರಿಡ್ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ, ಇದು ಸುಮಾರು 44 ಪ್ರತಿಶತ ಏರಿಕೆಯಾಗಿದೆ. ಈ ಅವಧಿಯಲ್ಲಿ ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್ಸ್ ಮತ್ತು ಟಾಟಾ ಮೋಟಾರ್ಸ್‌ನಂತಹ ಷೇರುಗಳು ಲಾಭ ಗಳಿಸಿದವು.

ಸೆನ್ಸೆಕ್ಸ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಇಂದು 3.66 ಶೇಕಡ ಏರಿಕೆ ದಾಖಲಿಸಿದ್ದು, 1794 ರೂಪಾಯಿ ಮೌಲ್ಯದ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ನಿಫ್ಟಿ 50 ಪ್ರಸ್ತುತ 136 ಪಾಯಿಂಟ್‌ಗಳ ಏರಿಕೆಯೊಂದಿಗೆ 24,260 ನಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 50 ಏರಿಕೆಯ ಅಂಶಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಒಂದೇ 69.6 ಪಾಯಿಂಟ್‌ ಕೂಡಿಸಿದೆ.

ಇತರ ಬ್ಯಾಂಕ್‌ಗಳಾದ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್ ಕೂಡ ಮುಂಚೂಣಿ ಸೂಚ್ಯಂಕಗಳನ್ನು ಬೆಂಬಲಿಸಿದ್ದು, ಇಂದಿನ ಸೆಷನ್‌ನಲ್ಲಿ ಅವುಗಳನ್ನು ಉನ್ನತ ಮಟ್ಟಕ್ಕೆ ಏರಿಸಿದೆ.

ಏಳು ತಿಂಗಳ ಒಳಗೆ 10000 ಪಾಯಿಂಟ್ ಮುನ್ನಡೆದ ಸೆನ್ಸೆಕ್ಸ್

ಸೆನ್ಸೆಕ್ಸ್ 2023ರ ಡಿಸೆಂಬರ್ 11ರಂದು ಮೊದಲ ಬಾರಿಗೆ 70,000 ಅಂಶಗಳ ಗಡಿ ದಾಟಿತ್ತು. ಅದಾಗಿ ಏಳು ತಿಂಗಳ ಒಳಗೆ 10000 ಪಾಯಿಂಟ್‌ಗಳ ಮುನ್ನಡೆಯನ್ನು ದಾಖಲಿಸಿ ಇಂದು 80,000ದ ಗಡಿ ದಾಟಿದೆ. ಸೆನ್ಸೆಕ್ಸ್‌ 60,000 ರಿಂದ 70,000 ರವರೆಗಿನ ಪ್ರಯಾಣವು ಸ್ವಲ್ಪ ದೀರ್ಘವಾಗಿತ್ತು. ಅದು ಒಂದು ವರ್ಷ 5 ತಿಂಗಳು ತೆಗೆದುಕೊಂಡಿತು. 2021ರ ಸೆಪ್ಟೆಂಬರ್ 24 ರಂದು ಸೆನ್ಸೆಕ್ಸ್ ಮೊದಲ ಸಲ 60,000ದ ಗಡಿ ದಾಟಿತ್ತು.

ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ಸಾರ್ವತ್ರಿಕ ಚುನಾವಣಾ ಫಲಿತಾಂಶದ ದಿನವಾದ ಜೂನ್ 4 ರಂದು ಕನಿಷ್ಠ ಮಟ್ಟಕ್ಕೆ ಅಂದರೆ ಸುಮಾರು 8000 ಅಂಶ ಕುಸಿತ ಕಂಡಿತ್ತು. ಸೆನ್ಸೆಕ್ಸ್ ಜೂನ್ 4 ರ ವಹಿವಾಟಿನಲ್ಲಿ 4,390 ಪಾಯಿಂಟ್ ಅಥವಾ 5.74 ಶೇಕಡಾ ಭಾರಿ ನಷ್ಟದೊಂದಿಗೆ 72,079.05 ಕ್ಕೆ ಕೊನೆಗೊಳಿಸಿತ್ತು. ಅಲ್ಲಿಂದೀಚೆಗೆ ಒಂದು ತಿಂಗಳಲ್ಲಿ 8000 ಪಾಯಿಂಟ್ ಸೇರಿಸಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.