Closing Bell: ಐಟಿ, ಲೋಹದ ಷೇರುಗಳ ಬೆಂಬಲ, ಪುಟಿದೆದ್ದ ಮಾರುಕಟ್ಟೆ; ಹೂಡಿಕೆದಾರರ ಮೊಗದಲ್ಲಿ ಅರಳಿದ ಮಂದಹಾಸ
ಭಾರತದ ಷೇರು ಹೂಡಿಕೆದಾರರು ಇಂದು (ಜ.10) ಮುಕ್ತಾಯದ ವೇಳೆಗೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ದಿನದ ಆರಂಭದಲ್ಲಿ ಮಾರುಕಟ್ಟೆ ಮಂಕಾಗಿತ್ತು. ಆದರೆ ಮುಕ್ತಾಯ ವೇಳೆಗೆ ಐಟಿ, ಲೋಹ, ಫಾರ್ಮಾ ಷೇರುಗಳ ಬೆಂಬಲದೊಂದಿಗೆ ಪುಟಿದೆದ್ದಿದೆ.
ಬೆಂಗಳೂರು: ಭಾರತದ ಷೇರು ಮಾರುಕಟ್ಟೆಯಲ್ಲಿ ನಿನ್ನೆ ಲಾಭ ಗಳಿಕೆಯ ಮೂಲಕ ವಹಿವಾಟು ಮುಗಿದಿತ್ತು. ಆದರೆ ಇಂದು ಬೆಳಿಗ್ಗೆ ಮಾರುಕಟ್ಟೆಯು ವಾತಾವರಣದಂತೆ ಮೋಡ ಕವಿದಂತಿತ್ತು. ಅಲ್ಪ ಗಳಿಕೆಯ ಮೂಲಕ ಬಹುತೇಕ ಮಂದ ವಹಿವಾಟಿಗೆ ಮುನ್ನುಡಿ ಬರೆದಿತ್ತು ಮಾರುಕಟ್ಟೆ. ಇದು ಹೂಡಿಕೆದಾರರಲ್ಲಿ ಬೇಸರ ಮೂಡಿಸಿದ್ದು ಸುಳಲ್ಲ.
ಆದರೆ ಮುಕ್ತಾಯದ ವೇಳೆಗೆ ಮಾರುಕಟ್ಟೆ ಪುಟಿದೆದ್ದಿದೆ. ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿಯ ಎರಡೂ ಲಾಭ ಗಳಿಸುವ ಮೂಲಕ ಇಂದಿನ ವ್ಯವಹಾರ ಮುಗಿಸಿವೆ. ಈ ಮೂಲಕ ವಾರದ ಮೂರನೇ ಸೆಷನ್‌ನಲ್ಲಿ ಏರಿಕೆಯಾಗಿರುವುದನ್ನು ಕಾಣಬಹುದಾಗಿದೆ.
ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 271.50 ಅಂಕ ಅಥವಾ ಶೇ 0.38 ರಷ್ಟು ಏರಿಕೆಯಾಗಿ 71,657.71 ಕ್ಕೆ ತಲುಪಿದೆ. ನಿಫ್ಟಿ 73.90 ಅಂಕ ಅಥವಾ ಶೇ 0.34 ರಷ್ಟು ಏರಿಕೆಯಾಗಿ 21,618.70ಕ್ಕೆ ತಲುಪುವ ಮೂಲಕ ವಹಿವಾಟು ಮುಗಿಸಿದೆ. ಸುಮಾರು 1772 ಷೇರುಗಳು ಇಂದು ಲಾಭ ಗಳಿಸಿದರೆ, 1495 ಷೇರುಗಳು ನಷ್ಟದ ಹಾದಿಯಲ್ಲಿ ಸಾಗಿದವು. 75 ಷೇರುಗಳಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.
ನಿಫ್ಟಿಯಲ್ಲಿ ಸಿಪ್ಲಾ, ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಎಂಟರ್‌ಪ್ರೈಸಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಅದಾನಿ ಪೋರ್ಟ್ಸ್ ಇಂದು ಅತ್ಯಧಿಕ ಲಾಭ ಗಳಿಸಿದ ಷೇರುಗಳಾಗಿವೆ. ಒಎನ್‌ಜಿಸಿ, ಡಿವಿಸ್ ಲ್ಯಾಬ್ಸ್, ಬಿಪಿಸಿಎಲ್, ಎನ್‌ಟಿಪಿಸಿ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ನಷ್ಟ ಅನುಭವಿಸಿವೆ.
ವಲಯಗಳಲ್ಲಿ, ಹೆಲ್ತ್‌ಕೇರ್, ಮಾಹಿತಿ ತಂತ್ರಜ್ಞಾನ ಮತ್ತು ಲೋಹವು ತಲಾ ಶೇ 0.4 ಪ್ರತಿಶತದಷ್ಟು ಏರಿಕೆ ಕಂಡರೆ, ತೈಲ ಮತ್ತು ಅನಿಲ ಸೂಚ್ಯಂಕವು ಶೇಕಡಾ ಶೇ 0.5 ರಷ್ಟು ಕಡಿಮೆಯಾಗಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಅಲ್ಪ ಏರಿಕೆ ಕಂಡಿವೆ. ಇಂದು ರೂಪಾಯಿ ಮೌಲ್ಯವು ಡಾಲರ್ ಎದುರು 83.04ಕ್ಕೆ ತಲುಪಿದೆ.
ಅಮೆರಿಕ ಹಾಗೂ ಭಾರತದ ಹಣದುಬ್ಬರ ಡೇಟಾದ ಮೇಲೆ ದೃಷ್ಟಿ ನೆಟ್ಟಿರುವ ಹೂಡಿಕೆದಾರರು, ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ, ಇದರೊಂದಿಗೆ ಬಡ್ಡಿದರ ಏರಿಕೆಯಾಗುವ ಸಾಧ್ಯತೆಯೂ ಹೂಡಿಕೆದಾರರಲ್ಲಿ ಆತಂಕ ಮೂಡುವಂತೆ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಮಾರುಕಟ್ಟೆಯು ನೀರಸ ಆರಂಭಕ್ಕೆ ಮುನ್ನುಡಿ ಬರೆದಿದೆ.