Share Market: ಭಾರತದ ಷೇರುಪೇಟೆಯಲ್ಲಿ ಹೊಸ ದಾಖಲೆ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್, ನಿಫ್ಟಿ
ಭಾರತದ ಷೇರು ಮಾರುಕಟ್ಟೆಯು ಗುರುವಾರ (ಮೇ 23) ಸಾರ್ವಕಾಲಿಕ ದಾಖಲೆ ಗಳಿಸಿದೆ. ನಿಫ್ಟಿ 22,950ಕ್ಕೆ ತಲುಪಿದರೆ, ಸೆನೆಕ್ಸ್ ಇತ್ತೀಚಿನ ದಾಖಲೆಗಳನ್ನು ಮುರಿದು ಮುನ್ನುಗಿದೆ. ಅದಾನಿ ಇಎನ್‌ಟಿ, ನಿಫ್ಟಿ ಬ್ಯಾಂಕ್, ಎಲ್ ಅಂಡ್ ಟಿ ಅತ್ಯಧಿಕ ಗಳಿಕೆ ಕಂಡ ಷೇರುಗಳಾಗಿವೆ.
ಬೆಂಗಳೂರು: ಷೇರು ವ್ಯವಹಾರದಲ್ಲಿ ಹಾವು ಏಣಿಯಾಟ ಸಹಜ. ಒಮ್ಮೆ ಭಾರಿ ನಷ್ಟ ಕಂಡರೆ ಮರುದಿನವೇ ದುಪ್ಪಟ್ಟು ಲಾಭ ಗಳಿಸಬಹುದು. ಇದೀಗ ಕೆಲವು ದಿನಗಳಿಂದ ಇಳಿಕೆ ಹಾಗೂ ಸ್ಥಿರತೆ ಕಾಣುತ್ತಿದೆ ಭಾರತದ ಷೇರುಪೇಟೆಯು ಇಂದು (ಮೇ 23) ಸಾರ್ವಕಾಲಿಕ ದಾಖಲೆ ಗಳಿಸಿದೆ. ಇದೇ ಮೊದಲ ಬಾರಿ ನಿಫ್ಟಿ 22,950 ಕ್ಕೆ ತಲುಪಿದೆ. ಸೆನೆಕ್ಸ್ ಕೂಡ ದಾಖಲೆಯ ಏರಿಕೆ ಕಾಣುವ ಮೂಲಕ ಭಾರತದ ಷೇರುಪೇಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
ಇಂದು ಬೆಳಿಗ್ಗೆ ದಲಾಲ್ ಸ್ಟ್ರೀಟ್ ಆರಂಭದ ವೇಳೆಗೆ ಭಾರತದ ಷೇರುಪೇಟೆಯ ಸಂವೇದಿ ಸೂಂಚ್ಯಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಫ್ಲ್ಯಾಟ್ ನೋಟ್‌ನಲ್ಲಿ ಆರಂಭವಾಗಿದ್ದನ್ನು ಈ ವೇಳೆ ಗಮನಿಸಬಹುದು. ಆದರೆ ದಿನ ವಹಿವಾಟು ನಡೆದು ಮಾರುಕಟ್ಟೆ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ದಾಖಲೆ ಬರೆದಿವೆ. ಇಂಡಸ್‌ಇಂಡ್ ಬ್ಯಾಂಕ್, ಒಎನ್‌ಜಿಸಿ, ಎಲ್ & ಟಿ, ಆಕ್ಸಿಸ್ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಅತ್ಯಧಿಕ ಲಾಭ ಗಳಿಸಿದ ಷೇರುಗಳಾದರೆ, ಪವರ್ ಗ್ರಿಡ್, ಸನ್ ಫಾರ್ಮಾ, ಹಿಂಡಾಲ್ಕೊ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಗ್ರಾಸಿಮ್ ಇಂಡ್ ನಷ್ಟ ಕಂಡಿವೆ.
ಮುಂದಿನ ಬೆಂಚ್‌ಮಾರ್ಕ್ ಇಂಡೆಕ್ಸ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್ ವಿಪ್ರೋವನ್ನು ಹಿಂದಿಕ್ಕಲಿದೆ ಎಂದು ಐಐಎಫ್‌ಎಲ್ ಆಲ್ಟರ್‌ನೇಟಿವ್ ರೀಸರ್ಚ್ ಭವಿಷ್ಯ ನುಡಿದಿದೆ.
ಐಟಿಸಿ, ಇಂಡಿಗೋ, ಯನೋ ಮಿಂಡಾ, ಪೇಜ್ ಇಂಡಸ್ಟ್ರೀಸ್, ಫೋರ್ಟಿಸ್ ಹೆಲ್ತ್‌ಕೇರ್ ಮತ್ತು ಟಾಟಾ ಇನ್ವೇಸ್ಟ್‌ಮೆಂಟ್ ಕಾರ್ಪೋರೇಷನ್ ಷೇರುಪೇಟೆಯಲ್ಲಿ ಗಮನ ಸೆಳೆಯುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಇಂದು ಬಿಎಸ್‌ಇ ಮಿಡ್‌ಕ್ಯಾಪ್ ಶೇ 0.5 ಹಾಗೂ ಸ್ಮಾಲ್ ಕ್ಯಾಪ್ ಶೇ 0.2 ರಷ್ಟು ಏರಿಕೆಯಾಗಿದೆ. ಎಫ್‌ಎಂಸಿಜಿ, ಲೋಹ ಮತ್ತು ಇಂಧನ ಹೊರತು ಪಡಿಸಿದರೆ ಉಳಿದೆಲ್ಲಾ ವಲಯಗಳು ಹಸಿರು ಬಣ್ಣದೊಂದಿಗೆ ವಹಿವಾಟು ಮುಗಿಸಿವೆ.