Aeroflex Industries IPO: ಏರೋಫ್ಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಐಪಿಒಗೆ ಮುಗಿಬಿದ್ದ ಜನ, ಬಿಡ್ಡಿಂಗ್‌ನ ಕೊನೆಯ ದಿನ ಭರ್ಜರಿ ಚಂದಾದಾರಿಕೆ
Aeroflex Industries IPO Update: ಸ್ಟೇನ್‌ಲೆಸ್ ಸ್ಟೀಲ್ ಫ್ಲೆಕ್ಸಿಬಲ್ ಹೋಸ್ ತಯಾರಕ ಏರೋಫ್ಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗೆೆ ಗುರುವಾರ ಕೊನೆಯ ದಿನವಾಗಿತ್ತು. ಇದಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಷೇರು ಪೇಟೆ ಹೂಡಿಕೆದಾರರು ಏರೋಫ್ಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಐಪಿಒ ಕುರಿತು ಹೆಚ್ಚು ಆಸಕ್ತಿ ವಹಿಸಿದ್ದರು. ಸ್ಟೇನ್‌ಲೆಸ್ ಸ್ಟೀಲ್ ಫ್ಲೆಕ್ಸಿಬಲ್ ಹೋಸ್ ತಯಾರಕ ಏರೋಫ್ಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗೆ ನಿನ್ನೆ ಅಂದರೆ ಗುರುವಾರ ಕೊನೆಯ ದಿನವಾಗಿತ್ತು.
ಈ ಐಪಿಒಗೆ ಸಾಂಸ್ಥಿಕ ಖರೀದಿದಾರರಿಂದ ಭಾರೀ ಬೇಡಿಕೆ ಉಂಟಾಗಿದ್ದು 97.07 ಟೈಮ್ ಚಂದಾದಾರಿಕೆಯಾಗಿದೆ. 351 ಕೋಟಿ ರೂಪಾಯಿಯ 2,25,37,18,090 ಷೇರುಗಳ ಐಪಿಒಗೆ 2,32,17,667 ಷೇರುಗಳ ಬಿಡ್ ಸ್ವೀಕರಿಸಲಾಗಿದೆ ಎಂದು ಎನ್‌ಎಸ್‌ಇ ಅಂಕಿಅಂಶಗಳು ತಿಳಿಸಿವೆ.
ಅರ್ಹ ಸಾಂಸ್ಥಿಕ ಖರೀದಿದಾರರ(ಕ್ಯುಐಬಿ) ಕೆಟಗರಿಯಲ್ಲಿ ಇದು 194.73 ಬಾರಿ ಚಂದಾದಾರಿಕೆಯನ್ನು ಪಡೆದುಕೊಂಡಿದೆ. ಸಾಂಸ್ಥಿಕೇತರ ಕೋಟಾದಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ. ಸಾಂಸ್ಥಿಕೇತರ ಹೂಡಿಕೆದಾರರ ಕೋಟಾವು 126.10 ಟೈಮ್ ಮತ್ತು ರಿಟೇಲ್ ವೈಯಕ್ತಿಕ ಹೂಡಿಕೆದಾರರ ಕೋಟಾವು 34.35 ಟೈಮ್ ಚಂದಾದಾರಿಕೆಯನ್ನು ಪಡೆದುಕೊಂಡಿದೆ.
ಈ ಆರಂಭಿಕ ಷೇರು ವಿತರಣೆಯು 162 ಕೋಟಿ ರೂಪಾಯಿವರೆಗೆ ಫ್ರೆಶ್ ಇಶ್ಯೂ ಮತ್ತು 1.75 ಕೋಟಿ ಈಕ್ವಿಟಿ ಷೇರುಗಳ ಮಾರಾಟದ ಪ್ರಸ್ತಾಪ ಹೊಂದಿದೆ. ಪ್ರತಿ ಷೇರಿಗೆ 102-108 ರೂಪಾಯಿ ಆಫರ್ ನೀಡಲಾಗಿತ್ತು. ಕಂಪನಿಯು ಆಂಕರ್ ಹೂಡಿಕೆದಾರರಿಂದ ಸೋಮವಾರ 104 ಕೋಟಿ ರೂಪಾಯಿ ಸಂಗ್ರಹಿಸಿದೆ.
ಇದರಿಂದ ಬರುವ ಆದಾಯವನ್ನು ಸಾಲವನ್ನು ಮರುಪಾವತಿಸಲು ಮತ್ತು ಕಂಪನಿಯ ಕಾರ್ಯನಿರತ ಬಂಡವಾಳದ ಅಗತ್ಯಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ನಿರ್ದಿಷ್ಟ ಮೊತ್ತವನ್ನು ಕಂಪನಿ ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗೆ ಮತ್ತು ಸ್ವಾಧೀನ ಪ್ರಕ್ರಿಯೆಗಳಿಗೆ ಬಳಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಷೇರುಪೇಟೆಯಲ್ಲಿ ಕೆಲವೊಂದು ಷೇರುಗಳು ಹೂಡಿಕೆದಾರರಿಗೆ ಬೊಂಬಾಟ್ ಲಾಭ ತಂದುಕೊಡುತ್ತವೆ. ಇನ್ನು ಕೆಲವು ಷೇರುಗಳು ಆಮೆಯಂತೆ ಮೆಲ್ಲಗೆ ಸಾಗುತ್ತಿರುತ್ತದೆ. Nucleus Software Exports Ltdನ ಷೇರು ಖರೀದಿಸಿದವರು ಈಗ ಖುಷಿಯಲ್ಲಿದ್ದಾರೆ. ಮೂರು ವರ್ಷದ ಹಿಂದೆ ಈ ಕಂಪನಿಯ ಷೇರು ದರ 248 ರೂಪಾಯಿ ಇತ್ತು. ಇದೀಗ ಇದರ ದರ 1025 ರೂಪಾಯಿಗೆ ತಲುಪಿದೆ. ಅಂದರೆ, ಜೂನ್ 2020 ರಂದು 248.2 ರೂಪಾಯಿ ದರವಿದ್ದ ಈ ಷೇರಿನ ದರ ಇದೀಗ (ಜೂನ್ 23, 2023) 1025 ರೂಗೆ ತಲುಪಿ ಶೇಕಡ 313ರಷ್ಟು ಲಾಭವನ್ನು ಷೇರು ಹೂಡಿಕೆದಾರರಿಗೆ ತಂದುಕೊಟ್ಟಿದೆ.
ಕೆಲವೊಂದು ಐಪಿಒಗೆ ಬೇಡಿಕೆ ಹೆಚ್ಚಲು ಇಂತಹ ಅಂಶಗಳು ಕಾರಣವಾಗುತ್ತವೆ. ಇದೇ ರೀತಿ ಹೂಡಿಕೆದಾರರು ಏರೋಫ್ಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಐಪಿಒ ಕುರಿತು ಕಳೆದ ಕೆಲವು ದಿನಗಳಿಂದ ಹೂಡಿಕೆದಾರರು ಹೆಚ್ಚಿನ ಆಸಕ್ತಿ ಹೊಂದಿದ್ದರು.