Sensex Crash: 888 ಅಂಕ ಕುಸಿದ ಸೆನ್ಸೆಕ್ಸ್‌, ಸತತ 6 ದಿನಗಳ ಏರಿಕೆ ಬಳಿಕ ಮಹಾಪತನ, ಹೂಡಿಕೆದಾರರಿಗೆ 1.61 ಲಕ್ಷ ಕೋಟಿ ರೂ ನಷ್ಟ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sensex Crash: 888 ಅಂಕ ಕುಸಿದ ಸೆನ್ಸೆಕ್ಸ್‌, ಸತತ 6 ದಿನಗಳ ಏರಿಕೆ ಬಳಿಕ ಮಹಾಪತನ, ಹೂಡಿಕೆದಾರರಿಗೆ 1.61 ಲಕ್ಷ ಕೋಟಿ ರೂ ನಷ್ಟ

Sensex Crash: 888 ಅಂಕ ಕುಸಿದ ಸೆನ್ಸೆಕ್ಸ್‌, ಸತತ 6 ದಿನಗಳ ಏರಿಕೆ ಬಳಿಕ ಮಹಾಪತನ, ಹೂಡಿಕೆದಾರರಿಗೆ 1.61 ಲಕ್ಷ ಕೋಟಿ ರೂ ನಷ್ಟ

Stock Market Closing Bell Today july 21: ಸೆನ್ಸೆಕ್ಸ್‌ 887.64 ಅಂಕ ಕುಸಿದು 66,684.26 ವಹಿವಾಟು ಮುಗಿಸಿದೆ. ಇದೇ ಸಮಯದಲ್ಲಿ ನಿಫ್ಟಿಯು 234.15 ಅಂಕ ಕುಸಿದು 19,745ಕ್ಕೆ ವಹಿವಾಟು ಮುಗಿಸಿದೆ. ಇನ್ಫೋಸಿಸ್‌, ಹಿಂದೂಸ್ತಾನ್‌ ಯುನಿಲಿವರ್‌, ರಿಲಯೆನ್ಸ್‌ ಇಂಡಸ್ಟ್ರೀಸ್‌ನ ಮೊದಲ ತ್ರೈಮಾಸಿಕದ ವರದಿಯು ಷೇರುಪೇಟೆಯ ಭಾವನೆಯ ಮೇಲೆ ಪರಿಣಾಮ ಬೀರಿದೆ.

Sensex Crash: 888 ಅಂಕ ಕುಸಿದ ಸೆನ್ಸೆಕ್ಸ್‌, ಸತತ 6 ದಿನಗಳ ಏರಿಕೆ ಬಳಿಕ ಮಹಾಪತನ, ಹೂಡಿಕೆದಾರರಿಗೆ 1.61 ಲಕ್ಷ ಕೋಟಿ ರೂ ನಷ್ಟ
Sensex Crash: 888 ಅಂಕ ಕುಸಿದ ಸೆನ್ಸೆಕ್ಸ್‌, ಸತತ 6 ದಿನಗಳ ಏರಿಕೆ ಬಳಿಕ ಮಹಾಪತನ, ಹೂಡಿಕೆದಾರರಿಗೆ 1.61 ಲಕ್ಷ ಕೋಟಿ ರೂ ನಷ್ಟ

ಬೆಂಗಳೂರು: ಭಾರತದ ಷೇರುಪೇಟೆಯಲ್ಲಿ ಇಂದು ಮಹಾ ಕುಸಿತ ಸಂಭವಿಸಿದೆ. ಇನ್ಫೋಸಿಸ್‌ ಸೇರಿದಂತೆ ಪ್ರಮುಖ ಕಂಪನಿಗಳ ಮೊದಲ ತ್ರೈಮಾಸಿಕದ ವರದಿಗಳು ಮಾರುಕಟ್ಟೆಯ ಭಾವನೆಯನ್ನು ನಿರಾಶೆಗೊಳಿಸಿದ ಬಳಿಕ ಷೇರುಪೇಟೆಯು ಇಂದು ಕುಸಿತ ಕಂಡಿದೆ. ಸತತ ಆರು ದಿನಗಳ ಏರಿಕೆಯ ಬಳಿಕ ಜುಲೈ 21ರಂದು ಷೇರುಪೇಟೆ ಕುಸಿತ ದಾಖಲಿಸಿದೆ. ಇದರೊಂದಿಗೆ ಜಾಗತಿಕ ದುರ್ಬಲ ಸೂಚನೆಗಳು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರ ಮಾರಾಟ ಪ್ರವೃತ್ತಿಯೂ ಷೇರುಪೇಟೆಗೆ ಕಠಿಣವಾಗಿ ಪರಿಣಮಿಸಿದೆ.

ಇಂದು ಮಧ್ಯಾಹ್ನ 12:54 ಗಂಟೆಗೆ ನಿಫ್ಟಿ 50 ಸೂಚ್ಯಂಕವು ಶೇಕಡ 1.17ರಷ್ಟು ಅಥವಾ 234.15 ಅಂಕಗಳಷ್ಟು ಕುಸಿದಿದ್ದು. 19,745.00ಕ್ಕೆ ತಲುಪಿತ್ತು. ಇದೇ ಸಮಯದಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಸೂಚ್ಯಂಕವು 887.64 ಅಂಕ ಅಥವಾ ಶೇಕಡ 1.31 ಕುಸಿದು 66,684.26 ಅಂಕಕ್ಕೆ ತಲುಪಿತ್ತು. ಇದೀಗ ಬಂದ ವರದಿ ಪ್ರಕಾರ ಸೆನ್ಸೆಕ್ಸ್‌ 887.64 ಅಂಕ ಕುಸಿದು 66,684.26 ವಹಿವಾಟು ಮುಗಿಸಿದೆ. ಇದೇ ಸಮಯದಲ್ಲಿ ನಿಫ್ಟಿಯು 234.15 ಅಂಕ ಕುಸಿದು 19,745ಕ್ಕೆ ವಹಿವಾಟು ಮುಗಿಸಿದೆ.

ಒಟ್ಟಾರೆ ಇಂದಿನ ಷೇರು ವಹಿವಾಟಿನಲ್ಲಿ ಈಕ್ವಿಟಿ ಹೂಡಿಕೆದಾರರು 1.61 ಲಕ್ಷ ಕೋಟಿ ರೂ. ಬಡವರಾಗಿದ್ದಾರೆ. ಬಿಎಸ್‌ಇನಲ್ಲಿ ಲಿಸ್ಟ್‌ ಮಾಡಲಾದ ಕಂಪನಿಗಳ ಮಾರುಕಟ್ಟೆ ಮೌಲ್ಯ ಇಷ್ಟು ಕಡಿಮೆಯಾಗಿದೆ. ಒಟ್ಟಾರೆಯಾಗಿ ಇದು 302.43 ಕೋಟಿ ರೂ ಕುಸಿತ ಕಂಡಿದೆ.

ಕೆಲವು ವಲಯ ಹೊರತುಪಡಿಸಿದ ಬಹುತೇಕ ವಲಯದಲ್ಲಿ ಇಂದು ಕುಸಿತ ದಾಖಲಾಗಿದೆ. ಪಿಎಸ್‌ಯು ಬ್ಯಾಂಕ್‌, ಮಾಧ್ಯಮ ಮತ್ತು ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವು ವಲಯಗಳಲ್ಲಿ ಈ ಪ್ರವೃತ್ತಿ ಇಂದು ಕಾಣಿಸಿದೆ. ಆದರೆ, ನಿಫ್ಟಿ ಸ್ಮಾಲ್‌ಕ್ಯಾಪ್‌ 100 ಷೇರುಗಳು ಮೇಲುಗೈ ಸಾಧಿಸಿದೆ. ಮಿಡ್‌ಕ್ಯಾಪ್‌ ಸೂಚ್ಯಂಕವು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದೆ.

ಇನ್ಫೋಸಿಸ್‌ ತೀವ್ರ ಕುಸಿತ

ಇಂದಿನ ಷೇರುಪೇಟೆಯ ವಹಿವಾಟಿನಲ್ಲಿ ಇನ್ಪೋಸಿಸ್‌ ಕಂಪನಿಯ ತೀವ್ರ ಕುಸಿತವು ನಿಫ್ಟಿಯ ಐಟಿ ಷೇರುಗಳ ಇಳಿಕೆಗೆ ಕಾರಣವಾಯಿತು. ಇಂದು ನಿಫ್ಟಿ ಐಟಿ ಸೂಚ್ಯಂಕವು ಶೇಕಡ 4ರಷ್ಟು ಕುಸಿತ ಕಂಡಿದೆ. ನಿಫ್ಟಿಯ ಗ್ರಾಹಕ ಅಗತ್ಯ ವಸ್ತುಗಳು ಷೇರುಗಳು, ಎಫ್‌ಎಂಸಿಜಿ ಇತ್ಯಾದಿ ಸೂಚ್ಯಂಕಗಳು ಶೇಕಡ 1ರಷ್ಟು ಕುಸಿತ ಕಂಡಿವೆ.

ಇಂದು ಕೂಡ ದಲಾಲ್‌ ಸ್ಟ್ರೀಟ್‌ನಲ್ಲಿ ಭಾರತದ ಇನ್ಫೋಸಿಸ್‌ನ ಷೇರುಗಳು ಕೆಳಮಟ್ಟದಲ್ಲಿಯೇ ವಹಿವಾಟು ಆರಂಭಿಸಿತ್ತು. ಮುಂಬೈ ಷೇರು ಪೇಟೆಯಲ್ಲಿ ಇಂಟ್ರಾ ಡೇಯಲ್ಲಿ ಒಂದು ಷೇರಿನ ದರ ಅತ್ಯಂತ ಕಡಿಮೆ ಎಂದರೆ 1,305 ರೂಪಾಯಿಗೆ ತಲುಪಿತು. ಆದರೆ, ಅದಾದ ಬಳಿಕ 10:15 ಗಂಟೆಗೆ ಭಾರತದ ಐಟಿ ಕಂಪನಿಯ ಷೇರುಗಳು ತುಸು ರಿಕವರಿ ಕಂಡಿತು. ಅಂದರೆ 1,343.70 ರೂಪಾಯಿಗೆ ತಲುಪಿತ್ತು. ಭಾರತದ ಷೇರು ಪೇಟೆ ವಹಿವಾಟು ಆರಂಭಿಸಿದ ಒಂದು ಗಂಟೆಯಲ್ಲಿ ಇನ್ಫೋಸಿಸ್‌ನ ಪ್ರತಿಷೇರು ದರ 105.80 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಗುರುವಾರ ಇನ್ಫೋಸಿಸ್‌ ಪ್ರಕಟಿಸಿದ ವರದಿ ಪ್ರಕಾರ ಕಂಪನಿಯ ನಿವ್ವಳ ಲಾಭವು ಶೇಕಡ 11ರಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭ 5,945 ಕೋಟಿ ರೂ.ನಷ್ಟು ಹೆಚ್ಚಾಗಿದೆ. ಆದರೆ, ಇದು 6,150 ಕೋಟಿ ರೂ. ಆಗುವ ಅಂದಾಜಿತ್ತು. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 10 ಏರಿಕೆಯಾಗಿದು, 37,933 ಕೋಟಿ ರೂ.ಗೆ ತಲುಪಿದೆ. ಆದಾಯದ ಬೆಳವಣಿಗೆ ಶೇಕಡ 1-3.5 ಆಗಿದೆ. ಇದಕ್ಕೂ ಹಿಂದೆ ಬೆಳವಣಿಗೆ ದರ ಶೇಕಡ 4-7 ರಷ್ಟು ಏರಿಕೆ ಕಂಡಿತ್ತು.

ರಿಲಯೆನ್ಸ್‌ ಇಂಡಸ್ಟ್ರೀಸ್‌, ಎಚ್‌ಯುಎಲ್‌ ಷೇರುಗಳ ಮೇಲೂ ಪರಿಣಾಮ

ಇಂದಿನ ವಹಿವಾಟಿನಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್‌ ಸೂಚ್ಯಂಕದಲ್ಲಿ ಹೆವಿ ತೂಕದ ಷೇರಾದ ರಿಲಯೆನ್ಸ್‌ ಇಂಡಸ್ಟ್ರೀಸ್‌ ಮೇಲೂ ಪರಿಣಾಮ ಬೀರಿದೆ. ರಿಲಯೆನ್ಸ್‌ ಇಂಡಸ್ಟ್ರೀಸ್‌ ಮತ್ತು ಅದರ ಹಣಕಾಸು ಸೇವಾ ಅಂಗಸಂಸ್ಥೆಯ ವಿಭಜನೆಯೂ ಷೇರುಪೇಟೆಯಲ್ಲಿ ನಕಾರಾತ್ಮಕ ಪರಿಣಾಂ ಬೀರಿದೆ.

ಹಿಂದೂಸ್ತಾನ್‌ ಯುನಿಲಿವರ್‌ ಷೇರುಗಳು ಇಳಿಕೆ ಕಂಡಿವೆ. ಹಿಂದೂಸ್ತಾನ್‌ ಯೂನಿಲಿವರ್‌ನ ಮೊದಲ ತ್ರೈಮಾಸಿಕದ ವರದಿ ಬಂದ ಬಳಿಕ ಕಂಪನಿಯ ಷೇರುಗಳು ಇಂದು ಇಳಿಮುಖವಾದವು. ಒಟ್ಟಾರೆ, ಇಂತಹ ಹಲವು ಕಂಪನಿಗಳ ಮೊದಲ ತ್ರೈಮಾಸಿಕದ ವರದಿಯು ಮಾರುಕಟ್ಟೆಯ ಭಾವನೆಯ ಮೇಲೆ ಬಲವಾದ ಹೊಡೆತ ನೀಡಿದ್ದು, ಷೇರುಪೇಟೆ ಇಳಿಕೆಗೆ ಕಾರಣವಾಯಿತು.

 

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.