Stock Market Opens: ವಾರಾಂತ್ಯದಲ್ಲಿ ಷೇರುಪೇಟೆ ನೀರವ ಆರಂಭ ನಿರೀಕ್ಷೆ, ಶುಕ್ರವಾರ ಗಮನಿಸಬಹುದಾದ ಷೇರುಗಳ ವಿವರ
Stock Market Open: ಜಾಗತಿಕ ಕೇಂದ್ರ ಬ್ಯಾಂಕ್‌ಗಳ ನಿರ್ಧಾರದ ಕುರಿತು ಆತಂಕ ಇರುವ ಕಾರಣ ದೇಶದ ಷೇರುಪೇಟೆಯಲ್ಲಿ ಕೊಂಚ ಏರುಪೇರಾಗಬಹುದು ಎಂದು ಷೇರು ತಜ್ಞರು ಹೇಳಿದ್ದಾರೆ. ಬ್ಯಾಂಕ್ ಆಫ್ ಇಂಗ್ಲೆಂಡ್ ನಿರೀಕ್ಷೆಗಿಂತ ಹೆಚ್ಚು ಬಡ್ಡಿದರ ಹೆಚ್ಚಿಸಿ ಹೂಡಿಕೆದಾರರಿಗೆ ಅಚ್ಚರಿ ಉಂಟು ಮಾಡಿದೆ.
ಬೆಂಗಳೂರು: ಭಾರತೀಯ ಷೇರುಪೇಟೆಯು ಶುಕ್ರವಾರ ನೀರವ ಆರಂಭ ಪಡೆಯುವ ಸೂಚನೆಯಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿಯು ದಾಖಲೆ ಮಟ್ಟಕ್ಕೆ ತಲುಪುವ ತೂಗುಯ್ಯಲೆಯಲ್ಲಿದ್ದು, ಆರಂಭ ನೀರಸವಾಗಿರುವ ಸೂಚನೆಯನ್ನು ಷೇರು ತಜ್ಞರು ನೀಡಿದ್ದಾರೆ.
ಸಿಂಗಾಪುರ ಷೇರುಪೇಟೆಯಲ್ಲಿ ಲಿಸ್ಟ್ ಮಾಡಲಾದ ಭಾರತದ ಎನ್‌ಎಸ್‌ಇ ಸ್ಟಾಕ್ ಫ್ಯೂಚರ್ಸ್ ಇಂದು ಬೆಳಗ್ಗೆ 8 ಗಂಟೆಗೆ ಶೇಕಡ 0.06ರಷ್ಟು ಇಳಿಕೆ ಕಂಡು 18,820ಕ್ಕೆ ತಲುಪಿದೆ. ಕಳೆದ ಎರಡು ಅವಧಿಯಲ್ಲಿ ಮುಂಬಯಿ ಷೇರುಪೇಟೆಯು ಹೊಸ ದಾಖಲೆ ತಲುಪಿದೆ. ನಿಫ್ಟಿಯು ನಿನ್ನೆ ಸಾರ್ವಕಾಲಿಕ ಎತ್ತರ ತಲುಪಿದೆ. ಆದರೆ, ವಾರದಿಂದ ವಾರಕ್ಕೆ ಹೋಲಿಸಿದರೆ ಈ ಎರಡು ಸೂಚ್ಯಂಕಗಳು ಈ ವಾರ ಶೇಕಡ 0.2ರಷ್ಟು ಇಳಿಕೆ ಕಂಡಿವೆ. ಈ ಮೂಲಕ ಕಳೆದ ನಾಲ್ಕು ವಾರಗಳ ಸತತ ಏರಿಕೆ (ವಾರಗಳಲ್ಲಿ) ಇಂದು ಕೊನೆಗೊಳ್ಳುವ ಸೂಚನೆಯಿದೆ.
ಜಾಗತಿಕ ಕೇಂದ್ರ ಬ್ಯಾಂಕ್‌ಗಳ ನಿರ್ಧಾರದ ಕುರಿತು ಆತಂಕ ಇರುವ ಕಾರಣ ದೇಶದ ಷೇರುಪೇಟೆಯಲ್ಲಿ ಕೊಂಚ ಏರುಪೇರಾಗಬಹುದು ಎಂದು ಷೇರು ತಜ್ಞರು ಹೇಳಿದ್ದಾರೆ. ಬ್ಯಾಂಕ್ ಆಫ್ ಇಂಗ್ಲೆಂಡ್ ನಿರೀಕ್ಷೆಗಿಂತ ಹೆಚ್ಚು ಬಡ್ಡಿದರ ಹೆಚ್ಚಿಸಿ ಹೂಡಿಕೆದಾರರಿಗೆ ಅಚ್ಚರಿ ಉಂಟು ಮಾಡಿದೆ. ಇದೇ ಸಮಯದಲ್ಲಿ ಸ್ವಿಸ್ ನ್ಯಾಷನಲ್ ಬ್ಯಾಂಕ್ ಮತ್ತು ನೋರ್ಜೆಸ್ ಬ್ಯಾಂಕ್‌ಗಳು ಕೂಡ ಹಣದುಬ್ಬರ ವಿಷಯವನ್ನು ಗಮನದಲ್ಲಿಟ್ಟುಕೊಂಡು ಬಡ್ಡಿದರ ಹೆಚ್ಚಿಸಿವೆ.
ಭಾರತದ ಆರು ಸದಸ್ಯರ ವಿತ್ತೀಯ ನೀತಿ ಸಮಿತಿ (MPC) ಸದಸ್ಯರು ಭವಿಷ್ಯದಲ್ಲಿ ಬಡ್ಡಿದರ ಹೆಚ್ಚಿಸುವ ಕುರಿತು ತಮ್ಮ ವಿಭಿನ್ನ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ಕೆಲವು ಬಾಹ್ಯ ಸದಸ್ಯರು ಆರ್ಥಿಕ ಕ್ರಮಗಳನ್ನು ಬಿಗಿಗೊಳಿಸುವುದು ಆರ್ಥಿಕ ಚೇತರಿಕೆಗೆ ಅಡ್ಡಿಯಾಗಬಹುದು ಎಂದು ವಾದಿಸಿದ್ದಾರೆ.
ಈ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ನಿವ್ವಳ ಆಧಾರದ ಮೇಲೆ 6.93 ಶತಕೋಟಿ ರೂಪಾಯಿ (84.6 ಮಿಲಿಯನ್ ಡಾಲರ್) ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಹೂಡಿಕೆದಾರರು 2.19 ಶತಕೋಟಿ ರೂಪಾಯಿ ಷೇರುಗಳನ್ನು ಖರೀದಿಸಿದ್ದಾರೆ ಎಂದು ಎನ್‌ಎಸ್‌ಇ ಅಂಕಿಅಂಶಗಳಿಂದ ತಿಳಿದುಬಂದಿದೆ.
ಫೆಡರಲ್ ರಿಸರ್ವ್ ಮುಖ್ಯಸ್ಥರಾದ ಪೊವೆಲ್ ಅವರು ನಿನ್ನೆ ನೀಡಿದ ಹೇಳಿಕೆಯು ವಾಲ್ ಸ್ಟ್ರೀಟ್ ಷೇರುಗಳಿಗೆ ಚೇತೋಹಾರಿಯಾಯಿತು. ಕೇಂದ್ರ ಬ್ಯಾಂಕ್ ಎಚ್ಚರಿಕೆಯಿಂದ ಮುಂದುವರೆಯುತ್ತದೆ ಎಂದು ಅವರು ಭರವಸೆ ನೀಡಿದ ಬಳಿಕ ವಾಲ್ ಸ್ಟ್ರೀಟ್ ಈಕ್ವಿಟಿಗಳು ರಾತ್ರೋರಾತ್ರಿ ಲಾಭವನ್ನು ಗಳಿಸಿವೆ. ಏಷ್ಯ ಷೇರುಗಳು ಶೇಕಡ 1ರಷ್ಟು ಕುಸಿದಿವೆ.
ಈ ಷೇರುಗಳನ್ನು ಗಮನಿಸಿ
ಈರೋಸ್ ಇಂಟರ್‌ನ್ಯಾಷನಲ್ ಮೀಡಿಯಾ ಲಿಮಿಟೆಡ್: ತನ್ನ ಖಾತೆ ಬುಕ್‌ಗಳಲ್ಲಿ ತಪ್ಪು ಮಾಹಿತಿ ನೀಡಿದ ಕಾರಣಕ್ಕಾಗಿ ಸೆಕ್ಯುರಿಟಿಸ್ ಮಾರುಕಟ್ಟೆಯಿಂದ ಈರೋಸ್ ಇಂಟರ್‌ನ್ಯಾಷನಲ್ ಮೀಡಿಯಾ ಲಿಮಿಟೆಡ್‌ನ ಮೂರು ಘಟಕಗಳನ್ನು ಭಾರತೀಯ ಮಾರುಕಟ್ಟೆ ನಿಯಂತ್ರಕವು ನಿರ್ಬಂಧಿಸಿದೆ.
ಟಾಟಾ ಸ್ಟೀಲ್ ಲಿಮಿಟೆಡ್: ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ವೇಗಗೊಳಿಸದ ಹೊರತು 2030 ರ ವೇಳೆಗೆ ಮಾಲಿನ್ಯ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.
ವೇದಾಂತ ಲಿಮಿಟೆಡ್: ತೂತುಕುಡಿಯಲ್ಲಿರುವ ತನ್ನ ಸ್ಟೆರ್ಲೈಟ್ ಕಾಪರ್ ಘಟಕವನ್ನು ಮಾರಾಟ ಮಾಡುವ ಸುದ್ದಿಯು ಸುಳ್ಳು ಎಂದು ಕಂಪನಿ ಖಚಿತಪಡಿಸಿದೆ.
ಲ್ಯಾಂಡ್‌ಮಾರ್ಕ್ ಕಾರ್ಸ್ ಲಿಮಿಟೆಡ್: ಬ್ಲಾಕ್ ಡೀಲ್ ಮೂಲಕ ಖಾಸಗಿ ಷೇರು ಕಂಪನಿ ಟಿಪಿಜಿ ಕ್ಯಾಪಿಟಲ್ ಈ ಕಂಪನಿಯ 4.4 ಮಿಲಿಯನ್ ಷೇರುಗಳನ್ನು ಅಂದರೆ ಶೇಕಡ 11ರಷ್ಟು ಷೇರುಗಳನ್ನು ಮಾರಾಟ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್: ಬಂಡವಾಳ ಹೂಡಿಕೆ ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುವುದಾಗಿ ಕಂಪನಿ ತಿಳಿಸಿದೆ.
ಕರೆನ್ಸಿ ಮೌಲ್ಯ
1 ಡಾಲರ್= 81.9594 ರೂಪಾಯಿ.
(ಸುದ್ದಿ ಮೂಲ: ರಾಯಿಟರ್ಸ್, ಕನ್ನಡಕ್ಕೆ: ಹಿಂದೂಸ್ತಾನ್ ಟೈಮ್ಸ್ ಕನ್ನಡ)