Paytm shares: ಆರ್‌ಬಿಐ ನಿರ್ಬಂಧ ಭೀತಿಯಿಂದ ಕುಸಿದಿದ್ದ ಪೇಟಿಎಂ ಷೇರುಗಳಲ್ಲಿ ತುಸು ಚೇತರಿಕೆ, ಇಂದು ಶೇ 5ರಷ್ಟು ಏರಿಕೆ
ಆರ್‌ಬಿಐ ನಿರ್ಬಂಧದ ಭೀತಿಯ ನಂತರ ಪಾತಾಳಕ್ಕೆ ಕುಸಿದಿದ್ದ, ಪೇಟಿಎಂ ಷೇರುಗಳಲ್ಲಿ ಕೊಂಚ ಚೇತರಿಕೆ ಕಾಣುತ್ತಿದೆ. ಇಂದು ಶೇ 5 ರಷ್ಟು ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪುಟಿದೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Paytm share price today: ಷೇರು ಮಾರುಕಟ್ಟೆಯ ಭವಿಷ್ಯವನ್ನು ಬಲ್ಲವರಿಲ್ಲ. ಇಲ್ಲಿ ಯಾವಾಗ ಏರಿಕೆಯಾಗುತ್ತದೆ, ಯಾವಾಗ ಕುಸಿಯುತ್ತದೆ ಎಂಬುದನ್ನು ಊಹಿಸುವುದೂ ಅಸಾಧ್ಯ. ಪೇಟಿಎಂ ಬ್ಯಾಂಕ್ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ಹೇರಿದ್ದ ಬೆನ್ನಲ್ಲೇ ಪೇಟಿಎಂ ಷೇರುಗಳು ಪಾತಾಳಕ್ಕೆ ಕುಸಿದಿದ್ದವು. ಮೂರು ದಿನಗಳ ಕಾಲ ಮಾರುಕಟ್ಟೆಯಲ್ಲಿ ಸತತ ನಷ್ಟ ಕಂಡಿದ್ದ, ಪೇಟಿಎಂ ಷೇರುಗಳು ಇಂದು (ಫೆ. 6) ಕೊಂಚ ಚೇತರಿಕೆ ಕಂಡಿದೆ. ಶೇ 5ರಷ್ಟು ಲಾಭ ಗಳಿಸುವ ಮೂಲಕ ಹೂಡಿಕೆದಾರರು ನಿಟ್ಟುಸಿರು ಬಿಡುವಂತಾಗಿದೆ. ಫೆ. 29ರ ನಂತರ ಹೊಸ ಠೇವಣಿಗಳನ್ನು ಸ್ವೀಕರಿಸುವುದು ಹಾಗೂ ಕ್ರೆಡಿಟ್ ವಹಿವಾಟುಗಳನ್ನು ನಡೆಸದಂತೆ ಆರ್‌ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಿದೆ.
ಇಂದು ಬೆಳಿಗ್ಗೆ 9.40ರ ಹೊತ್ತಿಗೆ ಪೇಟಿಎಂ 466 ರೂ. ನಲ್ಲಿ ವಹಿವಾಟು ನಡೆಸುತ್ತಿತ್ತು. ಫೆ. 5 ರಂದು ಪೇಮೆಂಟ್ ಮೂಲ ಸಂಸ್ಥೆ ಒನ್ 97 ಕಮ್ಯೂನಿಕೇಷನ್ ಷೇರುಗಳು ಕೂಡ ಶೇ 10ರಷ್ಟು ಕುಸಿತ ಕಂಡಿತ್ತು. ನಿನ್ನೆ 761.4 ರೂನಲ್ಲಿ ವಹಿವಾಟು ನಡೆಸಿದ್ದ ಒನ್97 ಷೇರುಗಳು ಶೇ 41ರಷ್ಟು ನಷ್ಟ ಅನುಭವಿಸಿದೆ.
ಈ ನಡುವೆ ಟ್ರೇಡರ್ಸ್ ಬಾಡಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ವ್ಯಾಪಾರಗಳನ್ನು ಪರ್ಯಾಯ ಪಾವತಿ ಅಪ್ಲಿಕೇಶನ್‌ಗಳಿಗೆ ಬದಲಾಯಿಸುವಂತೆ ಸಲಹೆ ನೀಡಿರುವ ಕಾರಣ ಷೇರುಗಳಲ್ಲಿ ಗಳಿಕೆಯಾಗಿರುವುದನ್ನು ಗಮನಿಸಬಹುದಾಗಿದೆ.
ʼಆರ್‌ಬಿಐ ಕೆಲವು ನಿರ್ಬಂಧಗಳನ್ನು ವಿಧಿಸಿದ್ದು, ಬಳಕೆದಾರರು ತಮ್ಮ ಹಣವನ್ನು ರಕ್ಷಿಸಿಕೊಳ್ಳಲು ಹಾಗೂ ಅಡೆತಡೆಯಿಲ್ಲದ ವಹಿವಾಟುಗಳನ್ನು ನಡೆಸಲು ಅನುಕೂಲವಾಗುವಂತೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆಸಿಎಐಟಿ ಶಿಫಾರಸು ಮಾಡಲು ಪ್ರೇರೆಪಿಸಿದೆ. ಬಹುತೇಕ ಸಣ್ಣ ವ್ಯಾಪಾರಿಗಳು, ಮಾರಾಟಗಳು ಹಾಗೂ ಮಹಿಳೆಯರು ಹಣ ಪಾವತಿಗೆ ಪೇಟಿಎಂ ಬ್ಯಾಂಕ್ ಅನ್ನು ಅವಲಂಬಿಸಿದ್ದಾರೆ. ಆದರೆ ಆರ್‌ಬಿಐನ ಈ ನಿರ್ಬಂಧಗಳು ಅಂತಹವರಿಗೆ ತೊಂದರೆ ಉಂಟು ಮಾಡಬಹುದುʼ ಎಂದು ಸಿಎಐಟಿ ಅಂದಾಜಿಸಿದೆ.
ಪೇಟಿಎಂ ಬಿಕ್ಕಟ್ಟಿನ ಬಗ್ಗೆ ಸಿಇಒ ವಿಜಯ್ ಶೇಖರ್ ಶರ್ಮಾ ಮಾತು
ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರು ʼರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದೊಂದಿಗೆ ಇನ್ನೂ ತೊಡಗಿಸಿಕೊಂಡಿರುವುದರಿಂದ ಕಂಪನಿಯಲ್ಲಿ ಯಾರನ್ನೂ ವಜಾಗೊಳಿಸುವುದಿಲ್ಲʼ ಎಂದು ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ.
"ನಮಗೆ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಖಚಿತವಾಗಿಲ್ಲ. ನಿಖರವಾಗಿ ಏನು ತಪ್ಪಾಗಿದೆ ಎಂದು ತಿಳಿದಿಲ್ಲ. ಆದರೆ ನಾವು ಎಲ್ಲವನ್ನೂ ಶೀಘ್ರದಲ್ಲೇ ಲೆಕ್ಕಾಚಾರ ಮಾಡುತ್ತೇವೆ. ಈ ಬಗ್ಗೆ ಏನು ಮಾಡಬಹುದೆಂದು ಆರ್‌ಬಿಐ ಜೊತೆ ಚರ್ಚಿಸುತ್ತೇವೆʼ ಎಂದು ಅವರು ಪೇಟಿಎಂ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಈ ಹಿಂದೆ, ಫೆಬ್ರವರಿ 29 ರ ನಂತರವೂ Paytm ಅಪ್ಲಿಕೇಶನ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು.
"ನಿಮ್ಮ ಮೆಚ್ಚಿನ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ, ಫೆಬ್ರವರಿ 29 ರ ನಂತರ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬ Paytm ತಂಡದ ಸದಸ್ಯರೊಂದಿಗೆ ನಿಮ್ಮನ್ನು ಅಭಿನಂದಿಸುತ್ತೇನೆ. ಪ್ರತಿ ಸವಾಲಿಗೆ, ಒಂದು ಪರಿಹಾರವಿದೆ ಮತ್ತು ನಮ್ಮ ರಾಷ್ಟ್ರದ ಸಂಪೂರ್ಣ ಅನುಸರಣೆಗೆ ನಾವು ಪ್ರಾಮಾಣಿಕವಾಗಿ ಬದ್ಧರಾಗಿದ್ದೇವೆ" ಅವರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್‌ನಲ್ಲಿ ಹೇಳಿದರು.