TCS Job Scandal: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನಲ್ಲಿ ಉದ್ಯೋಗಕ್ಕಾಗಿ ಲಂಚ, ನಾಲ್ವರು ಎಕ್ಸಿಕ್ಯುಟಿವ್‌ಗಳಿಗೆ ಗೇಟ್‌ಪಾಸ್‌ ನೀಡಿದ ಟಿಸಿಎಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tcs Job Scandal: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನಲ್ಲಿ ಉದ್ಯೋಗಕ್ಕಾಗಿ ಲಂಚ, ನಾಲ್ವರು ಎಕ್ಸಿಕ್ಯುಟಿವ್‌ಗಳಿಗೆ ಗೇಟ್‌ಪಾಸ್‌ ನೀಡಿದ ಟಿಸಿಎಸ್‌

TCS Job Scandal: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನಲ್ಲಿ ಉದ್ಯೋಗಕ್ಕಾಗಿ ಲಂಚ, ನಾಲ್ವರು ಎಕ್ಸಿಕ್ಯುಟಿವ್‌ಗಳಿಗೆ ಗೇಟ್‌ಪಾಸ್‌ ನೀಡಿದ ಟಿಸಿಎಸ್‌

Bribes for jobs scandal TCS: ಭಾರತದ ಪ್ರಮುಖ ಐಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಲಿಮಿಟೆಡ್‌ನೊಳಗೆ ಬೃಹತ್‌ ಉದ್ಯೋಗ ಹಗರಣ ನಡೆದಿದೆ. ಕಂಪನಿಯ ಹಿರಿಯ ಎಕ್ಸಿಕ್ಯುಟಿವ್‌ಗಳು ಅಭ್ಯರ್ಥಿಗಳಿಂದ ಮತ್ತು ನೇಮಕಾತಿ ಸಂಸ್ಥೆಗಳಿಂದ ಕಮಿಷನ್‌ ಪಡೆದಿರುವುದು ಬಹಿರಂಗವಾಗಿದೆ.

TCS Job Scandal: ಜಾಬ್‌ ಪಡೆಯಲು ಅಭ್ಯರ್ಥಿಗಳಿಂದ ಲಂಚ ಸ್ವೀಕಾರ, ಟಿಸಿಎಸ್‌ನಲ್ಲಿ ಭಾರೀ ಉದ್ಯೋಗ ಹಗರಣ ಬೆಳಕಿಗೆ, ಇಲ್ಲಿದೆ ಸಂಪೂರ್ಣ ವಿವರ
TCS Job Scandal: ಜಾಬ್‌ ಪಡೆಯಲು ಅಭ್ಯರ್ಥಿಗಳಿಂದ ಲಂಚ ಸ್ವೀಕಾರ, ಟಿಸಿಎಸ್‌ನಲ್ಲಿ ಭಾರೀ ಉದ್ಯೋಗ ಹಗರಣ ಬೆಳಕಿಗೆ, ಇಲ್ಲಿದೆ ಸಂಪೂರ್ಣ ವಿವರ

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಲಿಮಿಟೆಡ್‌ (TCS) ಕಂಪನಿಯು ಕಳೆದ ಮೂರು ವರ್ಷಗಳಲ್ಲಿ ಸತತವಾಗಿ ವರ್ಷಕ್ಕೆ ಸುಮಾರು 50 ಸಾವಿರ ಉದ್ಯೋಗಿಗಳನ್ನು(TCS Jobs) ನೇಮಕ ಮಾಡಿಕೊಂಡಿದೆ. ದೇಶದ ಪ್ರಮುಖ ಐಟಿ ಸೇವಾ ಕಂಪನಿಗಳಲ್ಲಿ ಒಂದಾದ ಟಿಸಿಎಸ್‌ನಲ್ಲಿ ಇದೀಗ ಜಾಬ್‌ ಸ್ಕ್ಯಾಂಡಲ್‌ವೊಂದು ಪತ್ತೆಯಾಗಿದೆ. ಐಟಿ ಕಂಪನಿಗಳಲ್ಲಿ ಉದ್ಯೋಗ ನೀಡುವುದಾಗಿ ಹೊರಗಿನಿಂದ ವಂಚಿಸುವವರ ನಡುವೆ ಈ ಕಂಪನಿಯಲ್ಲಿ ಕಂಪನಿಯೊಳಗಿನ ವ್ಯಕ್ತಿಗಳೇ ಅಭ್ಯರ್ಥಿಗಳಿಂದ ಲಂಚ ಪಡೆದಿರುವುದು ಪತ್ತೆಯಾಗಿದೆ. ಟಿಸಿಎಸ್‌ ಕಂಪನಿಗೆ ಸಾವಿರಾರು ಪ್ರಮುಖ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿ ಹೊಂದಿರುವ ಕೆಲವು ಹಿರಿಯ ಅಧಿಕಾರಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಂದ ಲಂಚ ಪಡೆದಿದ್ದಾರೆ ಅಥವಾ ರಾಜಿ ಮಾಡಿಕೊಂಡಿದ್ದಾರೆ. ಈ ಹಗರಣವನ್ನು ಕಂಪನಿಯೇ ಪತ್ತೆಹಚ್ಚಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕಂಪನಿಯು ಕ್ರಮಕೈಗೊಂಡಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ನ ಸಹೋದರಿ ಪತ್ರಿಕೆ ದಿ ಮಿಂಟ್‌ ವರದಿ ಮಾಡಿದೆ.

ಹಗರಣದ ನಿಖರವಾದ ವಿವರಗಳು ಇನ್ನೂ ಬಹಿರಂಗವಾಗದೆ ಇದ್ದರೂ ಈ ಬೆಳವಣಿಗೆ ಬಗ್ಗೆ ಮಾಹಿತಿ ಹೊಂದಿರುವ ಇಬ್ಬರು ಈ ಕುರಿತು ಮಾಹಿತಿ ನೀಡಿದಾರೆ. ಟಿಸಿಎಸ್‌ನ ನೇಮಕಾತಿ ವಿಭಾಗವಾದ ಟಿಸಿಎಸ್‌ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಗ್ರೂಪ್‌ (ಆರ್‌ಎಂಜಿ)ನ ಜಾಗತಿಕ ಮುಖ್ಯಸ್ಥರಾದ ಇಎಸ್‌ ಚಕ್ರವರ್ತಿ ಅವರು ನೇಮಕಾತಿ ಸಂಸ್ಥೆಗಳಿಂದ ಕಳೆದ ಹಲವು ವರ್ಷಗಳಿಂದ ಕಮಿಷನ್‌ ಪಡೆಯುತ್ತಿದ್ದರು ಎಂದು ವಿಷಲ್ ಬ್ಲೋವರ್‌ವೊಬ್ಬರು ಟಿಸಿಎಸ್‌ನ ಸಿಇಒ ಮತ್ತು ಸಿಒಒಗೆ ದೂರು ನೀಡಿದ್ದಾರೆ.

ಈ ದೂರಿನ ತರುವಾಯ ಕಂಪನಿಯು ಈ ಆರೋಪಗಳನ್ನು ತನಿಖೆ ಮಾಡಲು ಸಂಸ್ಥೆಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಅಜಿತ್ ಮೆನನ್ ಸೇರಿದಂತೆ ಮೂವರು ಕಾರ್ಯನಿರ್ವಾಹಕರ ತಂಡವನ್ನು ಸ್ಥಾಪಿಸಿದೆ. ಒಂದು ವಾರದ ತನಿಖೆಯ ಬಳಿಕ ಟಿಸಿಎಸ್‌ ಕಂಪನಿಯು ರಿಕ್ರೂಟ್‌ಮೆಂಟ್‌ವಿಭಾಗದ ಮುಖ್ಯಸ್ಥರಿಗೆ ಗೇಟ್‌ಪಾಸ್‌ ನೀಡಿದೆ. ಜತೆಗೆ ನಾಲ್ವರು ಎಕ್ಸಿಕ್ಯುಟಿವ್‌ ಮತ್ತು ಮೂರು ನೇಮಕ ಕಂಪನಿಗಳಿಗೆ ಆರ್‌ಎಂಜಿಯಿಂದ ಹೊರನಡೆಯಿರಿ ಎಂದಿದೆ. ಈ ಹಗರಣದಲ್ಲಿ ಭಾಗಿಯಾಗಿರುವವರು ಕನಿಷ್ಠ ನೂರು ಕೋಟಿ ಕಮಿಷನ್ ಪಡೆದಿರಬಹುದು ಎನ್ನಲಾಗಿದೆ. ಈ ಕುರಿತು ನಿರ್ದಿಷ್ಟ ಅಂಕಿಅಂಶ ಇನ್ನೂ ದೊರಕಿಲ್ಲ.

ಕಪ್ಪುಪಟ್ಟಿಗೆ ಸೇರಿಸಲಾದ ಸಿಬ್ಬಂದಿ ಸಂಸ್ಥೆಗಳ ಹೆಸರನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ದಿ ಮಿಂಟ್‌ಗೆ ಸಾಧ್ಯವಾಗಲಿಲ್ಲ. ಚಕ್ರವರ್ತಿ ಅವರು ಟಿಸಿಎಸ್‌ಗೆ 1997ರಲ್ಲಿ ನೇಮಕಗೊಂಡಿದ್ದರು. ಈಗ ಉಪಾಧ್ಯಕ್ಷ ರಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಈ ಪ್ರಕರಣದ ಕುರಿತು ತಮ್ಮ ಪಾತ್ರದ ಕುರಿತು ಸ್ಪಷ್ಟನೆ ನೀಡುವಂತೆ ದಿ ಮಿಂಟ್‌ ಚಕ್ರವರ್ತಿ ಅವರಿಗೆ ಇಮೇಲ್‌ ಮಾಡಿದೆ. ಇಂದಿನವರೆಗೆ ಈ ಇಮೇಲ್‌ಗೆ ಉತ್ತರ ಬಂದಿಲ್ಲ. ಲಿಂಕ್ಡ್‌ಇನ್‌ನಲ್ಲಿ ಡಿಬಾರ್‌ ಆದ ಇನ್ನೊಬ್ಬರು ಎಕ್ಸಿಕ್ಯುಟಿವ್‌ಗೆ ಸಂದೇಶ ಕಳುಹಿಸಿದರೂ ಉತ್ತರ ದೊರಕಿಲ್ಲ. "ಕಾಲಕಾಲಕ್ಕೆ ಉದ್ಭವಿಸುವ ನೀತಿಸಂಹಿತೆ ಉಲ್ಲಂಘನೆಗಳ ಕುರಿತು ದೂರುಗಳನ್ನು ತನಿಖೆ ಮಾಡಲು ಮತ್ತು ಪರಿಹರಿಸಲು ಕಂಪನಿಯು ದೃಢವಾದ ವ್ಯವಸ್ಥೆ ಹೊಂದಿದೆ" ಎಂದು ಟಿಸಿಎಸ್‌ ವಕ್ತಾರರು ಹೇಳಿದ್ದಾರೆ.

ಟಿಸಿಎಸ್‌ನ ಆರ್‌ಎಂಜಿ ವಿಭಾಗದಲ್ಲಿ ಸುಮಾರು 3 ಸಾವಿರ ಪ್ರಮುಖ ಹುದ್ದೆಗಳಿವೆ. ಅವರಲ್ಲಿ 1400 ಎಂಜಿನಿಯರ್‌ಗಳಿದ್ದಾರೆ. ಕಂಪನಿಯು ಸಾಮಾನ್ಯವಾಗಿ ಎಂಪ್ಲಾಯಿ ರೆಫರಲ್‌ ಫ್ರೋಗ್ರಾಮ್‌ ಮತ್ತು ಸ್ಟಾಫಿಂಗ್‌ ಕಂಪನಿಗಳ ಮೂಲಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ತಾತ್ಕಾಲಿಕ ಉದ್ಯೋಗಿಗಳನ್ನು ಅಥವಾ ಕಾಂಟ್ರಾಕ್ಟರ್‌ಗಳನ್ನು ಸ್ಟಾಫಿಂಗ್‌ ಕಂಪನಿಗಳ ಮೂಲಕ ನೇಮಕ ಮಾಡಿಕೊಳ್ಳುತ್ತಿದೆ.

ಟಿಸಿಎಸ್‌ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜೂನ್‌ 1ರಂದು ಕೆ. ಕೃತಿವಾಸನ್‌ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಇಂತಹ ಪ್ರಮುಖ ಹಗರಣವೊಂದು ಬೆಳಕಿಗೆ ಬಂದಿದೆ. "ಈ ಘಟನೆಯಿಂದ ಕಂಪನಿಯ ಒಟ್ಟಾರೆ ಹಿರಿಯ ನಾಯಕತ್ವವು ಆಘಾತಕ್ಕೆ ಒಳಗಾಗಿದೆ" ಎಂದು ಎಕ್ಸಿಕ್ಯುಟಿವ್‌ವೊಬ್ಬರು ಮಾಹಿತಿ ನೀಡಿದ್ದಾರೆ. ಕಂಪನಿಯ ಮಾಹಿತಿಯನ್ನು ವರದಿಗಾರರಿಗೆ ನೀಡುವ ಅಧಿಕಾರ ಇಲ್ಲದೆ ಇರುವುದರಿಂದ ಅವರು ತಮ್ಮ ಹೆಸರು ಬಹಿರಂಗಪಡಿಸಲು ಒಪ್ಪಿಲ್ಲ. "ಕಂಪನಿಯು ಇಷ್ಟೊಂದು ಕಠಿಣ ನಿಯಮಗಳನ್ನು ಹೊಂದಿದ್ದರೂ ಇಂತಹ ದೊಡ್ಡ ಹಗರಣ ಹೇಗೆ ನಡೆಯಿತು ಎಂಬ ಆಘಾತ ಎಲ್ಲರಿಗೆ ಉಂಟಾಗಿದೆ" ಎಂದು ಅವರು ಹೇಳಿದ್ದಾರೆ. "ಇದು ಕನಿಷ್ಠ 100 ಕೋಟಿ ರೂಪಾಯಿಗೂ ಕಡಿಮೆಯಿಲ್ಲದ ಹಗರಣವಾಗಿದೆ ಎನ್ನುವುದು ನನ್ನ ನಂಬಿಕೆ" ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್‌ ಟೈಮ್ಸ್‌ ಬಳಗದ ದಿ ಮಿಂಟ್‌ನ ಈ ಎಕ್ಸ್‌ಕ್ಲೂಸಿವ್‌ ಸುದ್ದಿಯನ್ನು ಓದಲು ಈ ಮುಂದಿನ ಲಿಂಕ್‌ ಕ್ಲಿಕ್‌ ಮಾಡಿ: Bribes-for-jobs scandal rocks TCS, four sacked for corruption

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.