ಮೊಬೈಲ್ ಸಿಮ್ ಪೋರ್ಟೆಬಿಲಿಟಿ ನಿಯಮ ಪರಿಷ್ಕರಣೆ; ನಾಳೆಯಿಂದಲೇ ಜಾರಿ, ಮೊಬೈಲ್ ಬಳಕೆದಾರರ ಸುರಕ್ಷೆಗೆ ಟ್ರಾಯ್ ಕ್ರಮ
ಮೊಬೈಲ್ ಸಿಮ್ ಪೋರ್ಟೆಬಿಲಿಟಿ ನಿಯಮ ಪರಿಷ್ಕರಣೆ; ನಾಳೆಯಿಂದಲೇ ಜಾರಿಗೊಳ್ಳಲಿದೆ. ಮೊಬೈಲ್ ಬಳಕೆದಾರರ ಸುರಕ್ಷೆಗೆ ಕ್ರಮ ತೆಗೆದುಕೊಂಡಿರುವ ಟ್ರಾಯ್, ಸಿಮ್ ಸ್ವಾಪ್ ಮತ್ತು ಬದಲಾವಣೆಯ ಬಗ್ಗೆ ಸ್ಪಷ್ಟತೆಯನ್ನೂ ನೀಡಿದೆ. ಗ್ರಾಹಕರು ವಂಚನೆಗೆ ಒಳಗಾಗದಂತೆ ತಡೆಯಲು ನಿಯಮ ಪರಿಷ್ಕರಿಸಿರುವುದಾಗಿ ಅದು ಹೇಳಿದೆ.

ನವದೆಹಲಿ: ಮೊಬೈಲ್ ಸಿಮ್ ಸ್ವಾಪ್ ಮಾಡುವುದು, ರಿಪ್ಲೇಸ್ ಮಾಡಿ ಮೋಸ ಮಾಡುವ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಪರಿಷ್ಕೃತ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ನಿಯಮ ನಾಳೆ (ಜುಲೈ 1) ಜಾರಿಗೆ ಬರಲಿದೆ. ಟೆಲಿಕಾಂ ನಿಯಂತ್ರಣ ಸಂಸ್ಥೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಈ ವಿಚಾರವನ್ನು ಶುಕ್ರವಾರ (ಜೂನ್ 28) ದೃಢೀಕರಿಸಿದೆ.
ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ (ಟ್ರಾಯ್), 2024ರ ಮಾರ್ಚ್ 14 ರಂದು, “ದೂರಸಂಪರ್ಕ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿ (ಒಂಬತ್ತನೇ ತಿದ್ದುಪಡಿ) ನಿಯಮಗಳು 2024” ಪ್ರಕಟಿಸಲಾಗಿದೆ. ಇದು ಜುಲೈ 1, 2024 ರಿಂದ ಜಾರಿಗೆ ಬರಲಿದೆ" ಎಂದು ಟ್ರಾಯ್ ಹೇಳಿದೆ.
ಮೊಬೈಲ್ ಸಿಮ್ ಸ್ವಾಪ್ ಮತ್ತು ಬದಲಾವಣೆ ಬಗ್ಗೆ ಟ್ರಾಯ್ ಹೇಳಿಕೆ
ಮೊಬೈಲ್ ಸಿಮ್ ಸ್ವಾಪ್ ಅಥವಾ ಬದಲಾವಣೆ ಮಾಡುವುದು ಎಂದರೆ ಅಸ್ತಿತ್ವದಲ್ಲಿರುವ ಚಂದಾದಾರರ ಕಳೆದುಹೋದ ಅಥವಾ ಕೆಲಸ ಮಾಡದ ಸಿಮ್ ಕಾರ್ಡ್ ಬದಲಿಗೆ ಹೊಸ ಸಿಮ್ ಕಾರ್ಡ್ ಅನ್ನು ಒದಗಿಸುವ ಪ್ರಕ್ರಿಯೆ ಎಂದು ಟ್ರಾಯ್ ಸ್ಪಷ್ಟಪಡಿಸಿದೆ.
ಟ್ರಾಯ್ ನಿಯಮಗಳ ಪ್ರಕಾರ, ಬಳಕೆದಾರರು ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ಸೌಲಭ್ಯವನ್ನು ಸಹ ಆಯ್ಕೆ ಮಾಡಬಹುದು. ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಂಡೇ ಒಬ್ಬ ಟೆಲಿಕಾಂ ಸೇವಾ ಪೂರೈಕೆದಾರರೊಬ್ಬರನ್ನು ಬಿಟ್ಟು ಮತ್ತೊಬ್ಬರ ಸೇವೆ ಪಡೆದುಕೊಳ್ಳುವುದಕ್ಕೆ ಅವರ ನೆಟ್‌ವರ್ಕ್‌ಗೆ ಸೇರ್ಪಡೆಯಾಗಬಹುದು. ಅಂತಹ ಅವಕಾಶವನ್ನು ಇದು ಒದಗಿಸುತ್ತದೆ.
ಎಂಎನ್‌ಪಿಯ ಪ್ರಕ್ರಿಯೆಯನ್ನು ಸುಧಾರಿಸುವುದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾಲ ಕಾಲಕ್ಕೆ ದೂರಸಂಪರ್ಕ ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿ ನಿಯಮಗಳು 2009ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಈಗಾಗಲೇ 8 ತಿದ್ದುಪಡಿ ಮಾಡಲಾಗಿದ್ದು, ಈ ವರ್ಷ 9ನೇ ತಿದ್ದುಪಡಿ ಮಾಡಲಾಗಿದೆ.
ಯುನೀಕ್ ಪೋರ್ಟಿಂಗ್ ಕೋಡ್ ಅಥವಾ ಯುಪಿಸಿ
ಈ ತಿದ್ದುಪಡಿ ನಿಯಮಗಳ ಮೂಲಕ ವಿಶಿಷ್ಟ ಪೋರ್ಟಿಂಗ್ ಕೋಡ್ ಅಥವಾ ಯುನೀಕ್ ಪೋರ್ಟಿಂಗ್ ಕೋಡ್ ಅಥವಾ ಯುಪಿಸಿ ಹಂಚಿಕೆಯ ಕೋರಿಕೆಯನ್ನು ತಿರಸ್ಕರಿಸಲು ಹೆಚ್ಚುವರಿ ಮಾನದಂಡವನ್ನು ಪರಿಚಯಿಸಲು ಟ್ರಾಯ್ ನಿರ್ಧರಿಸಿದೆ. ಯುಪಿಸಿಗಾಗಿ ವಿನಂತಿಯನ್ನು ಸಿಮ್ ಸ್ವಾಪ್ ದಿನಾಂಕದಿಂದ ಏಳು ದಿನ ಮುಂಚಿತವಾಗಿ ಮಾಡಿದ್ದರೆ ಅಥವಾ ಹಿಂದಿನ ಹತ್ತು ದಿನಗಳ ಮೊಬೈಲ್ ಸಂಖ್ಯೆಯನ್ನು ಬದಲಿಸಿದರೆ ಯುಪಿಸಿಯನ್ನು ಕೊಡಬಾರದು ಎಂದು ಸೂಚಿಸಿದೆ.
ಸಿಮ್ ಸ್ವಾಪ್ ಅಥವಾ ಬದಲಿ ನಂತರ 10-ದಿನದ ಕಾಯುವ ಅವಧಿಯು ಸೂಕ್ತವೆಂದು ಕೆಲವು ಮಧ್ಯಸ್ಥಗಾರರು ನಂಬಿದ್ದರೆ, ಇತರರು ಎರಡರಿಂದ ನಾಲ್ಕು ದಿನಗಳಂತಹ ಕಡಿಮೆ ಕಾಯುವ ಅವಧಿಯು ಹೆಚ್ಚು ಸಮಂಜಸವಾಗಿದೆ ಎಂದು ವಾದಿಸಿದರು. ವಿಶೇಷವಾಗಿ ತುರ್ತು ಪೋರ್ಟ್ ಮಾಡುವ ಸಂದರ್ಭಗಳಲ್ಲಿ 10-ದಿನದ ಕಾಯುವ ಅವಧಿಯು ಚಂದಾದಾರರಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು ಎಂದು ಟ್ರಾಯ್ ತನ್ನ ವಿವರ ಟಿಪ್ಪಣಿಯಲ್ಲಿ ತಿಳಿಸಿದೆ.
"ಈ ತಿದ್ದುಪಡಿ ನಿಯಮಗಳು ಮೋಸದ ಸಿಮ್ ಸ್ವಾಪ್ / ನಿರ್ಲಜ್ಜ ಅಂಶಗಳಿಂದ ಚಂದಾದಾರರು ತೊಂದರೆಗೆ ಒಳಗಾಗುವುದನ್ನು ತಪ್ಪಿಸುವುದಕ್ಕಾಗಿ ಮೊಬೈಲ್ ಸಂಖ್ಯೆಗಳ ಪೋರ್ಟಿಂಗ್ ಮೂಲಕ ವಂಚನೆಯನ್ನು ನಿಗ್ರಹಿಸುವ ಗುರಿಯನ್ನು ಹೊಂದಿವೆ ಎಂದು ಟ್ರಾಯ್ ಹೇಳಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.