Budget 2024 LIVE: ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಲೈವ್ ಅಪ್‌ಡೇಟ್ಸ್ ಇಲ್ಲಿದೆ; ಸಬಲ, ಸಮೃದ್ಧ ಭಾರತದ ಆಶಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024 Live: ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಲೈವ್ ಅಪ್‌ಡೇಟ್ಸ್ ಇಲ್ಲಿದೆ; ಸಬಲ, ಸಮೃದ್ಧ ಭಾರತದ ಆಶಯ

Budget 2024 LIVE: ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಲೈವ್ ಅಪ್‌ಡೇಟ್ಸ್ ಇಲ್ಲಿದೆ; ಸಬಲ, ಸಮೃದ್ಧ ಭಾರತದ ಆಶಯ

ಕೇಂದ್ರ ಬಜೆಟ್ 2024 ಲೈವ್: ಲೋಕಸಭೆಯಲ್ಲಿ ಮಂಗಳವಾರ (ಜುಲೈ 23) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 7ನೇ ಬಜೆಟ್ ಮಂಡಿಸಿದರು. ತಮ್ಮ ಬಜೆಟ್ ಭಾಷಣದ ಮೂಲಕ ಭಾರತವನ್ನು ಪ್ರಬಲ ಮತ್ತು ಸಬಲ ಆರ್ಥಿಕ ಶಕ್ತಿಯಾಗಿ ರೂಪಿಸುವ ಕನಸು ಹಂಚಿಕೊಂಡರು.

ಬಜೆಟ್ ದಾಖಲೆಯೊದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ಬಜೆಟ್ ದಾಖಲೆಯೊದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.

ಕೇಂದ್ರ ಬಜೆಟ್ ತಾಜಾ ಅಪ್‌ಡೇಟ್ಸ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಜುಲೈ 23) ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ಸಾರಥ್ಯದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರದಲ್ಲಿ ಈ ಬಾರಿ ಬಲಾಬಲಗಳಲ್ಲಿ ವ್ಯತ್ಯಾಸವಾಗಿದೆ. ಬಿಜೆಪಿಯು ನಿರೀಕ್ಷೆಯಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ಬೇಡಿಕೆಗೆ ಅಸ್ತು ಎನ್ನಲೇಬೇಕಾದ ಅನಿವಾರ್ಯತೆಯಲ್ಲಿ ಕೇಂದ್ರ ಸರ್ಕಾರವಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಮೊದಲಿನ ಎರಡೂ ಅವಧಿಯಲ್ಲಿ ಇಂಥ ಅನಿವಾರ್ಯತೆ 'ನರೇಂದ್ರ ಮೋದಿ ಸರ್ಕಾರ'ಕ್ಕೆ ಇರಲಿಲ್ಲ. ಇಂಥ ಒತ್ತಡಗಳನ್ನು ನಿರ್ವಹಿಸುವಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂಥ ಚಾಕಚಕ್ಯತೆ ತೋರುತ್ತಾರೆ ಎನ್ನುವ ಕುತೂಹಲ ವ್ಯಕ್ತವಾಗಿದೆ. ಇದರ ಜೊತೆಗೆ ಭಾರತವನ್ನು ಸದ್ಯ ಕಾಡುತ್ತಿರುವ ನಿರುದ್ಯೋಗ, ಕೃಷಿ ಬಿಕ್ಕಟ್ಟು, ಆಹಾರ ಬೆಲೆ ಏರಿಕೆ, ರಕ್ಷಣಾ ಆತಂಕಗಳು, ಷೇರುಪೇಟೆ ಹೂಡಿಕೆ ನಿಯಮಗಳ ಸುಧಾರಣೆ ಮತ್ತು ಆದಾಯ ತೆರಿಗೆ ವಿನಾಯ್ತಿ ಸೇರಿದಂತೆ ಹಲವು ನಿರೀಕ್ಷೆಗಳು ಈ ಬಾರಿಯ ಬಜೆಟ್ ಮೇಲೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಲೈವ್ ಅಪ್‌ಡೇಟ್ಸ್‌, ವರದಿಗಳು, ವಿಶ್ಲೇಷಣೆ, ತಜ್ಞರ ಅಭಿಪ್ರಾಯಕ್ಕಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣಕ್ಕೆ ಭೇಟಿ ನೀಡಿ.

ಕೇಂದ್ರ ಬಜೆಟ್ ಕುರಿತ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

11:35: ಉದ್ಯೋಗದ ಮಹತ್ವ ಅರ್ಥ ಮಾಡಿಕೊಂಡ ವಿತ್ತ ಸಚಿವೆ

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವುದನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಈ ಸಮಸ್ಯೆ ಪರಿಹರಿಸಲೆಂದು ಹಲವು ಯೋಜನೆಗಳನ್ನೂ ಪ್ರಕಟಿಸಿದೆ. ಬಜೆಟ್‌ ಭಾಷಣದ ಆರಂಭದಲ್ಲಿಯೇ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಹೊಸದಾಗಿ ಕೆಲಸ ಆರಂಭಿಸುವವರಿಗೆ ಒಂದು ತಿಂಗಳ ವೇತನ, ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗದಾತರಿಗೆ ಹೆಚ್ಚಿನ ಬೆಂಬಲ ಒದಗಿಸುವ ಮೂರು ಘೋಷಣೆಗಳನ್ನು ಸರ್ಕಾರವು ವಾಸ್ತವ ಒಪ್ಪಿಕೊಂಡಿರುವ ಪ್ರತೀಕ ಎಂದು ವಿಶ್ಲೇಷಿಸಲಾಗುತ್ತಿದೆ.

11:20 AM: ಹೊಸ ತಳಿಗಳ ಸಂಶೋಧನೆಗೆ ಕೇಂದ್ರ ಸರ್ಕಾರ ಒತ್ತು

ವ್ಯವಸಾಯ ಸಂಬಂಧಿ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ವಿವಿಧ ಬೆಳೆಗಳ ಇಳುವರಿ ಹೆಚ್ಚಿಸುವುದು ಮತ್ತು ಹವಾಮಾನ ವೈಪರಿತ್ಯ ಸಹಿಸಿಕೊಳ್ಳುವ ಸಾಮರ್ಥ್ಯ ಇರುವ ತಳಿಗಳನ್ನು ಅಭಿವೃದ್ಧಿಪಡಿಸಲು ಉತ್ತೇಜನ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಘೋಷಿಸಿದರು.

11:16 AM: 2 ಲಕ್ಷ ಕೋಟಿ ವೆಚ್ಚದಲ್ಲಿ 4.1 ಕೋಟಿ ಯುವಜನರಿಗೆ ಉದ್ಯೋಗ

ನಿರುದ್ಯೋಗ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎನ್ನುವ ಸಂದೇಶ ರವಾನಿಸಲು ಬಜೆಟ್ ಭಾಷಣವನ್ನು ಕೇಂದ್ರ ಸರ್ಕಾರ ಬಳಸಿಕೊಂಡಿತು. ಭಾಷಣದ ಆರಂಭದಲ್ಲಿಯೇ ಉದ್ಯೋಗ ಸೃಷ್ಟಿ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಜನರಿಗೆ ಉದ್ಯೋಗ ಕಲ್ಪಿಸುವ ಐದು ಯೋಜನೆಗಳನ್ನು ರೂಪಿಸಲಾಗುವುದು ಎಂದು ಕೇಂದ್ರ ಘೋಷಿಸಿದರು. ಈ ಯೋಜನೆಗಳಿಗೆ ಕೇಂದ್ರ ಸರ್ಕಾರವು 2 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಿದೆ.

11:05 AM ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಆರಂಭ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದರು. ಇದಕ್ಕೂ ಮೊದಲು ಲೋಕಸಭೆ ಕಲಾಪ ವೀಕ್ಷಿಸಲು ಆಗಮಿಸಿರುವ ವಿವಿಧ ದೇಶಗಳ ವಿಶೇಷ ಅತಿಥಿಗಳನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು.

10:35 AM: ಸಂಸತ್ ಭವನ ಪ್ರವೇಶಿಸಿದ ನಿರ್ಮಲಾ ಸೀತಾರಾಮನ್, ಬಜೆಟ್ ಮಂಡನೆ ಶೀಘ್ರ ಆರಂಭ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಭವನ ಪ್ರವೇಶಿಸಿದ್ದಾರೆ. ಬಜೆಟ್ ಭಾಷಣ ಶೀಘ್ರದಲ್ಲಿಯೇ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಬಜೆಟ್‌ಗೆ ಅನುಮೋದನೆ ನೀಡಿದೆ.

10:00 AM: ರಾಷ್ಟ್ರಪತಿ ಭವನಕ್ಕೆ ತೆರಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಬಜೆಟ್‌ ಮಂಡನೇಗೂ ಮುನ್ನ ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್ ಕಚೇರಿಗೆ ಬಂದಿದ್ದ ಸಚಿವೆ, ಅಲ್ಲಿಂದ ಡಿಜಿಟಲ್ ಸ್ವರೂಪದಲ್ಲಿರುವ ಬಜೆಟ್‌ ಪ್ರತಿಯೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಸೀತಾರಾಮನ್ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ತೆರಳಿದರು. ರಾಷ್ಟ್ರಪತಿ ಭವನಕ್ಕೆ ತೆರಳುವ ಮುನ್ನ ಹಣಕಾಸು ತಮ್ಮ ತಂಡದೊಂದಿಗೆ ಕೆಂಪು ಬಣ್ಣದ 'ಬಹಿ ಖಾತಾ' ಡಿಜಿಟಲ್ ಟ್ಯಾಬ್ಲೆಟ್‌ನೊಂದಿಗೆ (ಬಜೆಟ್‌ ಪ್ರತಿ) ಫೋಟೋಗೆ ಪೋಸ್ ನೀಡಿದರು.

09:55 AM: ಗುಲಾಬಿ ಅಂಚಿನ ಸೀರೆಯುಟ್ಟು ಬಜೆಟ್ ಮಂಡನೆಗೆ ಸಿದ್ಧರಾದ ವಿತ್ತ ಸಚಿವೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿ ಬಾರಿ ಬಜೆಟ್ ಮಂಡಿಸುವ ವಿಶಿಷ್ಟ ರೀತಿಯ ಸೀರೆಗಳನ್ನು ಆರಿಸಿಕೊಳ್ಳುತ್ತಾರೆ. ಅವರು ಉಡುವ ಸೀರೆಗಳು ಸಹ ಸುದ್ದಿ ಮಾಡುತ್ತವೆ. ಈ ಬಾರಿ ಅವರದು 7ನೇ ಬಜೆಟ್. ಈ ಸಲ ಸಂಸತ್ತಿಗೆ ತೆರಳುವ ಮೊದಲು ಬಜೆಟ್ ದಾಖಲೆಯನ್ನು ಮಾಧ್ಯಮಗಳಿಗೆ ಪ್ರದರ್ಶಿಸುವಾದ ಗುಲಾಬಿ ಅಂಚಿನ ಬಿಳಿ ಸೀರೆ ಉಟ್ಟಿದ್ದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ದಾಖಲೆಯನ್ನು ಮಾಧ್ಯಮಗಳಿಗೆ ಪ್ರದರ್ಸಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ದಾಖಲೆಯನ್ನು ಮಾಧ್ಯಮಗಳಿಗೆ ಪ್ರದರ್ಸಿಸಿದರು.

05:47 AM: ಇದು ನಿರ್ಮಲಾ ಸೀತಾರಾಮನ್‌ ಅವರಿಗೆ 7ನೇ ಬಜೆಟ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಜುಲೈ 23) 7ನೇ ಬಾರಿಗೆ ಬಜೆಟ್ ಭಾಷಣ ಮಾಡಲಿದ್ದಾರೆ. ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ. ಮೊರಾರ್ಜಿ ದೇಸಾಯಿ ಅವರು 10 ಬಾರಿ ಬಜೆಟ್ ಮಂಡಿಸಿದ್ದರು. ಕಾಂಗ್ರೆಸ್ ನಾಯಕ ಪಿ.ಚಿದಂಬರಂ 9 ಬಾರಿ ಬಜೆಟ್ ಮಂಡಿಸಿದ್ದರು. ಪ್ರಣಬ್ ಮುಖರ್ಜಿ 8, ಯಶವಂತ್ ಸಿನ್ಹಾ 7 ಬಾರಿ ಬಜೆಟ್ ಮಂಡಿಸಿದ್ದರು.

05:15 AM: ಭಾರತದ ಆರ್ಥಿಕತೆಯ ಸ್ಥಿತಿಗತಿಯ ಚಿತ್ರಣಕೊಟ್ಟ ಆರ್ಥಿಕ ಸಮೀಕ್ಷೆ

ಪ್ರತಿ ವರ್ಷದಂತೆ ಈ ವರ್ಷವೂ ಬಜೆಟ್‌ ಮುನ್ನಾ ದಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತು. ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರವು ಶೇ 6.5 ರಿಂದ 7.0 ಇರಬಹುದು ಎನ್ನುವ ಮುನ್ಸೂಚನೆಯನ್ನು ಮುಖ್ಯ ಆರ್ಥಿಕ ಸಲಹೆಗಾರರು ನೀಡಿದ್ದಾರೆ. ಜಾಗತಿಕ ಸಂದಿಗ್ಧ ಪರಿಸ್ಥಿತಿ ಮತ್ತು ದೇಶೀಯ ಆರ್ಥಿಕತೆಯ ಸವಾಲುಗಳು ನಡುವೆ ಈ ಮಟ್ಟದ ವೃದ್ಧಿದರ ಸಾಧಿಸಲು ಸಾಧ್ಯವಾದರೆ ಅದೊಂದು ಸಾಧನೆ ಎಂದೇ ಉದ್ಯಮ ವಲಯದಲ್ಲಿ ಮಾತುಗಳು ಕೇಳಿ ಬಂದವು. ಈ ಮಟ್ಟದ ಪ್ರಗತಿಗೆ ಕೇಂದ್ರ ಸರ್ಕಾರವು ತನ್ನ ಯೋಜನೆ ಏನು ಎನ್ನುವ ಬಗ್ಗೆ ಬಜೆಟ್ ಭಾಷಣದ ಮೂಲಕ ವಿವರಿಸಬಹುದು ಎನ್ನುವ ನಿರೀಕ್ಷೆ ವ್ಯಕ್ತವಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.