Budget 2024: ಏನಿದು ಲಖ್‌ಪತಿ ದೀದಿ ಯೋಜನೆ? ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವರು ಉಲ್ಲೇಖಿಸಿದ ಈ ಯೋಜನೆಯ ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024: ಏನಿದು ಲಖ್‌ಪತಿ ದೀದಿ ಯೋಜನೆ? ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವರು ಉಲ್ಲೇಖಿಸಿದ ಈ ಯೋಜನೆಯ ಮಹತ್ವ ತಿಳಿಯಿರಿ

Budget 2024: ಏನಿದು ಲಖ್‌ಪತಿ ದೀದಿ ಯೋಜನೆ? ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವರು ಉಲ್ಲೇಖಿಸಿದ ಈ ಯೋಜನೆಯ ಮಹತ್ವ ತಿಳಿಯಿರಿ

ಕೇಂದ್ರ ಬಜೆಟ್‌ 2024ರ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಲಖ್‌ಪತಿ ದೀದಿ ಯೋಜನೆ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೆ ಈ ಯೋಜನೆಯ ಜೊತೆಗೆ ಕೇಂದ್ರ ಸರ್ಕಾರವು ಮಹಿಳಾ ಸಬೀಕರಣಕ್ಕೆ ಒತ್ತು ನೀಡಿದ ಇನ್ನಿತರ ವಿಚಾರಗಳ ಬಗ್ಗೆಯೂ ಗಮನ ಸೆಳೆದಿದ್ದರು. ಏನಿದು ಲಖ್‌ಪತಿ ದೀದಿ ಯೋಜನೆ, ಈ ಯೋಜನೆ ಉದ್ದೇಶ, ಮಹತ್ವ ತಿಳಿಯಿರಿ.

 ಏನಿದು ಲಖ್‌ಪತಿ ದೀದಿ ಯೋಜನೆ? ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವರು ಉಲ್ಲೇಖಿಸಿದ ಈ ಯೋಜನೆಯ ಮಹತ್ವವೇನು?
ಏನಿದು ಲಖ್‌ಪತಿ ದೀದಿ ಯೋಜನೆ? ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವರು ಉಲ್ಲೇಖಿಸಿದ ಈ ಯೋಜನೆಯ ಮಹತ್ವವೇನು?

ನವದೆಹಲಿ: ಕೇಂದ್ರ ಬಜೆಟ್‌ 2024ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಲಖ್‌ಪತಿ ದೀದಿ ಯೋಜನೆ ಕೂಡ ಒಂದು. ಸ್ವಸಹಾಯ ಗುಂಪುಗಳಿಗೆ ವರ್ಷಕ್ಕೆ ಒಂದು ಲಕ್ಷದವರೆಗೆ ಆದಾಯ ಗಳಿಸುವಂತೆ ಮಾಡುವ ಯೋಜನೆ ಇದಾಗಿದೆ. ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೊಂದಿದೆ. ಈ ಯೋಜನೆಯನ್ನು 2023ರಲ್ಲಿ ಘೋಷಿಸಲಾಗಿತ್ತು.

ದೇಶದಲ್ಲಿ 83 ಲಕ್ಷ ಸ್ವಸಹಾಯ ಗುಂಪುಗಳಲ್ಲಿ 9 ಕೋಟಿಗೂ ಅಧಿಕ ಮಂದಿ ಮಹಿಳೆಯರು ಸಬಲೀಕರಣ ಹಾಗೂ ಸ್ವಾವಲಂಬನೆಯೊಂದಿಗೆ ಬದುಕುತ್ತಿದ್ದಾರೆ. ಅಲ್ಲದೇ ಸ್ವಸಹಾಯ ಗುಂಪುಗಳ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೂ ಒತ್ತು ನೀಡುತ್ತಿದ್ದಾರೆ. ʼಈಗಾಗಲೇ ಸುಮಾರು 1 ಕೋಟಿಗೂ ಅಧಿಕ ಮಂದಿ ಲಖ್‌ಪತಿ ದೀದಿಯಾಗಲು ಈ ಯೋಜನೆ ಸಹಾಯ ಮಾಡಿದೆ. ಇದರಿಂದ ಉತ್ತೇಜಿತವಾಗಿರುವ ಸರ್ಕಾರ ಲಖ್‌ಪತಿ ದೀದಿ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸಲು ನಿರ್ಧಾರ ಮಾಡಿದೆʼ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಏನಿದು ಲಖ್‌ಪತಿ ದೀದಿ ಯೋಜನೆ?

ಕಳೆದ ವರ್ಷ (2023) ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತದ ಹಳ್ಳಿಗಳಲ್ಲಿ 20 ಮಿಲಿಯನ್ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ 'ಲಖ್‌ಪತಿ ದೀದಿ' ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯಡಿ, ಮಹಿಳೆಯರಿಗೆ ಪ್ಲಂಬಿಂಗ್, ಎಲ್ಇಡಿ ಬಲ್ಬ್ ತಯಾರಿಕೆ ಮತ್ತು ಡ್ರೋನ್‌ಗಳ ಕಾರ್ಯಾಚರಣೆ ಮತ್ತು ದುರಸ್ತಿಯಂತಹ ಕೌಶಲಗಳಲ್ಲಿ ತರಬೇತಿ ನೀಡಲಾಗುತ್ತದೆ.

ನಿರ್ಮಲಾ ಸೀತಾರಾಮನ್ ಅವರ ಭಾಷಣದಲ್ಲಿನ ಇತರ ಬಜೆಟ್ ಘೋಷಣೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ವಿಮಾ ರಕ್ಷಣೆಯನ್ನು ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ವಿಸ್ತರಿಸುವುದು ಸೇರಿದೆ.

ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಸಚಿವರು, ʼಕಳೆದ 10 ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿ ಶೇ 28ರಷ್ಟು ಹೆಚ್ಚಾಗಿದೆ. ಸ್ಟೆಮ್ ಕೋರ್ಸ್‌ಗಳಲ್ಲಿ, ಬಾಲಕಿಯರು ಮತ್ತು ಮಹಿಳೆಯರು ಶೇ 43ರಷ್ಟು ದಾಖಲಾತಿಯನ್ನು ಹೊಂದಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು. ಈ ಎಲ್ಲಾ ಅಂಶಗಳು ಮಹಿಳೆಯರು ಮುಂದೆ ಬರುತ್ತಿರುವುದರ ಸೂಚಕವಾಗಿದೆ. ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರಗೊಳಿಸುವುದು, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 1/3 ಸ್ಥಾನಗಳನ್ನು ಕಾಯ್ದಿರಿಸುವುದು, ಪಿಎಂ ಆವಾಸ್ ಯೋಜನೆಯಡಿ ಶೇ 70 ಕ್ಕೂ ಹೆಚ್ಚು ಮಹಿಳೆಯರಿಗೆ ಮನೆ ನಿರ್ಮಾಣಕ್ಕೆ ನೆರವಾಗುವುದು ಈ ಎಲ್ಲಾ ಯೋಜನೆಗಳು ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆʼ ಎಂದು ನಿರ್ಮಲಾ ಸೀತಾರಾಮನ್‌ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.