ಅಡುಗೆ ಅನಿಲ ದರ ಕಡಿತಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತಿ; 200 ರೂಪಾಯಿ ಕಡಿಮೆಯಾಯ್ತು ಎಲ್‌ಪಿಜಿ
LPG cylinder price: ನೈಸರ್ಗಿಕ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಯಷ್ಟು ಕಡಿಮೆ ಮಾಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ.
ದೆಹಲಿ: ಕೇಂದ್ರ ಸಚಿವ ಸಂಪುಟವು ನೈಸರ್ಗಿಕ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಯಷ್ಟು ಕಡಿಮೆ ಮಾಡಲು ಸಮ್ಮತಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಬೆಲೆ ಇಳಿಕೆ ನಿರ್ಧಾರವು ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯಿಸಲಿದೆ. ಮುಂದಿನಗಳಲ್ಲಿ ಫಲಾನುಭವಿಗಳು ಹೆಚ್ಚುವರಿಯಾಗಿ 200 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ. 14 ಕೆಜೆ ತೂಕದ ಗ್ಯಾಸ್ ಸಿಲಿಂಡರ್ ಮೇಲೆ ಉಜ್ವಲ ಯೋಜನೆ ಪಡೆಯುವ ಸಬ್ಸಿಡಿಯ ಒಟ್ಟು ಮೊತ್ತವು 400 ರೂಪಾಯಿ ಆಗಲಿದೆ.
'ರಕ್ಷಾ ಬಂಧನ ಮತ್ತು ಓಣಂ ಹಬ್ಬದ ಶುಭ ಸಂದರ್ಭದಲ್ಲಿ ಸರ್ಕಾರವು ಗೃಹಬಳಕೆ ಸಿಲಿಂಡರ್ ದರವನ್ನು 200 ರೂಪಾಯಿಯಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಈ ನಿರ್ಧಾರದ ಲಾಭವು ಉಜ್ವಲಾ ಯೋಜನೆಯ 73 ಲಕ್ಷ ಫಲಾನುಭವಿಗಳಿಗೂ ಅನ್ವಯಿಸಲಿದೆ' ಎಂದು ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಉಜ್ವಲ್ ಯೋಜನೆಯಡಿ ಹೊಸದಾಗಿ 75 ಲಕ್ಷ ಮನೆಗಳಿಂದ ಸಿಲಿಂಡರ್ ಸಂಪರ್ಕ ಒದಗಿಸಲಿದೆ ಎಂದು ಘೋಷಿಸಿದರು.
ಪ್ರಸ್ತುತ ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರವು 1,105.50 ರೂಪಾಯಿ ಇದೆ. ದೆಹಲಿಯಲ್ಲಿ 1,103, ಕೊಲ್ಕತ್ತಾದಲ್ಲಿ 1,129, ಮುಂಬೈನಲ್ಲಿ 1,102 ಮತ್ತು ಚೆನ್ನೈನಲ್ಲಿ 1,118 ರೂಪಾಯಿ ಇದೆ. ಕಳೆದ ಜುಲೈನಲ್ಲಿ ತೈಲೋತ್ಪನ್ನ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್ ದರವನ್ನು 50 ರೂಪಾಯಿಯಷ್ಟು ಹೆಚ್ಚಿಸಿದ್ದವು. ಮೇ ತಿಂಗಳಲ್ಲಿಯೂ ದರ ಹೆಚ್ಚಾಗಿತ್ತು.
ಈ ತಿಂಗಳ ಆರಂಭದಲ್ಲಿ ತೈಲೋತ್ಪನ್ನ ಕಂಪನಿಗಳು ದರ ಪರಿಷ್ಕರಣೆ ಮಾಡಿದ್ದವಾದರೂ ಎಲ್‌ಪಿಜಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ವಾಣಿಜ್ಯ ಸಿಲಿಂಡರ್ ದರಗಳನ್ನು ತಗ್ಗಿಸಿದ್ದವು.
ದೇಶಾದ್ಯಂತ ಆಹಾರದ ದರಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಣದುಬ್ಬರ ಏರಿಕೆಯಾಗಿದೆ. ಸಾಮಾನ್ಯ ಜನರ ಬದುಕು ಸಂಕಷ್ಟ ಸ್ಥಿತಿಗೆ ತಲುಪುತ್ತಿದೆ. 'ಕೇಂದ್ರ ಬಿಜೆಪಿ ಸರ್ಕಾರವು ಬೆಲೆ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ' ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬೆಲೆಏರಿಕೆ ವಿಚಾರವನ್ನು ಪ್ರಧಾನವಾಗಿ ಪ್ರಸ್ತಾಪಿಸಲು ವಿರೋಧ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಮೇಲಿನ ಬೆಲೆ ಇಳಿಸುವ ನಿರ್ಧಾರ ಮಹತ್ವ ಪಡೆದಿದೆ.
(ಮತ್ತಷ್ಟು ಮಾಹಿತಿ ಶೀಘ್ರ ಅಪ್‌ಡೇಟ್ ಆಗಲಿದೆ)
ವಿಭಾಗ