Economic Survey: ಕೇಂದ್ರ ಬಜೆಟ್‌ಗೂ ಮೊದಲು ಮಂಡಿಸುವ ಆರ್ಥಿಕ ಸಮೀಕ್ಷೆ ಎಂದರೇನು, ಮೊದಲ ಸಲ ಯಾವಾಗ ಮಂಡನೆಯಾಯಿತು
Union Budget 2024: ಕೇಂದ್ರ ಬಜೆಟ್‌ಗೆ ಮೊದಲು ಮಂಡನೆಯಾಗುವ ಆರ್ಥಿಕ ಸಮೀಕ್ಷೆ ಎಂದರೇನು, ಅದನ್ನು ಸಿದ್ಧಪಡಿಸುವುದು ಯಾರು, ಮಹತ್ವವೇನು, ಮೊದಲ ಸಲ ಆರ್ಥಿಕ ಸಮೀಕ್ಷೆ ಮಂಡಿಸಿದ್ದು ಯಾವಾಗ ಎಂಬಿತ್ಯಾದಿ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಫೆ.1ರಂದು ನಡೆಯಲಿದ್ದು, ಎಲ್ಲರ ಗಮನವೂ ಆ ಕಡೆಗೆ ಹೊರಳಿದೆ. ಸಂಸತ್ತಿನ ಬಜೆಟ್ ಅಧಿವೇಶನ ನಾಳೆ (ಜ.31) ಶುರುವಾಗಿ ಫೆ.9ರ ತನಕ ನಡೆಯಲಿದೆ.
ವಾಡಿಕೆ ಪ್ರಕಾರ ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 31ರಂದು ಆರ್ಥಿಕ ಸಮೀಕ್ಷೆ ಮಂಡನೆಯಾಗುತ್ತದೆ. ಆರ್ಥಿಕ ಸಮೀಕ್ಷೆ ಎಂಬುದು ಪ್ರಸಕ್ತ ವರ್ಷ ಅರ್ಥ ವ್ಯವಸ್ಥೆಯ ಆರೋಗ್ಯ ಹೇಗಿದೆ ಎಂಬುದನ್ನು ಬಿಂಬಿಸುತ್ತದೆ. ಹಣಕಾಸು ಸಚಿವಾಲಯ ಬಜೆಟ್‌ಗೆ ಮುಂಚಿತವಾಗಿ ದೇಶದ ಮುಂದಿಡುವ ಮತ್ತೊಂದು ಹಣಕಾಸು ದಾಖಲೆ ಇದು.
ದೇಶದ ಮುಖ್ಯ ಆರ್ಥಿಕ ಸಲಹೆಗಾರ ಈ ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡುತ್ತಾರೆ. ವಿತ್ತಸಚಿವರು ಲೋಕಸಭೆಯಲ್ಲಿ ಈ ಸಮೀಕ್ಷೆಯನ್ನು ಮಂಡಿಸುತ್ತಾರೆ.
ಕಳೆದ ವರ್ಷ ಪ್ರಕಟವಾದ 2023ರ ಆರ್ಥಿಕ ಸಮೀಕ್ಷೆಯು 2024ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು 6-6.8% ವ್ಯಾಪ್ತಿಯಲ್ಲಿರಲಿದೆ ಎಂದು ಅಂದಾಜಿಸಿತ್ತು.
ಕೇಂದ್ರ ಬಜೆಟ್ 2024: ಏನಿದು ಆರ್ಥಿಕ ಸಮೀಕ್ಷೆ
ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಮಂಡನೆಯಾಗುವ ಆರ್ಥಿಕ ಸಮೀಕ್ಷೆಯು ಹೆಸರೇ ಸೂಚಿಸುವಂತೆ, ದೇಶದ ಅರ್ಥ ವ್ಯವಸ್ಥೆಯ ವಾರ್ಷಿಕ ಸ್ಥಿತಗತಿ ವರದಿ. ಈ ಹಣಕಾಸು ದಾಖಲೆಯು ಕೇಂದ್ರ ಸರ್ಕಾರದ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳ ಕಾರ್ಯಕ್ಷಮತೆಯನ್ನು ಸಂಕ್ಷಿಪ್ತವಾಗಿ ವಿವರಿಸುವುದಲ್ಲದೆ, ನೀತಿ ಉಪಕ್ರಮಗಳನ್ನು ಎತ್ತಿ ತೋರಿಸುತ್ತದೆ. ಇದು ಅರ್ಥ ವ್ಯವಸ್ಥೆಯ ಹಿಂದಿನ ವರ್ಷದ ಸಾಧನೆಯ ಕುರಿತು ಒಂದು ದೃಷ್ಟಿಕೋನವನ್ನು ಸಹ ಒದಗಿಸುತ್ತದೆ.
ಆರ್ಥಿಕ ಸಮೀಕ್ಷೆಯಲ್ಲಿ ಎರಡು ಭಾಗ. ಒಂದು ದೇಶವು ಎದುರಿಸುತ್ತಿರುವ ಆರ್ಥಿಕ ಸವಾಲುಗಳು. ಎರಡನೆಯದು ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಕಳೆದ ವರ್ಷದ ವಿಶ್ಲೇಷಣೆ. ಆದಾಗ್ಯೂ, ಆರ್ಥಿಕ ಸಮೀಕ್ಷೆಯ ಮೌಲ್ಯಮಾಪನ ಮತ್ತು ಶಿಫಾರಸುಗಳು ಕೇಂದ್ರ ಬಜೆಟ್‌ಗೆ ಬದ್ಧವಾಗಿ ಇರಬೇಕು ಎಂದೇನೂ ಇಲ್ಲ.
ಕೇಂದ್ರ ಬಜೆಟ್ 2024: ಮೊದಲ ಆರ್ಥಿಕ ಸಮೀಕ್ಷೆಯನ್ನು ಯಾವಾಗ ಮಂಡಿಸಲಾಯಿತು
ಕೇಂದ್ರ ಬಜೆಟ್‌ನ ಭಾಗವಾಗಿ 1950-51ರಲ್ಲಿ ಮೊದಲ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಯಿತು. ಮುಂದೆ 1964ರಲ್ಲಿ ಕೇಂದ್ರ ಬಜೆಟ್‌ನಿಂದ ಆರ್ಥಿಕ ಸಮೀಕ್ಷೆಯನ್ನು ಪ್ರತ್ಯೇಕಿಸಲಾಯಿತು. ಅಂದಿನಿಂದ, ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮೊದಲು ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡುವುದು ವಾಡಿಕೆಯಾಗಿದೆ.
ಅಂತೆಯೇ, ದೀರ್ಘಕಾಲದವರೆಗೆ, ಆರ್ಥಿಕ ಸಮೀಕ್ಷೆಯನ್ನು ಕೇವಲ ಒಂದು ಸಂಪುಟದಲ್ಲಿ ಮಂಡಿಸಲಾಯಿತು. ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಾದ ಸೇವೆಗಳು, ಕೃಷಿ ಮತ್ತು ಉತ್ಪಾದನೆ ಮತ್ತು ಪ್ರಮುಖ ನೀತಿ ಕ್ಷೇತ್ರಗಳು - ಹಣಕಾಸಿನ ಬೆಳವಣಿಗೆಗಳು, ಉದ್ಯೋಗದ ಸ್ಥಿತಿ ಮತ್ತು ಹಣದುಬ್ಬರ. ಆದಾಗ್ಯೂ, 2010-11 ಮತ್ತು 2020-21ರ ನಡುವೆ, ಸಮೀಕ್ಷೆಯನ್ನು ಎರಡು ಸಂಪುಟಗಳಲ್ಲಿ ಪ್ರಸ್ತುತಪಡಿಸಲಾಯಿತು. ಕಳೆದ ವರ್ಷ ಮತ್ತೆ ಏಕ-ಸಂಪುಟ ಸ್ವರೂಪಕ್ಕೆ ಮರಳಿತು.
ಕೇಂದ್ರ ಬಜೆಟ್ 2024: ಆರ್ಥಿಕ ಸಮೀಕ್ಷೆ ಸಿದ್ಧಪಡಿಸುವವರು ಯಾರು
ಮುಖ್ಯ ಆರ್ಥಿಕ ಸಲಹೆಗಾರರ (ಸಿಇಎ) ಮಾರ್ಗದರ್ಶನದಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಅರ್ಥಶಾಸ್ತ್ರ ವಿಭಾಗವು ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸುತ್ತದೆ. ಪ್ರಸ್ತುತ, ವಿ.ಅನಂತ ನಾಗೇಶ್ವರನ್ ಅವರು ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆರ್ಥಿಕ ಸಮೀಕ್ಷೆಯ ಮಹತ್ವವೇನು
ಈ ಸಮೀಕ್ಷೆಯು ಎಲ್ಲ ಕ್ಷೇತ್ರಗಳು, ಕೈಗಾರಿಕೆಗಳು, ಕೃಷಿ, ಉದ್ಯೋಗ, ಬೆಲೆಗಳು ಮತ್ತು ರಫ್ತುಗಳ ವಿವರವಾದ ಅಂಕಿಅಂಶಗಳನ್ನು ವಿಶ್ಲೇಷಿಸುವ ಮತ್ತು ಒದಗಿಸುವ ಮೂಲಕ ಕಳೆದ ಹಣಕಾಸು ವರ್ಷ ಭಾರತದ ಆರ್ಥಿಕ ಅಭಿವೃದ್ಧಿ ಹೇಗಿತ್ತು ಎಂಬುದನ್ನು ಪರಿಶೀಲಿಸುತ್ತದೆ.
ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಆದ್ಯತೆ ಮತ್ತು ಯಾವ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ಬೇಕಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಕೇಂದ್ರ ಬಜೆಟ್ ಬಗ್ಗೆ ಉತ್ತಮ ತಿಳಿವಳಿಕೆಯನ್ನು ನೀಡಲು ಸಮೀಕ್ಷೆ ಸಹಾಯ ಮಾಡುತ್ತದೆ. ಆರ್ಥಿಕ ಸಮೀಕ್ಷೆಯು ಕೇಂದ್ರ ಸರ್ಕಾರದ ಒಳಗಿನಿಂದ ನಡೆಸಲಾಗುವ ಆರ್ಥಿಕತೆಯ ಅತ್ಯಂತ ಅಧಿಕೃತ ಮತ್ತು ಸಮಗ್ರ ವಿಶ್ಲೇಷಣೆಯಾಗಿದೆ.
ಬಜೆಟ್ 2024: ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ?
ಆರ್ಥಿಕ ಸಮೀಕ್ಷೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಭಾಗ ಎ ಮತ್ತು ಭಾಗ ಬಿ. ಮೊದಲ ಭಾಗವು ಸಾಮಾನ್ಯವಾಗಿ ವರ್ಷದ ಪ್ರಮುಖ ಆರ್ಥಿಕ ಬೆಳವಣಿಗೆಗಳನ್ನು ಮತ್ತು ಆರ್ಥಿಕತೆಯ ವಿಶಾಲ ವಿಮರ್ಶೆಯನ್ನು ಒಳಗೊಂಡಿರುತ್ತದೆ. ಎರಡನೇ ಭಾಗವು ಸಾಮಾಜಿಕ ಭದ್ರತೆ, ಬಡತನ, ಶಿಕ್ಷಣ, ಆರೋಗ್ಯ, ಮಾನವ ಅಭಿವೃದ್ಧಿ ಮತ್ತು ಹವಾಮಾನದಂತಹ ನಿರ್ದಿಷ್ಟ ವಿಷಯಗಳನ್ನು ಒಳಗೊಂಡಿದೆ.
ಮಧ್ಯಂತರ ಬಜೆಟ್‌ಗೆ ಮುನ್ನ ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತದೆಯೇ
ಸಂಸದೀಯ ಸಂಪ್ರದಾಯದ ಪ್ರಕಾರ, ಪ್ರಸ್ತುತ ಸರ್ಕಾರವು ಚುನಾವಣಾ ವರ್ಷದಲ್ಲಿ ಮಂಡಿಸುವ ಮಧ್ಯಂತರ ಬಜೆಟ್ ಜೊತೆಗೆ ಆರ್ಥಿಕ ಸಮೀಕ್ಷೆ ಮಂಡಿಸುವಂತೆ ಇಲ್ಲ. ಆರ್ಥಿಕ ಸಮೀಕ್ಷೆಯನ್ನು ರೂಪಿಸುವ ಕಾರ್ಯವನ್ನು ಚುನಾವಣೆಯ ನಂತರ ಅಧಿಕಾರ ವಹಿಸಿಕೊಳ್ಳುವ ಸರ್ಕಾರಕ್ಕೆ ನೀಡಲಾಗುತ್ತದೆ.
ವಿಭಾಗ