Stock market falling: ಭಾರತೀಯ ಷೇರು ಮಾರುಕಟ್ಟೆ ಈ ಪರಿ ಕುಸಿಯುತ್ತಿರುವುದೇಕೆ? ಇಲ್ಲಿದೆ 5 ಕಾರಣಗಳು
Stock market crash: ಇಂದು (ಜನವರಿ 17) ಇಂಟ್ರಾಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ 750 ಅಂಕಗಳಷ್ಟು ಮತ್ತು ನಿಫ್ಟಿ 50 ಸೂಚ್ಯಂಕ 200 ಅಂಕಗಳಷ್ಟು ಕುಸಿತ ದಾಖಲಿಸಿದೆ. ಭಾರತೀಯ ಷೇರುಪೇಟೆ ಈ ಪರಿ ಕುಸಿಯುತ್ತಿರುವುದೇಕೆ? ಎಂಬ ಪ್ರಶ್ನೆ ಷೇರು ಹೂಡಿಕೆದಾರರನ್ನು ಕಾಡುತ್ತಿರಬಹುದು. ಷೇರು ಪೇಟೆ ಕುಸಿತಕ್ಕೆ ಕಾರಣವಾದ 5 ಅಂಶಗಳ ಮಾಹಿತಿ ಇಲ್ಲಿದೆ.
Stock market crash: ಸತತವಾಗಿ ಕಳೆದ ಮೂರು ದಿನಗಳಿಂದ ಏರಿಕೆ ಕಂಡಿದ್ದ ಭಾರತೀಯ ಷೇರುಪೇಟೆಗೆ ಈ ಶುಕ್ರವಾರ ಮಾತ್ರ ಎಂದಿನಂತೆ ಇರಲಿಲ್ಲ. ಸಾಕಷ್ಟು ಹೂಡಿಕೆದಾರರು ಷೇರುಗಳನ್ನು ಮಾರಾಟಕ್ಕೆ ಮುಂದಾದ ಕಾರಣ ಷೇರುಪೇಟೆ ಬೆಳಗ್ಗಿನಿಂದಲೇ ಕುಸಿತದತ್ತ ಮುಖ ಮಾಡಿದೆ. ಷೇರುಪೇಟೆ ವಹಿವಾಟು ಇಂದು ಬೆಳಗ್ಗೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ನಿಫ್ಟಿ 200 ಅಂಕಗಳಷ್ಟು ಇಳಿಕೆ ಕಂಡು 23,102 ಅಂಕಕ್ಕೆ ತಲುಪಿದೆ. 30 ಷೇರುಗಳ ಸೆನ್ಸೆಕ್ಸ್ ಸೂಚ್ಯಂಕವು ಇಂದು ಇಂಟ್ರಾ ಡೇಯ ಕನಿಷ್ಠ 76,263 ಅಂಕಕ್ಕೆ ತಲುಪಿದೆ. ಇಂದು ಸೆನ್ಸೆಕ್ಸ್ 750 ಅಂಕಗಳಷ್ಟು ಇಳಿಕೆ ಕಂಡಿದೆ.
ಇಂದು ಭಾರತೀಯ ಷೇರುಪೇಟೆ ಕುಸಿಯುತ್ತಿರುವುದೇಕೆ?
ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಆರ್ಥಿಕ ಅನಿಶ್ಚಿತತೆ ಹೂಡಿಕೆದಾರರನ್ನು ಕಾಡುತ್ತಿದೆ ಎಂದು ಷೇರುಪೇಟೆ ವಿಶ್ಲೇಷಕರು ಅಂದಾಜಿಸಿದ್ದಾರೆ. ಯುಎಸ್ ಬಾಂಡ್ ಲಾಭ ಹೆಚ್ಚುತ್ತಿರುವುದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಮಾರಾಟ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ಮೂರನೇ ತ್ರೈಮಾಸಿಕದ ಫಲಿತಾಂಶ ವರದಿಗಳು ಕೂಡ ಷೇರು ಪೇಟೆ ಕುಸಿತಕ್ಕೆ ಕಾರಣವಾಗಿದೆ.
1. ಆರ್ಥಿಕ ಅನಿಶ್ಚಿತತೆ
"ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಅಧಿಕಾರಕ್ಕೆ ಬರುವುದರಿಂದ ಏಷ್ಯಾದ ಆರ್ಥಿಕ ಸ್ಥಿತಿ ಮರುರೂಪುಗೊಳ್ಳಬಹುದು. ವಿಶೇಷವಾಗಿ, ವ್ಯಾಪಾರ ನೀತಿ ಮತ್ತು ರಕ್ಷಣಾ ನೀತಿಗಳು ಬದಲಾಗಬಹುದು. ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂನಂತಹ ದೇಶಗಳು ಅಮೆರಿಕದ ವ್ಯಾಪಾರವನ್ನು ಹೆಚ್ಚು ಅವಲಂಬಿಸಿವೆ. ಈ ಸಮಯದಲ್ಲಿ ಅಮೆರಿಕದ ಹಿತಾಸಕ್ತಿಗೆ ಆದ್ಯತೆ ನೀಡುವ ಸಲುವಾಗಿ ಸುಂಕ, ವ್ಯಾಪಾರ ಒಪ್ಪಂದಗಳಲ್ಲಿ ಬದಲಾವಣೆಗಳಾದರೆ ಈ ದೇಶಗಳಿಗೆ ಸವಾಲುಗಳು ಎದುರಾಗಬಹುದು" ಎಂದು ವಿಟಿ ಮಾರ್ಕೆಟ್‌ನ ಜಾಗತಿಕ ಕಾರ್ಯತಂತ್ರ ನಿರ್ವಹಣೆಯ ಮುಖ್ಯಸ್ಥರಾದ ರೋಸ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
2. ಮೂರನೇ ತ್ರೈಮಾಸಿಕದ ವರದಿ
"ಇನ್ಫೋಸಿಸ್‌ನ ದುರ್ಬಲ ಫಲಿತಾಂಶದ ಬಳಿಕ ಹೂಡಿಕೆದಾರರು ತುಸು ಎಚ್ಚರವಹಿಸುತ್ತಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಭಾರತದ ಬ್ಯಾಂಕಿಂಗ್ ವಲಯದಲ್ಲಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಿದ್ದರೂ ಬ್ಯಾಂಕಿಂಗ್ ವಲಯದಲ್ಲಿ ಷೇರು ಮಾರಾಟದ ಒತ್ತಡ ಹೆಚ್ಚಾಗಿದೆ" ಎಂದು ಲಕ್ಷ್ಮಿಶ್ರೀ ಇನ್ವೆಸ್ಟ್‌ಮೆಂಟ್ ಆಂಡ್ ಸೆಕ್ಯುರಿಟೀಸ್‌ನ ರಿಸರ್ಚ್ ವಿಭಾಗದ ಮುಖ್ಯಸ್ಥ ಅನ್ಸೂಲ್ ಜೈನ್ ಹೇಳಿದ್ದಾರೆ.
3. ಅಮೆರಿಕ ಡಾಲರ್, ಬಾಂಡ್ ಈಲ್ಡ್ ಪ್ರಗತಿ
"ಅಮೆರಿಕ ಡಾಲರ್ ಏರುಗತಿಯಲ್ಲಿದೆ. ಅಮೆರಿಕ ಬಾಂಡ್ ಈಲ್ಡ್ ಕೂಡ ಏರಿಕೆ ಕಾಣುತ್ತಿದೆ. ಇದರಿಂದ ಈಕ್ವಿಟಿ ಮತ್ತು ಇತರೆ ಸ್ವತ್ತುಗಳಲ್ಲಿರುವ ಹಣವನ್ನು ತೆಗೆದು ಕರೆನ್ಸಿ ಮತ್ತು ಬಾಂಡ್ ಮಾರುಕಟ್ಟೆ ಮೇಲೆ ಹೂಡಿಕೆ ಮಾಡುವವರು ಹೆಚ್ಚಾಗುತ್ತಿದ್ದಾರೆ. ಇದು ಕೂಡ ಭಾರತದ ಷೇರುಪೇಟೆ ಮಂಕಾಗಲು ಕಾರಣವಾಗಿದೆ" ಎಂದು ಅನ್ಸೂಲ್ ಜೈನ್ ಹೇಳಿದ್ದಾರೆ.
4. ಎಫ್‌ಐಐ ಮಾರಾಟ
"ಅಮೆರಿಕದ ಬಾಂಡ್ ಮತ್ತು ಕರೆನ್ಸಿ ಮಾರುಕಟ್ಟೆಯ ಆಕರ್ಷಣೆ ಹೆಚ್ಚಾಗುತ್ತಿರುವುದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಷೇರುಪೇಟೆಯಿಂದ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ" ಎಂದು ಹೆನ್ಸೆಕ್ ಸೆಕ್ಯುರಿಟೀಸ್‌ನ ಮಹೇಶ್ ಎಂ ಹೇಳಿದ್ದಾರೆ.
5. ಯುಎಸ್ ಫೆಡರಲ್ ಬಡ್ಡಿದರ ಕಡಿತದ ಅನಿಶ್ಚಿತತೆ
"ಅಮೆರಿಕದ ಫೆಡರಲ್ ಬ್ಯಾಂಕ್‌ನ ಬಡ್ಡಿದರ ಕಡಿತದ ಕುರಿತು ಅನಿಶ್ಚಿತತೆ ಮುಂದುವರೆದಿದೆ. ಹಣದುಬ್ಬರದ ಆತಂಕವಿಲ್ಲದಿದ್ದರೆ ಬಡ್ಡಿದರ ಕಡಿತ ಮಾಡುವ ಅವಸರವಿಲ್ಲ ಎಂದು ಈಗಾಗಲೇ ಫೆಡರಲ್ ಬ್ಯಾಂಕ್ ಪರೋಕ್ಷವಾಗಿ ತಿಳಿಸಿದೆ. ಅಮೆರಿಕದ ಹಣದುಬ್ಬರ ಮಂದಗತಿಯಲ್ಲಿದೆ. ಹೀಗಾಗಿ, ಬಡ್ಡಿದರ ಕಡಿತದ ಕುರಿತು ಅನಿಶ್ಚಿತತೆ ಮುಂದುವರೆದಿದೆ. ಹೀಗಾಗಿ ಷೇರು ಮಾರಾಟ ಹೆಚ್ಚಾಗಿದೆ" ಎಂದು ಪ್ರಾಫಿಟ್‌ಮಾರ್ಟ್ ಸೆಕ್ಯುರಿಟೀಸ್ ಅವಿನಾಶ್ ಗೋರಕ್‌ಶೇಕರ್ ತಿಳಿಸಿದ್ದಾರೆ.
ಡಿಸ್‌ಕ್ಲೈಮರ್/ ಹಕ್ಕು ನಿರಾಕರಣೆ: ಇಲ್ಲಿ ನೀಡಲಾದ ಅಭಿಪ್ರಾಯಗಳು ಆರ್ಥಿಕ ವಿಶ್ಲೇಷಕರು ಅಥವಾ ಬ್ರೋಕರೇಜ್ ಕಂಪನಿಗಳ ವೈಯಕ್ತಿಕ ಅಭಿಪ್ರಾಯಗಳಾಗಿವೆ. ಇದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಅಭಿಪ್ರಾಯವಲ್ಲ.
