ಭಾರತೀಯ ಷೇರು ಮಾರುಕಟ್ಟೆ ಇಂದು ಕುಸಿಯುತ್ತಿರುವುದೇಕೆ, 5 ಪ್ರಮುಖ ಕಾರಣಗಳೊಂದಿಗೆ ಸರಳ ವಿವರಣೆ ಹೀಗಿದೆ
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಷೇರುಗಳ ಮಾರಾಟ ತೀವ್ರತೆ ಹೆಚ್ಚಾಗಿದೆ. ಶುಕ್ರವಾರದ ವಹಿವಾಟು ಶುರುವಾಗುತ್ತಲೇ ಷೇರು ಪೇಟೆ ಸೂಚ್ಯಂಕಗಳು ಕೆಂಪಾಗಿದ್ದವು. ಹಾಗಾದರೆ, ಭಾರತೀಯ ಷೇರು ಮಾರುಕಟ್ಟೆ ಇಂದು ಕುಸಿಯುತ್ತಿರುವುದೇಕೆ, 5 ಪ್ರಮುಖ ಕಾರಣಗಳೊಂದಿಗೆ ಸರಳ ವಿವರಣೆ ಹೀಗಿದೆ ನೋಡಿ.
ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ (Indian stock market) ಷೇರುಗಳ ಮಾರಾಟದ ಒತ್ತಡ ಸಿಲುಕಿದೆ. ಇದರ ಪರಿಣಾಮ ಇಂದು (ಮಾರ್ಚ್ 15) ಸಣ್ಣ ಬಂಡವಾಳದ ಕಂಪನಿಗಳ (ಸ್ಮಾಲ್ ಕ್ಯಾಪ್) ಸೂಚ್ಯಂಕ ಶೇಕಡ 1 ಕುಸಿದರೆ, ಮಧ್ಯಮ ಪ್ರಮಾಣದ ಬಂಡವಾಳದ ಕಂಪನಿಗಳ (ಮಿಡ್ ಕ್ಯಾಪ್) ಸೂಚ್ಯಂಕ ಶೇಕಡ 1.40 ಗಿಂತ ಹೆಚ್ಚು ಕುಸಿತಕ್ಕೆ ಒಳಗಾಗಿದೆ. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆ ಇಂದು ಹೆಚ್ಚಿನ ಒತ್ತಡಕ್ಕೆ ಒಳಗಾಗಿದೆ.
ಭಾರತದ ಷೇರುಪೇಟೆಯ ಪ್ರಮುಖ ಮಾನದಂಡವೆಂದು ಪರಿಗಣಿಸಲ್ಪಟ್ಟಿರುವ ನಿಫ್ಟಿ50 ಸೂಚ್ಯಂಕ 200 ಅಂಶ ಕುಸಿದರೆ, ಬಿಎಸ್‌ಇ ಸೆನ್ಸೆಕ್ಸ್ 500 ಅಂಶಗಳಷ್ಟು ಕುಸಿತ ಕಂಡಿದೆ. ಈ ಪೈಕಿ ಬ್ಯಾಂಕ್ ನಿಫ್ಟಿ ಸೂಚ್ಯಂಕವು ಇಂಟ್ರಾಡೇ ವಹಿವಾಟಿನಲ್ಲಿ 0.75 ಶೇಕಡ ಅಥವಾ 350 ಪಾಯಿಂಟ್ ಕುಸಿದು ಕರೆಕ್ಷನ್ ಅಥವಾ ತಿದ್ದುಪಡಿ ಮಾಡಿಕೊಂಡಿದೆ.
ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ವಿಶಾಲ ಷೇರು ಮಾರುಕಟ್ಟೆಯಲ್ಲಿ ಬೃಹತ್ ಪ್ರಮಾಣದಲ್ಲಿ ಷೇರುಗಳ ಮಾರಾಟ, ದುರ್ಬಲ ಜಾಗತಿಕ ವಿದ್ಯಮಾನಗಳು, ವಿದೇಶಿ ಸಾಂಸ್ಥಿಕ ಹೂಡಿಕೆಗಳ ಹಿಂತೆಗೆತ ಅಥವಾ ಮಾರಾಟ , ಮುಂಬರುವ ಯುಎಸ್ ಫೆಡ್ ಸಭೆ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳು ಭಾರತೀಯ ಷೇರು ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖ ಕಾರಣಗಳು.
ಭಾರತೀಯ ಷೇರು ಮಾರುಕಟ್ಟೆ ಇಂದು ಕುಸಿತ ಕಾಣಲು ಏನು ಕಾರಣ
ಭಾರತದ ಷೇರು ಮಾರುಕಟ್ಟೆ ಶುಕ್ರವಾರ ಕುಸಿತ ಮುಂದುವರಿಸಿದ್ದು, ಈ ಕುಸಿತಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ ಎಸ್ಎಂಸಿ ಗ್ಲೋಬಲ್ ಸೆಕ್ಯುರಿಟೀಸ್ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಸೌರಭ್ ಜೈನ್ ಪ್ರತಿಕ್ರಿಯಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಕನ್ನಡ (HT ಕನ್ನಡ)ದ ಸೋದರ ತಾಣ ಲೈವ್ ಮಿಂಟ್ ಸೌರಭ್ ಜೈನ್ ಅವರ ಪ್ರತಿಕ್ರಿಯೆಯನ್ನು ದಾಖಲಿಸಿರುವುದು ಹೀಗೆ -
“ ಬೃಹತ್ ಪ್ರಮಾಣದಲ್ಲಿ ಷೇರುಗಳ ಮಾರಾಟ ನಡೆದಿರುವುದೇ ಭಾರತದ ಷೇರು ಮಾರುಕಟ್ಟೆ ಕುಸಿತಕ್ಕೆ ಮೊದಲ ಮತ್ತು ಪ್ರಮುಖ ಕಾರಣ. ಯುಎಸ್‌ನ ಪಿಪಿಪಿ ದತ್ತಾಂಶ ನಿರಾಶಾದಾಯಕಾವಾಗಿರುವುದು, ದುರ್ಬಲವಾಗಿರುವ ಜಾಗತಿಕ ಮಾರುಕಟ್ಟೆ ಭಾವನೆಗಳು, ಯುಎಸ್ ಫೆಡ್ ಸಭೆಗೆ ಮುಂಚಿತವಾಗಿ ಫೆಡ್ ಬಡ್ಡಿದರ ಕಡಿತದ ಕುರಿತು ಅನಿಶ್ಚಿತ ಭಾವ ಕಾಡಿರುವುದು, ವಿದೇಶಿ ಸಾಂಸ್ಥಿಕ ಹೂಡಿಕೆ ಹಿಂತೆಗೆತ, ಹೆಚ್ಚುತ್ತಿರುವ ಕಚ್ಚಾತೈಲ ಬೆಲೆ ಕೂಡ ಭಾರತದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ”.
ಭಾರತೀಯ ಷೇರು ಮಾರುಕಟ್ಟೆ ಕುಸಿತಕ್ಕೆ 5 ಮುಖ್ಯ ಕಾರಣ
ಹಿಂದೂಸ್ತಾನ್ ಟೈಮ್ಸ್ ಕನ್ನಡ (HT ಕನ್ನಡ)ದ ಸೋದರ ತಾಣ ಲೈವ್ ಮಿಂಟ್ ವರದಿ ಪ್ರಕಾರ, ಭಾರತೀಯ ಷೇರು ಮಾರುಕಟ್ಟೆ ಕುಸಿತಕ್ಕೆ 5 ಮುಖ್ಯ ಕಾರಣ. ಅದನ್ನು ವಿವರಿಸಿರುವುದು ಹೀಗೆ-
1) ಹೆಚ್ಚಿನ ಪ್ರಮಾಣದಲ್ಲಿ ಷೇರು ಮಾರಾಟ: ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ತೀವ್ರ ಮಾರಾಟದ ಒತ್ತಡಕ್ಕೆ ಸಿಲುಕಿವೆ. ಗುರುವಾರದ ಸಮಾಧಾನಕರ ಏರಿಕೆಯ ನಂತರ ಶುಕ್ರವಾರ ಹೂಡಿಕೆದಾರರು ಮತ್ತೆ ಷೇರುಗಳ ಮಾರಾಟ ಶುರುಮಾಡಿದ್ದಾರೆ. ಇದು ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ವಿಭಾಗದಲ್ಲಿ ಒತ್ತಡವನ್ನು ಸೃಷ್ಟಿಸಿದೆ ಎಂದು ಬಸವ್ ಕ್ಯಾಪಿಟಲ್ ಸಂಸ್ಥಾಪಕ ಸಂದೀಪ್ ಪಾಂಡೆ ಹೇಳಿದ್ದಾರೆ.
2) ಜಾಗತಿಕವಾಗಿ ದುರ್ಬಲ ವಹಿವಾಟು: ಅಮೆರಿಕದ ಪಿಪಿಐ ದತ್ತಾಂಶ ನಿರಾಶಾದಾಯಕವಾಗಿತ್ತು. ಅಮೆರಿಕದ ಅರ್ಥವ್ಯವಸ್ಥೆಯ ಸ್ಥಿತಿಸ್ಥಾಪಕ ಗುಣದ ಬಗ್ಗೆ ಹೂಡಿಕೆದಾರರು ಸಂದೇಹಪಟ್ಟಿದ್ದು, ಇದು ದುರ್ಬಲ ವಹಿವಾಟಿಗೆ ಕಾರಣವಾಗಿದೆ. ಹೀಗಾಗಿ ಅಮೆರಿಕದ ಷೇರುಪೇಟೆಯ ವಹಿವಾಟಿನಲ್ಲೂ ಲವಲವಿಕೆ ಇಲ್ಲ ಎಂದು ಪ್ರಾಫಿಟ್ ಮಾರ್ಟ್ ಸೆಕ್ಯುರಿಟೀಸ್‌ನ ರೀಸರ್ಚ್ ಹೆಡ್ ಅವಿನಾಶ್ ಗೋರಾಕ್ಷರ್ ಹೇಳಿದ್ದಾರೆ. ಅಮೆರಿಕದ ಪಿಪಿಐ (ಪ್ರೊಡ್ಯೂಸರ್ ಪ್ರೈಸ್ ಇಂಡೆಕ್ಸ್) ತಿಂಗಳಿಂದ ತಿಂಗಳಿಗೆ ಶೇಕಡ 0.6 ಏರಿಕೆ ದಾಖಲಿಸಿದ್ದಾಗಿ ಫೆಬ್ರವರಿಯ ದತ್ತಾಂಶ ಹೇಳಿದೆ. ಫೆಬ್ರವರಿ ತನಕದ 12 ತಿಂಗಳ ಅವಧಿಯಲ್ಲಿ ಪಿಪಿಐ ಶೇಕಡ 1.6 ಏರಿದೆ.
3) ಮುಂಬರುವ ಅಮೆರಿಕ ಫೆಡ್ ಸಭೆ: ಅಮೆರಿಕನ್ ಕಾಂಗ್ರೆಸ್‌ನಲ್ಲಿ ಯುಎಸ್ ಫೆಡ್ ಮುಖ್ಯಸ್ಥ ಜೆರೋಮ್ ಪೊವೆಲ್ ಸಾಕ್ಷ್ಯದ ನಂತರ ಶೀಘ್ರವೇ ಬಡ್ಡಿದರ ಇಳಿಕೆಯನ್ನು ಮಾರುಕಟ್ಟೆ ನಿರೀಕ್ಷಿಸುತ್ತಿತ್ತು. ಆದರೆ ಈ ವಾರ ನಿರಾಶಾದಾಯಕವೆನಿಸುವ ಅಮೆರಿಕದ ಆರ್ಥಿಕ ವ್ಯವಸ್ಥೆಯ ದತ್ತಾಂಶದ ಕಾರಣ ಹಣದುಬ್ಬರ ವಿಚಾರ ಮುನ್ನೆಲೆಗೆ ಬಂದಿದೆ. ಇದು ಫೆಡ್ ಬಡ್ಡಿದರ ಕಡಿತ ಅನಿಶ್ಚಿತ ಎಂಬ ಭಾವನೆಯನ್ನು ಹರಡಿದೆ. ಈ ವಿದ್ಯಮಾನ ಜಾಗತಿಕ ವಿದ್ಯಮಾನವಾಗಿದ್ದು, ಭಾರತದ ಷೇರು ಮಾರುಕಟ್ಟೆ ಬಲತುಂಬುವಂತೆ ಕೆಲಸ ಮಾಡಿಲ್ಲ ”ಎಂದು ಅವಿನಾಶ್ ಗೋರಾಕ್ಷರ್ ಹೇಳಿದರು.
4) ವಿದೇಶಿ ಸಾಂಸ್ಥಿಕ ಹೂಡಿಕೆ ಹಿಂತೆಗೆತ; ಭಾರತದ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಸೂಚ್ಯಂಕ ಕುಸಿತಕ್ಕೆ ಕಾರಣವಾಗಿದೆ. ಅಮೆರಿಕದ ಆರ್ಥಿಕ ವ್ಯವಸ್ಥೆಯಲ್ಲಿನ ಅನಿಶ್ಚಿತ ವಿದ್ಯಮಾನವು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಪ್ರೇರೇಪಿಸಿದೆ. ಇದು ಭಾರತದ ಷೇರು ಮಾರುಕಟ್ಟೆ ಕುಸಿತ ಕಾರಣ ಎಂದು ಸೌರಭ್ ಜೈನ್ ವಿವರಿಸಿದ್ದಾರೆ.
5) ಕಚ್ಚಾ ತೈಲ ಬೆಲೆ ಹೆಚ್ಚಳ: ಎಂಸಿಎಕ್ಸ್ ಕಚ್ಚಾ ತೈಲ ಬೆಲೆ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಇದೇ ವೇಳೆ ಭಾರತ ಸರ್ಕಾರವು ತೈಲ ಉತ್ಪನ್ನ ಮಾರುಕಟ್ಟೆ ಕಂಪನಿಗಳಿಗೆ ತೈಲ ದರ ಇಳಿಸುವಂತೆ ನಿರ್ದೇಶನ ನೀಡಿದೆ. ಇದರಿಂದಾಗಿ ತೈಲದ ಹಣದುಬ್ಬರ ಹೆಚ್ಚಾಗಲಿದ್ದು, ಇದರ ಪರಿಣಾಮ ಆರ್ಥಿಕತೆ ಮೇಲೆ ಬೀರಲಿದೆ ಎಂಬುದನ್ನು ಭಾರತದ ಷೇರು ಮಾರುಕಟ್ಟೆ ಗ್ರಹಿಸಿದ್ದರಿಂದ ಈ ಕುಸಿತ ಕಂಡಿದೆ ಎಂದು ಸೌರಭ್ ಜೈನ್ ಹೇಳಿದ್ದಾಗಿ ಲೈವ್ ಮಿಂಟ್ ವರದಿ ಮಾಡಿದೆ.
ಹಕ್ಕುತ್ಯಾಗ: ಮೇಲಿನ ಅಭಿಪ್ರಾಯ, ಶಿಫಾರಸುಗಳು ಆಯಾ ಪರಿಣತ ವಿಶ್ಲೇಷಕರ ಅಥವಾ ಬ್ರೋಕಿಂಗ್ ಕಂಪನಿಗಳದ್ದೇ ಹೊರತು, ಲೈವ್ ಮಿಂಟ್ ಅಥವಾ ಹಿಂದೂಸ್ತಾನ್ ಟೈಮ್ಸ್ ಕನ್ನಡದ್ದಲ್ಲ. ಹೂಡಿಕೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪರಿಣತರ ಸಲಹೆ ಪಡೆಯುವಂತೆ ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.
(This copy first appeared in Hindustan Times Kannada website. To read more like this please logon to kannada.hindustantimes.com)