IT shares: ಟಿಸಿಎಸ್ ವಿಪ್ರೊ ಇನ್ಫೋಸಿಸ್‌ನಂತಹ ಐಟಿ ಷೇರುಗಳು ಇಂದು ರಾಕೆಟ್‌ನಂತೆ ನೆಗೆಯುತ್ತಿರುವುದೇಕೆ, ಷೇರುಪೇಟೆಯಲ್ಲಿ ಹೊಸ ಪುಳಕ
Stock market today: ಟಿಸಿಎಸ್, ಇನ್ಫೋಸಿಸ್, ಕೋಫೋರ್ಜ್ ಸೇರಿದಂತೆ ಭಾರತೀಯ ಷೇರುಗಳನ್ನು ಷೇರು ಖರೀದಿದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಟಿಸಿಎಸ್‌ನ ಮೊದಲ ತ್ರೈಮಾಸಿಕ ಉತ್ತಮಗೊಂಡಿರುವುದು, ಅಮೆರಿಕದ ಡಾಲರ್ ಮೌಲ್ಯ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ಷೇರು ಖರೀದಿ ಹೆಚ್ಚಾಗಿದೆ.
Stock market today: ಭಾರತದ ಷೇರುಪೇಟೆಯಲ್ಲಿ ಇಂದು ಐಟಿ ಷೇರುಗಳನ್ನು ಖರೀದಿಸಲು ಹೆಚ್ಚಿನ ಷೇರು ಖರೀದಿದಾರರು ಆಸಕ್ತಿವಹಿಸುತ್ತಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನ ಏಪ್ರಿಲ್-ಜೂನ್ 2023 ತ್ರೈಮಾಸಿಕದ ವರದಿ, ಸುಧಾರಿತ ಮಾರ್ಜಿನ್, ಹೆಚ್ಚಾದ ಅಟ್ರಿಷನ್ ದರ, ಹೆಚ್ಚಿದ ಆರ್ಡರ್ ಒಳಹರಿವು ಇತ್ಯಾದಿ ಕಾರಣಗಳಿಂದ ಭಾರತದ ಐಟಿ ಷೇರುಗಳ ಖರೀದಿಗೆ ಇಂದು ಬೆಳಗ್ಗೆಯಿಂದಲೇ ಹೂಡಿಕೆದಾರರು ಹೆಚ್ಚಿನ ಉತ್ಸಾಹ ತೋರಿದ್ದಾರೆ. ಬೆಳಗಿನ ವಹಿವಾಟಿನಲ್ಲಿ ಟಿಸಿಎಸ್ ಷೇರುಗಳು ಶೇಕಡ 3ರಷ್ಟು ಏರಿಕೆ ಕಂಡಿದೆ. ಇನ್ಫೊಸಿಸ್ ಷೇರುಗಳು ಶೇಕಡ 3ರಷ್ಟು ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಕೋಪೋರ್ಜ್ ಕಂಪನಿಯ ಷೇರು ಬೆಲೆಯು ಇಂದು ಬೆಳಗಿನ ಟ್ರೇಡಿಂಗ್‌ನಲ್ಲಿ ಶೇಕಡ 2.5ರಷ್ಟು ಹೆಚ್ಚಳವಾಗಿದೆ.
"ಎರಡು ಮುಖ್ಯವಾದ ಕಾರಣಗಳಿಂದ ಇಂದು ಐಟಿ ಷೇರುಗಳು ಬೇಡಿಕೆ ಪಡೆಯುತ್ತಿವೆ. ಟಿಸಿಎಸ್ ಮೊದಲ ತ್ರೈಮಾಸಿಕದ ಫಲಿತಾಂಶ ಸದೃಢವಾಗಿರುವುದು ಒಂದು ಕಾರಣ. ಅಮೆರಿಕದ ಸಿಪಿಐ ಡೇಟಾವು ಎರಡು ವರ್ಷಗಳ ಕೆಳಮಟ್ಟಕ್ಕೆ ಕುಸಿದಿರುವುದು ಇನ್ನೊಂದು ಕಾರಣ. ಇವೆರಡರಲ್ಲಿ ಟಿಸಿಎಸ್ ಫಲಿತಾಂಶವೇ ಪ್ರಮುಖ ಕಾರಣವಾಗಿದೆ. ಟಿಸಿಎಸ್ ಫಲಿತಾಂಶ ಉತ್ತಮವಾಗಿರುವುದರಿಂದ ವಿಪ್ರೋ, ಇನ್ಫೋಸಿಸ್‌ನಂತಹ ಐಟಿ ಷೇರುಗಳ ಬೇಡಿಕೆಯನ್ನೂ ಹೆಚ್ಚಿಸಿದೆ" ಎಂದು ಜಿಸಿಐ ಬ್ರೋಕಿಂಗ್‌ನ ರಿಸರ್ಚ್ ಅನಾಲಿಸದ್ಟ್ ವೈಭವ್ ಕೌಶಿಕ್ ಹೇಳಿದ್ದಾರೆ.
ಅಮೆರಿಕದ ಸಿಪಿಐ ದರವು ಭಾರತದ ಐಟಿ ಕಂಪನಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಪ್ರೊಫಿಟ್‌ಮಾರ್ಟ್ ಸೆಕ್ಯುರಿಟೀಸ್‌ನ ರಿಸರ್ಚ್ ಹೆಡ್ ಅವಿನಾಶ್ ಗೋರಸ್ಕರ್ ವಿವರಿಸಿದ್ದಾರೆ. "ಅಮೆರಿಕದ ಸಿಪಿಐ ಡೇಟಾ ಇಳಿಕೆ ಕಂಡಿರುವುದರಿಂದ ಡಾಲರ್ ದರವು ಇಳಿಕೆ ಕಂಡಿದೆ. ಇದರಿಂದ ಭಾರತದ ಐಟಿ ಕಂಪನಿಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ವಿಧಿಸುವ ದರ ಕಡಿಮೆಯಾಗುತ್ತದೆ. ಭಾರತದ ಐಟಿ ಕಂಪನಿಗಳು ಮುಖ್ಯವಾಗಿ ಸೇವಾ ರಫ್ತುದಾರ ಕಂಪನಿಗಳಾಗಿವೆ. ಇದರಿಂದ ಭಾರತದ ಕಂಪನಿಗಳಿಗೆ ಪ್ರಯೋಜನವಾಗಲಿದೆ" ಎಂದು ಅವರು ವಿವರಿಸಿದ್ದಾರೆ.
ಟಿಸಿಎಸ್ ಷೇರು ದರ ಟಾರ್ಗೆಟ್
ಜಿಸಿಎಲ್ ಬ್ರೋಕಿಂಗ್‌ನ ವೈಭವ್ ಕೌಶಿಕ್ ಅವರು ಟಿಸಿಎಸ್ ದರ ಟಾರ್ಗೆಟ್ ಕುರಿತು ಹೀಗೆನ್ನುತ್ತಾರೆ. "ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶವನ್ನು ಟಿಸಿಎಸ್ ಪ್ರಕಟಿಸಿದೆ. ಈ ಸಂದರ್ಭದಲ್ಲಿ ಟಿಸಿಎಸ್ ಷೇರು 3200 ರೂ.ನಿಂದ 3750 ನಡುವೆ ಇರಲಿದೆ. ದರ ಇದಕ್ಕಿಂತ ಕಡಿಮೆಯಾದಗ ದೀರ್ಘಕಾಲದ ಹೂಡಿಕೆದಾರರು ಖರೀದಿಸಬಹುದು" ಎಂದು ಅವರು ಹೇಳಿದ್ದಾರೆ.
ಟಿಸಿಎಸ್ ಕ್ಯೂ1 ಫಲಿತಾಂಶ 2023
ಮಾಹಿತಿ ತಂತ್ರಜ್ಞಾನ ವಲಯದ ಪ್ರಮುಖ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಲಿಮಿಟೆಡ್ ಕಳೆದ ತ್ರೈಮಾಸಿಕದ ವರದಿ ಪ್ರಕಟಿಸಿದೆ. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 16.84ರಷ್ಟು ಏರಿಕೆ ಕಂಡಿದೆ. ಜೂನ್ ತಿಂಗಳಿಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ನಿವ್ವಳ ಆದಾಯವು 11,074 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 9, 478 ಕೋಟಿ ರೂ. ಆದಾಯ ಗಳಿಸಿತ್ತು.