ಜೊಮ್ಯಾಟೊ ಷೇರು ದರ ಒಂದೇ ದಿನ ಶೇ 19 ರಷ್ಟು ಏರಿಕೆ, ನಷ್ಟದಲ್ಲಿದ್ದ ಆಹಾರ ವಿತರಣಾ ಕಂಪನಿ ಷೇರುಗಳಿಗೆ ಈಗ ಹೆಚ್ಚಿದ ಬೇಡಿಕೆ-business news zomato share price rises 19 pc on friday after its quarerly result ceo deepender goyal gains rs 1638 cr ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜೊಮ್ಯಾಟೊ ಷೇರು ದರ ಒಂದೇ ದಿನ ಶೇ 19 ರಷ್ಟು ಏರಿಕೆ, ನಷ್ಟದಲ್ಲಿದ್ದ ಆಹಾರ ವಿತರಣಾ ಕಂಪನಿ ಷೇರುಗಳಿಗೆ ಈಗ ಹೆಚ್ಚಿದ ಬೇಡಿಕೆ

ಜೊಮ್ಯಾಟೊ ಷೇರು ದರ ಒಂದೇ ದಿನ ಶೇ 19 ರಷ್ಟು ಏರಿಕೆ, ನಷ್ಟದಲ್ಲಿದ್ದ ಆಹಾರ ವಿತರಣಾ ಕಂಪನಿ ಷೇರುಗಳಿಗೆ ಈಗ ಹೆಚ್ಚಿದ ಬೇಡಿಕೆ

Zomato Share Price; ನವೋದ್ಯಮವಾಗಿದ್ದ ಜೊಮ್ಯಾಟೋ ಆಹಾರ ವಿತರಣಾ ಕ್ಷೇತ್ರದಲ್ಲಿ ಈಗ ಪ್ರಬಲ ಕಂಪನಿಯಾಗಿ ಬೆಳೆದಿದೆ. ಕಳೆದ ವರ್ಷ ನಷ್ಟದಲ್ಲಿದ್ದ ಆಹಾರ ವಿತರಣಾ ಕಂಪನಿ ಷೇರುಗಳಿಗೆ ಈಗ ಬೇಡಿಕೆ ಹೆಚ್ಚಿದೆ. ಅದು ಲಾಭದಾಯಕವಾಗಿ ಮುನ್ನುಗ್ಗುತ್ತಿದ್ದು, ಜೊಮ್ಯಾಟೊ ಷೇರು ದರ ಒಂದೇ ದಿನ ಶೇ 19 ರಷ್ಟು ಏರಿಕೆ ಕಂಡು ಬಂದಿರುದುವುದು ಅದಕ್ಕೆ ಕಾರಣ.

ಜೊಮ್ಯಾಟೊ ಷೇರು ದರ ಒಂದೇ ದಿನ ಶೇ 19 ರಷ್ಟು ಏರಿಕೆ, ನಷ್ಟದಲ್ಲಿದ್ದ ಆಹಾರ ವಿತರಣಾ ಕಂಪನಿ ಷೇರುಗಳಿಗೆ ಈಗ ಬೇಡಿಕೆ ಹೆಚ್ಚಿದೆ. (ಸಾಂಕೇತಿಕ ಚಿತ್ರ)
ಜೊಮ್ಯಾಟೊ ಷೇರು ದರ ಒಂದೇ ದಿನ ಶೇ 19 ರಷ್ಟು ಏರಿಕೆ, ನಷ್ಟದಲ್ಲಿದ್ದ ಆಹಾರ ವಿತರಣಾ ಕಂಪನಿ ಷೇರುಗಳಿಗೆ ಈಗ ಬೇಡಿಕೆ ಹೆಚ್ಚಿದೆ. (ಸಾಂಕೇತಿಕ ಚಿತ್ರ)

ಮುಂಬಯಿ: ಭಾರತೀಯ ಷೇರುಪೇಟೆಯಲ್ಲಿ ಈ ವರ್ಷ ಅಂದರೆ 2024ರಲ್ಲಿ ಜೊಮ್ಯಾಟೊ ಷೇರು (Zomato Share) ಅದ್ಭುತವೆನಿಸುವ ಪ್ರದರ್ಶನ ನೀಡತೊಡಗಿದೆ. ಶುಕ್ರವಾರ ಕೊನೆಗೊಂಡ ವಹಿವಾಟಿನಲ್ಲಿ ಜೊಮ್ಯಾಟೊ ಷೇರು ದರ (Zomato Share Price) ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ಜೊಮ್ಯಾಟೊ ಷೇರು ಮೌಲ್ಯ ಏರಿಕೆಯಾದ್ದರ ಹೆಚ್ಚಿನ ಪ್ರಯೋಜನ ಸಿಕ್ಕಿರುಸುವುದು ಜೊಮ್ಯಾಟೊ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ದೀಪೇಂದರ್‌ ಗೋಯೆಲ್ (Deepender Goyal) ಅವರಿಗೆ. ಅದು ಕಡಿಮೆ ಮೊತ್ತದ ಪ್ರಯೋಜನವೇನೂ ಅಲ್ಲ. ಬರೋಬ್ಬರಿ 1638 ಕೋಟಿ ರೂಪಾಯಿಗಳದ್ದು! ಜೂನ್ ತಿಂಗಳಿಗೆ ಕೊನೆಗೊಂಡ ಈ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಆಹಾರ ವಿತರಣಾ ವೇದಿಕೆಯ ಕಾರ್ಯಸಾಧನೆ ಅತ್ಯುತ್ತಮವಾಗಿದ್ದುದು ಇದಕ್ಕೆ ಕಾರಣ.

ಜೊಮ್ಯಾಟೋ ಷೇರು ದರ ಶೇಕಡ 19 ಏರಿಕೆ

ಕಂಪನಿಯ ತ್ರೈಮಾಸಿಕ ಫಲಿತಾಂಶಗಳು ಪ್ರಕಟವಾದ ಬಳಿಕ, ಜೊಮ್ಯಾಟೊ ಷೇರುಗಳು ಶುಕ್ರವಾರ 19 ಪ್ರತಿಶತದಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ 278.45 ರೂಪಾಯಿ ತಲುಪಿತು. ಈ ಏರಿಕೆಯಿಂದಾಗಿ ಕಂಪನಿಯ ಮಾರುಕಟ್ಟೆ ಮೌಲ್ಯ 2.46 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆದಾಗ್ಯೂ, ಬಿಎಸ್‌ಇಯಲ್ಲಿ ಮಾರುಕಟ್ಟೆ ಮುಕ್ತಾಯದ ಸಮಯದಲ್ಲಿ, ಜೊಮಾಟೊ ಷೇರು ದರ ಕುಸಿತ ಕಂಡಿತು. ಇದರಿಂದಾಗಿ ಕಂಪನಿಯ ಷೇರು ಮೌಲ್ಯ ದಿನದ ವಹಿವಾಟಿನ ಕೊನೆಗೆ 262.45 ರೂಪಾಯಿಯಲ್ಲಿತ್ತು. ಜೊಮಾಟೊ ಮಾರುಕಟ್ಟೆ ಬಂಡವಾಳದಲ್ಲಿ ಒಟ್ಟು 40,000 ಕೋಟಿ ರೂಪಾಯಿ ಏರಿಕೆ ಕಂಡುಬಂದಿತ್ತು.

ಕಂಪನಿಯ ಸಿಇಒ ದೀಪೇಂದ್ರ ಗೋಯಲ್ ಕೂಡ ಈ ಭಾರಿ ಪ್ರಮಾಣದ ಏರಿಕೆಯ ಮೂಲಕ ಸಾಕಷ್ಟು ಹಣ ಗಳಿಸಿದರು. ಕಂಪನಿಯ ಸಿಇಒ ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾ ಜಡ್ಜ್‌ ದೀಪೇಂದ್ರ ಗೋಯೆಲ್‌ ಅವರು ಜೊಮಾಟೊದಲ್ಲಿ ಒಟ್ಟು ಶೇಕಡಾ 4.19 ಪಾಲು ಹೊಂದಿದ್ದಾರೆ. ಅವರು 36,94,71,500 ಷೇರುಗಳನ್ನು ಹೊಂದಿದ್ದು, ಶುಕ್ರವಾರದ ಲೆಕ್ಕಾಚಾರದಲ್ಲಿ ಅದರ ಮೌಲ್ಯ 10,288 ಕೋಟಿ ರೂಪಾಯಿ.

ಜೊಮ್ಯಾಟೋ ಕಂಪನಿಯ ತ್ರೈಮಾಸಿಕ ಸಾಧನೆ

ಆಹಾರ ವಿತರಣಾ ಕಂಪನಿಯಾಗಿರುವ ಜೊಮ್ಯಾಟೊ ಜೂನ್‌ ತ್ರೈಮಾಸಿಕದಲ್ಲಿ ಅಂದರೆ 2024ರ ಏಪ್ರಿಲ್ ನಿಂದ ಜೂನ್‌ವರೆಗಿನ ಅವಧಿಯಲ್ಲಿ 253 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಇದು ಕಂಪನಿಯ ವಾರ್ಷಿಕ ಲೆಕ್ಕಾಚಾರದ ಆಧಾರದ ಮೇಲೆ 12,650 ಶೇಕಡಾ ಹೆಚ್ಚು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 75 ಪ್ರತಿಶತದಷ್ಟು ಹೆಚ್ಚಿದ್ದು, ಜೂನ್ ತ್ರೈಮಾಸಿಕದಲ್ಲಿ ಜೊಮಾಟೊದ ಇಬಿಐಟಿಡಿಎ 177 ಕೋಟಿ ರೂ. ಒಂದು ವರ್ಷದ ಹಿಂದೆ 48 ಕೋಟಿ ರೂಪಾಯಿ ನಷ್ಟದಲ್ಲಿತ್ತು.

ಗಮನಿಸಿ: ಪೆನ್ನಿ ಷೇರುಗಳ ಮೇಲೆ ಹೂಡಿಕೆ ಮಾಡುವವರು ಅದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಪಡೆದುಕೊಂಡು ಮುಂದುವರಿಯುವುದು ಒಳಿತು. ಇಲ್ಲಿ ಷೇರುಪೇಟೆಯ ವಿದ್ಯಮಾನಗಳನ್ನು ಮಾಹಿತಿ ದೃಷ್ಟಿಯಿಂದ ಹಂಚಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಷೇರುಗಳ ಮೇಲೆ ಹೂಡಿಕೆ ಮಾಡಬೇಕು ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ ತಾಣ ಸಲಹೆ ನೀಡುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ಮಾಡುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಬೇಕು ಎಂಬುದು ಹೂಡಿಕೆದಾರರಿಗೆ ನಮ್ಮ ಸಲಹೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.