Sensex crashes: ಸೆನ್ಸೆಕ್ಸ್ 800 ಅಂಕ ಕುಸಿತ, ಹೂಡಿಕೆದಾರರ 5 ಲಕ್ಷ ಕೋಟಿ ರೂಪಾಯಿ ಮಾಯ, ಯಾಕೆ ಹೀಗಾಯ್ತು? 5 ಕಾರಣಗಳು
Stock market crash: ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಷೇರು ಮಾರಾಟ ಪ್ರವೃತ್ತಿ ಹೆಚ್ಚಾದ ಕಾರಣ 848 ಅಂಕಗಳಷ್ಟು ಇಳಿಕೆ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಕೂಡ 217 ಅಂಕ ಇಳಿಕೆ ಕಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಘೋಷಣೆಗಳು ಮಾರುಕಟ್ಟೆಗೆ ಆತಂಕ ತಂದಿವೆ.

Stock market crash: ಎಸ್‌ಇ ಸೆನ್ಸೆಕ್ಸ್‌ನಲ್ಲಿ ಷೇರು ಮಾರಾಟ ಪ್ರವೃತ್ತಿ ಹೆಚ್ಚಾದ ಕಾರಣ 848 ಅಂಕಗಳಷ್ಟು ಇಳಿಕೆ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಕೂಡ 217 ಅಂಕ ಇಳಿಕೆ ಕಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಘೋಷಣೆಗಳು ಮಾರುಕಟ್ಟೆಗೆ ಆತಂಕ ತಂದಿವೆ. ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ತಲಾ ಶೇಕಡ 1ರಷ್ಟು ಕುಸಿದಿವೆ. ಬಿಎಸ್‌ಇ ಸೆನ್ಸೆಕ್ಸ್ 848 ಪಾಯಿಂಟ್‌ಗಳ ಕುಸಿತದೊಂದಿಗೆ ದಿನದ ಕನಿಷ್ಠ 76,224.79 ಅಂಕಕ್ಕೆ ತಲಪಿದೆ. ಎನ್‌ಎಸ್‌ಇ ನಿಫ್ಟಿ 217 ಪಾಯಿಂಟ್‌ಗಳ ಕುಸಿತದೊಂದಿಗೆ 23,127.70 ಕ್ಕೆ ತಲುಪಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡ 2ರಷ್ಟು ಕುಸಿತ ಕಂಡಿವೆ. ಷೇರು ಮಾರುಕಟ್ಟೆಯಿಂದ ಹೂಡಿಕೆದಾರರ ಸುಮಾರು 5 ಲಕ್ಷ ಕೋಟಿ ರೂಪಾಯಿ ಸಂಪತ್ತು ಕರಗಿದೆ. ಬಿಎಸ್‌ಇ ಲಿಸ್ಟ್ ಮಾಡಲಾದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು 432 ಲಕ್ಷ ಕೋಟಿಯಿಂದ 427 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ.
ಷೇರು ಮಾರುಕಟ್ಟೆ ಕುಸಿಯುತ್ತಿರುವುದೇಕೆ? 5 ಕಾರಣಗಳು
ಷೇರು ಮಾರುಕಟ್ಟೆಯ ಭಾವನೆಯ ಮೇಲೆ ಪರಿಣಾಮ ಬೀರಿದ ಐದು ಪ್ರಮುಖ ಅಂಶಗಳು ಇಲ್ಲಿವೆ:
1. ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ನೀತಿಗಳ ಸುತ್ತಲಿನ ಅನಿಶ್ಚಿತತೆ
ಅಧಿಕಾರಕ್ಕೆ ಏರಿದ ಮೊದಲ ದಿನವೇ ಡೊನಾಲ್ಟ್ ಟ್ರಂಪ್ ಅವರ ನಡೆ ಮಾರುಕಟ್ಟೆಗೆ ಆತಂಕ ತಂದಿದೆ. ಮೊದಲ ದಿನವೇ ಟ್ರಂಪ್ ಅವರು ಕೆನಡಾ ಮತ್ತು ಮೆಕ್ಸಿಕೊ ಮೇಲಿನ ಸುಂಕ ವಿಧಿಸುವುದು ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಸುಂಕ ಹೆಚ್ಚಿಸುವ ಬೆದರಿಕೆ ಟ್ರಂಪ್ ಕಡೆಯಿಂದ ಬಂದಿದೆ. ಟ್ರಂಪ್ ಅವರ ವಲಸೆ ನೀತಿಗಳು ಭಾರತದ ಮೇಲೆ ಪರಿಣಾಮ ಬೀರಬಹುದು.
"ಟ್ರಂಪ್ 2.0 ಆರಂಭವಾಗಿದೆ. ಆದರೆ, ಅವರ ಆರ್ಥಿಕ ನಿರ್ಧಾರಗಳ ಕುರಿತು ಹೆಚ್ಚಿನ ಸ್ಪಷ್ಟತೆ ಕಾಣಿಸಿಲ್ಲ. ಪ್ರಮಾಣ ವಚನ ಸ್ವೀಕರಿಸಿದ ಸಮಯದಲ್ಲಿ ಮಾಡಿರುವ ಭಾಷಣವನ್ನೇ ಗಮನಿಸಿ. ಆ ಸಮಯದಲ್ಲಿ ಅವರು ವಲಸೆ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದರು. ಆದರೆ, ಸುಂಕಗಳ ಬಗ್ಗ ಅಸ್ಪಷ್ಟವಾಗಿ ಮಾತನಾಡಿದ್ದರು. ಕೆನಡಾ ಮತ್ತು ಮೆಕ್ಸಿಕೊದ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವ ಸೂಚನೆಯು ಸುಂಕ ಹೆಚ್ಚಳ ನೀತಿಯನ್ನು ಕ್ರಮೇಣ ಜಾರಿಗೆ ತರುವ ಸೂಚನೆಯಂತೆಯೂ ಕಾಣಿಸುತ್ತದೆ" ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ ಕೆ ವಿಜಯಕುಮಾರ್ ಹೇಳಿದ್ದಾರೆ.
2. 2025ರ ಕೇಂದ್ರ ಬಜೆಟ್ ಕುರಿತಾ ಎಚ್ಚರಿಕೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಶನಿವಾರ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರವು ಗ್ರಾಮೀಣ ವಲಯಕ್ಕೆ ಉತ್ತೇಜನ ನೀಡಲು ಮತ್ತು ಉತ್ಪಾದನೆ ಮತ್ತು ಮೂಲಸೌಕರ್ಯವನ್ನು ಬೆಂಬಲಿಸಲು ಕ್ರಮಗಳನ್ನು ಘೋಷಿಸುತ್ತದೆ ಎಂಬ ನಿರೀಕ್ಷೆಗಳು ಹೆಚ್ಚಿವೆ. ಇದೇ ಸಮಯದಲ್ಲಿ ಸದ್ಯದಲ್ಲಿಯೇ ಬಜೆಟ್ ಇರುವ ಕಾರಣ ಹೂಡಿಕೆಯ ಬಗ್ಗೆ ತುಸು ಎಚ್ಚರಿಕೆ ವಹಿಸುತ್ತಿದ್ದಾರೆ.
3. ವಿದೇಶಿ ಬಂಡವಾಳದ ಹೊರಹರಿವು
ವಿದೇಶಿ ಬಂಡವಾಳ ಹೂಡಿಕೆದಾರರು ನಿರಂತರವಾಗಿ ಷೇರು ಮಾರಾಟ ಮಾಡುತ್ತಿರುವುದು ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಕುಸಿತದ ಹಿಂದಿನ ಪ್ರಮುಖ ಅಂಶವಾಗಿದೆ. ಜನವರಿ 20ರ ವೇಳೆಗೆ ಸುಮಾರು 51 ಸಾವಿರ ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಎಫ್‌ಐಐ ಹೂಡಿಕೆದಾರರು ಮಾರಾಟ ಮಾಡಿದ್ದಾರೆ.
4. ಮೂರನೇ ತ್ರೈಮಾಸಿಕದ ನೀರಸ ಗಳಿಕೆ
ಮೊದಲ ಮತ್ತು ಎರಡನೇ ತ್ರೈಮಾಸಿಕದ ನಂತರ ಮೂರನೇ ತ್ರೈಮಾಸಿಕದಲ್ಲಿಯೂ ಕಂಪನಿಗಳ ಗಳಿಕೆ ನೀರಸವಾಗಿರುವುದು ಮಾರುಕಟ್ಟೆಯ ಭಾವನೆ ಮೇಲೆ ಪರಿಣಾಮ ಬೀರಿದೆ. "ಭಾರತೀಯ ಆರ್ಥಿಕತೆಯು ಮೂಲಭೂತವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಆರ್ಥಿಕ ಚಟುವಟಿಕೆ ನಿಧಾನಗತಿಯಲ್ಲಿದೆ. ಕೆಲವು ತ್ರೈಮಾಸಿಕಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಗಳಿಕೆ ದುರ್ಬಲವಾಗಿದೆ" ಎಂದು ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿಯ ಫಂಡ್ ಡೈರೆಕ್ಟರ್ ಪ್ರಿಯಾಂಕಾ ಖಂಡೇಲ್ವಾಲ್ ಅವರು ದಿ ಮಿಂಟ್‌ಗೆ ತಿಳಿಸಿದ್ದಾರೆ.
5. ದುರ್ಬಲಗೊಳ್ಳುತ್ತಿರುವ ಮ್ಯಾಕ್ರೋ ಆರ್ಥಿಕತೆ
ಮ್ಯಾಕ್ರೋ ಮಾರುಕಟ್ಟೆಯ ದುರ್ಬಲತೆಯು ಭಾರತೀಯ ಆರ್ಥಿಕತೆಯ ದೌರ್ಬಲ್ಯದ ಲಕ್ಷಣಗಳನ್ನು ಸೂಚಿಸುತ್ತದೆ. ಇದು ಕೂಡ ಮಾರುಕಟ್ಟೆಯಲ್ಲಿ ಎಚ್ಚರಿಕೆಯ ಭಾವನೆ ಮೂಡಿಸಿದೆ. "ದೇಶದಲ್ಲಿ ಬೇಡಿಕೆ ಪ್ರಮಾಣ ಉತ್ತಮವಾಗಿಲ್ಲ. ಸರಕಾರಿ ಬಂಡವಾಳ ಹೂಡಿಕೆಯು ನಿಧಾನಗತಿಯಲ್ಲಿದೆ. ಇದು ಕೃಷಿಯೇತರ ಉದ್ಯೋಗಕ್ಕೆ ಹಾನಿ ಮಾಡುತ್ತಿದೆ. ಆರ್ಥಿಕತೆ ಬೆಳವಣಿಗೆ ಉತ್ತೇಜಿಸಲು ಉತ್ತಮ ನೀತಿಗಳು ಇದ್ದರೂ ಪ್ರಗತಿ ನಿಧಾನಗತಿಯಲ್ಲಿ ಸಾಗುತ್ತಿದೆ" ಎಂದು ಖಂಡೇಲ್ವಾಲ್ ಹೇಳಿದ್ದಾರೆ.
ಡಿಸ್‌ಕ್ಲೈಮರ್/ ಹಕ್ಕುತ್ಯಾಗ: ಇಲ್ಲಿ ನೀಡಲಾದ ಅಭಿಪ್ರಾಯಗಳು ಷೇರು ಮಾರುಕಟ್ಟೆ ವಿಶ್ಲೇಷಕರು, ತಜ್ಞರು ಮತ್ತು ಬ್ರೋಕರೇಜ್ ಸಂಸ್ಥೆಗಳ ಅಭಿಪ್ರಾಯಗಳಾಗಿವೆ. ಇದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಅಭಿಪ್ರಾಯವಾಗಿರುವುದಿಲ್ಲ. ಓದುಗರು ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ.
