Stork Market Crash: ಗ್ಲೋಬಲ್ ಟ್ರೇಡ್ ವಾರ್, ಟ್ರಂಪ್ ಸುಂಕದ ಆತಂಕಕ್ಕೆ ಸಿಲುಕಿದ ಹೂಡಿಕೆದಾರ; ಸೋಮವಾರವೂ ಕರಡಿಯ ತಕಧಿಮಿತ
stock market crash today ಗ್ಲೋಬಲ್ ಟ್ರೇಡ್ ವಾರ್, ಟ್ರಂಪ್ ಸುಂಕದ ಆತಂಕಕ್ಕೆ ಸಿಲುಕಿದ ಹೂಡಿಕೆದಾರ ಷೇರು ಮಾರಾಟ ಹೆಚ್ಚಿಸಿದ್ದಾನೆ. ಏಪ್ರಿಲ್ 7ರ ಸೋಮವಾರ ಸೆನ್ಸಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ, ಮಹಾಕುಸಿತದಲ್ಲಿಯೇ ವಹಿವಾಟು ಆರಂಭಿಸಿವೆ. ಷೇರುಪೇಟೆ ಕುಸಿತಕ್ಕೆ ಕಾರಣವಾದ ಅಂಶಗಳ ಬಗ್ಗೆ ತಿಳಿಯೋಣ.

Stork Market Crash: ಭಾರತೀಯ ಷೇರುಪೇಟೆ ಸೋಮವಾರ ಮಹಾಕುಸಿತಕ್ಕೆ ಸಾಕ್ಷಿಯಾಗಿದೆ. ಏಪ್ರಿಲ್ 7ರ ಸೋಮವಾರ ಸೆನ್ಸಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ, ಮಹಾಕುಸಿತದಲ್ಲಿಯೇ ವಹಿವಾಟು ಆರಂಭಿಸಿವೆ. ಡೊನಾಲ್ಡ್ ಟ್ರಂಪ್ ಅವರಿಂದ ಟ್ರಿಗ್ಗರ್ ಆಗಿರುವ ಗ್ರೋಬಲ್ ಟ್ರೇಡ್ ವಾರ್‌ನ ಭಯದಿಂದ ಷೇರು ಹೂಡಿಕೆದಾರರು ತಮ್ಮ ಷೇರುಗಳನ್ನು ಲಾಭವೋ ನಷ್ಟವೋ ಎಂದು ನೋಡದೆ ಮಾರಲು ಆರಂಭಿಸಿದ್ದಾರೆ. ಸೋಮವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 4 ಸಾವಿರ ಅಂಕದಷ್ಟು ಇಳಿಕೆ ಕಂಡಿದೆ. ನಿಫ್ಟಿ 50ಯು 21,750 ಅಂಕದಷ್ಟು ಇಳಿಕೆ ಕಂಡಿದೆ. ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊ ಕೆಂಪಾಗುವುದನ್ನು ನೋಡುತ್ತ ದಿಗಿಲಾಗುತ್ತಿದ್ದಾರೆ. ಆದರೆ, ದೀರ್ಘಕಾಲದ ಹೂಡಿಕೆದಾರರು ಷೇರುಪೇಟೆಯ ಈ ಕುಸಿತವನ್ನು ಎಚ್ಚರಿಕೆಯಿಂದ ಗಮನಿಸುತ್ತಾ ಕೆಲವೊಂದು ಉತ್ತಮ ಷೇರುಗಳನ್ನು ಖರೀದಿಸಲು ಗಮನ ಹರಿಸುತ್ತಿದ್ದಾರೆ.
ಸೋಮವಾರ ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡ 10ರಷ್ಟು ಇಳಿಕೆ ಕಂಡಿವೆ. ಭಾರತದ ವಲೊಸಿಟಿ ಸೂಚ್ಯಂಕ ಇಂಡಿಯಾ ವಿಐಎಕ್ಸ್ ಶೇಕಡ 52ರಿಂದ ಶೇಕಡ 21ಕ್ಕೆ ಕುಸಿದು ಷೇರುಪೇಟೆಯ ಚಂಚಲತೆಯನ್ನು ತೋರಿಸಿದೆ. ಷೇರುಪೇಟೆ ಸಂಪೂರ್ಣವಾಗಿ ನರ್ವಸ್ ಆಗಿರುವುದನ್ನು ಇಂಡಿಯಾ ವಿಐಎಕ್ಸ್ ತೋರಿಸಿದೆ.
ಬೆಳಗ್ಗೆ ಹತ್ತು ಗಂಟೆಯ ಆಸುಪಾಸಿನಲ್ಲಿ ಸೆನ್ಸೆಕ್ಸ್ ಶೇಕಡ 2,752 ಅಂಕ ಅಥವಾ ಶೇಕಡ 3.65ರಷ್ಟು ಇಳಿಕೆ ಕಂಡಿದೆ. ಸೆನ್ಸೆಕ್ಸ್ 72,613 ಅಂಕಕ್ಕೆ ತಲುಪಿತ್ತು. ಕೆಲವು ತಿಂಗಳ ಹಿಂದೆ ಇದು 80 ಸಾವಿರಕ್ಕಿಂತಲೂ ಮೇಲೆ ಇತ್ತು. ಈಗ ಬೆಳಗ್ಗೆ 10.30ರ ವೇಳೆಗೆ ಸೆನ್ಸೆಕ್ಸ್ 72,500.46 ಅಂಕಕ್ಕೆ ತಲುಪಿದೆ. ಇದೇ ಸಮಯದಲ್ಲಿ ನಿಫ್ಟಿ ಇಂದು ಬೆಳಗ್ಗೆ ಹತ್ತು ಗಂಟೆಗೆ 882 ಅಂಕಗಳು ಅಥವಾ ಶೇಕಡ 3.85ರಷ್ಟು ಇಳಿಕೆ ಕಂಡಿದೆ. ಈಗ 10.30ರ ವೇಳೆಗೆ 21,960.80 ಅಂಕಕ್ಕೆ ತಲುಪಿದೆ. ಅಂದರೆ, ಶೇಕಡ 4.09ರಷ್ಟು ಕುಸಿದಿದೆ.
ಭಾರತೀಯ ಷೇರುಪೇಟೆ ಇಂದು ಏಕೆ ಕುಸಿದಿದೆ?
ಜಾಗತಿಕವಾಗಿ ಹೆಚ್ಚಿದ ಷೇರು ಮಾರಾಟ
ಭಾರತೀಯ ಷೇರುಪೇಟೆ ಇಂದು ಬ್ಲ್ಯಾಕ್ ಮಂಡೆ ಆಗಲು ಅನೇಕ ಕಾರಣಗಳಿವೆ. ಡೊನಾಲ್ಡ್ ಟ್ರಂಪ್ ಆಡಳಿತವು ಇತ್ತೀಚೆಗೆ ವಿಧಿಸಿದ ಸುಂಕವು ಷೇರುಪೇಟೆ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇದರಿಂದ ಜಾಗತಿಕ ಷೇರುಪೇಟೆ ಅಲ್ಲೋಲಕಲ್ಲೋಲವಾದರೂ ಟ್ರಂಪ್ ತಲೆಕೆಡಿಸಿಕೊಂಡಂತೆ ಇಲ್ಲ. ಟ್ರಂಪ್ ಆಡಳಿತವು ತನ್ನ ಸುಂಕ ನೀತಿಯಿಂದ ಹಿಂದೆ ಸರಿಯುವ ಸೂಚನೆ ನೀಡಿಲ್ಲ. ಇದರಿಂದ ಹೂಡಿಕೆದಾರರು ಆತಂಕಗೊಂಡಿದ್ದಾರೆ. ಟ್ರಂಪ್ ತನ್ನ ಸುಂಕವನ್ನು ಔಷಧ ಎಂದು ವ್ಯಾಖ್ಯಾನಿಸಿದ್ದಾರೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ನಷ್ಟದ ಕುರಿತು ನಾನು ಕನ್ಸರ್ನ್ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.
ಮಾರುಕಟ್ಟೆ ನರ್ವಸ್ ಆಗಲು ಹಲವು ಕಾರಣ
ಒಂದೆಡೆ ಟ್ರಂಪ್ ಸರಕಾರವು 180ಕ್ಕೂ ಹೆಚ್ಚು ದೇಶಗಳಿಗೆ ಸುಂಕ ಹೆಚ್ಚಿಸಿದೆ. ಇದು ಮಾರುಕಟ್ಟೆ ನರ್ವಸ್ ಆಗಲು ಕಾರಣವಾಗಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಷೇರುಪೇಟೆ ಇನ್ನಷ್ಟು ಇಳಿಕೆ ಕಾಣಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದು ಕೂಡ ಷೇರುಪೇಟೆ ಮತ್ತಷ್ಟು ಇಳಿಕೆ ಕಾಣಲು ಕಾರಣವಾಗಿದೆ.
ಕಂಪನಿಗಳ ಲಾಭ ಇಳಿಕೆಯ ಆತಂಕ
ಡೊನಾಲ್ಡ್ ಟ್ರಂಪ್ ಅವರ ಸುಂಕದ ನೀತಿಯು ಹಣದುಬ್ಬರ ಹೆಚ್ಚಿಸಬಹುದು. ಕಂಪನಿಗಳ ಲಾಭವನ್ನು ಇಳಿಕೆ ಮಾಡಬಹುದು. ಇದು ಗ್ರಾಹಕರ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಆರ್ಥಿಕ ಪ್ರಗತಿ ಇಳಿಕೆ ಕಾಣಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. "ಅಮೆರಿಕ ಮತ್ತು ಜಾಗತಿಕ ರಿಸೆಷನ್ ಶೇಕಡ 40ರಿಂದ ಶೇಕಡ 60 ಹೆಚ್ಚಾಗಬಹುದು" ಎಂದು ರಾಯಿಟರ್ಸ್‌ನ ಜೆಪಿ ಮೋರ್ಗಾನ್ ಆತಂಕ ವ್ಯಕ್ತಪಡಿಸಿದ್ದಾರೆ.
ವಿದೇಶಿ ಹೂಡಿಕೆದಾರರಿಂದ ಮಾರಾಟ ಮುಂದುವರಿಕೆ
ಕಳೆದ ತಿಂಗಳಿನಿಂದಲೂ ಷೇರು ಖರೀದಿ ಕುಂಠಿತವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಏಪ್ರಿಲ್ ತಿಂಗಳಿನಲ್ಲಿಯೂ ತಮ್ಮಲ್ಲಿರುವ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದ್ದಾರೆ. ಶುಕ್ರವಾರ ತನಕ ಎಫ್‌ಪಿಐ ಹೂಡಿಕೆದಾರರು ಭಾರತದ ಷೇರುಮಾರುಕಟ್ಟೆಯಲ್ಲಿನ 13,730 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.