ಶಬರಿಮಲೆಗಿಂತ ಎರುಮೇಲಿ ದುಬಾರಿ, ಮನಬಂದಂತೆ ದರ ವಸೂಲಿ ಮಾಡ್ತಿದ್ದಾರೆ ವ್ಯಾಪಾರಸ್ಥರು; ಅಯ್ಯಪ್ಪ ಭಕ್ತರ ಅಸಮಾಧಾನ
Sabarimala: ಶಬರಿಮಲೆಗಿಂತ ಎರುಮೇಲಿ ದುಬಾರಿ ಎಂದು ಯ್ಯಪ್ಪ ಭಕ್ತರ ಅಸಮಾಧಾನ ವ್ಯಕ್ತಪಡಿಸಿದ್ದು, ಎರುಮೇಲಿಯಲ್ಲಿ ವ್ಯಾಪಾರಸ್ಥರು ಮನಬಂದಂತೆ ದರ ವಸೂಲಿ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳ ಸರ್ಕಾರ ತುರ್ತಾಗಿ ಈ ಬಗ್ಗೆ ಗಮನಹರಿಸಿ ದರ ನಿಗದಿ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
Sabarimala: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಸಮೀಪದ ಎರುಮೇಲಿಯಲ್ಲಿ ವ್ಯಾಪಾರಸ್ಥರು ಅಯ್ಯಪ್ಪ ಭಕ್ತರ ಹಗಲು ದರೋಡೆಗೆ ಇಳಿದಿದ್ದು, ಗ್ರಂಥಿಕೆ, ಪೂಜಾ ಸಾಮಗ್ರಿಗಳನ್ನು ಮನಸೋ ಇಚ್ಚೆ ದರ ವಿಧಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ಹೋಗುವ ದಾರಿಯಲ್ಲಿ ಶರಂಗುತ್ತಿಯಲ್ಲಿ ಎಸೆಯಲು ಬೇಕಾದ ಬಾಣ, ಎರುಮೇಲಿಯಲ್ಲಿ ಪೇಟ್ಟತುಳ್ಳಲ್ ನೃತ್ಯಕ್ಕೆ ಬೇಕಾದ ಕಿರೀಟ, ಖಡ್ಗ, ಊರುಗೋಲು ಮುಂತಾದವುಗಳ ಬೆಲೆಯೂ ಅಷ್ಟೆ. ಅದಕ್ಕೊಂದು ಮಿತಿ ಇಲ್ಲ ಎಂದು ಅಯ್ಯಪ್ಪ ಭಕ್ತರು ದೂರಿದ್ದಾಗಿ ವಿಜಯ ಕರ್ನಾಟಕ ವರದಿ ಮಾಡಿದೆ. ಸಾಮಾನ್ಯವಾಗಿ 5 ರೂಪಾಯಿ, 10 ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು 35 ರೂಪಾಯಿಗೂ ಹೆಚ್ಚು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಯ್ಯಪ್ಪ ಸನ್ನಿಧಾನದಲ್ಲಿ ಈ ಎಲ್ಲ ವಸ್ತುಗಳು 10 ರೂಪಾಯಿಗೆ ಸಿಗುತ್ತಿರುವಾಗ ಎರುಮೇಲಿಯಲ್ಲಿ ಯಾಕೆ ಅಷ್ಟೊಂದು ದರ ವಿಧಿಸುತ್ತಾರೆ ಎಂದು ಅಯ್ಯಪ್ಪ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎರುಮೇಲಿ ವಾವರ ಸ್ವಾಮಿ ಕ್ಷೇತ್ರದ ಬಳಿ ಎಲ್ಲವೂ ದುಬಾರಿ; ವರದಿ
ಶಬರಿಮಲೆ ಅಯ್ಯಪ್ಪ ಕ್ಷೇತ್ರದ ಇತಿಹಾಸದ ಜೊತೆಗೆ ನಂಟು ಹೊಂದಿದ ಎರುಮೇಲಿ ವಾವರ ಸ್ವಾಮಿ ಮಸೀದಿ ಸುತ್ತಮುತ್ತ ಎಲ್ಲವೂ ದುಬಾರಿ. ಅಲ್ಲಿ ಜಮಾತ್ ಮತ್ತು ಖಾಸಗಿ ಪಾರ್ಕಿಂಗ್ ಜಾಗದಲ್ಲೂ ವಾಹನಗಳ ಪಾರ್ಕಿಂಗ್‌ಗೆ ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಇಲ್ಲಿ ಪಾರ್ಕಿಂಗ್ ದರ ನಿಗದಿ ಮಾಡಿಲ್ಲ. ಪಂಪಾ ಮತ್ತು ನಿಲಕ್ಕಲ್‌ನಲ್ಲಿರುವಂತೆ ಇಲ್ಲೂ ಪಾರ್ಕಿಂಗ್ ದರ ನಿಗದಿ ಮಾಡಿ ಫಾಸ್ಟ್ಯಾಗ್ ಅಳವಡಿಸಬೇಕು. ಪಾರ್ಕಿಂಗ್ ಸ್ಥಳದಲ್ಲಿ ಇರುವ ಮಾದಕ ವ್ಯಸನಿ ನೌಕರರನ್ನು ತೆರವುಗೊಳಿಸಬೇಕು ಎಂದು ಅಯ್ಯಪ್ಪ ಭಕ್ತರು ಆಗ್ರಹಿಸಿರುವುದಾಗಿ ವರದಿ ವಿವರಿಸಿದೆ.
ಎರುಮೇಲಿ ಸುತ್ತಮತ್ತ ಇರುವ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಮಾಲೀಕರ ಹೆಸರು, ನೋಂದಣಿ ಸಂಖ್ಯೆ, ಪರವಾನಗಿ ಮಾಹಿತಿ ಪ್ರದರ್ಶಿಸಬೇಕು. ಪ್ರತಿ ವಸ್ತುವಿಗೂ ಬೆಲೆ ನಿಗದಿ ಮಾಡಬೇಕು. ಪೇಟ್ಟತುಳ್ಳಲ್‌ಗೆ ಬಳಸುವ ಬಣ್ಣದಪುಡಿ ಸಾವಯವ ಅಥವಾ ಸಹಜ ಬಣ್ಣವಾಗಿರಬೇಕು. ಪೇಟ್ಟತುಳ್ಳಲ್ ನೃತ್ಯದ ವೇಳೆ ರಾಸಾಯನಿಕ ಬಣ್ಣದ ಪುಡಿ ಎರಚಿದಾಗ ಮೈ ತುರಿಕೆ ಉಂಟಾಗಿ ಆರೋಗ್ಯ ಸಮಸ್ಯೆ ಆಗುತ್ತದೆ. ಇದನ್ನು ಸರ್ಕಾರ ಗಮನಿಸಬೇಕು. ರಾಸಾಯನಿಕ ಬಣ್ಣದ ಪುಡಿಗಳನ್ನು ಸರ್ಕಾರ ನಿಷೇಧಿಸಬೇಕು. ಇದೇ ರೀತಿ, ಸ್ನಾನ ಗೃಹ ಮತ್ತು ಶೌಚಾಲಯಗಳಲ್ಲಿ ಕೂಡ ಶುಲ್ಕ ನಿಗದಿ ಮಾಡಬೇಕು ಎಂದು ಅಯ್ಯಪ್ಪ ಭಕ್ತರು ಆಗ್ರಹಿಸಿದ್ದಾರೆ.
ಎರುಮೇಲಿಯಲ್ಲಿ ಸಮಾವೇಶ ಕೇಂದ್ರ ಸ್ಥಾಪನೆ
ಶಬರಿಮಲೆಯಲ್ಲಿ ಈ ವರ್ಷದ ಜಾತ್ರೆ ಮುಗಿದ ಕೂಡಲೇ ಎರುಮೇಲಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಭಕ್ತಿ ಕೇಂದ್ರ, ಸಮಾವೇಶ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಕೇರಳದ ಕಂದಾಯ ಸಚಿವ ಕೆ ರಾಜನ್ ಬುಧವಾರ ತಿಳಿಸಿದ್ದಾರೆ. ಅವರು, ಎರುಮೇಲಿಯ ಚೆರಯಂಬಲಂನಲ್ಲಿ ಹೌಸಿಂಗ್ ಬೋರ್ಡ್ ನಿರ್ಮಿಸಿದ ವಾಹನ ಪಾರ್ಕಿಂಗ್ ಸೌಲಭ್ಯ ಉದ್ಘಾಟಿಸಿ ಮಾತನಾಡಿದರು.
ಈ ವರ್ಷ ಶಬರಿಮಲೆ ತೀರ್ಥಯಾತ್ರೆ ಮುಗಿದ ನಂತರ ಎರುಮೇಲಿಯಲ್ಲಿ ಸಮಾವೇಶ ಕೇಂದ್ರ ಸೇರಿದಂತೆ ಅಂತರರಾಷ್ಟ್ರೀಯ ಗುಣಮಟ್ಟದ ಭಕ್ತಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇರಳ ಕಂದಾಯ ಸಚಿವ ಕೆ ರಾಜನ್ ಹೇಳಿದ್ದಾರೆ. ಶಬರಿಮಲೆ ಸೀಸನ್‌ಗಾಗಿ ಎರುಮೇಲಿಯ ಚೆರಿಯಂಬಳಂನಲ್ಲಿ ಹೌಸಿಂಗ್ ಬೋರ್ಡ್ ಅಡಿಯಲ್ಲಿ ನೂತನ ವಾಹನ ನಿಲುಗಡೆ ಸೌಲಭ್ಯವನ್ನು ಬುಧವಾರ ಉದ್ಘಾಟಿಸಿದ ಸಚಿವ ಕೆ ರಾಜನ್, ಪಾರ್ಕಿಂಗ್ ಪ್ರದೇಶದ ಎರಡೂ ಬದಿಯ ರಸ್ತೆಯನ್ನು ಸುಧಾರಿಸಲು ಪ್ರವಾಹ ಪರಿಹಾರ ನಿಧಿಯಿಂದ ಹೆಚ್ಚುವರಿ 20 ಲಕ್ಷ ರೂಪಾಯಿ ಮಂಜೂರು ಮಾಡಲಾಗುವುದು ಎಂದು ಹೇಳಿದರು.