ಟೊರೊಂಟೊ ವಿಮಾನ ದುರಂತ; ಪಲ್ಟಿಯಾಗುವುದಕ್ಕೂ ಮುನ್ನ ಹೊತ್ತಿಕೊಂಡ ಬೆಂಕಿ; ಸಿಸಿಟಿವಿ ವಿಡಿಯೋ ಇಲ್ಲಿದೆ
ಕೆನಡಾದ ಟೊರೊಂಟೊದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನವು ತುರ್ತು ಭೂಸ್ಪರ್ಶ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ. ವಿಮಾನ ಪಲ್ಟಿಯಾದ ಕಾರಣದಿಂದ ಹಲವರಿಗೆ ಗಾಯಗಳಾಗಿವೆ.

ಉತ್ತರ ಅಮೆರಿಕದ ದೊಡ್ಡ ದೇಶ ಕೆನಡಾದಲ್ಲಿ ವಿಮಾನ ದುರಂತ ಸಂಭವಿಸಿದೆ. ಟೊರೊಂಟೊ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಸೋಮವಾರ (ಫೆ.18) ಹಿಮಪಾತದ ಮಧ್ಯೆ ಡೆಲ್ಟಾ ಏರ್ ಲೈನ್ಸ್ ಪ್ರಾದೇಶಿಕ ಜೆಟ್ ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ. ತುರ್ತು ಭೂಸ್ಪರ್ಶ ಮಾಡುವಾಗ ವಿಮಾನ ಪಲ್ಟಿಯಾಗಿದೆ. ಹಿಮಾವೃತ ಪ್ರದೇಶದಲ್ಲಿಯೂ ತಣ್ಣನೆ ವಾತಾವರಣದಲ್ಲಿ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಿಂದಾಗಿ ವಿಮಾನದಲ್ಲಿದ್ದ 80 ಪ್ರಯಾಣಿಕರ ಪೈಕಿ ಹದಿನೆಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ವಿಮಾನ ಅಪಘಾತದ ಹಿಂದಿನ ಕೊನೆಯ ಕ್ಷಣಗಳನ್ನು ಸೆರೆಹಿಡಿದಿವೆ.
ಟೊರೊಂಟೊ ವಿಮಾನ ಅಪಘಾತದ ಅಂತಿಮ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜೆಟ್ ಬೆಂಕಿಗೆ ಆಹುತಿಯಾಗುವ ಮೊದಲು ರನ್‌ವೇಯಿಂದ ಜಾರಿ ಬೀಳುವುದನ್ನು ಕಾಣಬಹುದು. ಪ್ರಯಾಣಿಕರು ರೆಕಾರ್ಡ್ ಮಾಡಿದ ಮತ್ತೊಂದು ವಿಡಿಯೋದಲ್ಲಿ, ವಿಮಾನವು ತಲೆಕೆಳಗಾಗಿರುವುದನ್ನು ಕಾಣಬಹುದು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಈ ವಿಡಿಯೋವನ್ನು ಆರ್‌ಟಿಎನ್ ಕೆನಡಾ ಶೇರ್ ಮಾಡಿದೆ.
ಭಾರಿ ಹಿಮಪಾತದಿಂದಾಗಿ ಹವಾಮಾನ ವ್ಯತಿರಿಕ್ತವಾಗಿತ್ತು. ಹೀಗಾಗಿ ಸೋಮವಾರ ಬೆಳಗ್ಗೆ ವಿಮಾನ ಅಪಘಾತ ಸಂಭವಿಸಿದೆ. ಮಗು ಸೇರಿದಂತೆ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆನಡಾದ ಬೊಂಬಾರ್ಡಿಯರ್ ತಯಾರಿಸಿದ ಮತ್ತು ಜಿಇ ಏರೋಸ್ಪೇಸ್ ಎಂಜಿನ್‌ಗಳಿಂದ ಓಡುವ 16 ವರ್ಷ ಹಳೆಯ ಸಿಆರ್ ಜೆ 900 ವಿಮಾನದಲ್ಲಿ 90 ಜನರು ಕುಳಿತುಕೊಳ್ಳಬಹುದು. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಒಟ್ಟು 76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು.
ಬದುಕುಳಿದವರ ಪ್ರತಿಕ್ರಿಯೆ
ನಾವು ನೆಲಕ್ಕೆ ಅಪ್ಪಳಿಸಿದೆವು. ಪಕ್ಕಕ್ಕೆ ತಲೆಕೆಳಗಾಗಿ ಬಿದ್ದೆವು ಎಂದು ಟೊರೊಂಟೊ ವಿಮಾನ ಅಪಘಾತದಲ್ಲಿ ಬದುಕುಳಿದ ಜಾನ್ ನೆಲ್ಸನ್ ಮಾಧ್ಯಮಗಳಿಗೆ ಹೇಳಿದ್ದಾರೆ. ಕೆಲವರು ನೇತಾಡುತ್ತಿದ್ದರು. ಅವರಿಗೆ ಸಹಾಯದ ಅಗತ್ಯವಿತ್ತು ಎಂದರು.
ಉತ್ತರ ಅಮೆರಿಕದ ವಿವಿಧ ಭಾಗಗಳಲ್ಲಿ ಮೇಲಿಂದ ಮೇಲೆ ವಿಮಾನ ದುರಂತಗಳು ಸಂಭವಿಸುತ್ತಿವೆ. ಇತ್ತೀಚೆಗಷ್ಟೇ ವಾಷಿಂಗ್‌ಟನ್‌ನಲ್ಲಿ ಸೇನಾ ಹೆಲಿಕಾಪ್ಟರ್ ಸಿಆರ್‌ಜೆ -700 ಪ್ರಯಾಣಿಕರ ಜೆಟ್‌ಗೆ ಡಿಕ್ಕಿ ಹೊಡೆದಿತ್ತು. ಭೀಕರ ಅಪಘಾತದಲ್ಲಿ 67 ಪ್ರಯಾಣಿಕರು ಸಾವನ್ನಪ್ಪಿದ್ದರು. ಫಿಲಡೆಲ್ಫಿಯಾದಲ್ಲಿ ನಡೆದ ಮತ್ತೊಂದು ದುರಂತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದರು. ಅಲಾಸ್ಕಾದಲ್ಲಿ ನಡೆದ ಪ್ರಯಾಣಿಕರ ವಿಮಾನ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದರು.
