ಸಿನಿಮಾ ಅವಕಾಶಕ್ಕಾಗಿ ಹೊಂದಾಣಿಕೆ, ಕಾಸ್ಟಿಂಗ್ ಡೈರೆಕ್ಟರ್ ವೃತ್ತಿಗೆ ಕಳಂಕ ತಂದ ಕಾಸ್ಟಿಂಗ್ ಕೌಚ್, ಕಾಸ್ಟಿಂಗ್ ಡೈರೆಕ್ಟರ್ ಕೆಲಸವೇನು?
Casting Couch in Film Industry: ಕಾಸ್ಟಿಂಗ್ ಡೈರೆಕ್ಟರ್ (Casting Director) ವೃತ್ತಿಗೆ ಕಾಸ್ಟಿಂಗ್ ಕೌಚ್ ಕಳಂಕವೆಂದೇ ಹೇಳಬಹುದು. ಕಾಸ್ಟಿಂಗ್ ಕೌಚ್ ಎಂದರೇನು? ನಿಜವಾದ ಕಾಸ್ಟಿಂಗ್ ಡೈರೆಕ್ಟರ್‌ಗಳ ಕೆಲಸವೇನು? ಈ ವೃತ್ತಿ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಕಾಸ್ಟಿಂಗ್ ಕೌಚ್ (casting couch) ಪದ ಕೇಳಿದಾಕ್ಷಣ ಹಲವು ಸಿನಿಮಾ ನಟಿಯರು (ಕೆಲವೊಂದು ನಟರೂ!) ಬೆಚ್ಚಿ ಬೀಳುತ್ತಾರೆ. ಕಾಸ್ಟಿಂಗ್ ಕೌಚ್ ಎಂದರೆ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಪಡೆಯಲು ಪ್ರಯತ್ನಿಸುವ ಪ್ರತಿಭೆಗಳನ್ನು ಲೈಂಗಿಕ ಅಥವಾ ಇನ್ನಿತರ ಉದ್ದೇಶಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುವ ಕ್ರೂರ ಜಗತ್ತು. ಈಗಾಗಲೇ ಕಾಸ್ಟಿಂಗ್ ಕೌಚ್ ಯಾತನೆಯನ್ನು ಹಲವು ನಟಿಯರು ಬಿಚ್ಚಿಟ್ಟಿದ್ದಾರೆ.
ಇದೀಗ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಆರತಿ ಮಿತ್ತಲ್ ಎಂಬ ಕಾಸ್ಟಿಂಗ್ ನಿರ್ದೇಶಕಿಯು ಬಂಧನವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕು, ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತ ಬರುವ ಯುವತಿಯರನ್ನು ವೈಶ್ಯಾವಾಟಿಕೆಗೆ ತಳ್ಳುತ್ತಿದ್ದ ಆರತಿ ಮಿತ್ತಲ್ ಬಂಧನವಾಗಿದೆ. 27 ವರ್ಷ ವಯಸ್ಸಿನ ಈಕೆಯ ಕಪಿಮುಷ್ಠಿಗೆ ಬಿದ್ದು ನರಕಯಾತನೆ ಅನುಭವಿಸುತ್ತಿದ್ದ ಹಲವು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಕಾಸ್ಟಿಂಗ್ ಕೌಚ್ ಎಂದರೇನು?
ಕಾಸ್ಟಿಂಗ್ ಕೌಚ್ ಪದದ ನಿಜವಾದ ಅರ್ಥ ಕಾಸ್ಟಿಂಗ್ ಆಫೀಸ್‌ನಲ್ಲಿ ಇರುವ ಮಂಚ. ಮನರಂಜನಾ ಕ್ಷೇತ್ರದಲ್ಲಿ (ಸಿನಿಮಾ, ಧಾರಾವಾಹಿ) ನಟನೆಯ ಅವಕಾಶಕ್ಕಾಗಿ ಬರುವ ನಟನಟಿಯರಲ್ಲಿ ಲೈಂಗಿಕ ಸುಖವನ್ನು ಬಯಸುವ ಅಭ್ಯಾಸವನ್ನು ತಿಳಿಸಲು ಸೂಚಕವಾಗಿ ಬಳಸುವ ಒಂದು ಪದ ಇದಾಗಿದೆ. ಪುರುಷ ಕಾಸ್ಟಿಂಗ್ ಡೈರೆಕ್ಟರ್‌ಗಳು ನಟಿಯರಲ್ಲಿ ಇಂತಹ ಬೇಡಿಕೆ ಇಡುತ್ತಾರೆ. ಇಲ್ಲಿ ಕಾಸ್ಟಿಂಗ್ ಡೈರೆಕ್ಟರ್‌ಗಳು ತನಗಾಗಿ ಮಾತ್ರವಲ್ಲದೆ ಇತರರಿಗಾಗಿಯೂ ಇಂತಹ ಬೇಡಿಕೆ ಇಡಬಹುದು. ಮಹಿಳಾ ಕಾಸ್ಟಿಂಗ್ ಡೈರೆಕ್ಟರ್‌ಗಳು ಯುವ ನಟರಲ್ಲಿ ಇಂತಹ ಲೈಂಗಿಕ ಸುಖದ ಬೇಡಿಕೆ ಇಡಬಹುದು.
ಕರಾಳ ಅನುಭವ ಬಿಚ್ಚಿಟ್ಟ ನಟನಟಿಯರು
ನಟನೆಗಾಗಿ, ಅವಕಾಶಕ್ಕಾಗಿ ಬರುವ ಯುವತಿಯರಲ್ಲಿ ಲೈಂಗಿಕ ಸುಖವನ್ನು ಬಯಸುವಂತಹ ಕೆಟ್ಟ ಪ್ರವೃತಿಯ ಕುರಿತು, ತಮಗಾದ ಕೆಟ್ಟ ಅನುಭವದ ಕುರಿತು ನಟಿಯರು ಧೈರ್ಯವಾಗಿ ಹೇಳುತ್ತಿದ್ದಾರೆ. ರಣವೀರ್ ಸಿಂಗ್, ಆಯುಷ್ಮಾನ್ ಖುರಾನ, ಹರ್ಷವರ್ಧನ್ ರಾಣೆ ಸೇರಿದಂತೆ ಹಲವು ನಟರೂ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹೇಳಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ನಟಿ ಸುರ್ವಿನ್ ಚೌಹ್ಲಾ ಅವರು "ನನಗೆ ಹಲವು ಬಾರಿ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ" ಎಂದು ಬಹಿರಂಗಪಡಿಸಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್ ತನಗಾದ ಇಂತಹ ಅನುಭವ ಹೇಳಿದ್ದಾರೆ. ನಿರ್ದೇಶಕರೊಬ್ಬರು ಕೆಲಸಕ್ಕೆ ಬದಲಾಗಿ ರಾಜಿ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದರು ಎಂದು ಸುಲಗ್ನಾ ಚಟರ್ಜಿ ಬಹಿರಂಗಪಡಿಸಿದ್ದರು. ತಮಿಳು ಚಿತ್ರರಂಗದ ಪ್ರಮುಖ ನಿರ್ಮಾಪಕ ತಮ್ಮಿಂದ ಲೈಂಗಿಕಾಸಕ್ತಿ ಬಗ್ಗೆ ಕೇಳಿದ ಘಟನೆಯ ಬಗ್ಗೆ ಶ್ರುತಿ ಹರಿಹರನ್ ಕೂಡ ಬಾಯಿಬಿಟ್ಟಿದ್ದರು. ಶ್ರೀರೆಡ್ಡಿ ಪಂಡೋರಾ, ಮಲಯಾಳಂ ನಟಿ ಪಾರ್ವತಿ, ಇಲಿಯಾನಾ ಡಿಕ್ರೂಜ್ ಸೇರಿದಂತೆ ಹಲವು ನಟಿಯರು ತಮಗೆ ಆಗಿರುವ ಕಾಸ್ಟಿಂಗ್ ಕೌಚ್ ಅನುಭವ ಹೇಳಿಕೊಂಡಿದ್ದರು.
ಕಾಸ್ಟಿಂಗ್ ಡೈರೆಕ್ಟರ್ ವೃತ್ತಿಯ ಕುರಿತು
ಕಾಸ್ಟಿಂಗ್ ಕೌಚ್ ಎಂಬ ಕಳಂಕದಿಂದಾಗಿ ಕಾಸ್ಟಿಂಗ್ ಡೈರೆಕ್ಟರ್ ವೃತ್ತಿಪರರು (Casting director) ತಲೆತಗ್ಗಿಸುವಂತಾಗಿದೆ. ಕಾಸ್ಟಿಂಗ್ ಡೈರೆಕ್ಟರ್ ವೃತ್ತಿಗೆ ಕಾಸ್ಟಿಂಗ್ ಕೌಚ್ ಕಳಂಕವೆಂದೇ ಹೇಳಬಹುದು. ಚಲನಚಿತ್ರ ಅಥವಾ ಟಿವಿ ಧಾರಾವಾಹಿಗಳಿಗೆ ನಟ/ನಟಿಯರನ್ನು ಹುಡುಕಾಟ ನಡೆಸುವ ಉದ್ದೇಶಕ್ಕಾಗಿ ನಿರ್ಮಾಣ ಸಂಸ್ಥೆಗಳು ಕಾಸ್ಟಿಂಗ್ ಡೈರೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳುತ್ತವೆ.
ಸಿನಿಮಾ ಅಥವಾ ಧಾರಾವಾಹಿಯ ಕತೆ, ಸಂಭಾಷಣೆಯನ್ನು ಓದಿ ಆ ಚಿತ್ರಕ್ಕೆ ಸೂಕ್ತವಾಗುವಂತಹ ನಟ, ನಟಿಯರನ್ನು ಹೊಂದಿಸುವಂತಹ ಕೆಲಸವನ್ನು ಕಾಸ್ಟಿಂಗ್ ಡೈರೆಕ್ಟರ್ ಮಾಡುತ್ತಾರೆ. ನಿರ್ಮಾಪಕರು ಮತ್ತು ನಿರ್ದೇಶಕರ ಬಯಕೆಯಂತೆ ಸಿನಿಮಾ/ ಧಾರಾವಾಹಿಗೆ ಸೂಕ್ತವಾದ ಪ್ರತಿಭಾನ್ವಿತರನ್ನು ಹುಡುಕುವುದು, ಅವರಿಗೆ ವೇತನ ನಿಗದಿಪಡಿಸುವುದು, ಅವರ ಪ್ರತಿಭೆ ತಿಳಿದುಕೊಳ್ಳುವುದು ಇತ್ಯಾದಿ ಹಲವು ಕೆಲಸಗಳನ್ನು ಕಾಸ್ಟಿಂಗ್ ಡೈರೆಕ್ಟರ್ ಮಾಡಬೇಕಿರುತ್ತದೆ.
ರಂಗಭೂಮಿಗಳಿಗೆ, ಸಿನಿಮಾ ನಟನಾ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸೂಕ್ತ ನಟನಟಿಯರನ್ನು ಇವರು ಹುಡುಕಬೇಕಾಗುತ್ತದೆ. ಈಗಾಗಲೇ ಕಲಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರನ್ನೂ ತಮ್ಮ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಆದ್ಯತೆ ನೀಡುತ್ತಾರೆ. ಈಗ ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಂ ಇತ್ಯಾದಿಗಳಲ್ಲಿ ರೀಲ್ಸ್, ವಿಡಿಯೋ ಮೂಲಕ ಫೇಮಸ್ ಆದವರನ್ನೂ ಕಾಸ್ಟಿಂಗ್ ಡೈರೆಕ್ಟರ್‌ಗಳು ಪರಿಶೀಲಿಸುತ್ತಾರೆ. ಕಾಂತಾರ ಕನ್ನಡ ಸಿನಿಮಾಕ್ಕೆ ನಟಿ ಸಪ್ತಮಿ ಆಯ್ಕೆಯಾದದ್ದು ಇನ್‌ಸ್ಟಾಗ್ರಾಂ ಮೂಲಕ ಎನ್ನುವುದು ನಿಮಗೆ ಗೊತ್ತಿರಬಹುದು. ಇನ್‌ಸ್ಟಾಗ್ರಾಂನಲ್ಲಿ ರಿಷಬ್ ಶೆಟ್ಟಿಯವರ ಕಣ್ಣಿಗೆ ಸಪ್ತಮಿ ಗೌಡ ಬಿದ್ದಿದ್ದರು. ಬಳಿಕದ್ದು ಇತಿಹಾಸ.
ಒಟ್ಟಾರೆ, ಒಂದು ಸಿನಿಮಾ, ಧಾರಾವಾಹಿ, ಕಿರುಚಿತ್ರ ಇತ್ಯಾದಿಗಳಿಗೆ ಸೂಕ್ತವಾದ ಪಾತ್ರವರ್ಗವನ್ನು ಆಯ್ಕೆ ಮಾಡುವುದು, ಹೊಂದಿಸುವುದು ಕಾಸ್ಟಿಂಗ್ ಡೈರೆಕ್ಟರ್ ಕೆಲಸ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಕಷ್ಟು ಪ್ರತಿಭೆಗಳು ಕಾಯುತ್ತ ಇರುತ್ತಾರೆ. ಈ ರೀತಿ ಅವಕಾಶಕ್ಕಾಗಿ ಕಾಯುತ್ತಿರುವವರನ್ನು ಕಾಸ್ಟಿಂಗ್ ಡೈರೆಕ್ಟರ್‌ಗಳು ಅನ್ಯ ಕೆಟ್ಟ ಉದ್ದೇಶಗಳಿಗೆ ಬಳಸಲು ಬಯಸಿದರೆ ಅದು ಕಾಸ್ಟಿಂಗ್ ಕೌಚ್ ಆಗುತ್ತದೆ.