ಫಲಿತಾಂಶ ನಂತರದ ಪ್ರಕ್ರಿಯೆ ಪರಿಷ್ಕರಿಸಿದ ಸಿಬಿಎಸ್‌ಇ; ಈ ಬಾರಿ ನೇರವಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆಗಲ್ಲ
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷಾ ನಂತರದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ಮಹತ್ವದ ಬದಲಾವಣೆ ಮಾಡಿದೆ. ಈ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (Central Board of Secondary Education -CBSE) ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಫಲಿತಾಂಶದ ಪ್ರಕಟವಾದ ನಂತರದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಸುಧಾರಿಸುವ ಸಲುವಾಗಿ, ತನ್ನ ಅನುಕ್ರಮವನ್ನು ಪರಿಷ್ಕರಿಸಿದೆ. ಮಂಡಳಿಯು 10 ಮತ್ತು 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳಿಗೆ ಪರಿಹಾರವನ್ನು ಬಯಸುವ ವಿದ್ಯಾರ್ಥಿಗಳ ಚಟುವಟಿಕೆಗಳ ಅನುಕ್ರಮವನ್ನು ಪ್ರಮುಖ ಬದಲಾವಣೆ ತಂದಿದೆ. ಅಲ್ಲದೆ ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.
ಫಲಿತಾಂಶ ಪ್ರಕಟವಾದ ನಂತರ, ಕೆಲವು ವಿದ್ಯಾರ್ಥಿಗಳಿಗೆ ಬಂದ ಅಂಕಗಳಲ್ಲಿ ಸಮಾಧಾನ ಇರುವುದಿಲ್ಲ. ಅಂಥಾ ಸಮಯದಲ್ಲಿ ಮರುಎಣಿಕೆ, ಮರುಮೌಲ್ಯಮಾಪನ, ಅಂಕಗಳ ಪರಿಶೀಲನೆ ಇಂಥಾ ನಿರ್ಧಾರಕ್ಕೆ ಬರುತ್ತಾರೆ. ಮಂಡಳಿ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿಗಳ ಪ್ರಕಾರ, ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಹೋಗುವ ಮೊದಲು, ಮೌಲ್ಯಮಾಪನ ಮಾಡಿದ ತಮ್ಮ ಉತ್ತರ ಪತ್ರಿಕೆಯ ಫೋಟೋಕಾಪಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆ ನಂತರವೇ ಅಂಕಗಳ ಪರಿಶೀಲನೆ ಅಥವಾ ಮರು ಮೌಲ್ಯಮಾಪನದ ನಿರ್ಧಾರಕ್ಕೆ ಬರಲು ತಿಳಿಸಲಾಗಿದೆ.
ಕಳೆದ ವರ್ಷದವರೆಗೂ ವ್ಯವಸ್ಥೆ ಬೇರೆ ಇತ್ತು. ಅಂಕಗಳ ಮರು ಪರಿಶೀಲನೆ ಮಾಡಿದ ನಂತರ ಫೋಟೋಕಾಪಿ, ನಂತರವೇ ಮರುಮೌಲ್ಯಮಾಪನಕ್ಕೆ ಅವಕಾಶವಿತ್ತು. ಈ ಬಾರಿ ಈ ಕ್ರಮ ಬದಲಾಗಿದೆ.
2025ರಲ್ಲಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳು ಮಾತ್ರ, ಸಿಬಿಎಸ್‌ಇ ಫಲಿತಾಂಶಗಳು ಘೋಷಣೆಯಾದ ನಂತರ ಈ ಪರಿಷ್ಕೃತ ಪ್ರಕ್ರಿಯೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.
ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ: ಹೊಸ ಅನುಕ್ರಮ
1. ಮೌಲ್ಯಮಾಪನ ಮಾಡಿದ ಉತ್ತರ ಪುಸ್ತಕದ ಫೋಟೋಕಾಪಿ ಪಡೆಯುವುದು
2. ಅಂಕಗಳ ಪರಿಶೀಲನೆ ಅಥವಾ ಮರು ಮೌಲ್ಯಮಾಪನ ಮಾಡುವುದು ಅಥವಾ ಈ ಎರಡನ್ನೂ ಮಾಡುವುದು.
ಈ ಕುರಿತು ಅಧಿಸೂಚನೆಯನ್ನು ಬಿಡುಗಡೆ ಮಾಡಿದ ಮಂಡಳಿ, ಈ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದೆ. ವಿದ್ಯಾರ್ಥಿಗಳು ಮರುಎಣಿಕೆ ಅಥವಾ ಮರು-ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ ತಮ್ಮ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲು ಅವಕಾಶ ನೀಡುವ ಮೂಲಕ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡುತ್ತದೆ ಎಂದು ಮಂಡಳಿ ಹೇಳಿದೆ.
“ಹೊಸ ವ್ಯವಸ್ಥೆಯು ವಿದ್ಯಾರ್ಥಿಗಳು ತಮ್ಮ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳನ್ನು ನೋಡಲು ಅನುವು ಮಾಡಿಕೊಡುತ್ತದೆ. ಕೊಟ್ಟಿರುವ ಅಂಕಗಳನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳುವ ಮೊದಲು ಯಾವುದೇ ತಪ್ಪುಗಳಾಗಿದ್ದರೆ ಆ ಬಗ್ಗೆ ಸ್ಪಷ್ಟತೆ ಮಾಹಿತಿ ನೀಡುತ್ತದೆ” ಎಂದು ಸಿಬಿಎಸ್‌ಇ ಹೇಳಿದೆ.
ಈ ವಿಧಾನವು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮರುಮೌಲ್ಯಮಾಪನಕ್ಕಾಗಿ ಅನಗತ್ಯವಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚು ಪರಿಣಾಮಕಾರಿ ಮತ್ತು ಉತ್ತಮ ಪರಿಹಾರ ಕಾರ್ಯವಿಧಾನವನ್ನು ಖಚಿತಪಡಿಸುತ್ತದೆ ಎಂದು ಮಂಡಳಿ ಹೇಳಿದೆ.
ಶೀಘ್ರವೇ ವಿವರ ಬಿಡುಗಡೆ
ಫೋಟೋಕಾಪಿಯನ್ನು ಪಡೆಯಲು ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ವಿವರವಾದ ವಿಧಾನಗಳು ಮತ್ತು ಅರ್ಜಿ ಕಾರ್ಯವಿಧಾನಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ತಿಳಿಸಿದೆ.